ಒಬ್ಬರಿಗಾಗಿ ನಾಲ್ವರು ಸ್ವಾಮೀಜಿಗಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ
ದೇಶದಲ್ಲಿ ಜನರಿಂದ ಅತೀ ಹೆಚ್ಚು ಪ್ರೀತಿ ಹಾಗೂ ಟೀಕೆಗಳನ್ನು ಸಮಾನವಾಗಿ ಪಡೆದ ಒಬ್ಬ ಸಂತ, ಸ್ವಾಮೀಜಿ ಇದ್ದರೆ ಅದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು. ಪ್ರೀತಿಸಿ ಅಥವಾ ಟೀಕಿಸಿ, ಆದರೆ ಅವರನ್ನು ನಿರ್ಲಕ್ಷಿಸಲು ಮಾತ್ರ ಸಾಧ್ಯವಿಲ್ಲ. ಇಂಥ ಸ್ವಾಮೀಜಿ ಸೋಮವಾರ ಮುಂಜಾನೆ ದಾಖಲೆಯ ಐದನೆ ಬಾರಿಗೆ ಉಡುಪಿ ಶ್ರೀಕೃಷ್ಣ ಮಠದ ಪೂಜಾ ಕೈಂಕರ್ಯಕ್ಕಾಗಿ ಪರ್ಯಾಯ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ.
ಸದಾ ಕಾಲ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಸಂಚಾರದಲ್ಲಿರುವ ಈ ಸ್ವಾಮೀಜಿ, ಮುಂದಿನ ಎರಡು ವರ್ಷಗಳ ಕಾಲ ಕೃಷ್ಣನೆಂಬ ಗೂಟಕ್ಕೆ ಕಟ್ಟಿದ ಕರುವಿನಂತಿರುತ್ತಾರೆ. ಈ ಎರಡು ವರ್ಷಗಳಲ್ಲಿ ಅವರು ಉಡುಪಿ ಶ್ರೀಕೃಷ್ಣ ಮಠದ ರಥಬೀದಿ ಪರಿಸರವನ್ನು ಬಿಟ್ಟು ಹೊರಹೋಗುವಂತಿಲ್ಲ. ಹೀಗೆ ಪರ್ಯಾಯ ಪೀಠಾರೋಹಣಕ್ಕೆ ಮೊದಲಿನ ಹಲವು ಸಂಪ್ರದಾಯಗಳ ಪಾಲನೆಯಲ್ಲಿ ಕ್ಷಣವೂ ಬಿಡುವಿರದಂತೆ ತಮ್ಮನ್ನು ತೊಡಗಿಸಿಕೊಂಡಿದ್ದ ಸ್ವಾಮೀಜಿ, ‘ವಾರ್ತಾಭಾರತಿ’ಗೆ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ.
ಸ್ವಾಮೀಜಿ, ದಾಖಲೆಯ ಐದನೆ ಪರ್ಯಾಯದ ಹೊಸ್ತಿಲಲ್ಲಿದ್ದೀರಿ. ಇದನ್ನೊಂದು ಚರಿತ್ರಾರ್ಹಗೊಳಿಸಲು ಏನಾದರೂ ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೀರಾ?
ಪೇಜಾವರ ಶ್ರೀ: ಐದನೆ ಪರ್ಯಾಯ ಅಂತ ಪ್ರತ್ಯೇಕವಾಗಿ ವಿಶೇಷ ಏನೂ ಮಾಡ್ತಾ ಇಲ್ಲ. ಸಹಜವಾಗಿ ಹಿಂದಿನ ನಾಲ್ಕು ಪರ್ಯಾಯಗಳ ಅನುಭವದಿಂದ ಇನ್ನು ಯಾವ ಕೆಲಸ ಅಗತ್ಯವಿದೆ ಎಂಬುದನ್ನು ನೋಡಿ, ಇದರೊಂದಿಗೆ ಜನರ ಸೂಚನೆಗಳನ್ನು ಗಮನಿಸಿ ಅಗತ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ವಾದಿರಾಜರು ಎರಡು ತಿಂಗಳ ಪರ್ಯಾಯವನ್ನು ಎರಡು ವರ್ಷಕ್ಕೆ ಬದಲಾಯಿಸಿದರು. ನೀವು ಅಂಥ ಯಾವುದಾದರೂ ಮಹತ್ವದ ಬದಲಾವಣೆಗೆ ಮುಂದಾಗುತ್ತೀರಾ?
ಪೇಜಾವರ ಶ್ರೀ: ಕೃಷ್ಣ ಮಠ ಅಷ್ಟಮಠಗಳಿಗೆ ಸೇರಿರುವುದರಿಂದ ಒಬ್ಬನೇ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಎಲ್ಲರ ಅಭಿಪ್ರಾಯ ಕೇಳಿ ಮಾಡಬೇಕು. ಆದುದರಿಂದ ಮಹತ್ವದ ಬದಲಾವಣೆ ಏನೂ ಇರುವುದಿಲ್ಲ. ವಾದಿರಾಜರ ಕಾಲದಲ್ಲಿ ಎರಡು ತಿಂಗಳ ಪರ್ಯಾಯದಿಂದ ಹೆಚ್ಚೇನೂ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದುದರಿಂದ ಅವರು ದೂರದೃಷ್ಟಿಯಿಂದ ಅದನ್ನು ಎರಡು ವರ್ಷಗಳಿಗೆ ಏರಿಸಿದರು. ಇದರಿಂದ ಎರಡು ವರ್ಷ ಪರ್ಯಾಯ ಪೂಜೆ ನಡೆಸುವ ಸ್ವಾಮಿಗಳು ಇನ್ನುಳಿದ 14 ವರ್ಷಗಳಲ್ಲಿ ಜನರ ಸಂಪರ್ಕ ಸಾಧಿಸಲು, ದೇಶಸಂಚಾರ ಮಾಡಿ ಮತ ಪ್ರಚಾರ ಹಾಗೂ ಧರ್ಮ ಪ್ರಚಾರ ಅಲ್ಲದೇ ವಿವಿಧ ಕಾರ್ಯಕ್ರಮ ರೂಪಿಸಲು ಸಾಧ್ಯವಾಯಿತು. ಅಲ್ಲದೇ ಎರಡು ತಿಂಗಳ ಅವಕಾಶದಲ್ಲಿ ಆಗಿನ ಕಾಲದಲ್ಲಿ ದೂರ ಪ್ರಯಾಣ ಸಾಧ್ಯವಾಗುತ್ತಿರಲಿಲ್ಲ. ಮತ-ಧರ್ಮಪ್ರಚಾರವೂ ನಡೆಯಬೇಕು ಇದರೊಂದಿಗೆ ಕೃಷ್ಣನ ಪೂಜೆಯೂ ನಡೆಯಬೇಕು ಎಂಬ ಕಾರಣಕ್ಕಾಗಿ ವಾದಿರಾಜರು ಈ ಒಳ್ಳೆಯ ವ್ಯವಸ್ಥೆಯನ್ನು ರೂಪಿಸಿ ಪರ್ಯಾಯವನ್ನು ಎರಡು ವರ್ಷಗಳಿಗೆ ವಿಸ್ತರಿಸಿದರು. ಈಗ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಅಗತ್ಯವಿಲ್ಲ. ಕಾಣಿಯೂರು ಪರ್ಯಾಯದ ವೇಳೆ ನಾವು, ಪಲ್ಲಕ್ಕಿಯಲ್ಲಿ ಸ್ವಾಮೀಜಿಗಳು ಬರುವುದನ್ನು ನಿಲ್ಲಿಸಿ ವಾಹನಗಳಲ್ಲಿ ಬರುವಂತೆ ಮಾಡಿದ್ದೆವು. ಅದನ್ನು ಎಲ್ಲರೂ ಒಪ್ಪಿಕೊಂಡರು. ಈ ಬಾರಿಯೂ ಎಲ್ಲಾ ಸ್ವಾಮೀಜಿಗಳು ವಾಹನಗಳಲ್ಲಿ ಕುಳಿತು ಬರುತ್ತೇವೆ. ಅದು ಮುಂದುವರಿಯುವ ಸಾಧ್ಯತೆ ಇದೆ. ಇದು ಸಹ ಪರ್ಯಾಯ ಸಂಪ್ರದಾಯದಲ್ಲಿ ನಾವು ಮಾಡಿದ ಮಹತ್ವದ ಬದಲಾವಣೆಯಾಗಿದೆ.
ನೀವು ಸನ್ಯಾಸಾಶ್ರಮ ಸ್ವೀಕರಿಸಿ 78 ಹಾಗೂ ಮೊದಲ ಪರ್ಯಾಯ ನಡೆಸಿ 64 ವರ್ಷಗಳು ಪೂರ್ಣಗೊಂಡಿವೆ. ನಿಮ್ಮ ಆಗಿನ ಪರ್ಯಾಯಕ್ಕೂ ಈಗಿನ ಐದನೆ ಪರ್ಯಾಯಕ್ಕೂ ಯಾವ ವ್ಯತ್ಯಾಸವನ್ನು ಗುರುತಿಸಿದ್ದೀರಿ?
ಪೇಜಾವರ ಶ್ರೀ: ನಮ್ಮ ಮೊದಲ ಪರ್ಯಾಯದಲ್ಲಿ (1952-54) ತುಂಬಾ ಕಷ್ಟವಿತ್ತು. ಅಂದು ಈಗಿನಂತೆ ಆರ್ಥಿಕ ಸಹಾಯ ಬರ್ತಾ ಇರಲಿಲ್ಲ. ನಮಗಿಂತ ಮುಂಚಿನ ಕಾಣಿಯೂರು ಮಠದ ಪರ್ಯಾಯದಿಂದ (1950-52) ಆರಂಭಿಸಿ 4-5 ವರ್ಷಗಳ ಕಾಲ ಕೃಷ್ಣ ಮಠವು ಸರಕಾರದ ನಿಯಂತ್ರಣದಲ್ಲಿತ್ತು. (ಅಂದಿನ ಮದರಾಸು ಸರಕಾರ). ಭಕ್ತರಿಂದ ಬಂದ ಎಲ್ಲ ಹಣವೂ ಧಾರ್ಮಿಕ ದತ್ತಿ ಇಲಾಖೆಗೆ ಹೋಗುತ್ತಿತ್ತು. ಇಲಾಖೆಯಿಂದ ನಮಗೆ ತಿಂಗಳಿಗೆ 4,000ರೂ. ಮಾತ್ರ ಬರ್ತಾ ಇತ್ತು. ಅದರಲ್ಲಿ ಎಲ್ಲ ವ್ಯವಸ್ಥೆ ಮಾಡುವುದು ತುಂಬಾ ಕಷ್ಟವಿತ್ತು. ಅದು ಸಾಕಾಗ್ತಾ ಇರಲಿಲ್ಲ. ಸಾಲಸೋಲ ಮಾಡಿ ಪರ್ಯಾಯ ಮಾಡ್ತಾ ಇದ್ದೆವು. ನಂತರ ಸರಕಾರ ಮಾಡಿದ್ದು ತಪ್ಪು ಎಂದು ಹೈಕೋರ್ಟ್ ತೀರ್ಪು ಬಂದ ಮೇಲೆ ಮಠ ಮತ್ತೆ ನಮ್ಮ ಸ್ವಾಧೀನಕ್ಕೆ ಬಂತು.
ನನ್ನ ಎರಡು ವರ್ಷಗಳ ಪರ್ಯಾಯದಲ್ಲಿ ನಮಗೆ ಯಾವ ಸ್ವಾತಂತ್ರವೂ ಇರಲಿಲ್ಲ. ಹೈಕೋರ್ಟ್ ತೀರ್ಪು ಆಗಿದ್ದು, ನನ್ನ ಪರ್ಯಾಯ ಮುಗಿದು ಪಲಿಮಾರು ಮಠದ ಪರ್ಯಾಯದ ಅವಧಿಯಲ್ಲಿ. ಆಗ ಸರಕಾರದ ನಿಯಂತ್ರಣ ತಪ್ಪಿ ಮಠಕ್ಕೆ ಮತ್ತೆ ಸ್ವಾಯತ್ತತೆ ಸಿಕ್ಕಿತು. ಪರ್ಯಾಯ ಮಾಡಲು ನಾವು ಸುಮಾರು ಎರಡು ಲಕ್ಷ ರೂ. ಸಾಲ ಮಾಡಿ ಖರ್ಚು ಮಾಡುತ್ತಿದ್ದೆವು. ಆಗಿನ ಕಾಲದಲ್ಲಿ ಅದು ದೊಡ್ಡ ಮೊತ್ತವಾಗಿತ್ತು. ಇಷ್ಟೊಂದು ಕಾಣಿಕೆಯೂ ಬರ್ತಾ ಇರಲಿಲ್ಲ. ಈಗ ಪ್ರವಾಸೋದ್ಯಮ ಬೆಳೆದು ಜನಸಾಗರ ಹರಿದು ಬರುತ್ತಿದೆ. ಹೀಗಾಗಿ ಮಠದ ಆದಾಯವೂ ಜಾಸ್ತಿಯಾಗಿದ್ದು, ಜನರ ನೆರವಿನಿಂದ ಪರ್ಯಾಯವನ್ನು ಮಾಡಲು ಸಾಧ್ಯವಾಗುತ್ತಿದೆ.
*ಕೃಷ್ಣ ಮಠದಲ್ಲಿ ಈಗಲೂ ಚಾಲ್ತಿಯಲ್ಲಿರುವ ಮಡೆಸ್ನಾನ ಹಾಗೂ ಪಂಕ್ತಿಭೇದ ಸಂಪ್ರದಾಯವನ್ನು ನಿಲ್ಲಿಸುವ ಪ್ರಯತ್ನಕ್ಕೆ ಮುಂದಾಗುತ್ತೀರಾ?
ಪೇಜಾವರ ಶ್ರೀ: ಮಡೆಸ್ನಾನವನ್ನು ನಿಲ್ಲಿಸಿ ಎಡೆಸ್ನಾನ ಪದ್ಧತಿಯನ್ನು ನಾನೀಗಾಗಲೇ ನಮ್ಮ ಆಡಳಿತದ ದೇವಸ್ಥಾನದಲ್ಲಿ ಜಾರಿಗೊಳಿಸಿದ್ದೇನೆ. ಅದನ್ನೇ ನನ್ನ ಎರಡು ವರ್ಷಗಳ ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣ ಮಠದಲ್ಲೂ ಜಾರಿಗೊಳಿಸುತ್ತೇನೆೆ. ಮುಂದೆ ಅದನ್ನು ಮುಂದುವರಿಸಿಕೊಂಡು ಹೋಗುವುದು ನಂತರದ ಸ್ವಾಮೀಜಿಗಳಿಗೆ ಬಿಟ್ಟಿದ್ದು. ನಾನು ಅದನ್ನು ಅವರ ವಿವೇಚನೆಗೆ ಬಿಡುತ್ತೇನೆ. ನಾನು ಹಿರಿಯ ಸ್ವಾಮೀಜಿಯಾದರೂ ಆದೇಶ ನೀಡಲು ಬರುವುದಿಲ್ಲ. ಕೇವಲ ಸಲಹೆಯನ್ನು ಮಾತ್ರ ನೀಡಬಲ್ಲೆ. ಇಲ್ಲಿ ಎಲ್ಲ ಸ್ವಾಮೀಜಿಗಳು ಸ್ವತಂತ್ರರಾದ್ದರಿಂದ ಅದನ್ನು ಒಪ್ಪುವುದು ಅಥವಾ ಬಿಡುವುದು ಅವರವರಿಗೆ ಸೇರಿದ್ದು.
ಬ್ರಾಹ್ಮಣರ ಎಂಜಲೆಲೆಯ ಮೇಲೆ ಉರುಳಾಡುವುದನ್ನು ನಾನೂ ಒಪ್ಪುವುದಿಲ್ಲ. ಆದರೆ ದೇವರ ಪ್ರಸಾದದ ಎಲೆಯ ಮೇಲೆ ಉರುಳುವ ಎಡೆಸ್ನಾನಕ್ಕೂ ಕೆಲವು ಪ್ರಗತಿಪರರು ವಿರೋಧ ಸೂಚಿಸುತ್ತಾರೆ. ಇದು ಕೇವಲ ವಿರೋಧಿಸಬೇಕು ಎಂಬ ಕಾರಣಕ್ಕೆ ವಿರೋಧಿಸುವುದಾಗಿದೆ. ಇದರಲ್ಲಿ ಅಸಹ್ಯ ಪಡುವಂತಹದ್ದೇನಿಲ್ಲ. ಸರಕಾರ ನನ್ನ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದು, ನ್ಯಾಯಾಲಯದಿಂದಲೂ ಒಪ್ಪಿಗೆ ಸಿಕ್ಕಿದೆ. ಇನ್ನು ಪಂಕ್ತಿಭೇದ....
ಪೇಜಾವರ ಶ್ರೀ: ಇದರಲ್ಲಿ ನಮ್ಮದು ಮಧ್ಯಮಮಾರ್ಗ. ಈಗ ಪ್ರವಾಸಿಗರು ಬಂದು ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಇವರಲ್ಲಿ ದಲಿತರು, ಬ್ರಾಹ್ಮಣರು, ಇತರ ಜಾತಿಯವರೆಲ್ಲರೂ ಇರುತ್ತಾರೆ. ಇನ್ನೊಂದು ಚೌಕಿ ಪಂಕ್ತಿ. ಇದು ತೀರಾ ಸಂಪ್ರದಾಯಸ್ಥರ ಪಂಕ್ತಿ. ಕಟ್ಟಾ ವೈದಿಕರಾಗಿರುವವರು ಸಹಪಂಕ್ತಿಯನ್ನು ಇಷ್ಟ ಪಡುವುದಿಲ್ಲ. ಮದ್ಯ, ಮಾಂಸ ತಿನ್ನುವವರೊಂದಿಗೆ ಕುಳಿತು ಊಟ ಮಾಡುವುದನ್ನು ಅವರು ಇಷ್ಟ ಪಡುವುದಿಲ್ಲ. ಪಂಕ್ತಿಭೇದ ನಿಲ್ಲಿಸಿದರೆ ಅವರು ಊಟ ಮಾಡದೇ ತೆರಳುತ್ತಾರೆ. ಅದರಿಂದ ಏನೂ ಸಾಧನೆ ಮಾಡಿದಂತಾಗುವುದಿಲ್ಲ. ಆದುದರಿಂದ ಸಾಂಪ್ರದಾಯಿಕ ಪಂಕ್ತಿ ಹಾಗೂ ಸಾರ್ವಜನಿಕ ಪಂಕ್ತಿ ಎರಡನ್ನೂ ನಮ್ಮ ಪರ್ಯಾಯ ಅವಧಿಯಲ್ಲಿ ಮುಂದುವರಿಸುತ್ತೇವೆ. ಮಠದಲ್ಲಿ ಹಿಂದೆ ಸಾರ್ವಜನಿಕ ಪಂಕ್ತಿ ಇರಲಿಲ್ಲ, ಈಗ ಇದೆ.
ಇನ್ನು ಇದು ಕೇವಲ ಶ್ರೀಕೃಷ್ಣ ಮಠಕ್ಕೆ ಸೀಮಿತವಲ್ಲ. ಧರ್ಮಸ್ಥಳ, ಸುಬ್ರಹ್ಮಣ್ಯ, ಶೃಂಗೇರಿ, ಮಂತ್ರಾಲಯ ಎಲ್ಲ್ಲ ಕಡೆಗಳಲ್ಲೂ ಸಾಂಪ್ರದಾಯಿಕ ಪಂಕ್ತಿ ಉಂಟು. ಕೇವಲ ಕೃಷ್ಣ ಮಠದ ಪಂಕ್ತಿ ಊಟದ ಬಗ್ಗೆ ಮಾತ್ರ ಜನ ಪ್ರಶ್ನೆ ಎತ್ತುತ್ತಾರೆ. ಅದು ಸಹ ನನ್ನನ್ನು ವಿರೋಧಿಸುವ ಕಾರಣಕ್ಕೆ. ಶೃಂಗೇರಿ, ಧರ್ಮಸ್ಥಳದಲ್ಲಿ ಸಹ ಪ್ರತ್ಯೇಕ ಪಂಕ್ತಿ ಇರುವುದನ್ನು ಯಾರೂ ವಿರೋಧಿಸುವುದಿಲ್ಲ.
*ಹಿರಿಯ ಸ್ವಾಮೀಜಿಯಾಗಿ ನೀವು .....
ಪೇಜಾವರ ಶ್ರೀ: ಮತ್ತೊಬ್ಬರ ಮೇಲೆ ಒತ್ತಾಯ ಮಾಡಲು ಬರುವುದಿಲ್ಲ. ಪರಂಪರೆಯಿಂದ ಆ ಭಾವನೆ ಬಂದಿದೆ.ತನ್ನ ನಿಲುವು ಬಿಡಲು ಯಾರೂ ತಯಾರಿಲ್ಲ. ಈಗ ವಿದೇಶಕ್ಕೆ ಹೋಗುವುದನ್ನು ನಿಲ್ಲಿಸುವುದು ಒಳ್ಳೆಯದು ಎಂದು ಸ್ವತಃ ಪುತ್ತಿಗೆ ಶ್ರೀಗಳು ಸಹ ಒಪ್ಪುತ್ತಾರೆ. ಸ್ವಾಮೀಜಿಗಳು ವಿದೇಶಕ್ಕೆ ಹೋದರೆ ಈಗಲೇ ಇರುವುದರೊಂದಿಗೆ ಮತ್ತಷ್ಟು ಕೆಟ್ಟ ಪ್ರವೃತ್ತಿಗಳು ಬೆಳೆಯಲು ಅವಕಾಶವಿದೆ. ಇದಕ್ಕೆ ನಿರ್ಬಂಧ ಹೇರದೇ ಮುಕ್ತತೆ ಕೊಟ್ಟರೆ ಕುಡಿಯಲು, ಮಾಂಸಾಹಾರ ಸೇವನೆ ಎಲ್ಲಕ್ಕೂ ಅವಕಾಶವಾಗುತ್ತದೆ. ವಿದೇಶದ ವಾತಾವರಣ ವೇ ಹಾಗಿದೆ. ಇದನ್ನು ಪುತ್ತಿಗೆ ಶ್ರೀಗಳೂ ಒಪ್ಪುತ್ತಾರೆ. ವಿದೇಶಗಳಲ್ಲಿ ಲಕ್ಷಾಂತರ ಭಾರತೀಯರಿದ್ದರೂ, ಅವರು ಸಹ ಮನೆಗಳಲ್ಲಿ ಮಾಂಸಾಹಾರದ ಅಡುಗೆ ಮಾಡುತ್ತಿದ್ದಾರೆ. ಹೀಗಾಗಿ ಸ್ವಾಮೀಜಿಗಳಿಗೆ ಅಲ್ಲಿ ಮಡಿ, ಇತರ ಸಂಪ್ರದಾಯ ಆಚರಿಸಲು ಕಷ್ಟವಾಗುತ್ತದೆ. ಈ ಕಾರಣಕ್ಕಾಗಿ ಹೆಚ್ಚಿನವರಿಗೆ ಇದು ಸರಿ ಬರುವುದಿಲ್ಲ. ಇವುಗಳನ್ನೆಲ್ಲ ಚರ್ಚಿಸಿ ಸರಿಪಡಿಸುವ ಪ್ರಯತ್ನ ಮಾಡಿದೆ. ಅದಿನ್ನೂ ಫಲಕಾರಿಯಾಗಿಲ್ಲ. ನನ್ನ ಪ್ರಯತ್ನ ಮುಂದುವರಿದಿದೆ. ಸ್ವಾಮೀಜಿಗಳಿಗೆ ತಮ್ಮ ನಿಲುವಿನ ಬಗ್ಗೆ ಹಠವಿದೆ. ಅದನ್ನು ಬಿಡಲು ಒಪ್ಪುವುದಿಲ್ಲ.
ನಿಮಗೀಗ 84 ವರ್ಷ. ಪೇಜಾವರದ ಮುಂದಿನ ಪರ್ಯಾಯದ ವೇಳೆಗೆ ನಿಮಗೆ 100 ವರ್ಷ ಭರ್ತಿಯಾಗುತ್ತದೆ. ವಾದಿರಾಜರೂ ತಮ್ಮ 100ನೆ ವಯಸ್ಸಿನಲ್ಲಿ ನಾಲ್ಕನೆ ಪರ್ಯಾಯ ಮಾಡಿದ್ದಾರೆ. ಹೀಗಾಗಿ 100ನೆ ವರ್ಷದಲ್ಲಿ ಮುಂದಿನ ಪರ್ಯಾಯ ಮಾಡುವ ಒತ್ತಡ ಬಂದರೆ ಸ್ವೀಕರಿಸುವಿರಾ?
ಪೇಜಾವರ ಶ್ರೀ: ಈ ಬಾರಿ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನತೀರ್ಥರ ಒತ್ತಾಯಕ್ಕೆ ಕಟ್ಟುಬಿದ್ದು ಐದನೆ ಪರ್ಯಾಯಕ್ಕೆ ಒಪ್ಪಿದ್ದೇನೆ. ನನಗೀಗ ಒಂದು ಹಕ್ಕು ಬಂದಿದೆ. ಮುಂದಿನ ಬಾರಿ ಅವರು ನನ್ನ ಮಾತು ಒಪ್ಪಲೇಬೇಕು. ಮುಂದಿನ ಪರ್ಯಾಯವನ್ನು ಅವರೇ ಮಾಡಬೇಕೆಂದು ನಾನು ಒತ್ತಾಯ ಮಾಡಿದರೆ ಅವರು ಒಪ್ಪಲೇಬೇಕು.ಏಕೆಂದರೆ ಅವರ ಮಾತಿನಂತೆ ನಾನೀಗ ಐದನೇ ಪರ್ಯಾಯಕ್ಕೆ ಒಪ್ಪಿದ್ದು. ನನ್ನ ಮಾತಿನಂತೆ ಅವರೇ ಮುಂದಿನ ಪರ್ಯಾಯ ಮಾಡಬೇಕು. ಹೀಗಾಗಿ ನಾನಿದ್ದರೆ ನನ್ನ ಮಾರ್ಗದರ್ಶನದಲ್ಲೇ ಮುಂದಿನ ಪರ್ಯಾಯವನ್ನು ಅವರಿಂದಲೇ ಮಾಡಿಸುತ್ತೇನೆ.
ಸ್ವಾಮೀಜಿ ಕೊನೆಯ ಪ್ರಶ್ನೆ. ನಿಮ್ಮ 78 ವರ್ಷಗಳ ಸನ್ಯಾಸಜೀವನದಲ್ಲಿ ಯಾವತ್ತಾದರೂ ಇದರ ಬಗ್ಗೆ ಪಶ್ಚಾತ್ತಾಪವಾಗಿದ್ದಿದೆಯೇ?
ಪೇಜಾವರ ಶ್ರೀ: ಅಂಥ ಭಾವನೆ ನನಗ್ಯಾವತ್ತೂ ಬಂದೇ ಇಲ್ಲ. ಸನ್ಯಾಸಿ ಆಗಿದ್ದರಿಂದಲೇ ಇಷ್ಟು ಕೆಲಸ ಮಾಡಲು ನನಗೆ ಸಾಧ್ಯವಾಯಿತು ಎಂಬ ತೃಪ್ತಿ ಭಾವ ಉಂಟಾಗಿದೆಯೇ ಹೊರತು, ಸನ್ಯಾಸ ಸ್ವೀಕರಿಸಿದ್ದು ತಪ್ಪು ಎಂಬ ಭಾವನೆ ಬಂದಿಲ್ಲ.