ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್
ಬೆಂಗಳೂರು, ಜ. 18: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಮಟ್ಟದ ಕಾಮಗಾರಿಗಳನ್ನು ಪ್ರಾರಂಭಿಸುವ ಸಲುವಾಗಿ ಜ.29 ರೊಳಗೆ ಟೆಂಡರ್ ಪ್ರಕ್ರಿಯೆ ಪೂರ್ತಿಗೊಳಿಸಬೇಕೆಂದು ಮೇಯರ್ ಮಂಜುನಾಥರೆಡ್ಡಿ ಕಾರ್ಯಪಾಲಕರಿಗೆ ಗಡುವು ನೀಡಿದ್ದಾರೆ.
ಇಂದು ಬೆಳಗ್ಗೆ ಕಾರ್ಯಪಾಲಕ ಅಭಿಯಂತರರು ಹಾಗೂ ವಲಯ ಮುಖ್ಯ ಅಭಿಯಂತರರುಗಳ ಸಭೆ ಕರೆದು, ವಾರ್ಡ್ ಮಟ್ಟದ ಕಾಮಗಾರಿಗಳನ್ನು ಪ್ರಾರಂಭಿಸಲು ಏನು ಕ್ರಮ ಕೈಗೊಳ್ಳಲಾಗಿದೆ, ಟೆಂಡರ್ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬುದರ ಮಾಹಿತಿ ಪಡೆದರು. ಚುನಾವಣಾ ನೀತಿಸಂಹಿತೆ ಮುಗಿದು ಒಂದು ವಾರ ಕಳೆರೂ ಕೆಲವೊಂದು ವಾರ್ಡ್ ಗಳಲ್ಲಿ ಟೆಂಡರ್ ಕರೆಯದೆ ವಿಳಂಬ ಮಾಡಿದ ಕಾರ್ಯಪಾಲಕ ಅಭಿಯಂತರರುಗಳನ್ನು ತರಾಟೆಗೆ ತೆಗೆದುಕೊಂಡರು. ಈ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಬೇಕು. ಫೆಬ್ರವರಿ ಮೊದಲನೆ ವಾರದಲ್ಲಿ 250 ಕೋಟಿ ರೂ. ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಿದ್ದು, ಅದರಂತೆ ಕ್ರಮ ಕೈಗೊಳ್ಳಲು ಮುಖ್ಯ ಅಭಿಯಂತರರುಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಿದರು.
ರಸ್ತೆ ಮತ್ತು ಮೂಲ ಸೌಕರ್ಯ ವಿಭಾಗದಿಂದ ಪ್ರಮುಖ ರಸ್ತೆಗಳಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಲಿಕ್ಕೆ ಆದೇಶ ನೀಡಲಾಗಿತ್ತು. ಆದರೆ ಇನ್ನು ಕೆಲವು ರಸ್ತೆಗಳಲ್ಲಿ ರಸ್ತೆ ಗುಂಡಿಗಳು ಮುಚ್ಚದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಮುಂದೆ ಖುದ್ದಾಗಿ ತಪಾಸಣೆ ಕೈಗೊಂಡು ವೀಕ್ಷಿಸುವುದಾಗಿ ಮತ್ತು ರಸ್ತೆ ಗುಂಡಿಗಳು ಕಂಡು ಬಂದಲ್ಲಿ ಅಂತಹ ಅಭಿಯಂತರರ ಮೇಲೆ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಟೆಂಡರ್ ಶ್ಯೂರ್ ಪ್ರಕಾರ ರಸ್ತೆಗಳ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಟೆಂಡರ್ ನಿಯಮ ಪ್ರಕಾರ ಯಾವುದೇ ಮುಂಜಾಗ್ರತೆ ಕ್ರಮವಹಿಸುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಬ್ಯಾರಿಕೇಡ್ ಹಾಕುವುದು, ಧೂಳು ಹರಡದಂತೆ ಕ್ರಮ ವಹಿಸುವುದು, ರಸ್ತೆ ಬದಿ ಬಿದ್ದಿರುವ ಡೆಬ್ರಿಸ್ ತೆಗೆಯುವುದು ಯಾವುದನ್ನೂ ಅಚ್ಚುಕಟ್ಟಾಗಿ ಮಾಡುತ್ತಿಲ್ಲ. ಆದ್ದರಿಂದ ಕೂಡಲೇ ನಿರ್ದೇಶನ ನೀಡಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಅಭಿಯಂತರಿಗೆ ಸೂಚನೆ ನೀಡಿದರು. ರಸ್ತೆ ಅಗಲೀಕರಣ ಕಳೆದ 4-5 ವರ್ಷಗಳಿಂದ ನಿಂತು ಹೋಗಿದೆ. ಈ ಸಂಬಂಧ ಹೆಚ್ಚಿನ ಗಮನ ಹರಿಸುವ ಆವಶ್ಯಕತೆ ಇದೆ. ಬನ್ನೇರುಘಟ್ಟ ರಸ್ತೆ, ಟ್ಯಾನರಿ ರಸ್ತೆ, ಬೇಗೂರು ರಸ್ತೆ, ಮುಂತಾದ ಕಡೆ ರಸ್ತೆ ಅಗಲೀಕರಣಕ್ಕೆ ನೋಟಿಸ್ ಜಾರಿ ಮಾಡಿದರೂ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ಆಯುಕ್ತರಾದ ಜಿ.ಕುಮಾರ ನಾಯಕ ಮತ್ತು ಆಡಳಿತ ಪಕ್ಷದ ನಾಯಕರಾದ ಆರ್.ಎಸ್. ಸತ್ಯನಾರಾಯಣ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.