ಮೀನು ಮಾರುವ ರೆಹಮಾನನ ಹೊಟ್ಟೆಪಾಡು ಮತ್ತು ಹೊಟ್ಟೆ ತುಂಬಿದವರ ರ್ಮರಕ್ಷಣೆಯ ಹೋರಾಟ
ಕಳೆದ ಹತ್ತಾರು ವರ್ಷಗಳಿಂದ ಮೊಪೆಡ್‌ನಲ್ಲಿ ಮನೆ ಮನೆಗೆ ಮೀನು ಮಾರಿಕೊಂಡು ಬರುತ್ತಿದ್ದ ರೆಹಮಾನನ ಮುಖದಲ್ಲಿ ಆ ದಿನ ಕಂಡಂತಹ ಆತಂಕವನ್ನು ನಾನು ಯಾವತ್ತೂ ಕಂಡಿರಲಿಲ್ಲ. ಅದಕ್ಕೆ ಕಾರಣವೂ ಇತ್ತು. ಟಿಪ್ಪು ದಿನಾಚರಣೆಯ ಗದ್ದಲ ಕೋಲಾಹಲದ ಹಿನ್ನೆಲೆಯಲ್ಲಿ ಹಿಂದಿನ ಎರಡು ದಿನಗಳಿಂದ ಕರಾವಳಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಮತಾಂಧರು ಕೋಮುಗಲಭೆ ಸೃಷ್ಟಿಸಲು ಶತಾಯಗತಾಯ ಯತ್ನಿಸುತ್ತಿದ್ದರು. ಒಂದು ಕೋಮಿಗೆ ಸೇರಿದ ಎಳೆಯ ತರುಣನೊಬ್ಬನನ್ನು ಅದೇ ಕೋಮಿಗೆ ಸೇರಿದವರೇ ಇರಿದು ಕೊಂದು ಹಾಕಿದ್ದು ಈ ಉದ್ವಿಗ್ನತೆಯ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಹೀಗೆ ಪರಸ್ಪರರನ್ನು ಕೊಲ್ಲುವುದಕ್ಕೆ ಯಾವ ಕಾರಣವೂ ಬೇಕಾಗಿರಲಿಲ್ಲ; ವೈಯಕ್ತಿಕ ದ್ವೇಷದ ಅಗತ್ಯವೂ ಇರಲಿಲ್ಲ. ಆತ ಇನ್ನೊಂದು ಕೋಮಿಗೆ ಸೇರಿದವನಾಗಿದ್ದರಾಯಿತು, ಅಷ್ಟೇ.
ಈ ರೆಹಮಾನ ತೀರಾ ಬಡ ಕುಟುಂಬದವನು; ಶ್ರಮಜೀವಿ. ಚಳಿಯೋ ಮಳೆಯೋ ನಸುಕು ಹರಿಯುವ ಮುನ್ನವೇ ಎದ್ದು ಧಕ್ಕೆಗೆ ಹೋಗಿ ಮೀನು ಖರೀದಿಸಿ, ಮನೆ ಮನೆಗೆ ಒಯ್ದು ಮಾರಿ ಗಳಿಸಿದ ಮೂರು ಕಾಸು ಸಂಪಾದನೆಯಲ್ಲಿ ಮನೆಯಲ್ಲಿರುವ ಐದು ಮಂದಿಯ ಹೊಟ್ಟೆ ತುಂಬಬೇಕು. ಅಲ್ಲದೆ ಮಗ ಮತ್ತು ಮಗಳ ಓದಿಗೆ ಹಣ ಹೊಂದಿಸಬೇಕು. ಆತನೇ ಬಡವ ಎಂದು ಹೇಳಿದ ಮೇಲೆ ಆತನ ತಂದೆ ಮೊಯ್ದಿನ್ ಸಾಹೇಬರ ಬಗ್ಗೆ ಹೇಳಬೇಕಾಗಿಲ್ಲವಲ್ಲ. ಅತ್ಯಂತ ಸ್ವಾಭಿಮಾನಿಯಾದ ಮೊಯ್ದೀನ್ ಸಾಹೇಬರದು ಎಂತಹ ಕಡುಬಡತನವೆಂದರೆ, ಮಗಳ ಮದುವೆಗೆ ಸಕಾಲದಲ್ಲಿ ಹಣ ಹೊಂದಿಸಲಾಗದೆ ಅವಮಾನದಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಮನುಷ್ಯ ಆತ. ಅಪ್ಪಸತ್ತ ಮೇಲೆ ಮನೆಯ ಜವಾಬ್ದಾರಿ ರೆಹಮಾನನ ಮೇಲೆ ಬಿದ್ದಿತ್ತು. ಮೀನು ಮಾರಿ ಉಳಿದ ಸಮಯದಲ್ಲಿ ಮಾವಿನಕಾಯಿ, ಹುಣಸೆ ಹುಳಿ ವ್ಯಾಪಾರ ಹೀಗೆ ಅದು ಹೇಗೋ ಬದುಕು ಸಾಗಿಸುತ್ತಿದ್ದಾನೆ.
ರೆಹಮಾನನೇನೂ ಬಹಳ ಓದಿದವನಲ್ಲ. ಆದರೆ, ಕಾಯಕವೇ ಕೈಲಾಸ ಅಂದುಕೊಂಡ ಆತನ ಮಾತಿನಲ್ಲಿ ಜೀವನದ ಅದೆಷ್ಟೋ ಸತ್ಯಗಳು ಅಡಗಿದ್ದವು. ಮಸೀದಿಗೆ ಕಲ್ಲು ಬಿತ್ತೆಂದರೆ ಅದನ್ನು ಮಾಡಿದ್ದು ಹಿಂದೂಗಳು ಎಂಬ ಅಭಿಪ್ರಾಯಕ್ಕೆ ತಕ್ಷಣ ಬಂದು ಪರಸ್ಪರರು ಹೊಡೆದಾಟಕ್ಕಿಳಿಯುವುದು ಸರ್ವೇಸಾಮಾನ್ಯ. ಊರಿನಲ್ಲಿ ಮಸೀದಿಗೆ ಕಲ್ಲುಬಿದ್ದಾಗ ಇನ್ನೇನು ಯುವಕರು ಉದ್ರಿಕ್ತರಾಗಿ ಗಲಭೆಗೆ ಸಿದ್ಧರಾದಾಗ ಮಸೀದಿಗೆ ಕಲ್ಲುಬಿದ್ದುದು ಹೌದು, ಆದರೆ ಅದನ್ನು ಅವರು ಎಸೆದದ್ದು ಎಂದು ಹೇಗೆ ಹೇಳುತ್ತೀರಿ? ನಮ್ಮ ನಡುವೆ ಜಗಳ ಹಚ್ಚಲು ಯಾರೋ ಕಿಡಿಗೇಡಿಗಳು ಎಸೆದಿರಬಹುದು, ನೀವು ಈಗ ಗಲಭೆ ಶುರುಮಾಡಿದರೆ ಅವರ ನೆಮ್ಮದಿ ಮಾತ್ರವಲ್ಲ ನಮ್ಮದೂ ಸೇರಿದಂತೆ ಇಡೀ ಊರಿನ ನೆಮ್ಮದಿ ಹಾಳಾಗುತ್ತದೆ, ನಾವು ನಾಳೆಯೂ ಬದುಕಬೇಕು, ಸುಮ್ಮನಿರಿ ಎಂದು ಹೇಳಿ ದೊಡ್ಡದೊಂದು ಕೋಮುಗಲಭೆ ಉಪಾಯದಿಂದ ತಪ್ಪಿಸಿದ ಸಾಧಾರಣ ಮನುಷ್ಯನಾತ. ಧರ್ಮ, ದೇವರು ಎಂದು ಗದ್ದಲ ಎಬ್ಬಿಸುವವರು, ರಕ್ತಪಾತದ ಮೂಲಕ ತಮ್ಮ ದೇವರನ್ನು ತಮ್ಮ ಧರ್ಮವನ್ನು ಉಳಿಸಲು ಹೋರಾಡುವವರೆಲ್ಲರೂ ರೆಹಮಾನನ ಬಳಿ ಕುಳಿತು ಆತನ ಮನದಮಾತುಗಳಿಗೆ ಕಿವಿಯಾಗಬೇಕು. ಆತನ ಹೃದಯದ ಮಾತುಗಳನ್ನು ಆಲಿಸಿದ ಬಳಿಕವೂ ಯಾರಾದರೂ ಕೋಮುವಾದಿಯಾಗಿ ಉಳಿದುಕೊಂಡರೆ ಅವರನ್ನು ಮನುಷ್ಯರು ಎನ್ನಲಾಗದು. ಕುಟ್ಟಬ್ಯಾರಿಯ ಕತೆ
ಡಾ. ಪುರುಷೋತ್ತಮ ಬಿಳಿಮಲೆಯವರು ತಮ್ಮ ಬಾಲ್ಯ ಕಾಲದಲ್ಲಿ ತಮ್ಮ ಮನೆಗೆ ಅಡಿಕೆ ಕೊಳ್ಳಲು ಬರುತ್ತಿದ್ದ ಕುಟ್ಟ ಬ್ಯಾರಿಯ ಬಗ್ಗೆ ಒಂದು ಸ್ವಾರಸ್ಯಕರ ಕತೆ ಹೇಳುತ್ತಿರುತ್ತಾರೆ. ಕಗ್ಗಾಡಿನ ಮೂಲೆಯಲ್ಲಿದ್ದ ಅವರ ಮನೆಗೆ ಒಂದೋ ಎರಡೋ ತಿಂಗಳಿಗೊಮ್ಮೆ ಬರುತ್ತಿದ್ದ ಆ ಬ್ಯಾರಿ ಬಿಳಿಮಲೆಯವರ ತಂದೆ ಶೇಷಪ್ಪಗೌಡರಲ್ಲಿ ಅಡಿಕೆ ವ್ಯವಹಾರ ನಡೆಸುತ್ತಿದ್ದ. ಬೀಡಿ ಹಂಚಿಕೊಂಡು, ಮಂಗಳೂರಿನ ಪ್ರಯಾಣದ ಸಂದರ್ಭದ ಅನೇಕ ಕತೆಗಳ ಸಹಿತ ಅದು ಇದು ಎಂದು ಲೋಕಾಭಿರಾಮ ಮಾತನಾಡುತ್ತಾ ಅನೇಕ ಸಂಗತಿಗಳನ್ನು ತೀರಾ ಹತ್ತಿರದ ಬಂಧುಗಳಂತೆ ಅವರಿಬ್ಬರು ಹಂಚಿಕೊಳ್ಳುತ್ತಿದ್ದರು. ಯಾವುದೋ ಧರ್ಮದವರು, ಎಲ್ಲೆಲ್ಲೋ ವಾಸಿಸುವವರು, ಯಾವತ್ತೋ ಭೇಟಿಯಾಗುವವರು, ಆದರೂ ಅವರ ನಡುವೆ ಎಂತಹ ನಂಬಿಕೆ ಎಂದರೆ ಹಣ ತೆತ್ತು ಕೊಂಡುಕೊಂಡ ಅಡಕೆಯನ್ನು ಅಲ್ಲೇ ಅಂಗಳದ ಮೂಲೆಯಲ್ಲಿ ಹರವಿಟ್ಟು, ‘‘ಮುಂದಿನ ಬಾರಿ ಬಂದಾಗ ಇದನ್ನು ಒಯ್ಯುತ್ತೇನೆ, ಇದು ಇಲ್ಲೇ ಇರಲಿ’’ ಎಂದು ಹೇಳಿ ಹೋಗುತ್ತಿದ್ದ. ಬ್ಯಾರಿಗೆ ಸೇರಿದ ಆ ಅಡಿಕೆಯನ್ನು ಯಾರೂ ಮುಟ್ಟ ಕೂಡದು, ಒಂದು ಅಡಕೆಯೂ ಆಚೀಚೆ ಆಗ ಕೂಡದು ಎಂದು ಶೇಷಪ್ಪಗೌಡರು ಮನೆಯವರಿಗೆ ತಾಕೀತು ಮಾಡುತ್ತಿದ್ದರು. ಕುಟ್ಟಬ್ಯಾರಿ ಹೋದಮೇಲೆ ಅಡಿಕೆ ತೆಗೆದು ಮೋಸಮಾಡಿದರೆ ಆತನಿಗೆ ತಿಳಿಯುವುದು ಸಾಧ್ಯವೇ ಇರಲಿಲ್ಲ. ಆದರೆ ಅವರ ನಂಬಿಕೆ ಅಷ್ಟು ಗಟ್ಟಿ. ಮನೆಯವರು ಮೋಸಮಾಡಲಿಕ್ಕಿಲ್ಲ ಎಂದು ಕುಟ್ಟಬ್ಯಾರಿಗೆ ವಿಶ್ವಾಸ. ಬ್ಯಾರಿಗೆ ಮೋಸ ಮಾಡಬಾರದು ಎಂಬ ಪ್ರಾಮಾಣಿಕತೆ ಮನೆಯವರದ್ದು. ಎಂತಹ ಸೌಹಾರ್ದ ಸಂಬಂಧ, ಎಂತಹ ಸೌಹಾರ್ದದ ಬದುಕು. ಇದು ನಮ್ಮ ನೆಲದ ಸಂಸ್ಕೃತಿ.
ಇದು ರೆಹಮಾನ, ಕುಟ್ಟಬ್ಯಾರಿಗೆ ಮಾತ್ರ ಸೀಮಿತವಲ್ಲ ಕರಾವಳಿಯ ಉದ್ದಗಲಕ್ಕೂ ಇಂತಹ ಸಾವಿರ ಸಾವಿರ ಕತೆಗಳು ಲಭಿಸುತ್ತವೆ. ಧಾರ್ಮಿಕ ಸೌಹಾರ್ದ ಇಲ್ಲಿನ ಬದುಕಿನ ಉಸಿರೇ ಆಗಿತ್ತು. ಮಾನವ ಸಂಬಂಧಗಳ ನಡುವೆ ಧರ್ಮ ಯಾವತ್ತೂ ಅಡ್ಡ ಬಂದಿರಲಿಲ್ಲ. ವಿಭಿನ್ನ ಕೋಮಿನ ಜನ, ವಿಭಿನ್ನ ಭಾಷೆ ಮಾತನಾಡುವ ಜನ ಜೊತೆಯಾಗಿ ವಾಸಿಸುತ್ತಾರೆ. ಹಿಂದೂಗಳ ಅದೆಷ್ಟೋ ದೇವಸ್ಥಾನಗಳಿಗೆ ಮುಸ್ಲಿಮರು, ಕ್ರೈಸ್ತರು ನೆರವು ನೀಡುತ್ತಾರೆ. ಕ್ರೈಸ್ತರ ಅತ್ತೂರು ಇಗರ್ಜಿಗೆ ಗರಿಷ್ಠ ಸಂಖ್ಯೆಯಲ್ಲಿ ಹಿಂದೂಗಳು ಭೇಟಿ ನೀಡುತ್ತಾರೆ. ಉಳ್ಳಾಲದ ದರ್ಗಾಕ್ಕೆ ಹಿಂದೂಗಳು ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. ಪ್ರಸಿದ್ಧ ಶಂಕರಪುರ ಮಲ್ಲಿಗೆ ಬೆಳೆಯುವವರು ಕ್ರೈಸ್ತ ಸಮುದಾಯದವರು, ಅದನ್ನು ಮಾರುವವರು ಬಹುವಾಗಿ ಮುಸ್ಲಿಮ್ ಸಮುದಾಯದವರು, ದೇವರಿಗೆ ಅರ್ಪಿಸುವವರು, ಮುಡಿದುಕೊಳ್ಳುವವರು ಹಿಂದೂ ಸಮುದಾಯದವರು. ಮೀನು ಹಿಡಿಯಲು ಕಡಲಿಗೆ ಹೋಗುವವರು ಮೊಗವೀರರು, ಅದನ್ನು ಮಾರುವವರು ಬಹುವಾಗಿ ಮುಸ್ಲಿಮರು. ಅದನ್ನು ತಿನ್ನುವವರು ಎಲ್ಲ ಸಮುದಾಯದವರು. ಹಿಂದೂ ದೇವರುಗಳ ಜಾತ್ರೆಗಳಲ್ಲಿ ಮುಸ್ಲಿಮರು ವ್ಯಾಪಾರಿಗಳಾಗಿ ಪಾಲ್ಗೊಂಡು ಜಾತ್ರೆಯ ಕಳೆ ಹೆಚ್ಚಿಸುತ್ತಾರೆ. ಹೀಗೆ ನಿಜಕ್ಕೂ ಇದು ಸಹಬಾಳ್ವೆಯ ಸಾಗರ.
ಈ ಸಹಬಾಳ್ವೆಯ ಸಾಗರದ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದರಲ್ಲಿ ಬೌದ್ಧರು, ಜೈನರು, ಮುಸ್ಲಿಮರು, ಕ್ರೈಸ್ತರು, ಹಿಂದೂಗಳು ಹೀಗೆ ಎಲ್ಲರ ಕೊಡುಗೆಯಿದೆ. ಈ ಸೌಹಾರ್ದ ಪರಂಪರೆ ಏಕಾಏಕಿಯಾಗಿ ಹುಟ್ಟಿದ್ದಲ್ಲ. ಅದು ಬದುಕಿನ ಅನಿವಾರ್ಯತೆಯಲ್ಲಿ ಹುಟ್ಟಿತು. ಅನಿವಾರ್ಯವಾದ ಕೊಡುಪಡೆಯಲ್ಲಿ ಮುಂದುವರಿಯಿತು. ಧರ್ಮ ರಕ್ಷಣೆ, ಸಂಸ್ಕೃತಿ ರಕ್ಷಣೆ, ಕೋಮುವಾದ ಇವೆಲ್ಲ ಹೊಟ್ಟೆ ತುಂಬಿದವರ ಹುನ್ನಾರಗಳು. ಜನಸಾಮಾನ್ಯರಿಗೆ ಇವು ಯಾವುದೂ ಬೇಕಾಗಿಲ್ಲ. ಅವರಿಗೆ ಬೇಕಿರುವುದು ಮೂರು ಹೊತ್ತು ಊಟಕ್ಕೆ ವ್ಯವಸ್ಥೆ, ಕೇವಲ ನೆಮ್ಮದಿಯ ಬದುಕು.
ಸೌಹಾರ್ದ ಸೌಧ ಉರುಳಿಸಲು ನಿಲ್ಲದ ಯತ್ನ
ಕಳೆದ ಸುಮಾರು ಮೂರು ದಶಕದ ಲಾಗಾಯ್ತು ಇಂತಹ ಒಂದು ವಿಶಿಷ್ಟ ಪರಂಪರೆಯನ್ನು ನಾಶಮಾಡಲು ಶತಾಯಗತಾಯ ಯತ್ನಿಸಲಾಗುತ್ತಿದೆ. ಬಾಬರಿ ವಿವಾದ ಸಂದರ್ಭದಲ್ಲಿ ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುವ ಶಕ್ತಿಗಳು ಕಸುವು ಪಡೆದುಕೊಂಡವು. ತಮ್ಮ ಜೀವವಿರೋಧಿ ಕೃತ್ಯಗಳ ಮೂಲಕ ಸಮಾಜಕ್ಕೆ ಅವು ಮಾಡಿದ ಹಾನಿ ಅಷ್ಟಿಷ್ಟಲ್ಲ. ಅವುಗಳಿಗೆಲ್ಲ ಮೂಕ ಸಾಕ್ಷಿಯಾಗುವ ದೌರ್ಭಾಗ್ಯ ನಮ್ಮದಾಗಿತ್ತು. ಸುಳ್ಯ ತಾಲೂಕಿನ ಪಂಜ ಎಂಬಲ್ಲಿನ ಪ್ರಸಿದ್ಧ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳು ಸಂತೋಷದಿಂದ ಪಾಲ್ಗೊಳ್ಳುತ್ತಿದ್ದರು. ಆದರೆ 90ರ ದಶಕದಲ್ಲಿ ಪರಿಸ್ಥಿತಿ ಬದಲಾಯಿತು. ‘ಮುಸಲ್ಮಾನರಿಗೆ ಪ್ರವೇಶವಿಲ್ಲ’ ಎಂಬ ಬ್ಯಾನರನ್ನು ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ತೂಗು ಹಾಕಲಾಯಿತು. ಜಾತ್ರೆಯಲ್ಲಿ ನೆಲಬಾಡಿಗೆ ತೆತ್ತು ವ್ಯಾಪಾರಕ್ಕೆ ಬಂದವರನ್ನು ಕೇವಲ ಮುಸ್ಲಿಮರೆಂಬ ಕಾರಣಕ್ಕೆ ಎಬ್ಬಿಸಿ ಹೊರಕಳುಹಿಸಿದ್ದನ್ನು ನಾನು ಕಣ್ಣಾರೆ ನೋಡಿದೆ. ಮೊದಲೇ ಹೇಳುತ್ತಿದ್ದರೆ ನೆಲಬಾಡಿಗೆಯನ್ನಾದರೂ ಉಳಿಸಿಕೊಳ್ಳುತ್ತಿದ್ದೇವಲ್ಲ ಎಂದು ಅವರು ನೋವಿನಿಂದ ಆಡಿದ ಮಾತು ಕಿವಿಗೆ ಬಿದ್ದಾಗ ಮನಸ್ಸು ಮಮ್ಮಲ ಮರುಗಿತು. ಅದೇ ದಿನಗಳಲ್ಲಿ ಊರೂರಿನ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಗೋಡೆಗಳಲ್ಲಿ ಕೋಮು ಪ್ರಚೋದನಕಾರಿ ಬರಹಗಳು ಕಾಣಿಸಿಕೊಂಡವು. ಆಮೇಲೇನಾಯಿತು ಎನ್ನುವುದು ಈಗ ಇತಿಹಾಸ. ಈಗ ನೋಡಿದರೆ ಹಿಂದಿನ ಸೌಹಾರ್ದದ ಕತೆಗಳು ಎಷ್ಟಿವೆಯೋ ಸೌಹಾರ್ದವನ್ನು ಕೆಡಿಸಿದ ಕತೆಗಳೂ ಅಷ್ಟೇ ಸಂಖ್ಯೆಯಲ್ಲಿ ಹೆಚ್ಚಾಗಿವೆ.
ಅಷ್ಟೇನೂ ಓದಿರದ, ನಿರುದ್ಯೋಗಿಗಳಾಗಿರುವ ಕೆಳ ವರ್ಗಗಳ ಯುವಕರಲ್ಲಿ ಧರ್ಮದ ಅಮಲನ್ನು ತುಂಬಿಸಿ, ಇತರ ಧರ್ಮೀಯರಿಂದ ಧರ್ಮಕ್ಕೆ ಅಪಾಯವಿದೆ ಎಂದು ಸುಳ್ಳು ಹೇಳಿ ಅವರನ್ನು ಛೂಬಿಡಲಾಯಿತು, ಅವರನ್ನು ಧರ್ಮರಕ್ಷಣೆಯ ಕಾಲಾಳುಗಳಂತೆ ದುಡಿಸಿ ಕೊಳ್ಳಲಾಯಿತು. ಸಮಾಜದ ಮೇಲ್ವರ್ಗದವರ ರಾಜಕೀಯ ಲಾಭದ ಹುನ್ನಾರವನ್ನು ಅರಿಯದ ಇವರು ಕಾನೂನು ಕೈಗೆತ್ತಿಕೊಂಡು ಹಿಂಸಾಕೃತ್ಯಗಳಲ್ಲಿ ಭಾಗಿಯಾಗುತ್ತಾ ಇತರರ ಬದುಕನ್ನು ನಾಶಪಡಿಸುವ ಜೊತೆಗೆ ಪೊಲೀಸ್ ಠಾಣೆ, ಕೋರ್ಟುಕಚೇರಿ, ಜೈಲು ಎಂದು ಅಲೆಯುತ್ತಾ ತಮ್ಮ ಬದುಕನ್ನೂ ನಾಶಪಡಿಸಿಕೊಂಡರು. ‘ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ’ ಎಂಬಂತೆ ಸಾವಿರ ಸಾವಿರ ವರ್ಷಗಳಿಂದ ಕಟ್ಟಿ ಪೋಷಿಸಿಕೊಂಡು ಬರಲಾದ ಸೌಹಾರ್ದ ಸೌಧಕ್ಕೆ ಎಣಿಕೆಗೆ ಸಿಗದ ಹಾನಿ ಮಾಡಿದರು. ಸಿರಿ, ಅಬ್ಬಕ್ಕದೇವಿ, ಕುದ್ಮುಲ್ ರಂಗರಾವ್, ಕಾರ್ನಾಡ್ ಸದಾಶಿವರಾವ್, ಕಮಲಾದೇವಿ ಚಟ್ಟೋಪಾಧ್ಯಾಯ, ಶಿವರಾಮ ಕಾರಂತ ಮೊದಲಾದ ಧೀಮಂತರಿಂದ ಪ್ರಖ್ಯಾತವಾದ ಪ್ರದೇಶ, ಬ್ಯಾಂಕಿಂಗ್, ಶಿಕ್ಷಣ, ವೈದ್ಯಕೀಯ ಸಂಸ್ಥೆಗಳಿಂದ ದೇಶದಲ್ಲಿಯೇ ಹೆಸರಾದ ಪ್ರದೇಶ ಕೋಮು ಕಿಡಿಗೇಡಿಗಳ ಕೃತ್ಯದಿಂದಾಗಿ ಜಗತ್ತಿನಲ್ಲಿ ಕುಖ್ಯಾತಿ ಗಳಿಸುವಂತಾಯಿತು. ಇವತ್ತು ಮಂಗಳೂರು ಎಂದರೆ ಮೊದಲು ನೆನಪಿಗೆ ಬರುವುದು ಅನೈತಿಕ ಪೊಲೀಸ್‌ಗಿರಿ, ಕೋಮುಸಂಘರ್ಷ, ಅರಾಜಕತೆ ಎಂಬಂತಾಗಿದ್ದು ಶಿಕ್ಷಣ, ಉದ್ಯೋಗ, ಉದ್ಯಮ ಇತ್ಯಾದಿಗಳಿಗೆ ಹೊರಗಿನವರು ಬರುವ ಮುನ್ನ ಎರಡೆರಡು ಬಾರಿ ಯೋಚಿಸುವಂತಾಗಿದೆ.
ಧರ್ಮ ಇರುವುದು ಮನುಷ್ಯರಿಗಾಗಿಯೇ ಹೊರತು ಮನುಷ್ಯರು ಇರುವುದು ಧರ್ಮಕ್ಕಾಗಿಯಲ್ಲ. ಇದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ಜಾತಿ ಧರ್ಮದ ನೆಲೆಯಲ್ಲಿ ಸಮಾಜವನ್ನು ಒಡೆಯುವುದರಿಂದ ಕ್ಷಣಿಕ ರಾಜಕೀಯ ಲಾಭಗಳು ಸಿಗಬಹುದು. ಆದರೆ ಶಾಶ್ವತ ಲಾಭ ಯಾರಿಗೂ ಇಲ್ಲ; ನಷ್ಟವೇ ಅಧಿಕ. ಅದೆಲ್ಲ ಸರಿ, ಹೀಗೆ ಪರಿಸ್ಥಿತಿ ಹದಗೆಡಲು ಯಾರು ಕಾರಣ? ಕೇವಲ ಕೋಮುವಾದಿ ಶಕ್ತಿಗಳೇ? ಅವುಗಳನ್ನು ಹದ್ದುಬಸ್ತಿನಲ್ಲಿಡುವಲ್ಲಿ ವಿಫಲಗೊಂಡ ಪೊಲೀಸ್ ವ್ಯವಸ್ಥೆಯೇ? ಅಲ್ಲ. ಹೇಳುವುದಕ್ಕೆ ನಮ್ಮದು ಬುದ್ಧಿವಂತರ ಜಿಲ್ಲೆ, ನೂರಕ್ಕೆ ನೂರು ಸಾಕ್ಷರರ ಜಿಲ್ಲೆ, ಸಜ್ಜನರ ಜಿಲ್ಲೆ. ಅಪರಾಧವೊಂದು ನಡೆಯುವಾಗ ಅದನ್ನು ನೋಡುತ್ತ ಸುಮ್ಮನೆ ಕೂರುವುದು ಆ ಅಪರಾಧಕೃತ್ಯದಲ್ಲಿ ಭಾಗಿಯಾದ್ದಕ್ಕೆ ಸಮ ಎಂಬ ಮಾತೊಂದಿದೆಯಲ್ಲ, ಹಾಗೆಯೇ ಇಲ್ಲಿನ ಸಜ್ಜನರು ನಮಗೇಕೆ ಆ ಉಸಾಬರಿ ಎಂದು ಸುಮ್ಮನಿದ್ದುದು ಕೂಡಾ ಇಂದಿನ ಈ ಪರಿಸ್ಥಿತಿಗೆ ಕಾರಣ ಎನ್ನುವುದನ್ನು ವಿಷಾದದಿಂದಲೇ ಹೇಳಬೇಕಾಗಿದೆ. ಕಾಲ ಇನ್ನೂ ಮಿಂಚಿಲ್ಲ. ಸಜ್ಜನರು ಗಟ್ಟಿ ದನಿ ಎತ್ತಬೇಕಾಗಿದೆ. ಅದರಲ್ಲೂ ಯುವಜನಾಂಗ ಕೋಮುವಾದದತ್ತ ವಾಲದಂತೆ ದೊಡ್ಡಮಟ್ಟದಲ್ಲಿ ಕೆಲಸಮಾಡುವ ಅಗತ್ಯವಿದೆ. ಇಲ್ಲಿನ ಸೌಹಾರ್ದ ವೃಕ್ಷಕ್ಕೆ ಸಾವಿರ ಸಾವಿರ ಇತಿಹಾಸವಿದ್ದು ಅದರ ಬೇರುಗಳು ಗಟ್ಟಿಯಾಗಿವೆ. ಅದರ ಕೆಲವು ಗೆಲ್ಲುಗಳನ್ನು ಕತ್ತರಿಸಿಹಾಕಿರಬಹುದು. ಮರ ಒಣಗುವಂತೆ ಮಾಡಿರಬಹುದು. ಆದರೆ ವೃಕ್ಷಕ್ಕೆ ಹಾನಿ ಎಸಗುವವರನ್ನು ಬಳಿ ಸುಳಿಯದಂತೆ ಮಾಡಿ ಮತ್ತೆ ನೀರು ಹಾಕಿದರೆ ಆ ವೃಕ್ಷ ಹಸಿರೆಲೆಗಳಿಂದ, ಫಲಪುಷ್ಪಗಳಿಂದ ನಳನಳಿಸುವಂತೆ ಮಾಡಬಹುದು. ಅದನ್ನು ಮಾಡುವ ಜವಾಬ್ದಾರಿ ನಮ್ಮ ಮೇಲಿದೆ.
ನಾವು ಹೊಸದಾಗಿ ಮಾಡಬೇಕಾದುದು ಏನೂ ಇಲ್ಲ. ಇಲ್ಲಿನ ನೆಲದ ಮೂಲಗುಣವಾದ ಸೌಹಾರ್ದ ಸಂಸ್ಕೃತಿಯನ್ನು ಮತ್ತೆ ಎತ್ತಿಹಿಡಿಯುವುದು. ರೆಹಮಾನನಂತಹ ಬಡಪಾಯಿಗಳು ತಮ್ಮ ಪಾಡಿಗೆ ತಾವು ದುಡಿಯುತ್ತಾ ನೆಮ್ಮದಿಯ ಬದುಕು ಸಾಗಿಸಲು ಪೂರಕವಾದ ಒಂದು ಪರಿಸರವನ್ನು ಮರುಸ್ಥಾಪಿಸುವುದು. ಈ ಎಲ್ಲ ಹಿನ್ನೆಲೆಯಲ್ಲಿಯೇ ಮಂಗಳೂರಿನಲ್ಲಿ ಸಹಬಾಳ್ವೆಯ ಸಾಗರ ಎಂಬ ರಾಷ್ಟ್ರೀಯ ಸಮಾವೇಶ ನಡೆಯುತ್ತಿರುವುದು ಮತ್ತು ಆ ಯತ್ನಕ್ಕೆ ರಾಜ್ಯದ ಮೂಲೆ ಮೂಲೆಯ ಸೌಹಾರ್ದಪ್ರಿಯ ಮನಸುಗಳು ಕೈಜೋಡಿಸುತ್ತಿರುವುದು ನಿಜಕ್ಕೂ ಔಚಿತ್ಯಪೂರ್ಣ ಮತ್ತು ಸಂತಸದ ಸಂಗತಿ. ಬನ್ನಿ ನಾವೆಲ್ಲರೂ ಆ ಸಾಗರದಲ್ಲಿ ನದಿಗಳಾಗಿ ತೊರೆಗಳಾಗಿ ಸೇರಿಕೊಳ್ಳೋಣ.