ಬ್ರಾಯ್ಲರ್ ಚಿಕನ್ ಚಪ್ಪರಿಸುವ ಮುನ್ನ!
ಆದ್ದರಿಂದ ಬ್ರಾಯ್ಲರ್ ಕೋಳಿಗಳನ್ನು ಚಪ್ಪರಿಸುವ ಮೊದಲು ಆಲೋಚಿಸುವುದೊಳಿತು.!ಚಿಕನ್ ರೆಸಿಪಿ ಯಾರಿಗಿಷ್ಟವಿಲ್ಲ ಹೇಳಿ? ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ‘ಚಿಕನ್’ ಎಂದು ಕೇಳುವಾಗ ಕಣ್ಣರಳುತ್ತವೆ. ಊಟದ ಜೊತೆ ಚಿಕನ್ ಫ್ರೈ ಇದೆ ಎಂದು ಹೇಳಿದರೆ ಮಕ್ಕಳು ಎಲ್ಲಿದ್ದರೂ ಓಡಿ ಬರುತ್ತಾರೆ. ಕೆಲವು ಮಕ್ಕಳಿಗಂತೂ ಚಿಕನ್ ಇಲ್ಲದೆ ಊಟ ಸೇರುವುದೇ ಇಲ್ಲ. ದೊಡ್ಡವರು ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಚಿಕನ್‌ಕರಿ ಇದೆ ಎಂದಾದರೆ ಮಾತ್ರ ಅವರು ಊಟ ಮಾಡಲು ಮನಸ್ಸು ಮಾಡುತ್ತಾರೆ. ಆದರೆ ಕೋಳಿಮಾಂಸವನ್ನು ಕಣ್ಣುಮುಚ್ಚಿ ನಂಬುವ ಮುನ್ನ ಕೆಲವು ವಿಷಯಗಳನ್ನು ಅರಿತಿರಬೇಕಾದದ್ದು ಅಗತ್ಯ.
ಬ್ರಾಯ್ಲರ್ ಚಿಕನ್ ಹಾಗೂ ಹಾರ್ಮೋನ್
ಬೆಳವಣಿಗೆಯ ಹಾರ್ಮೋನ್‌ನ್ನು ಇಂಜೆಕ್ಟ್ ಮಾಡಿ ಬ್ರಾಯ್ಲರ್ ಕೋಳಿಗಳನ್ನು ಬೆಳೆಸಲಾಗುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಅದು ಸುಳ್ಳು, ಬ್ರಾಯ್ಲರ್ ಕೋಳಿಗಳಿಗೆ ಬೆಳವಣಿಗೆಗಾಗಿ ಹಾರ್ಮೋನ್ ಚುಚ್ಚುವುದಿಲ್ಲ ಎನ್ನುವುದು ಸತ್ಯ ಸಂಗತಿ. ವಂಶವಾಹಿಯಲ್ಲಿ ಬದಲಾವಣೆ ತಂದು ಉತ್ಪಾದಿಸಲ್ಪಡುವ ಹೈಬ್ರಿಡ್ ಜಾತಿಯ ಕೋಳಿಗಳಿವು. ತಿಂದ ಆಹಾರವನ್ನು ಬೇಗನೆ ಮಾಂಸವಾಗಿ ಪರಿವರ್ತಿಸಲ್ಪಡುವ ಸಾಮರ್ಥ್ಯವನ್ನು ಇವು ಹೊಂದಿವೆ.
ಅವಧಿಗೆ ಮುನ್ನ ಮುಟ್ಟು?
ಬ್ರಾಯ್ಲರ್ ಕೋಳಿ ತಿನ್ನುವುದರಿಂದ ಹೆಣ್ಣುಮಕ್ಕಳಿಗೆ ಅವಧಿಗಿಂತ ಮುನ್ನ ಮುಟ್ಟಾಗುವುದು, ಮಹಿಳೆಯರ ಹಾರ್ಮೋನ್‌ನಲ್ಲಿ ಅಸಮತೋಲನವಾಗಿ ಗರ್ಭಧಾರಣೆಗೆ ತಡೆಯುಂಟಾಗುವುದು ಎಂಬುದು ವೈಜ್ಞಾನಿಕ ಅಧ್ಯಯನಗಳಿಂದ ತಿಳಿದುಬಂದಿಲ್ಲ. ಆದರೆ ಕೋಳಿಮಾಂಸ ಪೋಷಕಾಂಶ ಹಾಗೂ ಕೊಬ್ಬು ಹೊಂದಿರುವ ಆಹಾರವಾಗಿದೆ. ಇದರ ಸಾರು ಹಾಗೂ ಫ್ರೈ ಹೆಚ್ಚಾಗಿ ತಿನ್ನುವುದರಿಂದ ದೊರೆಯುವ ಅಧಿಕ ಶಕ್ತಿ ಹಾಗೂ ಮಕ್ಕಳ ಕ್ರೀಡಾ ಚಟುವಟಿಕೆಗಳ ಕೊರತೆ ಜೊತೆ ಸೇರಿದಾಗ ಮುಟ್ಟು ಉಂಟಾಗುವ ಕ್ರಿಟಿಕಲ್ ವೇಯ್ಟಿ ಅಥವಾ ನಿರ್ಣಾಯಕ ತೂಕ ಅವಧಿಗಿಂತ ಮುಂಚೆಯೇ ಬರುತ್ತದೆ. ಇದು ಹುಡುಗಿಯರಲ್ಲಿ ಮುಟ್ಟು ಅವಧಿಗಿಂತ ಮುಂಚೆಯೇ ಉಂಟಾಗಲು ಕಾರಣವಾಗಬಹುದು.
ಅಧಿಕ ಕೊಬ್ಬು
ಆಹಾರದ ಮೂಲಕ ಅಧಿಕ ಕೊಬ್ಬು ಶರೀರ ಸೇರುವುದರಿಂದ ಅರೋಮಟೇಸ್ ಎಂಬ ಕಿಣ್ಣಗಳ ಪ್ರಮಾಣವೂ ಹೆಚ್ಚಾಗುತ್ತದೆ. ಅದು ದೇಹದಲ್ಲಿ ಈಸ್ಟ್ರಜನ್‌ನ ಪ್ರಮಾಣ ಹೆಚ್ಚಿಸುವುದರೊಂದಿಗೆ ಶರೀರದಲ್ಲಿ ಟೆಸ್ಟೋಸ್ಟಿರೋನ್, ಈಸ್‌ಟ್ರಜನ್ ಹಾರ್ಮೋನ್‌ನ ಅನುಪಾತದಲ್ಲಿ ಬದಲಾವಣೆಯಾಗುತ್ತದೆ. ಪಾಲಿಸಿಸ್ಟಿಕ್ ಒವೇರಿಯನ್ ಡಿಸಾರ್ಡರ್‌ನಂತಹ ಸಮಸ್ಯೆಗಳಿಗೆ ಹಾಗೂ ಗರ್ಭಧಾರಣೆಗೆ ತಡೆಯುಂಟಾಗಲೂ ಇದು ಎಡೆಮಾಡಿಕೊಡಬಹುದು.
ಚುಚ್ಚುಮದ್ದು ಬೆಳವಣಿಗೆಗೆ ಅಲ್ಲ
ಇಂತಹ ಕೋಳಿಗಳು ಒಂದು ಕಿಲೋ ತೂಗಲು ಕೇವಲ ಒಂದೂ ಮುಕ್ಕಾಲು ಕೆಜಿ ಆಹಾರ ಮಾತ್ರ ಸಾಕು. ಅಂದಹಾಗೆ, ಇವುಗಳಿಗೆ ಚುಚ್ಚುಮದ್ದು ನೀಡುವುದು ರೋಗ ಬಾರದಿರುವುದಕ್ಕೇ ಹೊರತು ಬೆಳವಣಿಗೆಗಾಗಿ ಅಲ್ಲ.
ಮಾರಕ ರೋಗ
ಬ್ರಾಯ್ಲರ್ ಕೋಳಿಗಳ ಸೇವನೆಯಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಬರುವ ಸಾಧ್ಯತೆಯಿದೆ ಎಂದು ಗೋವಾದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿತ್ತು. ಅಷ್ಟೇ ಅಲ್ಲದೆ, ಬ್ರಾಯ್ಲರ್ ಕೋಳಿಗಳಿಗೆ ಉಪಯೋಗಿಸುವ ಆ್ಯಂಟಿಬಯಾಟಿಕ್‌ಗಳಿಂದ ರೋಗನಿರೋಧಕ ಶಕ್ತಿ ನಷ್ಟವಾಗುವುದಲ್ಲದೆ, ಆ್ಯಂಟಿಬಯೋಟಿಕ್‌ಗಳು ಸರಿಯಾದ ರೀತಿಯಲ್ಲಿ ಕೆಲಸಮಾಡದಿರಬಹುದು ಎಂದು ಹೊಸದಿಲ್ಲಿಯ ಸೆಂಟರ್ ಫಾರ್ ಸಯನ್ಸ್ ಆ್ಯಂಡ್ ಎನ್ವಿರಾನ್‌ಮೆಂಟ್ ತನ್ನ ವರದಿಯಲ್ಲಿ ಹೇಳಿದೆ.
ಕೃಪೆ: ಮನೋರಮಾ ಆನ್‌ಲೈನ್