ಮಹಾರಾಷ್ಟ್ರದ ಪ್ರತೀ ಪೊಲೀಸ್ ಮುಖ್ಯಾಲಯದಲ್ಲಿ ವಕ್ತಾರರ ನೇಮಕ
ಮಹಾನಗರ ಮುಂಬೈಯಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯದ ಡಿಜಿ ಅವರು ಅನೌಪಚಾರಿಕ ಸ್ತರದಲ್ಲಿ ಮುಂಬೈ ಪೊಲೀಸ್ ವಿಭಾಗದಲ್ಲಿ ಓರ್ವ ವಕ್ತಾರರನ್ನು ಇರಿಸಲು ಕೆಲವು ವರ್ಷದ ಹಿಂದೆ ಆದೇಶ ನೀಡಿದ್ದರು. ಅನಂತರ ಮುಂಬೈ ಪೊಲೀಸ್ ವಿಭಾಗದಲ್ಲಿ ಒಬ್ಬ ಡಿಸಿಪಿ ರ್ಯಾಂಕ್‌ನ ಅಧಿಕಾರಿಯನ್ನು ವಕ್ತಾರರನ್ನಾಗಿಸಿ ಜವಾಬ್ದಾರಿ ನೀಡಲಾಗಿತ್ತು. ಜನಸಾಮಾನ್ಯರ ದೂರುಗಳು ಪೊಲೀಸರ ಹಿರಿಯ ಅಧಿಕಾರಿಗಳ ತನಕ ತಲುಪಲು ಸಾಧ್ಯವಾಗಬೇಕು ಎನ್ನುವುದು ಇದರ ಹಿಂದಿನ ಉದ್ದೇಶ.
ಪೊಲೀಸ್ ವಕ್ತಾರ ಸ್ಥಾನದ ಈ ಯಶಸ್ಸಿನ ನಂತರ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ದೀಕ್ಷಿತ್ ಅವರು ಮಹಾರಾಷ್ಟ್ರದ ಎಲ್ಲ ಪೊಲೀಸ್ ಕಮಿಷನರೇಟ್ ಮತ್ತು ಜಿಲ್ಲಾ ಪೊಲೀಸ್ ಮುಖ್ಯಾಲಯಗಳಲ್ಲೂ ವಕ್ತಾರ ಸ್ಥಾನವನ್ನು ಭರ್ತಿಗೊಳಿಸಲು ಇತ್ತೀಚಿಗೆ ಆದೇಶವನ್ನು ಜಾರಿಗೊಳಿಸಿದ್ದಾರೆ. ಸದ್ಯ ಮುಂಬೈಯಲ್ಲಿ ಶಹರ ಪೊಲೀಸ್ ಮತ್ತು ರೈಲ್ವೆ ಪೊಲೀಸ್ ಮುಖ್ಯಾಲಯಗಳಲ್ಲಿ ಓರ್ವ ಪೊಲೀಸ್ ವಕ್ತಾರರನ್ನು ನಿಯುಕ್ತಿಗೊಳಿಸಲಾಗಿದೆ. ಕೆಲವೊಮ್ಮೆ ಮಾಧ್ಯಮಗಳಲ್ಲಿ ಪೊಲೀಸ್ ಅಧಿಕಾರಿಗಳೂ ಬೇರೆ ಬೇರೆ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸುವುದಿದೆ. ಇದರಿಂದ ಪೊಲೀಸ್ ವಿಭಾಗದಲ್ಲೇ ಹೊಂದಾಣಿಕೆ ಇಲ್ಲದಿರುವುದು ತಿಳಿದು ಬರುತ್ತದೆ. ಇದಕ್ಕಾಗಿ ಓರ್ವ ವಕ್ತಾರರು ಇದ್ದರೆ ಇಂತಹ ಸಮಸ್ಯೆ ಇರುವುದಿಲ್ಲ.
ಮುಂಬೈಯಲ್ಲಿ ಸದ್ಯ ಡಿಸಿಪಿ ಧನಂಜಯ ಕುಲಕರ್ಣಿ ಅವರು ವಕ್ತಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕುಲಕರ್ಣಿ ಅವರ ಬಳಿ ಕ್ರೈಂ ಬ್ರ್ಯಾಂಚ್‌ನ ಡಿಟೆಕ್ಷನ್ ವಿಭಾಗ ಕೂಡಾ ಇದೆ. ಮುಂಬೈಯಲ್ಲಿ ಪೊಲೀಸ್ ವಕ್ತಾರರ ಸ್ಥಾನ ಅನೌಪಚಾರಿಕವಾಗಿದೆ. ಸದ್ಯ ಮಹಾರಾಷ್ಟ್ರದಲ್ಲಿ ಒಟ್ಟು 10 ಪೊಲೀಸ್ ಕಮಿಷನರೇಟ್ ಮತ್ತು 35 ಜಿಲ್ಲಾ ಪೊಲೀಸ್ ಮುಖ್ಯಾಲಯಗಳಿವೆ.
***
ಆರ್.ಪಿ.ಐ.ಯ ಏಕತೆಗಾಗಿ ಆಠವಲೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಂತೆ!
ರಾಜ್ಯದಲ್ಲಿ ವಿಭಿನ್ನ ಬಣಗಳಲ್ಲಿ ಹಂಚಿಹೋಗಿರುವ ರಿಪಬ್ಲಿಕನ್ ಪಾರ್ಟಿ ಒಂದು ವೇಳೆ ಜೊತೆಗೂಡಿ ಒಂದೇ ವೇದಿಕೆಗೆ ಬರಲು ತಯಾರಾದರೆ ತಾನು ರಿಪಬ್ಲಿಕನ್ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ತಯಾರಿದ್ದೇನೆ. ಹಾಗೂ ಒಬ್ಬ ಸಾಮಾನ್ಯ ಕಾರ್ಯಕರ್ತನ ರೂಪದಲ್ಲಿ ಕೆಲಸ ಮಾಡುವೆನು...
ಹೀಗೆಂದು ಹೇಳಿದವರು ಸಂಸದ ರಾಮದಾಸ ಆಠವಲೆ. ಥಾಣೆ ಜಿಲ್ಲೆಯ ಉಲ್ಲಾಸ್‌ನಗರ ಶಹರದ ಅಧ್ಯಕ್ಷ ಭಗವಾನ್ ಭಾಲೆರಾವ್ ಅವರು ಆಯೋಜಿಸಿದ ಶಕ್ತಿ ಪ್ರದರ್ಶನದ ಕಾರ್ಯಕ್ರಮದಲ್ಲಿ ಸಂಸದ ರಾಮದಾಸ ಆಠವಲೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲ ಬಾರಿಗೆ ಉಲ್ಲಾಸ್ ನಗರದಲ್ಲಿ ಆರ್.ಪಿ.ಐ.ಯ ಐತಿಹಾಸಿಕ ಸಭೆ ಜನವರಿ ಎರಡನೆ ವಾರದಲ್ಲಿ ನಡೆಯಿತು. ಉಲ್ಲಾಸ್‌ನಗರದ ಎಸ್.ಇ.ಎಸ್.ಐ ಶಾಲೆಯ ಮೈದಾನದಲ್ಲಿ ಶಹರ ಜಿಲ್ಲಾಧ್ಯಕ್ಷ ಭಗವಾನ್ ಭಾಲೆರಾವ್ ಅವರು ಆರ್.ಪಿ.ಐ. ಕಾರ್ಯಕರ್ತರ ಮೇಳ ಆಯೋಜಿಸಿದರು.
ರಿಪಬ್ಲಿಕನ್ ಪಕ್ಷದಲ್ಲಿ ಬ್ರಾಹ್ಮಣ, ಮರಾಠ, ಕುಣಬಿ, ಆಗ್ರಿ, ಸಿಂಧಿ, ಉತ್ತರ ಭಾರತೀಯರು ಈ ದಿನಗಳಲ್ಲಿ ಹೆಚ್ಚೆಚ್ಚು ಪ್ರವೇಶ ಮಾಡುತ್ತಿದ್ದಾರೆ. ಉಲ್ಲಾಸ್‌ನಗರ ಮಹಾನಗರ ಪಾಲಿಕೆಗೆ ಮುಂದಿನ 2017ರಲ್ಲಿ ಚುನಾವಣೆ ನಡೆಯಲಿದೆ. ರಿಪಬ್ಲಿಕನ್ ಪಾರ್ಟಿ, ಬಿಜೆಪಿ ಮತ್ತು ಶಿವಸೇನೆ ಹೊಂದಾಣಿಕೆ ಮಾಡುವಂತಾಗಬೇಕು. ಇದಕ್ಕಾಗಿ ತಾನು ಶಿವಸೇನೆಯ ಜೊತೆ ಮಾತುಕತೆಗೆ ತಯಾರಿದ್ದೇನೆ ಎಂದೂ ಆಠವಲೆ ಅಲ್ಲಿ ಹೇಳಿದರು.
ವಿಶೇಷವೆಂದರೆ ಆರ್.ಪಿ.ಐ.ಯ ಈ ಶಕ್ತಿ ಪ್ರದರ್ಶನದ ವೇದಿಕೆಯಲ್ಲಿ ಬಿಜಿಪಿಯ ಅನೇಕ ನಾಯಕರು ಉಪಸ್ಥಿತರಿದ್ದರು.
***
4ಜಿ ನೆಟ್‌ವರ್ಕ್‌ನ ಜಾಲಕ್ಕಾಗಿ ಸ್ಮಶಾನ ಭೂಮಿ ಅಗೆದರು!
ಮರೀನ್ ಲೈನ್ ಸ್ಟೇಷನ್ ಬಳಿಯ ಚಂದನ್‌ವಾಡಿ ಸ್ಮಶಾನ ಭೂಮಿಯನ್ನು ಅಗೆದು ಮೊಬೈಲ್ ಟವರ್ ನಿರ್ಮಿಸಿದ್ದಕ್ಕೆ ತೀವ್ರ ವಿವಾದ ಸೃಷ್ಟಿಯಾಗಿದೆ. ಮನಪಾ ಆಯುಕ್ತರು ಈ ಘಟನೆಯ ತನಿಖೆಗೆ ಆದೇಶಿಸಿದ್ದಾರೆ.
ಮುಂಬೈಯಲ್ಲಿ 4ಜಿ ನೆಟ್‌ವರ್ಕ್‌ನ ಜಾಲ ನಿರ್ಮಿಸಲು ಉದ್ಯಾನ ಮತ್ತು ಮೈದಾನಗಳನ್ನು ಬೇಡುತ್ತಿರುವ ರಿಲಯನ್ಸ್ ಜಿವೋ ಕಂಪೆನಿ ಈಗ ಸ್ಮಶಾನ ಭೂಮಿಯತ್ತಲೂ ತನ್ನ ದೃಷ್ಟಿ ಹರಿಸುತ್ತಿದೆ. 4ಜಿ ಕೇಬಲ್ ಹಾಕಲು ರಿಲಯನ್ಸ್ ಜಿವೋ ಕಂಪೆನಿ ಮಹಾನಗರ ಪಾಲಿಕೆಯ ಅನುಮತಿ ಪಡೆಯದೆಯೇ ಚಂದನ್‌ವಾಡಿ ಸ್ಮಶಾನ ಭೂಮಿಯನ್ನು ಅಗೆಯಲು ಮುಂದಾಗಿದೆ. ಈ ಅಗೆತದ ವಿರುದ್ಧ ದೂರುಗಳು ಬಂದ ನಂತರ ಮನಪಾ ಆಯುಕ್ತರು ಸ್ಮಶಾನ ಭೂಮಿಯ ಟ್ರಸ್ಟ್‌ಗೆ ಎಂ.ಆರ್. ಟಿ.ಪಿ. ಅನ್ವಯ ನೊಟೀಸ್ ಜಾರಿಗೊಳಿಸಲು ಆದೇಶವನ್ನು ಸಂಬಂಧಿತ ವಿಭಾಗಕ್ಕೆ ನೀಡಿದ್ದಾರೆ.
ಚಂದನ್‌ವಾಡಿ ಸ್ಮಶಾನ ಭೂಮಿಯಲ್ಲಿ ಮಕ್ಕಳ ಶವ ದಫನದ ಜಮೀನಿನಲ್ಲಿ ಟವರ್ಸ್ ನಿಲ್ಲಿಸಲು ಜಿವೋ ಕಂಪೆನಿ ಅಲ್ಲಿ ಅಗೆತ ಶುರುಮಾಡಿತ್ತು. ಆದರೆ ಆವಾಗ ತಲೆ ಬುರುಡೆಗಳು ಕಂಡು ಬಂದದ್ದರಿಂದ ಜನರಲ್ಲಿ ಹಾಹಾಕಾರ ಉಂಟಾಯಿತು. ಇದನ್ನು ಗಮನಿಸಿ ಕಾಂಗ್ರೆಸ್ ಮತ್ತು ಶಿವಸೇನೆ ಅಲ್ಲಿ ಆಕ್ಷೇಪ ವ್ಯಕ್ತಪಡಿಸಿತು. ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ ಹೆಚ್ಚುವರಿ ಮನಪಾ ಆಯುಕ್ತ ಸಂಜಯ್ ದೇಶ್‌ಮುಖ್ ಅವರು ರಿಲಯನ್ಸ್ ಜಿವೋ ಕಂಪೆನಿಯ ವಿರುದ್ಧ ಕ್ರಮಕ್ಕೆ ಅದೇಶ ನೀಡಿದರು. ಇತ್ತ ಮನಪಾ ವಿಪಕ್ಷ ನೇತಾ ದೇವೇಂದ್ರ ಆಂಬೇಕರ್ ಅವರು ಮನಪಾ ಆಯುಕ್ತ ಆಜೋಯ್ ಮೆಹ್ತಾ ಅವರಿಗೆ ದೂರು ನೀಡಿದರು. ಆಯುಕ್ತರು ಅನಂತರ ಸ್ಮಶಾನ ಭೂಮಿಯ ಟ್ರಸ್ಟ್ ದಿ ಬಾಂಬೆ ಹಿಂದೂ ಬರ್ನಿಂಗ್ ಆ್ಯಂಡ್ ಬುರಿಯಲ್ ಗ್ರೌಂಡ್ ಕಮಿಟಿ ಅವರಿಗೆ ಎಂ.ಆರ್.ಟಿ.ಪಿ. 354 (ಎ) ಅನ್ವಯ ನೋಟಿಸ್ ಜಾರಿಗೊಳಿಸಲು ಆದೇಶವನ್ನು ಸಂಬಂಧಿತ ವಿಭಾಗಕ್ಕೆ ನೀಡಿದರು.
*** ಎಂಟು ತಿಂಗಳಾದರೂ ಪ್ರೆಗ್ನೆಂಟ್ ಡಾಕ್ಟರ್‌ಗಳಿಗೆ ರಜೆ ಕೊಡದ ಮನಪಾ ಆಸ್ಪತ್ರೆ ಆಡಳಿತ
ಮಹಾರಾಷ್ಟ್ರ ಸರಕಾರವು ಎರಡು ತಿಂಗಳ ಮೊದಲು ಹೆರಿಗೆ ಮತ್ತು ಟಿಬಿ ರೋಗಕ್ಕಾಗಿ ರಜೆಯ ಆದೇಶ ಹೊರಡಿಸಿದೆ. ಆದರೆ ಮುಂಬೈ ಮಹಾನಗರ ಪಾಲಿಕೆಯ ಆಸ್ಪತ್ರೆಗಳಲ್ಲಿ ಡಾಕ್ಟರ್‌ಗಳಿಗೆ ಇಂತಹ ಯಾವುದೇ ಆದೇಶ ಪ್ರಾಪ್ತಿಯಾಗಿಲ್ಲವಂತೆ. ಇದೀಗ ಮುಂಬೈ ಸಯನ್ ಆಸ್ಪತ್ರೆಯ ಇಬ್ಬರು ಎಂಟು ತಿಂಗಳು ಬಸಿರು ತುಂಬಿದ ಮಹಿಳಾ ಡಾಕ್ಟರ್‌ಗಳು ಮೆಟರ್ನಿಟಿ ಲೀವ್‌ಗಾಗಿ ಆಡಳಿತದ ಮುಂದೆ ಓಡಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ರಜೆ ಸಿಗುತ್ತಿಲ್ಲ! ಸರಕಾರದ ಈ ಸರ್ಕ್ಯುಲರ್ ಮನಪಾ ಆಸ್ಪತ್ರೆಗಳಿಗೆ ಇನ್ನೂ ಬಂದಿಲ್ಲವೆಂದು ಆಡಳಿತ ಹೇಳುತ್ತಿದೆ.
ಸಯನ್ ಆಸ್ಪತ್ರೆ (ಲೋಕಮಾನ್ಯ ತಿಲಕ್ ಜನರಲ್ ಆಸ್ಪತ್ರೆ)ಯ ಮೈಕ್ರೋ ಬಯೋಲಜಿ ವಿಭಾಗದ ಇಬ್ಬರು ಮಹಿಳಾ ಡಾಕ್ಟರುಗಳು ಗರ್ಭಿಣಿಯರಿದ್ದಾರೆ. ಇವರಿಗೆ ಎಂಟು ತಿಂಗಳು ತುಂಬಿವೆ. ಆದರೆ ಆಸ್ಪತ್ರೆ ಆಡಳಿತ ರಜೆ ಕೇಳಿದರೆ ಇನ್ನೂ ಕೊಡುತ್ತಿಲ್ಲವಂತೆ. ಕಳೆದ ಎರಡು ವಾರಗಳಿಂದ ಅವರು ಆಡಳಿತದ ಮುಂದೆ ವಿನಂತಿಸಿದರೂ ಇನ್ನೂ ರಜೆ ಸಿಗುತ್ತಿಲ್ಲ.
ಡೈರೆಕ್ಟ್‌ರ್ ಆಫ್ ಮೆಡಿಕಲ್ ಎಜ್ಯುಕೇಶನ್ ಆ್ಯಂಡ್ ರಿಸರ್ಚ್ (ಡಿಎಂಇಆರ್) ವತಿಯಿಂದ ಟಿಬಿ / ಮೆಟರ್ನಿಟಿ ಲೀವ್ ಜಾರಿಗೊಳಿಸಲು ಲೆಟರ್ 26 ನವೆಂಬರ್‌ಗೆ ಹೊರಡಿಸಲಾಗಿದೆ. ಮಾರ್ಡ್ 31 ಡಿಸೆಂಬರ್‌ಗೆ ಮನಪಾ ಮೇಜರ್ ಆಸ್ಪತ್ರೆಗಳ ಡೈರೆಕ್ಟರ್‌ಗೆ ಪತ್ರ ಬರೆದಿದೆಯಂತೆ.
ಎರಡು ತಿಂಗಳ ಮೊದಲು ರಾಜ್ಯ ಸರಕಾರ ಟಿಬಿ / ಮೆಟರ್ನಿಟಿ ಲೀವ್‌ನ ಆದೇಶ ಹೊರಡಿಸಿದ್ದರೂ ಮನಪಾ ಆಸ್ಪತ್ರೆಗಳು ಇನ್ನೂ ಆ ಸರ್ಕ್ಯುಲರ್‌ನ ನಿರೀಕ್ಷೆಯಲ್ಲಿವೆ.
*** ಸೇಫ್ ಸ್ಕೂಲ್ಸ್, ಸೇಫ್ ಸ್ಟೂಡೆಂಟ್ಸ್ ಮುಂಬೈಯ ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮರಾ
ಇತ್ತೀಚಿನ ದಿನಗಳಲ್ಲಿ ಮುಂಬೈಯ ಶಾಲಾ ಕ್ಯಾಂಪಸ್‌ಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳ ಮೇಲೆ ಲೈಂಗಿಕ ಶೋಷಣೆ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಶಿಕ್ಷಕರ ಸಂಘಟನೆ, ಶಾಲಾ ಸಂಸ್ಥಾಪಕ ಪ್ರಮುಖರು, ಮುಖ್ಯೋಪಾಧ್ಯಾಯರು ಈ ಬಗ್ಗೆ ಜನಜಾಗೃತಿ ಮೂಡಿಸಲು ಸೇಫ್ ಸ್ಟೂಡೆಂಟ್ಸ್ ಅಭಿಯಾನ ಆರಂಭಿಸಲಿದ್ದಾರೆ. ಈ ಅಭಿಯಾನ ಜನವರಿ 21ರಂದು ಆರಂಭವಾಗಲಿದೆ.
***
ಮುಂಬೈಯ ಮನಪಾ ನಗರ ಸೇವಕರಿಗೆ ಶಾಸಕ - ಸಂಸದರಂತಹ ಸೌಲಭ್ಯ ಬೇಕಂತೆ
ಮುಂಬೈಯ ಮಹಾನಗರ ಪಾಲಿಕೆಯ ನಗರಸೇವಕರಿಗೆ ಆಡಳಿತದ ವತಿಯಿಂದ ಮೊಬೈಲ್, ಲ್ಯಾಪ್‌ಟಾಪ್ ಇತ್ಯಾದಿ ಸೌಲಭ್ಯಗಳು ಸಿಕ್ಕಿದ ನಂತರವೂ ಅವರ ಬೇಡಿಕೆಗಳು ಸಮಾಪ್ತಿಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.
ಇದೀಗ ನಗರ ಸೇವಕರಿಗೆ ಸಂಸದರು ಮತ್ತು ಶಾಸಕರ ರೀತಿಯಲ್ಲಿ ಉಚಿತ ಆರೋಗ್ಯ ಸೌಲಭ್ಯವೂ ಸಿಗಬೇಕೆಂದು ಆಗ್ರಹಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವ ಶೀಘ್ರವೇ ಮನಪಾ ಸದನದಲ್ಲಿ ಮಂಡಿಸಲಾಗುವುದು. ಮನಪಾ ನಗರಸೇವಕರಿಗೆ ಮಾಸಿಕ ಗೌರವಧನದ ಹೊರತಾಗಿ ಬೈಠಕ್‌ಗಳಲ್ಲಿ ಭಾಗವಹಿಸಿದ್ದಕ್ಕೆ ಪ್ರತ್ಯೇಕ ಭತ್ತೆ ನೀಡಲಾಗುತ್ತದೆ. ಕೆಲವು ಸಮಯದ ಮೊದಲು ನಗರ ಸೇವಕರಿಗೆ ಲ್ಯಾಪ್‌ಟಾಪ್ ನೀಡಲಾಯಿತು. ಇತ್ತೀಚೆಗೆ ಮೊಬೈಲ್ ಸೌಲಭ್ಯ ಒದಗಿಸಲಾಯಿತು. ಇದರ ಬಿಲ್ ಮನಪಾ ತಿಜೋರಿಯಿಂದ ಕಟ್ಟಲಾಗುತ್ತದೆ.
ಇದೀಗ ಶಿವಸೇನೆಯ ಅಭಿಷೇಕ್ ಘೊಸಾಲ್ಕರ್ ಅವರು ಸಂಸದ - ಶಾಸಕರ ತರಹ ನಗರ ಸೇವಕರಿಗೂ ಉಚಿತ ಆರೋಗ್ಯ ಸೌಲಭ್ಯ ನೀಡಲು ಆಗ್ರಹಿಸಿದ್ದಾರೆ. ಇವರು ಹೇಳುವಂತೆ ಇಂದು ನಗರ ಸೇವಕರು ಮಾನಸಿಕ ಮತ್ತು ಶಾರೀರಿಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದಲ್ಲದೆ ಮುಂಬೈಯ ದೊಡ್ಡ ಭಾಗ ಜೋಪಡಿ ಕ್ಷೇತ್ರದಲ್ಲಿದೆ. ಜೋಪಡ ಪಟ್ಟಿಗಳಲ್ಲಿ ಸಾಂಕ್ರಾಮಿಕ ರೋಗಗಳು ಹಬ್ಬುವ ಸಾಧ್ಯತೆಗಳಿವೆ. ಹೀಗಾಗಿ ಆರೋಗ್ಯ ಸೌಲಭ್ಯ ಕೂಡಾ ನಗರ ಸೇವಕರಿಗೆ ಉಚಿತವಾಗಿ ಆಡಳಿತ ಒದಗಿಸಿಕೊಡಬೇಕು ಎಂದು ಅಭಿಷೇಕ್ ಆಗ್ರಹಿಸಿದ್ದಾರೆ.
***
ಪಂಚಾಯತ್ ಚುನಾವಣೆ: ಬಿಜೆಪಿಗೆ ಶಿವಸೇನೆ ವ್ಯಂಗ್ಯ
ಮಹಾರಾಷ್ಟ್ರದ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ ಕೆಲವೆಡೆ ನಾಲ್ಕನೆ ಸ್ಥಾನವನ್ನು ಗಳಿಸಿರುವುದು ಶಿವಸೇನೆಯ ದೃಷ್ಟಿಯಲ್ಲಿ ಒಂದು ಟ್ರೇಲರ್ ಮಾತ್ರ. ಅಸಲಿ ಫಿಲ್ಮ್ ಕಾಣಿಸುವ ಮೊದಲು ಬಿಜೆಪಿ ಎಚ್ಚೆತ್ತುಕೊಳ್ಳುವಂತಾದರೆ ಒಳಿತು ಎಂದಿದೆ. ಬೆಲೂನ್ ಆಕಾಶದಲ್ಲಿ ಎತ್ತರೆತ್ತರಕ್ಕೆ ಹಾರಿದರೂ ಅದು ಹೆಚ್ಚು ಕಾಲ ಬಾಳುವುದಿಲ್ಲ ಎಂದು ಪರೋಕ್ಷವಾಗಿ ಬಿಜೆಪಿಗೆ ಎಚ್ಚರಿಸಿದೆ.