ಸ್ವಾತಂತ್ರ ಚಳವಳಿ, ತ್ರಿವರ್ಣ ಧ್ವಜ ಮತ್ತು ಸಂಘ ಪರಿವಾರ
ಭಾರತದ ಮದ್ರಸಗಳಲ್ಲಿ ‘ಉಗ್ರವಾದ’ ಮತ್ತು ‘ಲವ್ ಜಿಹಾದ್’ ಕಲಿಸಲಾಗುತ್ತಿದೆ ಎಂಬ ಸಂಘ ಪರಿವಾರದ ಆಧಾರರಹಿತ ಆರೋಪ ಹೊಸದೇನೂ ಅಲ್ಲ. ಅದು ಹಲವಾರು ವರ್ಷಗಳಿಂದಲೂ ಕೇಳಿಬರುತ್ತಿರುವಂತಹ ಆಪಾದನೆ. ಆದರೆ ಅಂದಿಗೂ ಇಂದಿಗೂ ಇರುವದೊಡ್ಡ ವ್ಯತ್ಯಾಸವೆಂದರೆ ಇದೀಗ ದಿಲ್ಲಿಯಲ್ಲಿ ಅವರದ್ದೇ ಮೋದಿ ಸರಕಾರ ಪ್ರತಿಷ್ಠಾಪಿತವಾಗಿದೆ. ಸಾವರ್ಕರ್‌ರ ಸಿದ್ಧಾಂತ, ಗೋಳ್ವಲ್ಕರ್‌ರ ಆದೇಶಗಳನ್ನು ಯಥಾವತ್ತಾಗಿ ಜಾರಿಗೊಳಿಸಲು ಸಕಲೆಂಟು ಯತ್ನಗಳನ್ನು ಮಾಡುತ್ತಲೇ ಬಂದಿರುವ ಸಂಘ ಪರಿವಾರಕ್ಕೆ ಈಗಲಂತೂ ಮುಕ್ತ ರಹದಾರಿ ದೊರೆತಂತಾಗಿದೆ. ಪರಿಣಾಮವಾಗಿ ಇಂದು ಅದರ ಆರೋಪಗಳ ಸಂಖ್ಯೆ ಮತ್ತು ಆರ್ಭಟಗಳೆರಡೂ ಜೋರಾಗಿ ಮುಗಿಲು ಮುಟ್ಟುತ್ತಿವೆ. ಅಲ್ಪಸಂಖ್ಯಾತರನ್ನು, ದಲಿತರನ್ನು ದ್ವಿತೀಯ ದರ್ಜೆಗೆ ತಳ್ಳುವ ಯೋಜನೆ ಭಾರೀ ವೇಗ ಪಡೆದುಕೊಂಡಿದ್ದು ಅದರ ಭಾಗವಾಗಿ ಒಂದು ಕಡೆ ಗಾಂಧೀಜಿ, ಅಂಬೇಡ್ಕರ್, ಫುಲೆ ದಂಪತಿ ಮುಂತಾದವರನ್ನು ತೆಕ್ಕೆಗೆ ತೆಗೆದುಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಿದ್ದರೆ ಇನ್ನೊಂದು ದಿಕ್ಕಿನಲ್ಲಿ ಮುಸ್ಲಿಮ್ ಸಮುದಾಯವನ್ನು ಓಲೈಸಿ ಅವರನ್ನು ಬಗ್ಗಿಸುವ ಪ್ರಯತ್ನವೂ ಶುರುವಾಗಿದೆ. ಆರೆಸ್ಸೆಸ್ ವೃಕ್ಷದಲ್ಲಿ ಚಿಗುರಿರುವ ಹೊಸ ಕೊಂಬೆ ‘ಮುಸ್ಲಿಮ್ ರಾಷ್ಟ್ರೀಯ ಮಂಚ್’. ಸದ್ಯ ಎರಡು ವಿಷಯಗಳನ್ನು ಎತ್ತಿಕೊಂಡು ಮುಸ್ಲಿಮ್ ಸಮುದಾಯದ ನಡುವೆ ತನ್ನ ಕಾರ್ಯಾರಂಭ ಮಾಡಿದೆ. ಒಂದು, ರಾಮ ಮಂದಿರ ನಿರ್ಮಾಣಕ್ಕೆ ಒಪ್ಪಿಗೆ ಪಡೆಯುವುದು. ಎರಡು, ಗಣರಾಜ್ಯ ಮತ್ತು ಸ್ವಾತಂತ್ರ್ಯ ದಿನಾಚರಣೆಗಳಂದು ಮದ್ರಸಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ರಾಷ್ಟ್ರಗೀತೆಯನ್ನು ಹಾಡಿಸುವುದು.
ವಾಸ್ತವದಲ್ಲಿ ಇಂತಹ ಮಹತ್ವದ ಸಂದರ್ಭಗಳಲ್ಲಿ ದೇಶದ ಹೆಚ್ಚು ಕಡಿಮೆ ಎಲ್ಲಾ ಮದ್ರಸಗಳೂ ತ್ರಿವರ್ಣಧ್ವಜವನ್ನು ಹಾರಿಸುವ ಸಂಪ್ರದಾಯವನ್ನು ಲಾಗಾಯ್ತಿನಿಂದಲೂ ತಪ್ಪದೆ ಅನುಸರಿಸುತ್ತಾ ಬರುತ್ತಿವೆ. ಆದರೆ ಸಂಘ ಪರಿವಾರ? ಸಂಘ ಪರಿವಾರದ ಇತಿಹಾಸವನ್ನು ಕೆದಕಿದಾಗ ರಾಷ್ಟ್ರಧ್ವಜ ಮತ್ತು ಸ್ವಾತಂತ್ರ್ಯ ಚಳವಳಿಗಳಿಗೆ ಸಂಬಂಧಿಸಿದಂತೆ ಭಾರೀ ಸ್ವಾರಸ್ಯಕರ ಅಂಶಗಳು ಹೊರಬೀಳುತ್ತವೆ. 1925ರಲ್ಲಿ ಆರೆಸ್ಸೆಸ್ ಸ್ಥಾಪನೆಯಾದ ಸಮಯದಲ್ಲಿ ಅದಕ್ಕೆ ಸ್ಫೂರ್ತಿಯಾಗಿರುವುದೇ ಅಂದು ಯುರೋಪಿನ ಫ್ಯಾಶಿಸ್ಟ್ ಮತ್ತು ನಾಝಿ ಪಕ್ಷಗಳು ಅಳವಡಿಸಿಕೊಂಡಿದ್ದ ‘ಏಕಧ್ವಜ, ಏಕ ನಾಯಕ, ಏಕ ಸಿದ್ಧಾಂತ’ ಎಂಬ ರಣಘೋಷ.ಅಲ್ಲಿಂದಲೇ ‘ಭಗವಾಧ್ವಜ, ಸರ್ವಾಧಿಕಾರ ಮತ್ತು ಹಿಂದೂರಾಷ್ಟ್ರ’ ಎಂಬ ಗುರಿ ಹುಟ್ಟಿಕೊಂಡಿದೆ. 1929ರಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನ ಸಭೆ ತ್ರಿವರ್ಣಧ್ವಜವನ್ನು ರಾಷ್ಟ್ರಧ್ವಜವೆಂದು ಘೋಷಿಸುವ ನಿರ್ಣಯ ಕೈಗೊಂಡಾಗ ಆರೆಸ್ಸೆಸ್ ಕ್ಯಾಂಪ್‌ನಿಂದ ಕಟುವಾದ ಟೀಕೆಗಳು ವ್ಯಕ್ತವಾಗಿದ್ದವು. ಆರೆಸ್ಸೆಸ್‌ನ ಸಂಸ್ಥಾಪಕರೂ ಅಂದಿನ ಮುಖ್ಯಸ್ಥರೂ ಆಗಿದ್ದ ಹೆಡ್ಗೇವಾರ್ ಎಲ್ಲಾ ಶಾಖೆಗಳಿಗೆ ಸುತ್ತೋಲೆಯೊಂದನ್ನು ಕಳುಹಿಸಿ ಭಗವಾಧ್ವಜವನ್ನೇ ರಾಷ್ಟ್ರಧ್ವಜವೆಂದು ಆರಾಧಿಸುವಂತೆ ಕರೆಕೊಟ್ಟಿದ್ದರು. ಆರೆಸ್ಸೆಸ್ ಮುಖವಾಣಿ ‘ಆರ್ಗನೈಸರ್’ ಕೂಡಾ ರಾಷ್ಟ್ರಧ್ವಜವನ್ನು ಹೀಗಳೆಯುವ ಲೇಖನ, ಸಂಪಾದಕೀಯ ಗಳನ್ನು ಪುಂಖಾನುಪುಂಖವಾಗಿ ಪ್ರಕಟಿಸುತ್ತಾ ಬಂದಿತ್ತು. ಉದಾಹರಣೆಗೆ 1947ರ ಆಗಸ್ಟ್ 14ರ ಸಂಚಿಕೆ ದಿಲ್ಲಿಯ ಕೆಂಪುಕೋಟೆಯಲ್ಲಿ ಭಗವಾಧ್ವಜವನ್ನೇ ಹಾರಿಸಬೇಕೆಂದು ಒತ್ತಾಯಿಸುತ್ತಾ ‘‘ವಿಧಿಲೀಲೆಯ ಫಲವಾಗಿ ಅಧಿಕಾರಕ್ಕೆ ಬಂದಿರುವ ಜನ ತ್ರಿವರ್ಣಧ್ವಜವನ್ನು ನಮ್ಮ ಕೈಗಿತ್ತರೂ ಹಿಂದೂಗಳೆಂದೂ ಅದನ್ನು ತಮ್ಮದೆಂದು ಪರಿಗಣಿಸುವುದಿಲ್ಲ, ಅದನ್ನು ಗೌರವಿಸುವುದಿಲ್ಲ. ತ್ರಿವರ್ಣದತ್ರಿ ಎಂಬ ಪದವೆ ಅನಿಷ್ಟಕಾರಕ. ಮೂರು ಬಣ್ಣಗಳ ಬಾವುಟ ಮಾನಸಿಕವಾಗಿ ತುಂಬಾ ಕೆಟ್ಟ ಪರಿಣಾಮ ಉಂಟುಮಾಡಲಿದೆ. ಅದು ರಾಷ್ಟ್ರಕ್ಕೆ ಹಾನಿಕಾರಕ’’ ಎಂದೆಲ್ಲ ಬರೆದಿತ್ತು. ಸಂಘ ಪರಿವಾರದ ಧೋರಣೆಯಲ್ಲಿ ಎಳ್ಳಷ್ಟೂ ಬದಲಾವಣೆಯಾಗಿಲ್ಲ ಎಂಬುದಕ್ಕೆ ಆರೆಸ್ಸೆಸ್‌ನ ಅಖಿಲ ಭಾರತ ಪ್ರಚಾರ ಪ್ರಮುಖ್ ಆಗಿರುವ ಮನಮೋಹನ ವೈದ್ಯ ಎಂಬವರ ಇತ್ತೀಚೆಗಿನ ಹೇಳಿಕೆಯೆ ಸಾಕ್ಷಿ. 2015ರ ಸೆಪ್ಟಂಬರ್‌ನಲ್ಲಿ ಚೆನ್ನೈ ನಗರದಲ್ಲಿ ದಕ್ಷಿಣ ವಲಯದ ಸುಮಾರು 80 ಸುಪ್ರಸಿದ್ಧ ಅಂಕಣಕಾರರಿಗಾಗಿ ನಡೆಸಿದ ವಿಚಾರ ಸಂಕಿರಣವೊಂದರ ವೇಳೆ ತ್ರಿವರ್ಣಧ್ವಜಕ್ಕೆ ಆಕ್ಷೇಪ ಎತ್ತಿದ ವೈದ್ಯ, ‘‘ಭಾರತೀಯ ಸಮಾಜದ ವಿಶಿಷ್ಟತೆಯ ಪ್ರತೀಕವಾಗಿ ಭಗವಾಧ್ವಜವೇ ರಾಷ್ಟ್ರಧ್ವಜವಾಗಿದ್ದರೆ ಅತ್ಯುತ್ತಮವಿತ್ತು’’ ಎಂದಿದ್ದಾರೆೆ. ಇಲ್ಲಿ ಆತ ಆರೆಸ್ಸೆಸ್‌ನ ಮಾಜಿ ಸರಸಂಘಚಾಲಕ ಗೋಳ್ವಲ್ಕರ್ 1946ರಲ್ಲಿ ‘‘ನಮ್ಮ ಶ್ರೇಷ್ಠ ಸಂಸ್ಕೃತಿಯನ್ನು ಸಂಪೂರ್ಣವಾಗಿ ಪ್ರತಿನಿಧಿಸುವುದೆ ಭಗವಾಧ್ವಜ’’ ಎಂದು ಹೇಳಿರುವುದನ್ನೇ ಪುನರುಚ್ಚರಿಸಿರುವುದನ್ನು ಗಮನಿಸಬೇಕು.
1948ರಲ್ಲಿ ಗಾಂಧಿ ಹತ್ಯೆಯ ನಂತರದಲ್ಲಿ ಸಿಹಿ ಹಂಚಿಕೊಂಡು ಹುಚ್ಚೆದ್ದು ಕುಣಿದಿದ್ದ ಚಡ್ಡಿಗಳು ದೇಶದ ಹಲವಾರು ಭಾಗಗಳಲ್ಲಿ ತ್ರಿವರ್ಣಧ್ವಜವನ್ನು ಕಾಲಿನಿಂದ ಮೆಟ್ಟಿ ತುಳಿದಿದ್ದ ವಿಚಾರ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಗಾಂಧಿ ಹತ್ಯೆಯ ಬಳಿಕ ಆರೆಸ್ಸೆಸ್ ಮೇಲೆ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಭಾರತ ಸರಕಾರ ಹಿಂದೆಗೆದುಕೊಂಡದ್ದೆ ರಾಷ್ಟ್ರಧ್ವಜವನ್ನು ಗೌರವಿಸುವ ಷರತ್ತಿನ ಮೇರೆಗೆ. ಆದರೂ ನಂತರದ ದಿನಗಳಲ್ಲಿ ಭಗವಾಧ್ವಜವೇ ತಮ್ಮ ಹಿಂದೂ ರಾಷ್ಟ್ರಧ್ವಜ ಎಂದು ಪ್ರತಿಪಾದಿಸುತ್ತ ರಾಷ್ಟ್ರಧ್ವಜವನ್ನು ಹಾರಿಸುವಾಗಲೂ ಅದನ್ನು ರಾಷ್ಟ್ರಧ್ವಜಕ್ಕಿಂತಲೂ ಹೆಚ್ಚು ಎತ್ತರದಲ್ಲಿ ಹಾರಿಸುತ್ತ ಬರಲಾಗಿದೆ. ನಾಗಪುರದಲ್ಲಿರುವ ಆರೆಸ್ಸೆಸ್‌ನ ಕೇಂದ್ರ ಕಚೇರಿ ರೇಶಮ್‌ಬಾಗ್‌ನಲ್ಲಿ ಇಂದಿಗೂ ರಾಷ್ಟ್ರಧ್ವಜವನ್ನು ಹಾರಿಸುವ ಕ್ರಮ ಇಲ್ಲ.
ಸಂವಿಧಾನವನ್ನು ಧಿಕ್ಕರಿಸಿ ಮನುಸ್ಮತಿಯನ್ನು ಎತ್ತಿಹಿಡಿಯುವ, ತ್ರಿವರ್ಣಧ್ವಜವನ್ನು ತಿರಸ್ಕರಿಸಿ ಭಗವಾಧ್ವಜಕ್ಕೆ ವಂದಿಸುವ ಸಂಘ ಪರಿವಾರ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕೊಟ್ಟಿರುವ ಕೊಡುಗೆ ಶೂನ್ಯ. ವಾಸ್ತವವಾಗಿ ಋಣಾತ್ಮಕ. ಏಕೆಂದರೆ ಇವರು ಸ್ವಾತಂತ್ರ್ಯ ಹೋರಾಟವನ್ನು ವಿರೋಧಿಸಿ ಬ್ರಿಟಿಷರಿಗೆ ಸಹಾಯ ಮಾಡಿದವರು. ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಅಲ್ಲಲ್ಲಿ ನೇಮಕಾತಿ ಕೇಂದ್ರಗಳನ್ನು ತೆರೆದು ಬ್ರಿಟಿಷ್ ಸೇನೆಗೆ ಭಾರತೀಯ ಯುವಕರನ್ನು ಭರ್ತಿ ಮಾಡಿಕೊಟ್ಟವರಿವರು! ಗೋಳ್ವಲ್ಕರ್ ಕೊಟ್ಟಿದ್ದ ಕರೆಯೊಂದನ್ನು ನೋಡಿ: ‘‘ಹಿಂದೂಗಳೆ! ಬ್ರಿಟಿಷರ ವಿರುದ್ಧ ಕಾದಾಡಿ ನಿಮ್ಮ ಶಕ್ತಿಯನ್ನು ಪೋಲು ಮಾಡುವ ಬದಲು ಅದನ್ನು ಆಂತರಿಕ ಶತ್ರುಗಳಾದ ಮುಸ್ಲಿಮರು, ಕ್ರೈಸ್ತರು ಮತು ್ತಕಮ್ಯೂನಿಸ್ಟರ ವಿರುದ್ಧ ಬಳಸಿ.’’ ಈ ಹಿನ್ನೆಲೆಯಲ್ಲಿ 1942ರ ‘ಕ್ವಿಟ್‌ಇಂಡಿಯ’ ಚಳವಳಿಯ ಕಾಲದಲ್ಲಿ ಸಿಂಧ್, ಬಂಗಾಳ ಪ್ರಾಂತಗಳಲ್ಲಿ ಮುಸ್ಲಿಮ್ ಲೀಗ್ ಜೊತೆಗೂಡಿ ಸಮ್ಮಿಶ್ರ ಸರಕಾರ ನಡೆಸುತ್ತಿದ್ದವರು ಯಾರೆಂದು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.
ಆರೆಸ್ಸೆಸ್‌ನ ಸಂಸ್ಥಾಪಕ ಹೆಡ್ಗೇವಾರ್ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿರಸ್ಕಾರಯುತವಾಗಿ ‘‘ಜೈಲು ಶಿಕ್ಷೆ ಅನುಭವಿಸುವುದು ನಕಲಿ ದೇಶಪ್ರೇಮ’’ ಎಂದು ಹೇಳಿದವರು.ಜೈಲು ಶಿಕ್ಷೆ ತಪ್ಪಿಸುವುದಕ್ಕೋಸ್ಕರ ಬ್ರಿಟಿಷರ ಅಡಿಯಾಳಾಗಲು ಸಿದ್ಧ ಎಂಬರ್ಥದ ಪತ್ರ ಬರೆದಿದ್ದ ಸಾವರ್ಕರ್‌ರನ್ನು ಆತನ ಅನುಯಾಯಿಗಳು ‘ವೀರ’ನೆಂದು ಕೊಂಡಾಡು ವುದು ಬಹುಶಃ ಇದೇ ಕಾರಣಕ್ಕಾಗಿ ಇರಬೇಕು. ಇನ್ನು ಗೋಳ್ವಲ್ಕರ್ ಅಂತೂ ಭಗತ್ ಸಿಂಗ್, ಚಂದ್ರಶೇಖರ್ ಆಝಾದ್, ಅಶ್ಫಾಕುಲ್ಲ್ಲಾ ಖಾನ್‌ರಂತಹ ಹೋರಾಟಗಾರರನ್ನು ‘‘......ಇಂಥವರು ಆದರ್ಶನೀಯ ವ್ಯಕ್ತಿಗಳಲ್ಲ. ಆದರ್ಶವನ್ನು ಸಾಧಿಸುವಲ್ಲಿ ವಿಫಲರಾದ ಅವರಲ್ಲಿ ಮಾರಣಾಂತಿಕ ದೋಷ ಇದೆ’’ ಎಂದು ಮೂದಲಿಸಿದ್ದರು. ದೊಡ್ಡ ವಿಪರ್ಯಾಸ ಏನೆಂದರೆ ಇದೇ ಸಂಘ ಪರಿವಾರಿಗರು ಇಂದು ಹೋದಲ್ಲಿ ಬಂದಲ್ಲಿ ಅದೇ ಭಗತ್ ಸಿಂಗ್ ಫೋಟೊ ಇಟ್ಟುಕೊಂಡು ಭಜನೆ ಮಾಡಲಾರಂಭಿಸಿದ್ದಾರೆ! ಕಪಟ ನಾಟಕಗಳಿಗೂ ಒಂದು ಮಿತಿ ಬೇಡವೆ! ಮಸೀದಿಗಳ ಮೇಲೆ ತ್ರಿವರ್ಣಧ್ವಜವನ್ನು ಹಾರಿಸಲೆತ್ನಿಸುವವರೇ ಬಾಬರಿ ಮಸೀದಿಕೆಡವಿದ ಮೇಲೆ ಭಗವಾಧ್ವಜವನ್ನು ಊರುತ್ತಾರೆ! ತ್ರಿವರ್ಣಧ್ವಜವನ್ನು ವಿರೋಧಿಸುತ್ತಲೇ ಕಾಶ್ಮೀರದಲ್ಲಿ ಅದೇ ತ್ರಿವರ್ಣಧ್ವಜವನ್ನು ಹಾರಿಸಲೆತ್ನಿಸುತ್ತಾರೆ! ಗಾಂಧಿ, ಅಂಬೇಡ್ಕರ್, ಭಗತ್ ಸಿಂಗ್, ಫುಲೆ ದಂಪತಿ ಮೊದಲಾದವರ ಚಿಂತನೆಗಳ ಬಗ್ಗೆ ತೀವ್ರ ಅಸಹಿಷ್ಣುತೆ ಹೊಂದಿರುವವರಿಂದಲೇ ಇಂದು ಅವರ ಆರಾಧನೆ ನಡೆಯುತ್ತದೆ! ಅಷ್ಟಕ್ಕೇ ನಿಲ್ಲಿಸದೆ ಇತಿಹಾಸವನ್ನೂ ತಿರುಚಲು ಹೊರಡುತ್ತಾರೆ. ಉದಾಹರಣೆಗೆ ಅಂಬೇಡ್ಕರರ ಸಂಕಲಿತ ಕೃತಿಗಳನ್ನು ಪ್ರಕಟಿಸುವಾಗ ಹಿಂದೂಧರ್ಮ ಮತ್ತು ಜಾತಿಪದ್ಧತಿ ಬಗ್ಗೆ ತೀಕ್ಷ್ಣ ಟೀಕೆಗಳಿರುವ ಅನೇಕ ಕೃತಿಗಳನ್ನೆ ಕಿತ್ತುಹಾಕುತ್ತಾರೆ! ಇಂತಹ ಬನಾವಟಿಗಳನ್ನು ಮತ್ತು ದುಷ್ಕೃತ್ಯಗಳನ್ನು ಬುದ್ಧಿವಂತರಾದ ಮತದಾರರು ಅರ್ಥ ಮಾಡಿಕೊಳ್ಳದೆ ಇರಲಾರರೆಂದು ಆಶಿಸೋಣ. ***
RSS, freedom movement and the tricolour(ಆಧಾರ:ಶಂಕರ ನಾರಾಯಣನ್‌ರ ಲೇಖನ: )