varthabharthi


ವಾದ - ಪ್ರತಿವಾದ

ಬಾಬರಿ ಮಸೀದಿ ಧ್ವಂಸಗೊಳಿಸುವುದನ್ನು ಬಲವಾಗಿ ವಿರೋಧಿಸಿದ್ದೆ: ಪೇಜಾವರಶ್ರೀ

ವಾರ್ತಾ ಭಾರತಿ : 18 Jan, 2016

ಡಿಸೆಂಬರ್ 6ರ ನೆನಪನ್ನು ಬಿಚ್ಚಿಟ್ಟ ವಿಶ್ವೇಶ ತೀರ್ಥ ಸ್ವಾಮೀಜಿ


-ಬಿ.ಬಿ. ಶೆಟ್ಟಿಗಾರ್


ಉಡುಪಿ, ಜ.17: ‘‘ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿ ರಾಮಮಂದಿರ ಕಟ್ಟುವುದನ್ನು ನಾನು ಕಟ್ಟಕಡೆಯವರೆಗೂ ವಿರೋಧಿಸಿದ್ದೆ. ಮಸೀದಿಯ ಪಕ್ಕದಲ್ಲೇ ರಾಮ ಮಂದಿರ ನಿರ್ಮಾಣ ನನ್ನ ನಿಲುವಾಗಿತ್ತು. ಆದರೆ ನನ್ನ ಯೋಜನೆಯನ್ನು ವಿಫಲಗೊಳಿಸಲಾಯಿತು’’ ಎಂದು ಇದೀಗ ದಾಖಲೆಯ ಐದನೆ ಬಾರಿಗೆ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪೀಠಾರೋಹಣ ಮಾಡಲು ಸನ್ನದ್ಧರಾಗಿರುವ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.


ಪೀಠಾರೋಹಣಕ್ಕೆ ಪೂರ್ವಭಾವಿಯಾಗಿ ‘ವಾರ್ತಾಭಾರತಿ’ಗೆ ನೀಡಿದ ಸಂದರ್ಶನದ ವೇಳೆ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದ ಕುರಿತು, ಅದನ್ನು ಸೌಹಾರ್ದಯುತವಾಗಿ ಬಗೆಹರಿಸಲು ತಾವು ನಡೆಸಿದ ಪ್ರಯತ್ನದ ಕುರಿತು ಖುದ್ದಾಗಿ ಪ್ರಸ್ತಾಪಿಸಿದ ಸ್ವಾಮೀಜಿ, ಇದಕ್ಕೆ ಸಂಬಂದಿಸಿದ ಕೆಲವು ವಿಷಯಗಳು ಯಾರಿಗೂ ಗೊತ್ತಿಲ್ಲ. ಇದರಿಂದಾಗಿ ತನ್ನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.


ವಿ.ಪಿ.ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದಾಗ, ಬಾಬರಿ ಮಸೀದಿ- ರಾಮಜನ್ಮಭೂಮಿ ಸಮಸ್ಯೆಯನ್ನು ಬಗೆಹರಿಸಲು ಆಗ ರಾಜ್ಯಪಾಲರಾಗಿದ್ದ ಕೃಷ್ಣಕಾಂತ್, ಆಂಧ್ರಭವನದಲ್ಲಿ ಹಿಂದೂ ಹಾಗೂ ಮುಸ್ಲಿಮ್ ಸಂತರನ್ನು ಸೇರಿಸಿ ಸಭೆಯೊಂದನ್ನು ಕರೆದಿದ್ದರು. ವಿ.ಪಿ.ಸಿಂಗ್ ಅವರು ರಾಮಕೃಷ್ಣ ಹೆಗಡೆ ಅವರ ಮೂಲಕ ನನ್ನನ್ನೂ ಸಭೆಗೆ ವಿಶೇಷವಾಗಿ ಕರೆಸಿದ್ದರು. ಅವರು ಕರೆದ ಎಲ್ಲ ಸಂತರು ಈ ಸಭೆಯಲ್ಲಿ ಭಾಗವಹಿಸಿದ್ದರು. 20 ಮಂದಿ ಮುಸ್ಲಿಮ್ ಸಂತರು ಹಾಗೂ ದೇಶದ ಪ್ರಮುಖ ಹಿಂದೂ ಸಂತರು ಬಂದಿದ್ದರು. ಸುಮಾರು ಒಂದು ಗಂಟೆ ಚರ್ಚೆಯಾಯಿತು. ಮಸೀದಿ ಹಾಗೆಯೇ ಇರಲು, ಪಕ್ಕದಲ್ಲಿ ರಾಮಮಂದಿರ ಕಟ್ಟಲು ಹಾಗೂ ವಾರಕ್ಕೆ ಒಂದು ದಿನ ಮುಸ್ಲಿಮರಿಗೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡುವ ಪ್ರಸ್ತಾಪಕ್ಕೆ ಮುಸ್ಲಿಮ್ ಸಂತರು ಒಪ್ಪಿಗೆ ಸೂಚಿಸಿದ್ದರು. ಇದಕ್ಕೆ ಸಭೆಯಲ್ಲಿದ್ದ ಎಲ್ಲಾ ಸಂತರು ಒಪ್ಪಿದ್ದರು.


ನಮ್ಮ ಅನುಯಾಯಿಗಳನ್ನು ಈ ಪ್ರಸ್ತಾಪಕ್ಕೆ ಒಪ್ಪಿಸಲು ಒಂದು ವಾರದ ಕಾಲಾವಕಾಶವನ್ನು ಮುಸ್ಲಿಂ ಸಂತರು ಕೋರಿದ್ದರು. ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದರು. ಅದು ಅಲ್ಲಿಗೆ ಮುಗಿಯಿತು.


ಇದಾದ ಒಂದು ವಾರದಲ್ಲೇ ರಾಜಕೀಯದಲ್ಲಿ ಭಾರೀ ಬದಲಾವಣೆ ಯಾಯಿತು. ಬಿಹಾರದಲ್ಲಿ ಎಲ್.ಕೆ.ಅದ್ವಾನಿಯವರ ಬಂಧನವಾಯಿತು. ವಿ.ಪಿ.ಸಿಂಗ್ ಸರಕಾರ ಪತನಗೊಂಡಿತು. ಸಂಧಾನ ಪ್ರಸ್ತಾಪ ಅಲ್ಲಿಗೆ ನಿಂತು ಹೋಯಿತು.


‘‘ಮುಂದೆ ವಿಎಚ್‌ಪಿಯ ಸಂತರ ಸಭೆಯಲ್ಲಿ ನಾನು ಮಸೀದಿಯನ್ನು ಕೆಡವಬಾರದು. ಮಸೀದಿಯನ್ನು ಇಟ್ಟುಕೊಂಡೇ ಮಂದಿರ ಮಾಡಬೇಕು ಎಂಬ ಸೂಚನೆಯನ್ನು ಮುಂದಿಟ್ಟೆ. ನನ್ನ ಒತ್ತಾಯದಿಂದ ಎಲ್ಲರೂ ಇದನ್ನು ಒಪ್ಪಿಕೊಂಡರು. ಆದರೆ ಮರುದಿನ ಕಾರ್ಯಕರ್ತರಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿ ದೊಡ್ಡ ಗಲಾಟೆಯಾಯಿತು. ಗಲಾಟೆಯಿಂದ ಪ್ರಸ್ತಾಪನೇ ಬಿದ್ದು ಹೋಯಿತು. ಮಸೀದಿಯನ್ನು ಕೆಡವಿಯೇ ಮಂದಿರ ನಿರ್ಮಾಣವಾಗಬೇಕು ಎಂಬ ಠರಾವು ಮಾಡಲಾಯಿತು. ನಾನು ಅದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಅದಕ್ಕೆ ನಾನು ಸಹಿಯನ್ನೂ ಹಾಕಲಿಲ್ಲ. ಮಸೀದಿ ಇದ್ದುಕೊಂಡೇ ಮಂದಿರದ ನಿರ್ಮಾಣವಾಗಬೇಕು ಎಂಬುದು ನನ್ನ ದೃಢವಾದ ನಿಲುವಾಗಿತ್ತು. ಠರಾವಿನಲ್ಲಿ ಪ್ರಸ್ತಾವಕ್ಕೆ ನನ್ನ ವಿರೋಧವಿದೆ ಎಂದು ಬರೆಯಬೇಕು ಎಂದು ಒತ್ತಾಯಿಸಿದೆ. ನಾನು ಅದಕ್ಕೆ ಸಹಿ ಹಾಕಲಿಲ್ಲ. ನಾನೊಬ್ಬ ಸಂತ. ಸ್ವತಂತ್ರ ವ್ಯಕ್ತಿ, ಯಾರೂ ನನ್ನ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. ವಿಎಚ್‌ಪಿಯ ಎಲ್ಲವನ್ನೂ ನಾನು ಒಪ್ಪುವುದಿಲ್ಲ. ಮಸೀದಿ ಇದ್ದುಕೊಂಡೇ ಮಂದಿರವಾಗಲಿ ಎಂಬುದು ನನ್ನ ಪ್ರಯತ್ನವಾಗಿತ್ತು’’ ಎಂದರು.


 ನರಸಿಂಹ ರಾವ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ, ವಿಎಚ್‌ಪಿಯನ್ನು ಹೊರಗಿಟ್ಟು ಇನ್ನೊಂದು ಟ್ರಸ್ಟ್ ಮಾಡುವ ಪ್ರಯತ್ನ ನಡೆಯಿತು. ಏನೇ ಆದರೂ ವಿವಾದ ಬಗೆಹರಿಯುವುದು ನನಗೆ ಮುಖ್ಯವಾದ ಕಾರಣ ವಿಎಚ್‌ಪಿ ನಾಯಕರು ಬಲವಾಗಿ ವಿರೋಧಿಸಿದರೂ ನಾನು ಮತ್ತು ಶೃಂಗೇರಿ ಸ್ವಾಮೀಜಿ ಟ್ರಸ್ಟ್‌ನಲ್ಲಿ ಭಾಗವಹಿಸಿದೆವು. ಟ್ರಸ್ಟ್‌ನಲ್ಲೂ ನಾನು ನನ್ನ ಪ್ರಸ್ತಾಪ ಇಟ್ಟಿದ್ದೆ. ಆದರೆ ಅದರಿಂದಲೂ ವಿವಾದ ಬಗೆಹರಿಸಲು ಸಾಧ್ಯವಾಗಲಿಲ್ಲ.


ಹೀಗೆ ನಾನು ಆರಂಭದಿಂದಲೂ ಈ ವಿವಾದದಲ್ಲಿ ಘರ್ಷಣೆಯನ್ನು ತಪ್ಪಿಸಲು ನನ್ನ ಕೈಲಾದ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇನೆ ಇದು ಇವರೆಲ್ಲರಿಗೂ ಅರ್ಥವೇ ಆಗುವುದಿಲ್ಲ. ಮೊನ್ನೆ ವಾರಪತ್ರಿಕೆಯೊಂದರಲ್ಲಿ ನಾನೇ ಮುಂದೆ ನಿಂತು ಮಸೀದಿಯನ್ನು ಕೆಡವಿದ್ದೆ. ಕಾರ್ಯಕರ್ತರನ್ನು ಹುರಿದುಂಬಿಸಿದ್ದೆ ಎಂದು ಬರೆದಿದ್ದರು. ಅಲ್ಲಿ ದ.ಕ.ದ ಕೆಲವೇ ಕಾರ್ಯಕರ್ತರಿದ್ದರು. ಮಸೀದಿ ಕೆಡವಲು ಮುಂದಾದ ಕಾರ್ಯಕರ್ತರಿಗೆ ಹಾಗೆ ಮಾಡ ಬೇಡಿ ಎಂದು ಮೈಕ್‌ನಲ್ಲಿ ಕೂಗಿ ಕೂಗಿ ಮನವಿ ಮಾಡಿದ್ದೆ. ಕೊನೆಗೆ ಅವರನ್ನು ತಡೆಯಲು ನಾನೇ ಮೇಲಕ್ಕೆ ಹತ್ತಿಹೋಗಿದ್ದೆ. ಆಗ ಅಲ್ಲಿದ್ದ ಕಾರ್ಯಕರ್ತರು ಬಲವಂತವಾಗಿ ನನ್ನನ್ನು ಕೆಳಗೆ ಇಳಿಸಿಬಿಟ್ಟರು.
ಹೀಗೆ ಆರಂಭದಿಂದಲೂ ನಾನು ಇದನ್ನು ವಿರೋಧಿಸಿಕೊಂಡೇ ಬಂದವನು. ಆದರೆ ಪತ್ರಿಕೆಗಳು ಹೀಗೆ ಬರೆದಿವೆ. ಈ ವಿಷಯಗಳೆಲ್ಲಾ ಹೆಚ್ಚಿನವರಿಗೆ ಗೊತ್ತಿಲ್ಲ. ಇದಕ್ಕಾಗಿ ಬಿಡಿಸಿ ಹೇಳುತಿದ್ದೇನೆ. ಸಂಧಾನಕ್ಕಾಗಿ ನಾನು ಪಟ್ಟ ಪರಿಶ್ರಮದ ವಿಷಯ ಯಾರಿಗೂ ಗೊತ್ತಿಲ್ಲ ಎಂದು ಪೇಜಾವರ ಶ್ರೀ ಹೇಳಿದರು.
 
ಆದರೆ ಮುಸ್ಲಿಮರಿಗೆ ಈಗಲೂ ನಮ್ಮ ಮೇಲೆ ವಿಶ್ವಾಸವಿದೆ. ಪ್ರತಿಯೊಂದು ಸಮಾವೇಶಕ್ಕೂ ನಮಗೆ ಆಹ್ವಾನ ನೀಡುತ್ತಾರೆ. ಕರೆಯುತ್ತಾರೆ. ಇಲ್ಲಿ ನಮ್ಮ ಪರ್ಯಾಯಕ್ಕೆ ಅವರು ಹೊರೆಕಾಣಿಕೆ ನೀಡಿದ್ದಾರೆ. ರಕ್ತದಾನ ಶಿಬಿರ ನಡೆಸುತ್ತಿದ್ದಾರೆ. ನಾನು ಎಂದೂ ಮುಸ್ಲಿಮ್ ವಿರೋಧಿಯಲ್ಲ.ನನ್ನದು ಒಂದೇ ಧೋರಣೆ. ಅಲ್ಪಸಂಖ್ಯಾತರಿಗೆ ಸಂರಕ್ಷಣೆ ಬೇಕು. ಹೆಚ್ಚಿನ ಸವಲತ್ತು ಬೇಡ ಎಂಬುದು. ಇದರಿಂದ ಅವರಿಗೆ ಹೆಚ್ಚಿನ ಸವಲತ್ತು ನೀಡುತ್ತಾರೆ ಎಂದು ಹಿಂದೂ ಸಂಘಟನೆಗಳಿಗೆ ಧ್ವೇಷ ಉಂಟಾಗುತ್ತದೆ ಎಂದರು.


ರಾಮಮಂದಿರ ವಿವಾದ ಬಗೆಹರಿಯಲು ಸಾಧ್ಯವಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹೆಚ್ಚಿನ ಪ್ರಯತ್ನ ಪಟ್ಟರೆ ಇದು ಬಗೆಹರಿಯುತ್ತದೆ. ಆದರೆ ಅವರು ಸರಿಯಾಗಿ ಪ್ರಯತ್ನ ಮಾಡುತ್ತಿಲ್ಲ ಎಂದು ನನಗನಿಸುತ್ತದೆ. ಪ್ರಯತ್ನ ಮಾಡಿದರೆ ಬಗೆಹರಿಯಲು ಸಾಧ್ಯವಿದೆ. ಯಾರಿಗೂ ಸಂಘರ್ಷದಲ್ಲಿ ಒಲವಿಲ್ಲ. ಆದರೆ ಕೆಲವರಿಗೆ ಉಂಟು. ಘರ್ಷಣೆ ಆದಷ್ಟೂ ಹಿಂದೂ ಸಂಘಟನೆಗಳಿಗೆ ಉಪಯೋಗವಿದೆ ಎಂಬ ಕಾರಣಕ್ಕಾಗಿ. ಇದಕ್ಕಾಗಿಯೇ ನಾನು ವಿರೋಧಿಸಿದರೆ , ನೀವು ಯಾಕೆ ಮಧ್ಯ ಪ್ರವೇಶಿಸುತ್ತೀರಿ ಎಂದು ನನಗೆ ಹೇಳುತ್ತಾರೆ’’ ಎಂದು ಸ್ವಾಮೀಜಿ ನುಡಿದರು.


ವಿಎಚ್‌ಪಿಯ ಸಂತರ ಸಭೆಯಲ್ಲಿ ನಾನು ಮಸೀದಿಯನ್ನು ಕೆಡವಬಾರದು. ಮಸೀದಿಯನ್ನು ಇಟ್ಟುಕೊಂಡೇ ಮಂದಿರ ಮಾಡಬೇಕು ಎಂಬ ಸೂಚನೆಯನ್ನು ಮುಂದಿಟ್ಟೆ. ನನ್ನ ಒತ್ತಾಯದಿಂದ ಎಲ್ಲರೂ ಇದನ್ನು ಒಪ್ಪಿಕೊಂಡರು. ಆದರೆ ಮರುದಿನ ಕಾರ್ಯಕರ್ತರಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿ ದೊಡ್ಡ ಗಲಾಟೆಯಾಯಿತು. ಗಲಾಟೆಯಿಂದ ಪ್ರಸ್ತಾಪನೇ ಬಿದ್ದು ಹೋಯಿತು. ಮಸೀದಿಯನ್ನು ಕೆಡವಿಯೇ ಮಂದಿರ ನಿರ್ಮಾಣವಾಗಬೇಕು ಎಂಬ ಠರಾವು ಮಾಡಲಾಯಿತು. ನಾನು ಅದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಅದಕ್ಕೆ ನಾನು ಸಹಿಯನ್ನೂ ಹಾಕಲಿಲ್ಲ. ಮಸೀದಿ ಇದ್ದುಕೊಂಡೇ ಮಂದಿರದ ನಿರ್ಮಾಣವಾಗಬೇಕು ಎಂಬುದು ನನ್ನ ದೃಢವಾದ ನಿಲುವಾಗಿತ್ತು.
 - ಶ್ರೀವಿಶ್ವೇಶತೀರ್ಥ, ಪೇಜಾವರ ಮಠ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)