ರಿಯಾಝ್ ಭಟ್ಕಳ್ ಸಾವಿನ ಸುದ್ದಿಗೆ ಮರುಜೀವ?

ಭಟ್ಕಳ, ಜ. 16: ಹಲವು ಭಯೋತ್ಪಾದಕ ಕೃತ್ಯಗಳ ಆರೋಪಿ ಹಾಗೂ ಇಂಡಿಯನ್ ಮುಜಾಹಿದೀನ್ ಸ್ಥಾಪಕನೆಂದು ಹೇಳಲಾಗುತ್ತಿರುವ ರಿಯಾಝ್ ಭಟ್ಕಳ್ ಸಾವಿನ ಸುದ್ದಿ ಮತ್ತೊಮ್ಮೆ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅಸ್ಸಾಂನ ಗುವಾಹಟಿಯ ಓರ್ವ ಉನ್ನತ ಪೊಲೀಸ್ ಅಧಿಕಾರಿ ರಿಯಾಝ್ ಭಟ್ಕಳ್‌ನ ಸಾವಿನ ಸುದ್ದಿಯನ್ನು ಹರಿಯಬಿಟ್ಟಿದ್ದಾರೆ. ಇಂಡಿಯನ್ ಮುಜಾಹಿದೀನ್ ಸ್ಥಾಪಕ ರಿಯಾಝ್ ಭಟ್ಕಳ್ ಕಳೆದ ಮೂರು ತಿಂಗಳ ಹಿಂದೆಯೇ ಗುವಾಹಟಿಯಲ್ಲಿ ಹತ್ಯೆಯಾಗಿದ್ದಾನೆ ಎಂದು ಹೇಳಿಕೆ ನೀಡುವ ಮೂಲಕ ರಿಯಾಝ್ ಸಾವಿನ ಕುರಿತ ಊಹಾಪೋಹಕ್ಕೆ ಅವರು ಮತ್ತೆ ಜೀವ ನೀಡಿದ್ದಾರೆ.
2013ರಲ್ಲಿ ದಿಲ್ಲಿ ಪೊಲೀಸರು ಬಿಹಾರದಲ್ಲಿ ಯಾಸೀನ್ ಭಟ್ಕಳನನ್ನು ಬಂಧಿಸಿದ್ದರು. ಅಧಿಕಾರಿಗಳು ಹೇಳುವಂತೆ ಯಾಸೀನ್ ಬಂಧನ ನಂತರವೇ ರಿಯಾಝ್ ಭಟ್ಕಳ್ ಹತ್ಯೆಯಾಗಿದೆ. ಈತನ ಹತ್ಯೆಯ ಹಿಂದೆ ಯಾಸೀನ್ ಭಟ್ಕಳ್‌ನ ಯಾವುದೇ ಕೈವಾಡವಿಲ್ಲ ಎನ್ನುವುದಾಗಿ ಅಧಿಕಾರಿ ಸ್ಪಷ್ಟನೆ ನೀಡಿದ್ದರು. ಕಳೆದ 5 ವರ್ಷಗಳ ಹಿಂದೆ ಅಂಡರ್ ವರ್ಲ್ಡ್ ದೊರೆ ಚೋಟಾ ರಾಜನ್, ತಾನು ರಿಯಾಝ್‌ನನ್ನು ಪಾಕಿಸ್ತಾನದಲ್ಲೇ ಹತ್ಯೆಮಾಡಿದ್ದಾಗಿ ಹೇಳಿಕೊಂಡಿದ್ದನು. ತನ್ನ ಮಾತಿಗೆ ಸಾಕ್ಷ್ಯವೆಂಬಂತೆ ಒಂದು ಫೋಟೊವನ್ನು ಆತ ನೀಡಿದ್ದನು. ಆದರೆ, ಅದು ಕಲ್ಪಿತ ಕಂಪ್ಯೂಟರ್ ಫೋಟೊ ಎಂಬುದು ನಂತರದ ತನಿಖೆಯಿಂದ ಬಯಲಾಗಿತ್ತು.
ಈಗ ಮತ್ತೊಮ್ಮೆ ರಿಯಾಝ್‌ನ ಸಾವು ಮಾಧ್ಯಮಗಳ ಮುಂದೆ ಜೀವ ಪಡೆದುಕೊಂಡಿದ್ದು, ಇದರಲ್ಲಿನ ಸತ್ಯಾಸತ್ಯತೆ ಕುರಿತು ತನಿಖೆಯಾಗಬೇಕಾಗಿದೆ. ಕಳೆದ ಬಾರಿ ಇಂತಹದ್ದೆ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ತನ್ನ ಮಗನನ್ನು ಪೊಲೀಸರು ಎನೌಕೌಂಟರ್‌ನಲ್ಲಿ ಕೊಂದಿರಬಹುದು ಅಥವಾ ಆತ ಪೊಲೀಸ್ ಕಸ್ಟಡಿಯಲ್ಲಿ ಹತ್ಯೆಗೈದಿರಬಹುದು ಎಂದು ರಿಯಾಝ್ ತಾಯಿ ಮಾಧ್ಯಮಗಳ ಮುಂದೆ ಹೇಳಿದ್ದರು. ರಿಯಾಝ್ ಭಟ್ಕಳ್ ಪಾಕಿಸ್ತಾನದಲ್ಲಿ ಅಡಗಿಕೊಂಡಿದ್ದಾನೆ ಎಂದು ತನಿಖಾ ಸಂಸ್ಥೆಗಳು ಹೇಳುತ್ತಿವೆ. ಆತ ಪಾಕಿಸ್ತಾನದಲ್ಲಿದ್ದರೆ ಆಸ್ಸಾಂಗೆ ಹೇಗೆ ಬಂದ ಹಾಗೂ ಹತ್ಯೆ ಹೇಗಾಯಿತು ಎನ್ನುವ ಗುಮಾನಿ ಹುಟ್ಟುತ್ತದೆ. ರಿಯಾಝ್ ಹತ್ಯೆಯಾಗಿ ಮೂರು ತಿಂಗಳು ಕಳೆದ ಬಳಿಕ ಆತನ ಸಾವಿನ ಸುದ್ದಿ ತೇಲಿಬಿಡಲು ಕಾರಣವಾದರೂ ಏನು? ಇದರ ಹಿಂದೆ ಯಾರ ಕೈವಾಡವಿದೆ? ಮತ್ತು ಇದರ ಉದ್ದೇಶವೇನು? ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿ ಹುಟ್ಟಿಕೊಳ್ಳುತ್ತಿದೆ.