ಫ್ರೀ ಬೇಸಿಕ್ಸ್‌ನ ನೈಜ ಮುಖವೇನು?
ಫ್ರೀ ಬೇಸಿಕ್ಸ್‌ನ ಹಣೆಬರಹವನ್ನು ಟ್ರಾಯಿ ನಿರ್ಧರಿ ಸುತ್ತಿರುವಂತೆಯೇ ಸುಮಾರು ನೂರು ಕೋಟಿ ರೂಪಾಯಿಯ ಚಿಲ್ಲರೆ ಹಣವನ್ನು ಜೇಬಿನಲ್ಲಿಟ್ಟುಕೊಂಡು ಮಾರ್ಕ್ ಝುಕರ್-ಬರ್ಗ್ ಭಾರತಕ್ಕೆ ಆಗಮಿಸಿದ್ದಾರೆ, ಜಾಹೀರಾತಿಗಾಗಿ.
ಫ್ರೀ ಬೇಸಿಕ್ಸ್ ಎಂಬುದು ಹೊಸ ಪೊಟ್ಟಣದಲ್ಲಿ ಸುತ್ತಿಕೊಡಲ್ಪಟ್ಟ ಹಳೆಯ ಇಂಟರ್ನೆಟ್.ಆರ್ಗ್ ಮಾತ್ರವೇ. ಅದು ಏನು ಮಾಡಲು ಬಯಸಿತ್ತು ಎಂಬುದನ್ನು ಸರಳವಾಗಿ ಹೇಳುವುದಾರೆ ಇಂಟರ್ನೆಟ್ ಸಾಮ್ರಾಜ್ಯದಲ್ಲಿ ಯಾವುದು ಮಾತ್ರವೇ ಮುಖ್ಯ ಎಂಬುದನ್ನು ಫೇಸ್‌ಬುಕ್ ನಿರ್ಧರಿಸಿ ಕೊಡಲು ಹೊರಟಿತ್ತು. ರಿಲಯನ್ಸ್ ಎಂಬ ಭಾರತದ ಫೇಸ್‌ಬುಕ್‌ನ ಗೆಳೆಯ ಸಂಸ್ಥೆಗೆ ಈ ಫ್ರೀ ಬೇಸಿಕ್ಸ್‌ನಲ್ಲಿ ಬಹಳ ಆಸಕ್ತಿಯಿದೆ. ಈ ದೈತ್ಯ ಸಂಸ್ಥೆ ಟೆಲಿಕಾಂ, ಶಕ್ತಿ ಸಂಪನ್ಮೂಲ, ಆಹಾರೋದ್ಯಮ, ಚಿಲ್ಲರೆ ವ್ಯಾಪಾರ, ಮೂಲಭೂತ ಸೌಕರ್ಯ ಎಲ್ಲದರಲ್ಲೂ ತನ್ನನ್ನು ತೊಡಗಿಸಿಕೊಂಡಿದೆ. ಹಾಗೆಯೇ ಅದರ ಆಸಕ್ತಿ ಭೂಮಿಯ ಸ್ವಾಧೀನದ ಮೇಲೂ ಇದೆ. ಗ್ರಾಮೀಣ ಭಾಗದಲ್ಲಿ ಟೆಲಿಫೋನ್ ಕಂಬಗಳನ್ನು ನೆಡಲು ಭಾರತ ಸರಕಾರದಿಂದ ಭೂಮಿಯನ್ನು ಪಡೆದುಕೊಂಡ ಅದು ಎಸ್‌ಇಝಡ್ ಅನ್ನು ಸ್ಥಾಪಿಸಲು ಮೋಸ ಮತ್ತು ಬೆದರಿಕೆಗಳಿಂದ ರೈತರ ನೆಲವನ್ನು ಸಹ ದೋಚಿತ್ತು. ಈ ಕಾರಣದಿಂದಾಗಿಯೇ ರಿಲಯನ್ಸ್‌ಗೆ ಗ್ರಾಮೀಣ, ಅರೆ-ಗ್ರಾಮೀಣ, ನಗರ ಪ್ರದೇಶ ಮತ್ತು ನಗರ ಪ್ರದೇಶದ ಸುತ್ತಲಿನ ಜಾಗಗಳಲ್ಲಿ ಅಸಂಖ್ಯಾತ ಬಳಕೆದಾರರಿದ್ದಾರೆ- ಅದರಲ್ಲೂ ಮುಖ್ಯವಾಗಿ ರೈತರು. ತಾತ್ಕಾಲಿಕವಾಗಿ ಫ್ರೀ ಬೇಸಿಕ್ಸ್ ಇಲ್ಲಿ ನಿಶೇಧಿಸಲ್ಪಟ್ಟಿದ್ದರೂ ಸಹ ರಿಲಯನ್ಸ್ ತನ್ನ ಆಪರೇಟರ್‌ಗಳ ಮೂಲಕ ಆ ಸೌಲಭ್ಯವನ್ನು ಬಳಕೆದಾರರಿಗೆ ಕೊಡಮಾಡುತ್ತಿದೆ. ಕಾರ್ಪೊರೇಟ್ ಸಂಸ್ಥೆಗಳ ದಾಳಿ ಜಗತ್ತಿನಾದ್ಯಂತ ಈಗ ಚಾಲ್ತಿಗೆ ಬರಲ್ಪಟ್ಟಿದೆ. ತಮ್ಮ ಎಲ್ಲ ಇತರ ಚಾಲ್‌ಗಳನ್ನು ಮುಗಿಸಿದ ಬಳಿಕ ಈಗ ಅಮೆರಿಕದ ಶ್ರೀಮಂತ ಕಾರ್ಪೊರೇಟ್ ಕುಳಗಳಾದ ಬಿಲ್‌ಗೇಟ್ಸ್‌ನಂತವರ ಸಾಲಿಗೆ ದಾನಶೂರ-ಕಾರ್ಪೊರೇಟ್ ದಿಗ್ಗಜ ಝುಕರ್ ಬರ್ಗ್ ನಂತವರು ಹೊಸದಾಗಿ ಸೇರ್ಪಡೆಯಾಗುತ್ತಿದ್ದಾರೆ. ಈ ಗೇಟ್ಸ್ ಮತ್ತು ಝುಕರ್ ಬರ್ಗ್‌ರ ದಾನಶೀಲತೆ ಚೆನ್ನಾಗಿ ತಯಾರಿ ಮಾಡಿಕೊಂಡೇ ಅಭಿನಯಿಸಲ್ಪಟ್ಟಿದೆ. ಇವುಗಳಲ್ಲಿರುವ ಹೋಲಿಕೆ ಕೂಡಾ ತುಂಬಾ ಒಂದೇ ಬಗೆಯದ್ದಾಗಿದೆ. ಅವರ ಸ್ವತ್ತನ್ನೆಲ್ಲವನ್ನೂ ಕೊಡುವುದರ ಹಿಂದೆಯೂ ಒಂದೇ ಬಗೆಯ ಆಟವಿದೆ. ಇವರು ವಿನಿಯೋಗಿಸುತ್ತಿರುವ 45 ಬಿಲಿಯನ್ ಡಾಲರ್‌ಗಳಷ್ಟು ಹಣವೂ ಸಹ ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಫೌಂಡೇಶನ್ ಮಾಡಿದ ದಾನದ ಬಗೆಯಲ್ಲಿಯೇ ಕಾಣುವುದು ಸತ್ಯ. ಅಂದರೆ ಪರಿಸರದ ಕುರಿತ ಚರ್ಚೆಯ ಮೇಲೆ ಪ್ರಭಾವ ಬೀರುವುದು ಮತ್ತು ಈ ಸಂಸ್ಥೆಗಳು ಯಾವುದಕ್ಕೂ ಉತ್ತರದಾಯಿಯಾಗದೇ ಉಳಿಯುವುದು. ಹೀಗೆ ಸರಕಾರಗಳನ್ನು ಪರಿಸರದ ಕುರಿತ ಚರ್ಚೆಯಲ್ಲಿ ಪ್ರಭಾವಿಸುವುದರ ಮೂಲಕ ಝುಕರ್ ಬರ್ಗ್ ಮತ್ತು ಗೇಟ್ಸ್ ಗಳು ಪಡೆಯಬಹುದಾದದ್ದಾರೂ ಏನು? ಈ ಹೂಡಿಕೆಯನ್ನು ‘‘ನಾವು ಶಕ್ತಿಮೂಲಗಳ ಬಳಕೆ ಮತ್ತು ಉತ್ಪಾದನೆಗಳ ಕುರಿತ ಹೊಸ ಆಲೋಚನೆಗಳ ಮೇಲೆ ಮಾಡುತ್ತಿದ್ದೇವೆ. ಹಾಗೆ ಮಾಡುವುದರ ಮೂಲಕ ಶಕ್ತಿಮೂಲಗಳ ಉತ್ಪಾದನೆ ಮತ್ತು ಬಳಕೆಯ ಕ್ರಮವನ್ನು ಬದಲಾಯಿಸುವುದು ಸಾಧ್ಯವಾಗುತ್ತದೆ’’ ಎಂದು ಝುಕರ್ ಬರ್ಗ್ ತಮ್ಮ ಫೇಸ್‌ಬುಕ್ ಪೇಜ್‌ನ ಮೇಲೆ ಬರೆದುಕೊಂಡಿದ್ದರು. ಇದು ಬಿಲ್ ಗೇಟ್ಸ್‌ರ ‘ಬ್ರೇಕ್ ಥ್ರೂ ಎನಜ್ರಿ ಚೊಹಿಲೇಶನ್’ ಎಂಬ ಆಲೋಚನೆಯಡಿಯಲ್ಲಿ 28 ದೊಡ್ಡ ಕಾರ್ಪೊರೇಟ್‌ಗಳು ಬಿಲಿಯಾಂತರ ಡಾಲರ್‌ಗಳನ್ನು ಶಕ್ತಿಮೂಲಗಳ ಉತ್ಪಾದನೆ, ಬಳಕೆ ಮತ್ತು ಖರ್ಚುಗಳನ್ನು ಬದಲಾಯಿಸುವುದಕ್ಕಾಗಿ ಮಾಡಿದ ಹೂಡಿಕೆಯ ಸಂದರ್ಭದಲ್ಲಿ ಬರೆದುಕೊಂಡದ್ದು. ಇದೇ ಸಂದರ್ಭದಲ್ಲಿ ಬೇಟ್ಸ್ ಆಫ್ರಿಕಾದಲ್ಲಿ ರಾಸಾಯನಿಕ ಮತ್ತು ಫಾಸಿಲ್ ಮೂಲಗಳ ಶಕ್ತಿಯಾಧಾರಿತ ಕೃಷಿಯನ್ನು ನಡೆಸಲು ಬಯಸುತ್ತಿರುವ ಒಂದು ಸರಕಾರೇತರ ಸಂಸ್ಥೆಯೊಂದರ ಹಿಂದಿನ ಶಕ್ತಿಯೂ ಆಗಿದ್ದಾರೆ. ಅದರ ಹೆಸರು ‘ಅಲಿಯಾನ್ಸ್ ಫಾರ್ ಎ ಗ್ರೀನ್ ರೆವಲ್ಯೂಶನ್ ಇನ್ ಆಫ್ರಿಕಾ’. ಇದರ ಹಿಂದಿನ ಹುನ್ನಾರವೆಂದರೆ ಆಫ್ರಿಕಾದ ರೈತರನ್ನು ಫಾಸಿಲ್ ಮೂಲದ ಶಕ್ತಿಗಳ ಬಳಕೆಗೆ (ಉದಾ: ಪೆಟ್ರೋಲ್ ಇತ್ಯಾದಿ) ಕಟ್ಟಿಹಾಕುವುದು ಮತ್ತು ಮೊನ್ಸಾಂಟೋ ತರದ ಬೀಜ, ಗೊಬ್ಬರ ತಯಾರಿಕಾ ಕಂಪೆನಿಗಳ ಕೈಗೆ ಅವರನ್ನು ಹಿಡಿದುಕೊಡುವುದು.
ಭಾರತದ ಹತ್ತಿಬೆಳೆಯಲ್ಲಿ 95% ಭಾಗ ಮೊನ್ಸಾಂಟೋದ ಉತ್ಪಾದನೆಯಾದ ಬಿಟಿ ಹತ್ತಿಯಾಗಿದೆ. ಈ ವರ್ಷ ಪಂಜಾಬ್‌ನಿಂದ ಹಿಡಿದು ಕರ್ನಾಟಕದವರೆಗೆ ಶೇ. 80ರಷ್ಟು ಬಿಟಿ ಹತ್ತಿ ಬೆಳೆ ವಿಫಲವಾಗಿದೆ. ಅದರ ಅರ್ಥ ಸುಮಾರು ಶೇ. 76ರಷ್ಟು ರೈತರಿಗೆ ಕೊಯ್ಲಿನ ಸಮಯದಲ್ಲಿ ಫಸಲೇ ಇರಲಿಲ್ಲ. ಅವರಿಗೆ ಆಯ್ಕೆ ಇದ್ದಿದ್ದರೆ ಅವರು ಬೇರೆ ಏನನ್ನಾದರೂ ಆಯ್ದುಕೊಳ್ಳುತ್ತಿದ್ದರು. ಆಯ್ಕೆ ಇರುವಂತೆ ಕಾಣುತ್ತದೆ. ಅದು ಹೇಗೆಂದರೆ, ಒಂದೇ ಬಗೆಯ ಬಿಟಿ ಹತ್ತಿಯ ಬೀಜಗಳು ಬೇರೆಬೇರೆ ಹೆಸರಿನಲ್ಲಿ ಬೇರೆಬೇರೆ ಕಂಪೆನಿಗಳು ಮಾರಾಟವಾಗುತ್ತ, ಹೀಗೆ ಕೊಂಡುಕೊಂಡದ್ದನ್ನು ಬಗೆಬಗೆಯ ರಾಸಾಯನಿಕ ಗೊಬ್ಬರ, ಕಳೆನಾಶಕಗಳೊಂದಿಗೆ ಮಿಶ್ರಮಾಡಿ ಪ್ರಯತ್ನ ಮಾಡುತ್ತ- ಈ ಎಲ್ಲ ರಾಸಾಯನಿಕಗಳೂ ನಿಮಗೆ ಇನ್ನೂ ಮತ್ತೇನೋ ಬೇಕೆನಿಸುವಂತೆ ಮಾಡುವ ಸಮಸ್ಯೆಗೆ ದೂಡುವ ಬಗೆಯದ್ದೇ ಆಗಿರುತ್ತವೆ- ಕಡೆಗೆ ಉಳಿಯುವ ಒಂದೇ ಆಯ್ಕೆಯೆಂದರೆ ಪ್ರಾಣ ಕಳೆದುಕೊಳ್ಳುವುದು. ಮೊನ್ಸಾಂಟೋ ಕಂಪೆನಿಯು ಬೌದ್ಧಿಕ ಹಕ್ಕು ಮಾರ್ಗವನ್ನು ಪ್ರತಿಪಾದಿಸಿ ಬೀಜ, ಗೊಬ್ಬರಗಳ ವಿಷಯದಲ್ಲಿ ಏನನ್ನು ಮಾಡುತ್ತ ನಡೆದಿತ್ತೋ, ಅದನ್ನೇ ಝುಕರ್ ಬರ್ಗ್ ಭಾರತದಲ್ಲಿ ಅಂತರ್ಜಾಲದ ವಿಷಯದಲ್ಲಿ ಮಾಡಲು ಬಯಸುತ್ತಿರುವುದು. ಹಾಗೂ ಮೊನ್ಸಾಂಟೋದಂತೆಯೇ ಆತ ಕೂಡಾ ಗುರಿಯಾಗಿಸಿಕೊಂಡಿರುವುದು ಭಾರತದ ಸಮಾಜದ ಅಂಚಿನಲ್ಲಿರುವ ಮನುಷ್ಯರನ್ನೇ. ಭಾರತದ ಜನಕ್ಕೆ ಅಂತರ್ಜಾಲವೆಂದರೆ ಏನಾಗಿದೆಯೋ ಅದನ್ನು ಕುಬ್ಜಗೊಳಿಸಲು, ಸಣ್ಣದನ್ನಾಗಿಸಲು ಫ್ರೀ ಬೇಸಿಕ್ಸ್ ಪ್ರಯತ್ನ ಪಡುತ್ತದೆ. ಈಗಾಗಲೇ ಅದು ತನ್ನ ಫ್ರೀ ಬೇಸಿಕ್ಸ್‌ನಲ್ಲಿ ವೀಡಿಯೊ ಗಳನ್ನು ಅನುವು ಮಾಡುವುದಿಲ್ಲವೆಂದೂ ಏಕೆಂದರೆ ಅದು ಟೆಲಿಕಾಂ ಕಂಪೆನಿಗಳ ಸೇವೆಗಳಿಗೆ ಅಡ್ಡ ಬರುತ್ತದೆಂದೂ ಘೋಷಿಸಿಕೊಂಡಿದೆ. (ಲಾಭ ಎಂದು ಓದಿಕೊಳ್ಳಿ) ಟ್ರಾಯ್ ಈ ಮುನ್ನವೇ ಸ್ಪಷ್ಟವಾಗಿ ಹೇಳಿತ್ತೇನೆಂದರೆ ವೀಡಿಯೊ ತುಣುಕುಗಳೇ ಭಾರತದ ಅನೇಕ ಭಾಗದ ಜನರಿಗೆ ಸುಲಭವಾಗಿ ಲಭ್ಯವಿದೆ ಎಂದು. ಒಮ್ಮೆ ಉಚಿತ ಸೇವೆ ಎಂದು ಘೋಷಿಸಲ್ಪಟ್ಟ ಬಳಿಕ ತಮ್ಮ ಕಾರ್ಪೊರೇಟ್ ಅಭಿಲಾಷೆ ಮತ್ತು ಇತರ ಜೊತೆಗಾರ ಸಂಸ್ಥೆಗಳ ಅಭಿಲಾಷೆಗಳನ್ನು ಈಡೇರಿಸಿಕೊಳ್ಳುವಲ್ಲಿ ಈ ಸಂಸ್ಥೆಗಳನ್ನು ಯಾರು ತಡೆಯಬಲ್ಲರು? ಫ್ರೀ ಬೇಸಿಕ್ಸ್ ಅನ್ನು ನಿಷೇಧಿಸಲ್ಪಟ್ಟ ನಂತರ ಸಹ ರಿಲಯನ್ಸ್ ಈ ಸೇವೆಯನ್ನು ತನ್ನ ಟೆಲಿಕಾಂನ ಮೂಲಕ ಕೊಡುವುದನ್ನು ಮುಂದುವರಿಸಿದೆ. ಅದರ ಬಳಕೆದಾರರು ಬಹಳಷ್ಟು ರೈತರೇ ಆಗಿದ್ದಾರೆ.
ಪಂಜಾಬ್‌ನ ರೈತನೊಬ್ಬ ತನ್ನ ಶೇ. 80ರಷ್ಟು ಬೆಳೆಯನ್ನು ಮೊನ್ಸಾಂಟೋದ ಬೀಜಗಳು ಹಾಗೂ ಗೊಬ್ಬರವನ್ನು ಬಳಸಿ ಕಳೆದುಕೊಂಡ ಮೇಲೆ ಆ ರೈತನಿಗೆ ಅಂತರ್ಜಾಲ ಏನಾಗಿ ಬಳಕೆಯಾಗಬೇಕೆಂದು ಝುಕರ್ ಬರ್ಗ್ ಏಕೆ ಹೇಳಬೇಕು? ಇಂಥಹ ಕಂಪೆನಿಗಳು ವಾಮಮಾರ್ಗ ಮತ್ತು ಕೆಟ್ಟನೀತಿಗಳ ಮೂಲಕ ತಮ್ಮ ಉತ್ಪನ್ನಗಳು ಮಾರಾಟವಾಗುತ್ತಲೇ ಇರುವಂತೆ ನೋಡಿಕೊಂಡವೆಂದು ಅವನಿಗೆ ಅರ್ಥವಾಗಬೇಕೇ? ಅಥವಾ ತನ್ನ ಬೆಳೆಯ ಮೇಲೆ ಇನ್ಯಾವ ರಾಸಾಯನಿಕ ಸುರಿಯಬೇಕೆಂದು ಅಂತರ್ಜಾಲದ ಮೂಲಕ ರೈತನಿಗೆ ತಿಳಿಸಲು ಈ ಫ್ರೀ ಬೇಸಿಕ್ಸ್ ಅನ್ನು ಬಳಸಬೇಕೇ?
ಈ ಮೊನ್ಸಾಂಟೋ-ಫೇಸ್‌ಬುಕ್ ಸಂಬಂಧ ಆಳವಾಗಿ ಜಟಿಲವಾಗಿದೆ. ಮಾನ್ಸಾಂಟೋದಲ್ಲಿ ಅತ್ಯಂತ ಹೆಚ್ಚಿನ ಹೂಡಿಕೆ ಮಾಡಿರುವ 12 ಜನರೇ ಫೇಸ್‌ಬುಕ್‌ನ ಬಹುದೊಡ್ಡ ಹೂಡಿಕೆದಾರರೂ ಆಗಿದ್ದಾರೆ. ಇದರಲ್ಲಿ ‘ವ್ಯಾನ್ ಗಾರ್ಡ್ ಗ್ರೂಫ್’ ಕೂಡಾ ಸೇರಿದೆ. ಇದೇ ವ್ಯಾನ್ ಗಾರ್ಡ್ ಗ್ರೂಫ್ ಇನ್ನೊಂದು ಸಂಸ್ಥೆಯಲ್ಲಿಯೂ ಹೂಡಿಕೆ ಮಾಡಿದೆ- ಅದು ಯಾವುದೆಂದರೆ ಮೊನ್ಸಾಂಟೋದ ಹೊಸ ಪಾಲುದಾರ ಸಂಸ್ಥೆ ‘ಜಾನ್ ಡೀರೆ’. ಇದು ಸ್ಮಾರ್ಟ್ ಟ್ರಾಕ್ಟರುಗಳನ್ನು ಉತ್ಪಾದಿಸುತ್ತದೆ! ಹೀಗೆ ಈ ಉಪಾಯವು ಆಹಾರದ ಉತ್ಪಾದನೆಯಿಂದ ಹಿಡಿದು ಅದನ್ನು ತಿನ್ನುವವರೆಗೂ, ಮತ್ತು ಬೀಜದಿಂದ ಮೊದಲ್ಗೊಂಡು ಮಾಹಿತಿಯವರೆಗೂ ಕೆಲವೇ ಕೆಲವು ಹೂಡಿಕೆದಾರರ ಕೈಗೆ ಎಲ್ಲವನ್ನೂ ಒಪ್ಪಿಸುವ ಆಟ. ಫೇಸ್‌ಬುಕ್‌ನಲ್ಲಿ ಮೊನ್ಸಾಂಟೋದ ಜಿ.ಎಮ್.ಒಗಳ ಪೊಟ್ಟಣಗಳ ಮೇಲೆ ಚೀಟಿ ಹಚ್ಚುವುದರಲ್ಲಿನ ಬದಲಾವಣೆ ಮತ್ತು ಇಡೀ ಜಿ.ಎಂ.ಒ.ವನ್ನು ನಿರ್ಭಂದಿಸಲು ಅಮೆರಿಕದಲ್ಲಿ ಒಂದು ಚಳವಳಿ ಆರಂಭವಾಗಿತ್ತು. ಅದರ ಹೆಸರು ಮೊಸಾಂಟೋದ ವಿರುದ್ಧ ನಡಿಗೆ (March against Monsanto). ಈ ಚಳವಳಿಯ ಪುಟವನ್ನೇ ಫೇಸ್‌ಬುಕ್‌ನಿಂದ ಕಿತ್ತುಹಾಕಲಾಯಿತು. ಇದರಲ್ಲೇನಾದರೂ ವಿಶೇಷವಿದೆಯೆಂದು ನಿಮಗನ್ನಿಸುತ್ತದೆಯೇ?
ಇತ್ತೀಚೆಗೆ ಭಾರತದಲ್ಲಿ ಅಂತರ್ಜಾಲದಲ್ಲಿ ಚಿಲ್ಲರೆ ವ್ಯಾಪಾರೋದ್ಯಮ ಬಹುದೊಡ್ಡ ಯಶಸ್ಸು ಕಾಣುತ್ತಿದೆ. ಈಗ ದೊಡ್ದ ಉತ್ಪಾದಕರಿಂದ ಹಿಡಿದು ಸಾಧಾರಣ ಜನರೂ ಸಹ ತಮ್ಮ ಉತ್ಪನ್ನಗಳನ್ನು ಯಾರಿಗೆ ಬೇಕಾದರೂ ಮಾರಬಹುದಾಗಿದೆ. ಮುಂಚೆ ಅವರಿಗೆ ಈ ಸಾಧ್ಯತೆ ಇರಲಿಲ್ಲ. ಕುಶಲಕರ್ಮಿಗಳು ತಮ್ಮ ಉತ್ಪನ್ನಗಳಿಗೆ ಗ್ರಾಹಕನನ್ನು ಕಂಡುಕೊಳ್ಳುತ್ತಿದ್ದರೆ, ರೈತಾಪಿ ಜನ ತಮ್ಮ ಬೆಳೆಯನ್ನು ಕೊಳ್ಳುವ ವ್ಯಕ್ತಿಯನ್ನು ಅದರಲ್ಲಿ ಹುಡುಕಿಕೊಳ್ಳುತ್ತಿದ್ದಾರೆ. ಮೊನ್ಸಾಂಟೋದ ಪೇಟೆಂಟೆಡ್ ಬೀಜಗಳಂತೆಯೇ ಝುಕರ್ ಬರ್ಗ್‌ಗೆ ಸಹ ಸಣ್ಣ ತುಣುಕಲ್ಲ ಬೇಕಾಗಿರುವುದು. ಅವರಿಗೆ ಪೂರ್ಣವಾಗಿ ಭಾರತದ ಮೂಲಭೂತ ಆರ್ಥಿಕತೆಯ ಪಾಯದಲ್ಲಿ ನಿಂತಿರುವ ರೈತಾಪಿ ಜನರೇ ಆಹಾರವಾಗಬೇಕು. ಮೊನ್ಸಾಂಟೋದ ಕೈಯಲ್ಲಿ ಇರುವ ಇಡೀ ವಾತಾವರಣದ ಕುರಿತಾದ ಆಂಕಿಅಂಶಗಳು ಮತ್ತು ಮೊನ್ಸಾಂಟೋ ಪ್ರಣೀತವಾದ ಅದರ ಲೆಕ್ಕಾಚಾರಗಳು ಫೇಸ್ ಬುಕ್‌ನ ಮೂಲಕ ಈ ಅಂಕಿಅಂಶಗಳಿಗೆ ಗಾಳವಾಗಲಿರುವ ರೈತರ ಪಾಲಿಗೆ ಏನಾಗಬಹುದು? ಇದರ ಪರಿಣಾಮ ಅಂತರ್ಜಾಲ ಮತ್ತು ಆಹಾರ ಆಯ್ಕೆಯ ಸಾಧ್ಯತೆಗಳ ಮೇಲೆ ಯಾವ ರೀತಿಯದ್ದಾಗಿರಬಹುದು?
ಆಹಾರದ ಹಕ್ಕೆಂದರೆ ನಾವು ಏನನ್ನು ತಿನ್ನಲು ಬಯಸುತ್ತೇವೆ ಎಂಬುದರ ಮೇಲಿನ ಹಕ್ಕೂ ಹೌದು. ನಾವು ಏನನ್ನು ತಿನ್ನುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳುವ ಹಕ್ಕೂ ಹೌದು. ಅದರ ಒಳಗಿರುವ ರುಚಿ ಮತ್ತು ವಸ್ತುಗಳೇನು ಎಂಬುದನ್ನು ಅರಿಯುವ ಹಕ್ಕೂ ಸಹ ಅದರಲ್ಲಿದೆ. ಕಾರ್ಪೊರೇಟ್‌ಗಳು ನಮಗೆ ಮಾರುವ ಪೊಟ್ಟಣಗಳ ಆಹಾರವಷ್ಟೇ ಅದಲ್ಲ.
ಅಂತರ್ಜಾಲದ ಹಕ್ಕೆಂದರೆ ನಾವು ಅದರ ಮೂಲಕ ಏನನ್ನು ನೋಡಲು ಅರಿಯಲು ಬಯಸುತ್ತೇವೆ ಎನ್ನುವುದರ ಹಕ್ಕು. ನಮ್ಮನ್ನು ಬೆಳೆಸುವ ಜಾಗಗಳಿಗೆ ಭೇಟಿ ಕೋಡುವುದು ಹಕ್ಕೇ ಹೊರತು- ಈ ಕಂಪೆನಿಗಳು ನಮ್ಮನ್ನು ಬೆಳೆಸುವ ಬೇಸಿಕ್ಸ್‌ಗಳು ಇದು ಎಂಬುದನ್ನು ನಿರ್ಧರಿಸುವುದಲ್ಲ. ನಾವು ಏನನ್ನು ತಿನ್ನುತ್ತಿದ್ದೇವೆ ಎಂಬುದರ ಮಾಹಿತಿಯು ನಮಗೆ ದೊರೆಯಬೇಕಾದ ಆವಶ್ಯಕವಾದ ಮಾಹಿತಿ, ಎಲ್ಲ ಮಾಹಿತಿಯೂ ನಮ್ಮ ಹಕ್ಕು. ಮುಕ್ತ ಅಂತರ್ಜಾಲವು ನಮಗೆ ಸಹಜವಾಗಿ ಬೆಳೆದ ಬೀಜಗಳನ್ನು ರೈತರು ಉಳಿಸಿ, ಹಂಚಿಕೊಂಡು ಮಾರುತ್ತ ಬೆಳೆ ಬೆಳೆಯುವಷ್ಟೇ ಮುಖ್ಯವಾದದ್ದು.
ಜಾರ್ಜ್ ಆರ್ವೆಲ್ಲನ ಪ್ರಸಿದ್ಧ ಕಳ್ಳಮಾತಿನ ಕ್ರಮದಲ್ಲಿ ಹೇಳುವುದಾದರೆ ಝುಕರ್ ಬರ್ಗ್ ಗೆ ಉಚಿತ ಎನ್ನುವುದು ಖಾಸಗಿ ಎಂಬುದಕ್ಕೆ ಸಂವಾದಿಯಾದ ಪದವಾಗಿದೆ. ಖಾಸಗಿ ಎನ್ನುವುದಕ್ಕೆ ಇನ್ನೊಂದು ಅರ್ಥವೂ ಇದೆ. ಈ ಬಗೆಯ ಖಾಸಗಿತನದಲ್ಲಿ ಝುಕರ್ ಬರ್ಗ್‌ಗೆ ನಂಬಿಕೆ ಇಲ್ಲ. ಕಾರ್ಪೊರೇಟ್ ಪ್ರಣೀತವಾದ ಉಚಿತ ಮಾರುಕಟ್ಟೆ ಒಪ್ಪಂದಗಳಂತೆಯೇ ಈ ಉಚಿತವು ನಿಜವಾಗಿ ಅದನ್ನು ಹೊರತಾದ ಮತ್ತೆಲ್ಲವೂ ಆಗಿದೆ. ಇದು ಸಾಮಾನ್ಯರಿಗೆ ಒಟ್ಟಾರೆಯಾಗಿ ಕೊಡಲ್ಪಟ್ಟ ಒಂದು ಪೊಟ್ಟಣ. ಇದರಲ್ಲಿ ಬೀಜ, ನೀರು, ಮಾಹಿತಿ ಅಂತರ್ಜಾಲ ಎಲ್ಲವನ್ನೂ ಸಾಮಾನ್ಯರಿಗೆ ಕೊಟ್ಟಂತೆ ಕಾಣಿಸುತ್ತದೆ. ಬೌದ್ಧಿಕ ಹಕ್ಕಿನ ಮೂಲಕ ಬೀಜಗಳನ್ನು ಮೊನ್ಸಾಂಟೋ ಹೇಗೆ ತೆಕ್ಕೆಗೆ ತೆಗೆದುಕೊಂಡಿತೋ ಹಾಗೆಯೇ ಮಾಹಿತಿ ಮೂಲಕ್ಕೆ ಫ್ರೀ ಬೇಸಿಕ್ಸ್ ಬೇಲಿಸುತ್ತುತ್ತಿದೆ.ಜಾನ್ ಡೀರೆ ಉತ್ಪಾದಿಸುವ ‘ಸ್ಮಾರ್ಟ್ ಟ್ರಾಕ್ಟರು’ಗಳನ್ನು ಬಳಸಿ ಮೊನ್ಸಾಂಟೋದ ಪೇಟೆಂಟ್ ಪಡೆದ ಬೀಜಗಳನ್ನು ಬಿತ್ತಿ, ಬಯರ್ ಕೆಮಿಕಲ್ಸ್ ಕಂಪೆನಿಯ ರಾಸಾಯನಿಕಗಳನ್ನು ಹೊಡೆದು ಬೆಳೆನಾಶ ಮಾಡಿಕೊಂಡು; ಮಣ್ಣು ಮತ್ತು ಭೂಮಿಯ ವಾತಾವರಣದ ಅಂಕಿಅಂಶಗಳನ್ನು ಮೊನ್ಸಾಂಟೋವೇ ರಿಲಯನ್ಸ್ ಮೊಬೈಲುಗಳ ಮೂಲಕವಾಗಿ ಫೇಸುಬುಕ್‌ನಲ್ಲಿ ರೈತರಿಗೆ ತಲುಪಿಸುತ್ತದೆ. ಈ ರೈತನ ಭೂಮಿಯ ಒಡೆತನ ವಾನ್ ಗಾರ್ಡ್ ಗ್ರೂಪಿನದ್ದಾಗಿರುತ್ತದೆ.
ನೀವು ಸೂಪರ್ ಮಾರ್ಕೆಟ್‌ನ ಯಾವುದೇ ಮೂಲೆಯ ಯಾವುದೇ ಶೆಲ್ಫಿನ ಯಾವುದೇ ಉತ್ಪನ್ನಗಳನ್ನು ಆಯ್ಕೆ ಮಾಡುತ್ತಾ ನಡೆಯುವ ಪ್ರತಿಯೊಂದು ಹಂತವೂ ನಿಮ್ಮನ್ನು ನಡೆಸುತ್ತಿರುವುದು ಅದೇ ಕೆಲವೇ ಹೂಡಿಕೆದಾರರ ಜೇಬಿನಕಡೆಗೇ.