ಬಡವರಿಗೆ ಎಟುಕದ ಕಾರ್ಕಳ ಸರಕಾರಿ ಆಸ್ಪತ್ರೆ
ಚಿಕಿತ್ಸೆ ನೀಡಲು ವೈದ್ಯರಿಗೆ ಪುರುಸೊತ್ತಿಲ್ಲ
ರೋಗಿಗಳ ಗೋಳು ಕೇಳುವವರಿಲ್ಲ
ಕಾರ್ಕಳ, ಜ.4: ತಾಲೂಕಿನ ಜನತೆಯ ಅಗತ್ಯ ಮತ್ತು ಅನಿವಾರ್ಯತೆ ಯೆನಿಸಿರುವ ಕಾರ್ಕಳ ಸಾರ್ವಜನಿಕ ಆಸ್ಪತ್ರೆ ಅಸಮರ್ಪಕ ಸೇವೆಯ ಕಾರಣದಿಂದ ಕೆಟ್ಟ ಹೆಸರಿಗೆ ಪಾತ್ರವಾಗುತ್ತಿದೆ.
ಈ ಆಸ್ಪತ್ರೆಯಲ್ಲಿ ವಿವಿಧ ಪರೀಕ್ಷಾ ಸೌಲಭ್ಯಗಳ ವ್ಯವಸ್ಥೆ, ಸಾಕಷ್ಟು ವೈದ್ಯರು, ದಾದಿಯರು ಇದ್ದರೂ ಬಡಜನತೆ ಇಲ್ಲಿ ಚಿಕಿತ್ಸೆ ಪಡೆಯು ವುದು ಗಗನಕುಸುಮದಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಆಸ್ಪತ್ರೆಗೆ ಸಾಕಷ್ಟು ಸರಕಾರಿ ಅನುದಾನ ಲಭಿಸಿದ್ದು, ವಿಸ್ತೃತ ಕಟ್ಟಡ, ಪರೀಕ್ಷಾ ಯಂತ್ರೋಪಕರಣಗಳು, ಸುಸಜ್ಜಿತ ಔಷಧಾಲಯ ಹೀಗೆ ಎಲ್ಲಾ ರೀತಿಯ ಸೌಲಭ್ಯಗಳು ಒದಗಿಸಿದೆ.
ಆದರೂ ಆಸ್ಪತ್ರೆಯ ಸೇವೆ ಬಡಜನರ ಪಾಲಿಗೆ ಲಭ್ಯವಾಗದಿರುವುದಕ್ಕೆ ಇಲ್ಲಿನ ವೈದ್ಯರೇ ಹೊಣೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ 6 ಮಂದಿ ತಜ್ಞ ವೈದ್ಯರಿದ್ದು, ಅವರ ಸೇವೆ ಕೇವಲ ದಾಖಲೆಗಳಲ್ಲಷ್ಟೇ ಮೀಸಲು ಅನ್ನುವ ಪರಿಸ್ಥಿತಿ ಉಂಟಾಗಿದೆ. ವೈದ್ಯರು ಆಸ್ಪತ್ರೆಯ ನಿಗ ದಿತ ವೇಳೆಯಲ್ಲಿ, ತುರ್ತು ಸಂದರ್ಭಗಳಲ್ಲಿ ಕೂಡಾ ರೋಗಿಗಳಿಗೆ ಲಭ್ಯವಾಗದಿರುವುದು ಬಹುದೊಡ್ಡ ಸಮಸ್ಯೆಯೆನಿಸಿದೆ. ತಜ್ಞ ವೈದ್ಯರು ಮುಂಜಾನೆಯಿಂದ ಆಸ್ಪತ್ರೆಯಲ್ಲಿರಬೇ ಕಾದರೂ ಒಂದಿಬ್ಬರು ವೈದ್ಯರನ್ನು ಹೊರತುಪಡಿಸಿ ಮಿಕ್ಕವರು ‘ಆಟ ಕ್ಕುಂಟು ಲೆಕ್ಕಕ್ಕಿಲ್ಲ’ ಎನ್ನುವಂತಾಗಿದೆ.
ಬಹುತೇಕ ತಜ್ಞ ವೈದ್ಯರು ತಮ್ಮದೇ ಖಾಸಗಿ ಕ್ಲಿನಿಕ್ ಹೊಂದಿದ್ದು, ಮತ್ತೆ ಕೆಲವರು ಸಂದರ್ಶಕ ವೈದ್ಯ ರಾಗಿ ಖಾಸಗಿ ಆಸ್ಪತ್ರೆಯಲ್ಲಿ ಬ್ಯುಸಿಯಾಗಿರುವುದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮರ್ಪಕ ಸೇವೆ ದೊರೆಯದಿರಲು ಕಾರಣ ಎಂದರೆ ತಪ್ಪಾಗಲಾರದು.ವೈದ್ಯರು ರೋಗಿಗಳನ್ನು ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಿ, ದುಬಾರಿ ಬೆಲೆಯ ಚಿಕಿತ್ಸೆ ಕೊಡಿಸುತ್ತಿದ್ದಾರೆ ಎನ್ನುವ ಆರೋಪವೂ ಇದೆ.
ಈ ಕಾರಣದಿಂದ ಬಡವರು ಮತ್ತು ಆರ್ಥಿಕವಾಗಿ ಸಾಮರ್ಥ್ಯವಿಲ್ಲದ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಅನಿವಾ ರ್ಯವಾಗುತ್ತಿದೆ. ರಕ್ತ, ಮಲಮೂತ್ರ, ಕಫ ಪರೀಕ್ಷೆಯ ಲ್ಯಾಬ್‌ನ ಸೇವೆಯು ಉತ್ತಮವಾಗಿದ್ದರೂ, ಸೇವೆಯ ಪ್ರಯೋಜನವು ಬಡಜನರಿಗೆ ಸರಿಯಾಗಿ ಸಿಗುತ್ತಿಲ್ಲ ಎಂದು ಆರೋಪಿಸುವ ಸಾರ್ವಜನಿಕರು ವೈದ್ಯರ ಅಸಹಕಾರಕ್ಕೆ ರೋಸಿಹೋಗಿದ್ದಾರೆ.
ತುರ್ತು ಸಂದರ್ಭಗಳಲ್ಲಿ ವೈದ್ಯರ ಅಲಭ್ಯತೆ ತಜ್ಞ ವೈದ್ಯರಿದ್ದರೂ ತುರ್ತು ಸಂದರ್ಭಗಳಲ್ಲಿ ವೈದ್ಯರು ಆಸ್ಪತ್ರೆಯಲ್ಲಿ ಇಲ್ಲದೆ ಇರುವುದರಿಂದ ವಿಷಮಾವಸ್ಥೆಯಲ್ಲಿರುವ ರೋಗಿ ಬೇರೆ ಆಸ್ಪತ್ರೆಯ ಕಡೆಗೆ, ಮಂಗಳೂರು ಅಥವಾ ಮಣಿಪಾಲಕ್ಕೆ ಹೋಗುವ ಅನಿವಾ ರ್ಯತೆ ಇದೆ. ತುರ್ತು ಸಂದರ್ಭ ದಾದಿಯರು ವೈದ್ಯರಿಗೆ ಮಾಹಿತಿ ನೀಡಿದರೂ ವೈದ್ಯರು ಆಸ್ಪತ್ರೆಗೆ ಬಾರದೆ ಫೋನಿನಲ್ಲೇ ರೋಗಿಯನ್ನು ಪರೀಕ್ಷಿಸಿ ನೀಡಬೇಕಾದ ಔಷಧಿಯ ಬಗ್ಗೆ ತಿಳಿಸಿ, ಸುಮ್ಮನಿರುತ್ತಾರೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಜೊತೆಗೆ ರೋಗಿಯನ್ನು ತಮ್ಮದೇ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡುವಂತೆ ಸೂಚನೆ ನೀಡುತ್ತಾರೆ ಎಂದು ಅನೇಕರು ತಮ್ಮ ಅನುಭವ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಶಿರ್ಲಾಲಿನ ಮಹಿಳೆ ಯೋರ್ವರು ಮೂಳೆ ಸಂಬಂಧಿ ಕಾಯಿಲೆಯ ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಬಂದಾಗ ಸಂಬಂಧಪಟ್ಟ ವೈದ್ಯರು ರಜೆಯಲ್ಲಿದ್ದರು. ‘‘ಮೂರು ದಿನಗಳ ಬಳಿಕ ಬನ್ನಿ’’ ಎಂಬ ಸೂಚನೆ ನೀಡಲಾಯಿತು. ಅದರಂತೆ ಮತ್ತೆ ಆಕೆ ಆಸ್ಪತ್ರೆಗೆ ಬಂದಾಗ ವೈದ್ಯರು ಪುನಃ ಮೂರು ದಿನ ಬಿಟ್ಟು ಬರುವಂತೆ ತಿಳಿಸಿ, ಮತ್ತೊಮ್ಮೆ ಆಕೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿರುವುದಾಗಿ ಮಹಿಳೆ ತಿಳಿಸಿದ್ದಾರೆ.
ಒಟ್ಟಿನಲ್ಲಿ ಜನತೆಗೆ ಸಹಾಯ ವಾಗಲಿ ಎಂಬ ನಿಟ್ಟಿನಲ್ಲಿ ಸ್ಥಾಪನೆ ಯಾದ ಆಸ್ಪತ್ರೆಯ ಪರಿಸ್ಥಿತಿ ವೈದ್ಯರ ನಿರ್ಲಕ್ಷದಿಂದ ಹದಗೆಟ್ಟಿದ್ದು, ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು.
ಶಸ್ತ್ರಚಿಕಿತ್ಸಾ ವೈದ್ಯರೊಬ್ಬರೇ ಈ ಆಸ್ಪತ್ರೆಗೆ ಆಧಾರ
ಶಸ್ತ್ರಚಿಕಿತ್ಸೆ ನಡೆಸುವ ತಜ್ಞ ವೈದ್ಯರೊಬ್ಬರು ಈ ಆಸ್ಪತ್ರೆಯ ಏಕೈಕ ಆಶಾಕಿರಣ ವಾಗಿದ್ದಾರೆ. ನಗರದ ಪ್ರಸಿದ್ಧ ಶಸ್ತ್ರಚಿಕಿತ್ಸಾ ತಜ್ಞ ಡಾ.ರಹ್ಮತುಲ್ಲಾ ಮಾತ್ರ ಈ ಆಸ್ಪತ್ರೆಯಲ್ಲಿ ಸದಾ ಲಭ್ಯವಿದ್ದು, ಆಸ್ಪತ್ರೆಯ ಒಳ ಹಾಗೂ ಹೊರರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಆಸ್ಪತ್ರೆಗೆ ಬರುವ ಬಹುತೇಕ ಎಲ್ಲಾ ಪ್ರಕರಣಗಳನ್ನು ಬೇರೆ ವೈದ್ಯರ ಅನು ಪಸ್ಥಿತಿಯ ಕಾರಣ ಡಾ.ರಹ್ಮತುಲ್ಲಾ ಒಬ್ಬರೇ ನಿರ್ವಹಿಸಬೇಕಾದ ಸನ್ನಿವೇಶ ಉಂಟಾಗಿದ್ದು, ಇದೀಗ ಇವರ ಮೇಲೆ ಅಧಿಕ ಒತ್ತಡ ಉಂಟಾಗಿದೆ. ಅವಧಿ ಗೂ ಮೀರಿ ರೋಗಿಗಳ ಸೇವೆಯಲ್ಲಿ ನಿರತರಾಗಿರುವ ಈ ವೈದ್ಯರ ಬಗ್ಗೆ ಅತ್ಯುತ್ತಮ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದ್ದು, ಆಸ್ಪತ್ರೆಗೆ ಬರುವ ಬಡರೋಗಿಗಳಿಗೆ ಇವರೊಬ್ಬರೇ ಆಧಾರ ಎನ್ನುವಂತಾಗಿದೆ.