ಪರೀಕ್ಷೆ ಎದುರಿಸುವವರೇ ಶೇಕಡ ೩ ರಷ್ತು ಇದ್ದರೆ ಮತ್ತೆ ಆಯ್ಕೆಯಾಗುವವರು ಕಡಿಮೆಯಾಗುವುದು ಸ್ವಾಭಾವಿಕವಲ್ಲವೇ ?
2013ನೆ ಸಾಲಿನ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ)ದ ಪರೀಕ್ಷೆಯಲ್ಲಿ ದೇಶಕ್ಕೆ 80ನೆ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದ ಹೈದರಾಬಾದಿನ ಮುಶರ್ರಫ್ ಅಲಿ ಫಾರೂಕಿ ಶನಿವಾರ ಮಂಗಳೂರಿನಲ್ಲಿದ್ದರು. ಇಲ್ಲಿನ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಮಾಜ ಸೇವಾ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮದ ಅತಿಥಿಯಾಗಿ ಬಂದಿದ್ದ ಮುಶರ್ರಫ್ ಅವರು ‘ವಾರ್ತಾಭಾರತಿ’ಯೊಂದಿಗೆ ತಮ್ಮ ಐಎಎಸ್ ಯಶೋಗಾಥೆಯ ಕುರಿತು ಮುಕ್ತವಾಗಿ ಮಾತನಾಡಿದರು.ಮಾತುಕತೆಯ ವಿವರ ಇಲ್ಲಿದೆ:
ವಾಭಾ: ನೀವು ಐಎಎಸ್ಗಾಗಿ ನಡೆಸಿದ ಪ್ರಯತ್ನದ ಕುರಿತು ಸ್ವಲ್ಪ ವಿವರವಾಗಿ ಹೇಳಿ.
ಮುಶರ್ರಫ್ ಅಲಿ: ನಮ್ಮದು ಅವಿಭಜಿತ ಆಂಧ್ರಪ್ರದೇಶದ ಹೈದರಾಬಾದಿನಲ್ಲಿರುವ ಕುಟುಂಬ. ನನ್ನ ತಂದೆ ಅಬಕಾರಿ ಇಲಾಖೆಯಲ್ಲಿ ಡೆಪ್ಯುಟಿ ಕಮಿಶನರ್ ಆಗಿ ಕೆಲಸ ಮಾಡಿ ಇತ್ತೀಚಿಗೆ ನಿವೃತ್ತರಾಗಿದ್ದಾರೆ. ನಾನು ಮೊದಲ ಮಗ. ನನಗೆ ಮೂವರು ತಂಗಿಯರಿದ್ದಾರೆ. ಉಸ್ಮಾನಿಯ ವಿ.ವಿ.ಯಲ್ಲಿ ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್ಸ್ನಲ್ಲಿ ಇಂಜಿನಿಯರಿಂಗ್ (ಬಿ.ಇ.) ಮಾಡಿದ ಬಳಿಕ ನಾನು ಮದ್ರಾಸ್ನ ಐಐಟಿಯಲ್ಲಿ ಮೈಕ್ರೊ ಇಲೆಕ್ಟ್ರಾನಿಕ್ಸ್ (ಮೊಬೈಲ್ ಮತ್ತಿತರ ಗ್ಯಾಜೆಟ್ಗಳ ಹಾರ್ಡ್ವೇರ್ಗಳ ವಿನ್ಯಾಸಕ್ಕೆ ಸಂಬಂಧಿಸಿದ್ದು) ಮುಗಿಸಿದೆ. ಅಲ್ಲಿ ಕ್ಯಾಂಪಸ್ ಸಂದರ್ಶನದಲ್ಲಿ ಇಂಟೆಲ್ ಕಂಪೆನಿಯ ಡಿಸೈನರ್ ಆಗಿ ಆಯ್ಕೆಯಾದೆ.ಅವರ ಬೆಂಗಳೂರು ಕಚೇರಿಯಲ್ಲಿ ಸುಮಾರು 14 ತಿಂಗಳು ಕೆಲಸ ಮಾಡಿದೆ. ನಂತರ ಆ ಕೆಲಸ ಬಿಟ್ಟು ಯುಪಿಎಸ್ಸಿ ಪರೀಕ್ಷೆಗಾಗಿ ತಯಾರಿ ಪ್ರಾರಂಭಿಸಿದೆ. ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ನನ್ನ ಐಚ್ಛಿಕ ವಿಷಯವಾಗಿತ್ತು. ಎರಡನೆ ಪ್ರಯತ್ನದಲ್ಲಿ 80ನೆ ರ್ಯಾಂಕ್ನೊಂದಿಗೆ ಆಯ್ಕೆಯಾದೆ. ಒಂದು ವರ್ಷ ಮಸ್ಸೂರಿಯ ಅಕಾಡಮಿಯಲ್ಲಿ ತರಬೇತಿ ಬಳಿಕ ತೆಲಂಗಾಣದ ಖಮ್ಮಮ್ನಲ್ಲಿ ಸಹಾಯಕ ಕಮಿಶನರ್ (ತರಬೇತಿಯಲ್ಲಿ) ಆಗಿದ್ದೇನೆ. ಶೀಘ್ರವೇ ಈ ತರಬೇತಿ ಅವಧಿ ಮುಗಿಯಲಿದ್ದು, ನನಗೆ ಪೂರ್ಣಕಾಲಿಕ ಐಎಎಸ್ ಅಧಿಕಾರಿಯಾಗಿ ಹುದ್ದೆ ಸಿಗಲಿದೆ.
ವಾಭಾ : ದೊಡ್ಡ ಸಂಬಳ ಸಿಗುವ ಇಂಟೆಲ್ನ ಕೆಲಸ ಬಿಟ್ಟು ಐಎಎಸ್ ಪರೀಕ್ಷೆಗೆ ತಯಾರಾಗಲು ಮನಸ್ಸು ಮಾಡಿದ್ದು ಹೇಗೆ ?
ಮುಶರ್ರಫ್ ಅಲಿ: ಇದೇ ಪ್ರಶ್ನೆ ನನಗೆ ಯುಪಿಎಸ್ಸಿ ಸಂದರ್ಶನದಲ್ಲೂ ಕೇಳಲಾಗಿತ್ತು. ಹಣದ ವಿಷಯವನ್ನೇ ನೋಡಿದರೂ ಐಎಎಸ್ ಇಂಟೆಲ್ನಂತಹ ಕಂಪೆನಿಯ ಕೆಲಸಕ್ಕಿಂತ ಲಾಭದಾಯಕವೇ ಆಗಿದೆ (ನಗು). ಅಲ್ಲಿ ದೊಡ್ಡ ಸಂಬಳ ಕೊಡುತ್ತಾರೆ. ವಸತಿ ಮತ್ತಿತರ ವ್ಯವಸ್ಥೆಗಳನ್ನೆಲ್ಲ್ಲ ನಾವೇ ಮಾಡಿಕೊಳ್ಳಬೇಕು. ಆದರೆ ಇಲ್ಲಿ ಪ್ರತಿಯೊಂದು ವ್ಯವಸ್ಥೆಯೂ ಸರಕಾರವೇ ಮಾಡುತ್ತದೆ. ಹಾಗಾಗಿ ಆ ಲೆಕ್ಕದಲ್ಲೂ ಇದೇ ಲಾಭದಾಯಕ ಹುದ್ದೆ. ನನಗೆ ಚಿಕ್ಕಂದಿನಿಂದಲೂ ಓದುವ, ನನ್ನ ಸುತ್ತಮುತ್ತಲ ಸಮಾಜವನ್ನು ನೋಡುವ, ತಿಳಿಯುವ ಮನಸ್ಸು. ನನಗೆ ಇಂಟೆಲ್ನಲ್ಲಿ ವರ್ಷಕ್ಕೆ 18 ಲಕ್ಷ ಸಂಬಳವಿತ್ತು. ಆದರೆ ಯಾವುದೇ ಕಂಪೆನಿಯಂತೆ ಅಲ್ಲೂ ನನಗೆ ವಹಿಸಿದ ಡಿಸೈನಿಂಗ್ ಕೆಲಸವನ್ನು ಕಂಪೆನಿಯ ನಿರ್ದೇಶನದಂತೆ ಮಾಡಿ ಮುಗಿಸಬೇಕು. ಹೊರಜಗತ್ತಿನೊಂದಿಗೆ ನನಗೆ ಯಾವುದೇ ಸಂವಹನವಿಲ್ಲ. ನನ್ನ ಕೆಲಸ ಜನರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ನೋಡುವ, ಜನರೊಂದಿಗೆ ವ್ಯವಹರಿಸುವ, ಅವರ ಅಗತ್ಯಗಳಿಗೆ ಸ್ಪಂದಿಸುವ ಅವಕಾಶ ಅಲ್ಲಿ ಇಲ್ಲ. ಹಾಗಾಗಿ ಐಎಎಸ್ ಬಗ್ಗೆ ಗಂಭೀರವಾಗಿ ಯೋಚಿಸಲು ಪ್ರಾರಂಭಿಸಿದೆ. 2012ರಲ್ಲಿ ಕೆಲಸದಲ್ಲಿದ್ದೇ ಹೆಚ್ಚಿನ ತಯಾರಿಯಿಲ್ಲದೆ ಪರೀಕ್ಷೆ ಎದುರಿಸಿದೆ. ಪ್ರಿಲಿಮ್ಸ್ನಲ್ಲಿ ಆಯ್ಕೆಯಾಗಿ ಮೈನ್ಸ್ ಪರೀಕ್ಷೆಯನ್ನು ಬರೆದೆ. ಸಂದರ್ಶನಕ್ಕೆ ಆಯ್ಕೆಯಾಗಲಿಲ್ಲ. ಆಗ ನನಗೆ ಐಎಎಸ್ ಪರೀಕ್ಷೆ ಏನು, ಹೇಗೆ ಎಂಬ ಸ್ಪಷ್ಟ ಕಲ್ಪನೆ ಬಂತು. ದೃಢ ನಿರ್ಧಾರ ಮಾಡಿ ಮನೆಯಲ್ಲಿ ತಿಳಿಸಿದೆ. ಮೊದಮೊದಲು ಸ್ವಲ್ಪ ಹಿಂಜರಿದರೂ ಕೊನೆಗೆ ಎಲ್ಲರೂ ಸಂಪೂರ್ಣ ಸಹಕಾರ ನೀಡಿದರು.ಆಗ ಕೆಲಸ ಬಿಟ್ಟು ಸುಮಾರು 12-14 ತಿಂಗಳು ಗಂಭೀರವಾಗಿ ಅಧ್ಯಯನ ನಡೆಸಿದೆ.ಕೆಲವು ಕೋಚಿಂಗ್ ಸೆಂಟರ್ಗಳಿಗೆ ನಿರ್ದಿಷ್ಟ ವಿಷಯಗಳ ಸಲಹೆಗಾಗಿ ಮಾತ್ರ ಹೋದೆ. ಮುಂದಿನ ವರ್ಷ (2013) ನನ್ನ ಎರಡನೆ ಪ್ರಯತ್ನದಲ್ಲಿ ಯಶಸ್ವಿಯಾದೆ. ಸಂದರ್ಶನದಲ್ಲಿ ನನಗೆ ದೇಶದಲ್ಲಿ ಎರಡನೆ ಸ್ಥಾನ ಹಾಗೂ ಒಟ್ಟಾರೆ ಪರೀಕ್ಷೆಯಲ್ಲಿ 80ನೆ ರ್ಯಾಂಕ್ ಬಂತು. ವಾಭಾ: ನಿಮ್ಮ ಪ್ರಕಾರ ಐಎಎಸ್ ಪರೀಕ್ಷೆ ಬರೆಯುವವರು ಯಾವ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ?
ಮುಶರ್ರಫ್ ಅಲಿ: ನೋಡಿ, ಪ್ರತಿಯೊಬ್ಬರಿಗೂ ಅವರವರ ತೀವ್ರ ಆಸಕ್ತಿಯ ವಿಷಯಗಳಿರುತ್ತವೆ. ಅದರ ಜೊತೆಜೊತೆಗೆ ಬದುಕಿನಲ್ಲಿ ಯಶಸ್ವಿಯಾಗಿ ಒಂದು ಉತ್ತಮ ಉದ್ಯೋಗ ಪಡೆಯುವ/ ಉದ್ಯಮ ಪ್ರಾರಂಭಿಸುವ ಅನಿವಾರ್ಯತೆ ಇರುತ್ತದೆ. ಇವೆರಡರ ನಡುವಿನ ಸಮನ್ವಯತೆ ಬಹಳ ಮುಖ್ಯ. ನಿಮ್ಮ ಆಸಕ್ತಿಯೇ ನಿಮ್ಮನ್ನು ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗೆಯೇ ನಿಮ್ಮ ಉದ್ಯೋಗ ನಿಮ್ಮ ತೀವ್ರ ಆಸಕ್ತಿಯ ಕ್ಷೇತ್ರವಾಗಿರಬೇಕಾಗಿಲ್ಲ. ಐಎಎಸ್ ಪರೀಕ್ಷೆ ಎದುರಿಸಬಯಸುವವರು ಪ್ರೌಢಶಾಲಾ ಮಟ್ಟದಿಂದ ಪತ್ರಿಕೆಗಳನ್ನು ಓದುವುದು, ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳುವುದು ಇತ್ಯಾದಿಗಳ ಗಮನ ಕೊಡಬೇಕು. ಆದರೆ ಒಂದು ಸುರಕ್ಷಿತ ಉದ್ಯೋಗ ಸಿಗುವ ಶಿಕ್ಷಣ, ಕೋರ್ಸುಗಳನ್ನು ಮಾಡುವುದರತ್ತ ಕೂಡ ಗಮನ ಇರಬೇಕು. ಪದವಿಯ ಎರಡನೆ ಅಥವಾ ಕೊನೆಯ ವರ್ಷದಲ್ಲಿ ಐಎಎಸ್ ಪರೀಕ್ಷೆ ಎದುರಿಸುವ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಈ ನಿರ್ಧಾರ ನಿಮ್ಮ ಮತ್ತು ನಿಮ್ಮ ಕುಟುಂಬದ ನಿರ್ಧಾರವೂ ಆಗಿರುವುದು ಉತ್ತಮ. ಏಕೆಂದರೆ ಐಎಎಸ್ನಂತಹ ಪರೀಕ್ಷೆ ಎದುರಿಸುವಾಗ ಸಾಕಷ್ಟು ಕೌಟುಂಬಿಕ ಪ್ರೋತ್ಸಾಹ, ಆರ್ಥಿಕ ಬೆಂಬಲ, ಮಾನಸಿಕ ದೈರ್ಯ ನೀಡುವವರು ಬೇಕು. ಹಾಗಾಗಿ ಇದು ಕೇವಲ ಒಬ್ಬರ ನಿರ್ಧಾರದ ವಿಷಯವಲ್ಲ. ಒಮ್ಮೆ ನಿರ್ಧಾರ ತೆಗೆದುಕೊಂಡ ಬಳಿಕ ಪ್ರತಿದಿನ 10 ಗಂಟೆಯಂತೆ ಕನಿಷ್ಠ ಒಂದು- ಒಂದೂವರೆ ವರ್ಷದ ಗಂಭೀರ ಅಧ್ಯಯನ, ತಯಾರಿ ಅತ್ಯಗತ್ಯ. ವಾಭಾ : ಆಯ್ಕೆಯಾದ ಬಳಿಕ ತರಬೇತಿ ಅವಧಿಯಲ್ಲಿ ನಿಮ್ಮ ಅನುಭವಗಳನ್ನು ತಿಳಿಸಿ.
ಮುಶರ್ರಫ್ ಅಲಿ : ಐಎಎಸ್ಗೆ ಆಯ್ಕೆಯಾದವರಿಗೆ ನೀಡುವ ತರಬೇತಿ ವಿಶ್ವದಲ್ಲೇ ಅತ್ಯುತ್ತಮ ತರಬೇತಿಗಳಲ್ಲೊಂದು.ಮೊದಲ ಒಂದು ವರ್ಷ ಮಸ್ಸೂರಿಯ ಅದ್ಬುತ ವಾತಾವರಣದಲ್ಲಿರುವ ಅಕಾಡಮಿಯಲ್ಲಿ ತರಬೇತಿ ನೀಡುತ್ತಾರೆ. ಅನಂತರ 60 ದಿನಗಳ ಇಡೀ ಭಾರತ ಪ್ರವಾಸವಿರುತ್ತದೆ. ಅದರ ನಂತರ ಸರಕಾರದ ಎಲ್ಲ ಇಲಾಖೆಗಳು, ವಿಭಾಗಗಳೊಂದಿಗೆ ತರಬೇತಿ ಪಡೆಯುವ ಅವಕಾಶ ಸಿಗುತ್ತದೆ. ಭೂಸೇನೆ, ವಾಯುಸೇನೆ , ನೌಕಾದಳದಲ್ಲೂ ನಮಗೆ ತರಬೇತಿ ನೀಡಲಾಗುತ್ತದೆ. ನಾನು ಪಾಕ್ ಗಡಿಯಲ್ಲಿ ಒಂದು ವಾರ ಸೇನಾ ಜವಾನನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಈ ಅವಧಿಯಲ್ಲಿ ಆಯುಧ ಬಳಕೆ ತರಬೇತಿಯನ್ನೂ ನೀಡಲಾಗುತ್ತದೆ. ಇದಾದ ಬಳಿಕ ನಮಗೆ ನೀಡಲಾದ ರಾಜ್ಯದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರತಿಯೊಂದು ಇಲಾಖೆಯಲ್ಲಿ 4-5 ವಾರ ಕೆಲಸ ಮಾಡಿ ಅನುಭವ ಪಡೆಯಬೇಕಾಗುತ್ತದೆ. ಒಟ್ಟಾರೆಯಾಗಿ ಅದೊಂದು ಅದ್ಭುತ ಅನುಭವ.
ವಾಭಾ : ಬಹಳ ಬೇಗ ನೀವು ಜಿಲ್ಲಾಧಿಕಾರಿಯಾಗುವವರಿದ್ದೀರಿ. ಆಗ ನಿಮ್ಮ ಆದ್ಯತೆಗಳೇನು ? ಈ ಬಗ್ಗೆ ಯೋಚಿಸಿದ್ದೀರಾ ?
ಮುಶರ್ರಫ್ ಅಲಿ : ಹೌದು. ನಾನು ಈ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದೇನೆ. ಜನರಿಗೆ ನನ್ನಿಂದ ಯಾವೆಲ್ಲ ರೀತಿಯಲ್ಲಿ ಸೇವೆ ಸಲ್ಲಿಸಬಹುದು ಎಂದು ಐಡಿಯಾಗಳನ್ನು ಪರಿಶೀಲಿಸುತ್ತಿದ್ದೇನೆ. ಆರೋಗ್ಯ, ಶಿಕ್ಷಣ ಹಾಗೂ ದುರ್ಬಲ ವರ್ಗಗಳಿಗೆ ಸಹಾಯ ಮಾಡುವುದು ನನ್ನ ಆದ್ಯತೆಯಾಗಿರಲಿದೆ.
ವಾಭಾ : ಐಎಎಸ್ ಅಧಿಕಾರಿಯಾಗಿ ನೀವು ಬೇರೆ ಬೇರೆ ಹಿನ್ನೆಲೆಯಿಂದ ಬಂದ ರಾಜಕಾರಣಿಗಳ ಜೊತೆ ಕೆಲಸ ಮಾಡಬೇಕಾಗುತ್ತದೆ. ಈ ಬಗ್ಗೆ ಯೋಚನೆ ಮಾಡಿದ್ದೀರಾ ?
ಮುಶರ್ರಫ್ ಅಲಿ: ನಾನು ಈ ಬಗ್ಗೆ ಧನಾತ್ಮಕವಾಗಿದ್ದೇನೆ. ನಾವಿಲ್ಲಿರುವುದು ಜನರಿಗಾಗಿ. ಅವರು ಜನರ ಪ್ರತಿನಿಧಿಗಳು. ಅವರು ಏನಾದರೂ ಹೇಳುತ್ತಾರೆಂದರೆ ಒಂದಷ್ಟು ಜನರು ಅದನ್ನು ಬಯಸುತ್ತಾರೆ ಎಂದೇ ಅರ್ಥ. ಮತ್ತು ಇತ್ತೀಚಿಗೆ ರಾಜಕಾರಣಿಗಳೂ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದಾರೆ. ನಾವು ಪರಸ್ಪರ ಅರ್ಥ ಮಾಡಿಕೊಳ್ಳುವ ಮೂಲಕ, ಮಾತನಾಡುವ ಮೂಲಕ ಒಟ್ಟಾಗಿ ಜನರಿಗಾಗಿ ಕೆಲಸ ಮಾಡಬೇಕು ಅಷ್ಟೆ. ವಾಭಾ : ಇತ್ತೀಚಿಗೆ ಮುಸ್ಲಿಮ್ ಯುವಕರಲ್ಲಿ ಕೀಳರಿಮೆಯ ಭಾವನೆ ಹೆಚ್ಚುತ್ತಿದೆ ಎಂದು ನಿಮಗೆ ಅನಿಸುತ್ತದೆಯೇ ?
ಮುಶರ್ರಫ್ ಅಲಿ : ಮುಸ್ಲಿಮ್ ಯುವಕರಲ್ಲಿ ‘ನಮ್ಮ ವಿರುದ್ಧ ಸಂಚು ನಡೆಯುತ್ತಿದೆ, ಪಕ್ಷಪಾತ ನಡೆಯುತ್ತಿದೆ’ ಎಂಬ ಅತ್ಯಂತ ತಪ್ಪು ಮನೋಭಾವ ಬೆಳೆಯುತ್ತಿದೆ. ಆದರೆ ನಿಜವಾಗಿ ಹಾಗೆ ಇಲ್ಲವೇ ಇಲ್ಲ ಎಂದು ನಾನು ಖಡಾಖಂಡಿತವಾಗಿ ಹೇಳುತ್ತೇನೆ. ಇಡೀ ದಕ್ಷಿಣ ಏಶ್ಯಾದಲ್ಲೇ ನನ್ನ ಪ್ರಕಾರ ಮುಸ್ಲಿಮರಿಗೆ ಅತ್ಯುತ್ತಮ ದೇಶ ಎಂದರೆ ಭಾರತ. ಇಲ್ಲಿ ಅವರಿಗೆ ತಮ್ಮ ಧರ್ಮವನ್ನು ಅನುಸರಿಸಲು ಹಾಗೂ ಅದರ ಪ್ರಚಾರ ಮಾಡಲು ಇರುವಷ್ಟು ಸ್ವಾತಂತ್ರ ಬೇರೆಲ್ಲೂ ಇಲ್ಲ. ಇನ್ನು ಅವಕಾಶಗಳಿಗಂತೂ ಕೊರತೆಯೇ ಇಲ್ಲ. ಇಲ್ಲಿ ಬಹುತೇಕ ಎಲ್ಲ ಪರೀಕ್ಷೆಗಳೂ ಅತ್ಯಂತ ನಿಷ್ಪಕ್ಷಪಾತವಾಗಿ ನಡೆಯುತ್ತವೆ. ಸಂದರ್ಶನ ಹಂತದಲ್ಲೂ ಬಹುತೇಕ ಎಲ್ಲೂ ಭೇದಭಾವ ನಡೆಯುವುದೇ ಇಲ್ಲ. ಆದರೆ ನಮ್ಮ ಸಮುದಾಯದವರು ಈ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಎಡವಿದ್ದಾರೆ. ಪರೀಕ್ಷೆ ಎದುರಿಸುವವರೇ 3% ಇದ್ದರೆ ಮತ್ತೆ ಆಯ್ಕೆಯಾಗುವವರು ಅದಕ್ಕಿಂತ ಕಡಿಮೆಯೇ ಇರುವುದು ಸ್ವಾಭಾವಿಕವಲ್ಲವೇ? ನಾನು ಆಯ್ಕೆಯಾದ 2013ನೆ ಸಾಲಿನಲ್ಲಿ ಒಟ್ಟು 6 ಲಕ್ಷ ಮಂದಿಯಲ್ಲಿ ಮುಸ್ಲಿಮರ ಸಂಖ್ಯೆ ಕೇವಲ 15 ಸಾವಿರ. ಕೊನೆಗೆ ನಾನು ಸೇರಿ 8 ಮಂದಿ ಐಎಎಸ್ ಅಧಿಕಾರಿಗಳಾಗಿ ಆಯ್ಕೆಯಾದೆವು. ಮೊದಲು ನಾವು ಧನಾತ್ಮಕವಾಗಿ ಚಿಂತಿಸಬೇಕು. ಈ ದೇಶಕ್ಕಾಗಿ, ಇಲ್ಲಿನ ಎಲ್ಲ ಧರ್ಮಗಳ ಜನರಿಗಾಗಿ ಕೆಲಸ ಮಾಡಬೇಕು ಎಂಬ ಮನೋಭಾವನೆ ಇದ್ದವರಿಗೆ ಮಾತ್ರ ಯಶಸ್ಸು ಸಿಗುತ್ತದೆ.ನಾವು ವ್ಯವಸ್ಥೆಯ ಒಳಗಿದ್ದು ಅದನ್ನು ಸರಿಪಡಿಸಬೇಕೇ ಹೊರತು, ಅದರಿಂದ ದೂರ ಓಡಿ ಅದನ್ನು ದೂರುವ ಮೂಲಕ ಅಲ್ಲ. ವಾಭಾ: ನಿಮಗೆ ಮದುವೆಯಾಗಿದೆಯೇ ?
ಮುಷರ್ರಫ್ ಅಲಿ: (ನಗುತ್ತಾ ) ಇಲ್ಲ. ಬೇಗ ಮದುವೆ ಇರಬಹುದು.