varthabharthi


ಒರೆಗಲ್ಲು

ಬಹುವಚನದ ಪ್ರತಿನಿಧಿ ರಾಜಶೇಖರ್

ವಾರ್ತಾ ಭಾರತಿ : 21 Jan, 2016


ಡಾ. ಆರ್ಕೆೆ, ಮಣಿಪಾಲ

ಕೊನೆಗೂ ಜಿ.ರಾಜಶೇಖರ್ ತನ್ನ ಸಮಕಾಲೀನ ಸಾಂಸ್ಕೃತಿಕ ಮಹತ್ವದ ಮತ್ತು ಸಾಹಿತ್ಯಕ ಲೇಖನಗಳ ಸಂಕಲನವನ್ನು ಹೊರತಂದಿರುವುದು ಸಂತಸದ ವಿಷಯ. ಅಭಿನವದ ಯು.ಆರ್.ಅನಂತಮೂರ್ತಿ ಗೌರವಮಾಲಿಕೆಯಲ್ಲಿ 13ನೆಯದಾದ 'ಬಹುವಚನ ಭಾರತ' ಪ್ರಜ್ಞಾವಂತರ ಕೈಗೆ ದೊರಕುವಂತಾಗಿದೆ. ಪ್ರಚಾರವಿಮುಖ, ನಿಸ್ಪಹಾತಿನಿಸ್ಪಹ ರಾಜಶೇಖರ್, ಅನಂತಮೂರ್ತಿ ಮಾಲಿಕೆಯಡಿ ಈ ಗ್ರಂಥ ಪ್ರಕಟವಾಗುತ್ತಿರುವುದು ತನಗೇ ಗೌರವ ಅಂದುಕೊಂಡಿದ್ದಾರೆ. 1986ರಿಂದ 2015ರ ವರೆಗಿನ ಒಟ್ಟು ಮೂವತ್ತೆರಡು ಲೇಖನಗಳು ಇಲ್ಲಿವೆ. ಹೆಚ್ಚಿನ ಲೇಖನಗಳು 'ಮಾತುಕತೆ'ಯಲ್ಲಿ ಪ್ರಕಟವಾದುವು. ಇಲ್ಲಿರುವ ಲೇಖನಗಳ ಐದಾರು ಪಾಲು ಹೆಚ್ಚಿನ ಲೇಖನಗಳು ಇನ್ನೂ ಸಂಕಲನವಾಗಿ ಹೊರಬರಬೇಕಾಗಿದೆ. ಬೆತ್ತಲೆ ಸೇವೆ ಕುರಿತ ಅನಂತಮೂರ್ತಿಯ ವಿಚಾರಗಳ ವಿಶ್ಲೇಷಣೆ, ಜನ್ನನ ಯಶೋಧರ ಚರಿತೆಯ ದ್ವಂದ್ವಾತ್ಮಕ ವಿನ್ಯಾಸ ಮುಂತಾದ ಹಲವಾರು ಅನನ್ಯವೂ ಸ್ವೋಪಜ್ಞವೂ ಆದ ಬರಹಗಳು ಸಂಕಲಿತವಾಗಬೇಕಿತ್ತು. ಕನ್ನಡ ಓದುಗರ ಬುದ್ಧಿಶಕ್ತಿಗೆ ಸವಾಲಾಗಬಲ್ಲ ಅಥವಾ ಬೇರೊಂದೇ ಆಯಾಮದಿಂದ ವಿಶ್ಲೇಷಿಸಬೇಕಾದ ಅಮೂಲ್ಯ ಲೇಖನಗಳಲ್ಲಿ ಸುಮಾರು ಇಪ್ಪತ್ತು ಇಪ್ಪತ್ತೈದು ಲೇಖನಗಳನ್ನು ಕಲೆ ಹಾಕಿ ಸಂಕಲನ ತರಬೇಕೆಂಬ ನನ್ನ ಉದ್ದೇಶವನ್ನು ರಾಜಶೇಖರ್ ದಶಕಗಳಾಚೆ ತಳ್ಳಿಹಾಕಿದ್ದರು. ತನ್ನ ಬರಹಗಳ ಬಗ್ಗೆ ಸಂಕೋಚ ಭಾವನೆ ಅವರದು. 'ಕಾರಂತರು ಮತ್ತು ಕಮ್ಯುನಿಸ್ಟರು' ಮುಂತಾದ ಸುದೀರ್ಘ ಲೇಖನಗಳ ಬಗ್ಗೆ ಮಾತಾಡಿದರೆ, ನನಗೆ ಅದನ್ನು ಮತ್ತೆ ಪ್ರಕಟಿಸಲು ನಾಚಿಕೆಯೆನಿಸುತ್ತದೆ ಎಂದವರು ಅವರು. ಜೀವವಿಮಾ ನಿಗಮದಲ್ಲಿ ಗುಮಾಸ್ತರಾಗಿ ನಿವೃತ್ತರಾದ ರಾಜಶೇಖರ್ ಮೆದುಳಿಗೆ ನಿವೃತ್ತಿ ಯಾವ ಕಾಲಕ್ಕೂ ಇರಲಾರದು. ಅವರ ಮುಖ ಪರಿಚಯವಾಗುವ ಮೊದಲೇ ಅವರು ಎಂ.ಗೋಪಾಲಕೃಷ್ಣ ಅಡಿಗರ 'ಸಾಕ್ಷಿ'ಯಲ್ಲಿ, ಕ್ರಮೇಣ ಅನಂತಮೂರ್ತಿ ಅವರ 'ರುಜುವಾತು'ವಿನಲ್ಲಿ ಬರೆಯುತ್ತ ಬಂದುದನ್ನು ಗಮನಿಸಿದ್ದೆ. ಯಶೋಧರ ಚರಿತೆಯ ದ್ವಂದ್ವಾತ್ಮಕ ವಿಶ್ಲೇಷಣೆ ಅಮೋಘವಾದುದು; ಸಾಂಪ್ರದಾಯಿಕ ವಿಮರ್ಶಕರು, ವಿದ್ವಾಂಸರು ಗಮನಿಸದೆ ಹೋದ ಅಪೂರ್ವ ವಿಶ್ಲೇಷಣೆಯಾಗಲಿ, ಅಗಾಧ ಕ್ಷೇತ್ರ ಕಾರ್ಯ ಮತ್ತು ಸತತ ಅಧ್ಯಯನದ ಹಿನ್ನೆಲೆಯುಳ್ಳ 'ಕಾಗೋಡು ಸತ್ಯಾಗ್ರಹ'ವಾಗಲಿ ಪಿಎಚ್‌ಡಿ ಇಲ್ಲವೆ ಡಿ.ಲಿಟ್. ಪ್ರಶಸ್ತಿ ತಂದು ಕೊಡಬೇಕಾಗಿದ್ದುದು. 'ಕಾಗೋಡು ಸತ್ಯಾಗ್ರಹ'ಕ್ಕೆ ಸರಿಸಾಟಿಯಾದ ಇನ್ನೊಂದು ಗ್ರಂಥ ಮಹಾನ್ ಹೋರಾಟಗಾರ್ತಿ ಗೋದಾವರಿ ಪರುಳೇಕರ್ ಅವರ 'ಅಜಿಜಿ' ್ಕಛಿಟ್ಝಠಿ
' ('ಮಾನವ ಎಚ್ಚೆತ್ತಾಗ') ಮಾತ್ರ. 1990ರಿಂದೀಚೆಗೆ ಜೀವವಿಮಾ ನಿಗಮದ ನೌಕರರ ಸಂಘದ ಆಶ್ರಯದಲ್ಲಿ ನಾವೆಲ್ಲಾ ಸೇರಿ ಸ್ಥಾಪಿಸಿದ 'ಕೋಮುವಾದ ವಿರೋಧ ವೇದಿಕೆ'ಗೆ (ಇದೀಗ 'ಕೋಮು ಸೌಹಾರ್ದ ವೇದಿಕೆ' ಎಂಬ ಹೆಸರಾಗಿದೆ) ಜೀವ ತುಂಬುತ್ತಿರುವವರು ರಾಜಶೇಖರ್. ಸಂಘ ಪರಿವಾರದ ಪ್ರೊ.ಎಲ್.ಎಸ್. ಶೇಷಗಿರಿರಾಯರು ಉಡುಪಿಯಲ್ಲಿ ಜರಗಿದ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದುದನ್ನು ವಿರೋಧಿಸಿ, ಅದಕ್ಕೆ ಮುನ್ನ ಸೌಹಾರ್ದ ಸಾಹಿತ್ಯ ಸಮ್ಮೇಳನ ಜರಗಿಸಲು ಸ್ಫೂರ್ತಿ ನೀಡಿದ ರಾಜಶೇಖರ್ ಹೊಸ, ಜನಪರ ಆಶಯಗಳುಳ್ಳ ಯಾವುದೇ ಚಳವಳಿಯನ್ನು, ಸಂಘಟನೆಯನ್ನು ಬರಮಾಡಿಕೊಳ್ಳುವ ಧೀಮಂತ. ಸಮುದಾಯ ಸಾಂಸ್ಕೃತಿಕ ಸಂಘಟನೆಯಾಗಲಿ, ಬಂಡಾಯ ಸಾಹಿತ್ಯ ಸಂಘಟನೆಯಾಗಲಿ ರೂಪುಗೊಂಡಾಗ ಪತ್ರಿಕೆಗಳಲ್ಲಿ ಇವುಗಳ ಪ್ರಸ್ತುತತೆ ಕುರಿತು ಬರೆದವರು. ನಾವೆಲ್ಲಾ ಮೊದಮೊದಲ ಸಂಕಲನಗಳನ್ನು ವಿಮರ್ಶೆಯಿರಲಿ, ಕವಿತೆಯಿರಲಿ - ಅವರೊಮ್ಮೆ ಓದಿ 'ಪ್ರಮಾಣ ಪತ್ರ' ನೀಡಿದರಷ್ಟೇ ಪ್ರಕಟಿಸಲು ಮುಂದಡಿಯಿಡುತ್ತಿದ್ದೆವು. ಇದೀಗ ರಾಜಶೇಖರ್ 'ಗೌರಿ ಲಂಕೇಶ್' ಪತ್ರಿಕೆಯಲ್ಲಿ ನಿಯತವಾಗಿ ಬರೆಯುತ್ತ ಬಂದಿದ್ದಾರೆ. ಅಪಾರ ಸಂಖ್ಯೆಯಲ್ಲಿ ಓದಿದ ಪುಸ್ತಕಗಳ ವಿಚಾರಗಳನ್ನು ಟಿಪ್ಪಣಿ ಹಾಕಿಕೊಳ್ಳದೆ ನೆನಪಿಗೆ ತಂದುಕೊಂಡು, ಇನ್ನೊಂದು ಭಾಷೆಯ ಸಂವಾದಿ ವಿಚಾರಗಳುಳ್ಳ ಗ್ರಂಥದೊಂದಿಗೆ ಅರ್ಥಪೂರ್ಣವಾಗಿ ಹೋಲಿಸಿ ಬರೆಯುವಾಗ ತೋರುವ ಸಂಯಮ, ತೌಲನಿಕಪ್ರಜ್ಞೆ ಅವರಿಗಷ್ಟೇ ಸಾಧ್ಯ. ಕಾರಂತ, ಅಡಿಗ, ಲಂಕೇಶ, ಗಂಗಾಧರ ಚಿತ್ತಾಲ, ಮಾಂಟೊ, ಷ. ಶೆಟ್ಟರ- ಹೀಗೆ ಇವರ ಅಧ್ಯಯನ ವ್ಯಾಪ್ತಿ ವಿಸ್ತಾರವಾದುದು; ವಿಶ್ಲೇಷಣಾ ಸಾಮರ್ಥ್ಯ ಸೂಕ್ಷ್ಮಾತಿಸೂಕ್ಷ್ಮವಾದುದು. ಕೋಮುಗಲಭೆಗೆ ಹೆಸರಾದ ಕರಾವಳಿ ಜಿಲ್ಲೆಗಳಲ್ಲಿ ಕೋಮುದ್ವೇಷದಿಂದ ಗಲಭೆ- ಹಿಂಸೆಯಾಗಿ ಪತ್ರಿಕಾ ವರದಿ ಏನೇಬರಲಿ; ರಾಜಶೇಖರ್ ಆ ಜಾಗಗಳಿಗೆ ಭೇಟಿಯಿತ್ತು ನೊಂದವರೊಂದಿಗೆ ಚರ್ಚಿಸಿ ನೀಡುವ ಚಿತ್ರ ಮಾತ್ರ ಯಥಾರ್ಥವಾದುದು; ಚಿಂತನಾರ್ಹವಾದುದು. ಹಾಜಬ್ಬ- ಹಸನಬ್ಬ ಪ್ರಕರಣವಿರಲಿ, ಕೋಡಿಯ ಘಟನೆಯಿರಲಿ- ಇಂಥ ಹತ್ತಾರು ಕೋಮುದ್ವೇಷದ ಪ್ರಕರಣಗಳನ್ನು ಯಥಾವತ್ತಾಗಿ ಬಯಲಿಗೆಳೆದು ಸಮಾಜದ ಸ್ವಾಸ್ಥವನ್ನು ಕಾಪಾಡುವ ಚಿಂತನೆಯನ್ನು ಸಮಾಜದ ಮುಂದಿಡುವ ಅವರ ಶ್ರಮ ಸಾರ್ಥಕ.
'ಬಹುವಚನ ಭಾರತ'ದ ಎಲ್ಲಾ ಲೇಖನಗಳ ಬಗ್ಗೆ ಸಮಗ್ರ ವಿಶ್ಲೇಷಣೆ ನೀಡಲಾರೆ; ಅದು ನನ್ನ ಸಾಮರ್ಥ್ಯಕ್ಕೆ ಮೀರಿದ್ದು ಕೂಡ. ಹಾಗಾಗಿ, ಸ್ಥೂಲವಾದ ಪರಿಚಯವನ್ನಷ್ಟೇ ಮಾಡಲೆತ್ನಿಸುತ್ತೇನೆ.
ಅಮೆರಿಕ ಇವತ್ತು ಜಗತ್ತಿನ ಹಿರಿಯಣ್ಣನಾಗಿರುವುದು ಅದರ ತೋಳ್ಬಲದಿಂದ; ಅಮೆರಿಕದ ಎಗ್ಗಿಲ್ಲದ ಉಪಭೋಗದ ಸಂಸ್ಕೃತಿ ಸಾಧ್ಯವಾದದ್ದು ಕೂಡ ಅದರ ಅಪಾರ ಮಿಲಿಟರಿ ಬಲದಿಂದಲೇ ಎನ್ನುವುದನ್ನು ನಮ್ಮ ಬುದ್ಧಿಜೀವಿಗಳು ಮರೆತಿದ್ದಾರೆ (26); ಯಾರಿಗೂ ಯಾವ ಗ್ರಾಮವನ್ನೂ 'ಕುಗ್ರಾಮ' ಎಂದು ಕರೆಯುವ ಹಕ್ಕಿಲ್ಲ ಎನ್ನುವ ನಿಲುವುಳ್ಳ ರಾಜಶೇಖರ, ಯಾವ ಗ್ರಾಮವೂ ಗ್ರಾಮದ ಎಲ್ಲ ಗುಣಲಕ್ಷಣಗಳನ್ನು ಉಳಿಸಿಕೊಂಡಿಲ್ಲ (29) ಎಂದು ತೀರ್ಮಾನಿಸಬಲ್ಲರು.
 ಈಟನ್ನನ 'ಬಿಜಾಪುರದ ಸೂಫಿಗಳು' ಗ್ರಂಥದ ವಿಶ್ಲೇಷಣೆ ಅವರ ನಿಶಿತಮತಿಗೆ ಉತ್ತಮ ನಿದರ್ಶನ. ಸೂಫೀ ಪಂಥದ ಅಂತಸ್ಸತ್ವ ಇರುವುದು ಅದರ ಅನುಭಾವೀ ದಾರ್ಶನಿಕತೆಯಲ್ಲಿ (45) ಎಂದು ಸಮರ್ಪಕವಾಗಿ ಗ್ರಹಿಸುವ ರಾಜಶೇಖರ್, ಸೂಫಿಗಳ ದರ್ಗಾಗಳಿಗೆ ಭಕ್ತಿಯಿಂದ ನಡಕೊಳ್ಳುವವರಲ್ಲಿ ಹೆಂಗಸರೇ ಹೆಚ್ಚು - ಅವರಲ್ಲೂ ಕೆಳಜಾತಿ ವರ್ಗದವರು ಎಂದು ಹೇಳುತ್ತಾ ಕಾರಣಗಳನ್ನು ಶೋಧಿಸುತ್ತಾರೆ. ಸೂಫಿಗಳ ಕುರಿತು ನಮ್ಮ ಸಂಶೋಧಕರು - ಚಿದಾನಂದ ಮೂರ್ತಿ ಅಂಥವರು ಕೂಡ - ಉಲ್ಲೇಖಿಸದಿರುವುದು ಅವರ ಸುಪ್ತ ಮತೀಯವಾದಿ ಒಲವುಗಳಿಂದಾಗಿ ಎಂದು ತರ್ಕಬದ್ಧವಾಗಿ ವಿಶ್ಲೇಷಿಸುತ್ತಾರೆ. 'ಶೂದ್ರ'ದಲ್ಲಿ ಹಿಂದೊಮ್ಮೆ ಪ್ರೊ.ಷ.ಶೆಟ್ಟರ ಬರೆದಿದ್ದು ಹೀಗೆ: ಮೈಸೂರು ಸರಕಾರ ಪ್ರಕಟಿಸಿದ, 1094 ಪುಟಗಳ, ಕನ್ನಡ - ಇಂಗ್ಲಿಷ್ ಆವೃತ್ತಿಗಳುಳ್ಳ 'ಓಚ್ಟ್ಞಠಿ ಜ್ಟಟ್ಠಜ ಛಿ ಅಜಛಿ' ಗ್ರಂಥದಲ್ಲಿ ಕರ್ನಾಟಕವನ್ನಾಳಿದ ಮುಸ್ಲಿಮ್ ಅರಸು ಮನೆತನಗಳ ಪ್ರಸ್ತಾಪವೇ ಇಲ್ಲ! (ಶೂದ್ರ: 5/13 (1987)) ಇಷ್ಟಾಗಿಯೂ 'ಮುಂದಿನ ಜನಾಂಗದ ಸೂಕ್ಷ್ಮ ಪರಿಶೀಲನೆಗಾಗಿ ಬರೆಯಲಾದ ಗ್ರಂಥವಿದು.'
ಭಾರತದ ಮತಧರ್ಮಗಳ ವೈವಿಧ್ಯದಿಂದಲೇ ಸೆಕ್ಯುಲರ್ ಎಂಬ ಶಬ್ದಕ್ಕೆ 'ಧರ್ಮ ನಿರಪೇಕ್ಷ' ಎಂಬ ಅರ್ಥದ ಜತೆ ಸರ್ವ ಧರ್ಮ ಸಮಾನತೆ ಎಂಬ ಅರ್ಥವಿದೆ (104); ಕೋಮುಗಲಭೆಯ ಬಗ್ಗೆ ನಿರೂಪಿಸುತ್ತಾ 'ಒಬ್ಬನ ತಪ್ಪಿಗೆ ಅವನ ಸಮುದಾಯವನ್ನು ಹೊಣೆಗಾರನನ್ನಾಗಿ ಮಾಡುವುದು ಅನ್ಯಾಯ; ವ್ಯಕ್ತಿಯೊಬ್ಬ ಮಾಡಿದ ತಪ್ಪಿಗೆ ಅವನು ಮಾತ್ರ ಹೊಣೆಗಾರ' - ಎಂಬ ಸದ್ವಿವೇಕದ ನುಡಿಗಳೂ ಇಲ್ಲಿವೆ (89).
    ಕೆ.ವಿ. ಸುಬ್ಬಣ್ಣನವರ ಜೊತೆ ಮಾತುಕತೆ ಅನನ್ಯವೂ ಸೂಕ್ಷ್ಮವೂ ಆದ ಬಿಚ್ಚು ಮಾತಿನ ಅಪರೂಪದ ಸಂದರ್ಶನ. ಎ. ಕೆ. ರಾಮಾನುಜನ್, ಷ. ಶೆಟ್ಟರ್, ಲಂಕೇಶ್ ಗ್ರಂಥಗಳ ವಿಶ್ಲೇಷಣೆಯೂ ತೂಕದ್ದಾಗಿವೆ. 'ಚಿತ್ರಪಟ ರಾಮಾಯಣದ ಐದು ವಕ್ರವ್ಯಗಳು' ತೀರಾ ಈಚಿನ ಲೇಖನ. ಚಿತ್ರಪಟ ರಾಮಾಯಣದ ವಿಭಿನ್ನ ವಕ್ರವ್ಯಗಳು, ರಾಮಾಯಣದ ವಿಭಿನ್ನ ಓದುಗಳಷ್ಟೇ ಅಲ್ಲ, ಅವು ಸತ್ಯವನ್ನು ಚಿತ್ರಿಸುವುದು ಮತ್ತು ಗ್ರಹಿಸುವುದು ಎಂದರೆ ಏನು ಎಂದು ಮಾಡಿದ ಶೋಧನೆಯೂ ಹೌದು (290). ಸಾಮಾನ್ಯ ನಾಟಕಗಳಲ್ಲಿ ದೃಶ್ಯಗಳು ಅರ್ಥವನ್ನು ಬೆನ್ನಟ್ಟಿದರೆ ಉತ್ತರ ರಾಮಚರಿತಂ ಹಾಗೂ ಚಿತ್ರಪಟ ರಾಮಾಯಣದ ವಕ್ರವ್ಯಗಳಲ್ಲಿ ಅರ್ಥವೇ ತನಗೆ ತಕ್ಕ ದೃಶ್ಯಗಳನ್ನು ಕಂಡುಕೊಳ್ಳುತ್ತದೆ (296). ಹೆಳವನ ಕಟ್ಟೆ ಗಿರಿಯಮ್ಮನ ಸಾಂಗತ್ಯದಲ್ಲಿ ರಾಮ - ಸೀತೆಯರು ಸ್ಥಳೀಯರೆಂಬಂತೆ ಚಿತ್ರಿತವಾಗಿದ್ದರೆ; ನಿತ್ಯಜೀವನದ ವಿವರಗಳು, ಕಾಕು ಈ ನಾಡಿನದ್ದು; ಸತ್ಯವನ್ನರಸುವುದೇ ಕಾವ್ಯದ ಕಾಯಕವೇ ಹೊರತು ಅದಕ್ಕೆ ಸಿದ್ಧ ಅಥವಾ ಅಖೈರು ಅರ್ಥ ಇರಲಾರದು (290). ರಾಮಾಯಣ ಒಂದು ಪವಿತ್ರ ಧರ್ಮ ಗ್ರಂಥವೋ ಇತಿಹಾಸ ಗ್ರಂಥವೋ ಆಗಿದ್ದರೆ ಅದರ ನೂರಾರು ವಕ್ರವ್ಯಗಳು ಮತ್ತು ವಿಭಿನ್ನ ಕಥನಗಳನ್ನು ಊಹಿಸಲು ಸಾಧ್ಯವಿಲ್ಲ ಎಂದು ಸರಿಯಾಗಿಯೇ ತೀರ್ಮಾನಕ್ಕೆ ಬರಲಾಗಿದೆ.
ಹೀಗೆ, ಓದುಗನನ್ನು ಬಹುಕಾಲ ಗಾಢವಾಗಿ ಚಿಂತಿಸುವಂತೆ ಪ್ರೇರೇಪಿಸುವ 'ಬಹುವಚನ ಭಾರತ' ನನ್ನನ್ನು ಅಸ್ಗರಲಿ ಎಂಜಿನಿಯರನ್ನೂ ಎ.ಕೆ.ರಾಮಾನುಜನ್ ಅವರನ್ನೂ ಮತ್ತೆ ನೆನೆಯುವಂತೆ ಮಾಡಿದೆ. ದಾವೂದಿ ಬೊಹ್ರಾ ಸಮುದಾಯದ ಅಭ್ಯುದಯಕ್ಕಾಗಿ ಅಪಾರ ಶ್ರಮ ವಹಿಸಿ ಎಂಜಿನಿಯರ್ ಪ್ರಕಾರ ಧರ್ಮ ನಿರಪೇಕ್ಷತೆಯೇ ನಿಜವಾದ ಧರ್ಮ; ಎಲ್ಲಾ ಪ್ರಮುಖ ಧರ್ಮಗಳು (ಕ್ರಿಶ್ಚಿಯನ್ ಮತ್ತು ಮುಸ್ಲಿಮ್) ಬುಡಕಟ್ಟು ಸಮಾಜದ ಆಶೋತ್ತರಗಳನ್ನೂ ಅಭೀಕ್ಷೆಗಳನ್ನೂ ಎತ್ತಿ ಹಿಡಿದವು. ಎ.ಕೆ.ರಾಮಾನುಜನ್ ತನ್ನ ಜನಪದ ಕತೆಗಳ ಸಂಕಲನಕ್ಕೆ 'ಭಾರತದಿಂದ ಜನಪದ ಕತೆಗಳು' ('ಭಾರತದ ಜನಪದ ಕತೆಗಳು' -ಅಲ್ಲ) ಎಂಬ ಶೀರ್ಷಿಕೆಯಿತ್ತರು. ಗಾಂಧೀಜಿಯ ಮೊಮ್ಮಗ ಪ್ರೊ. ರಾಮಚಂದ್ರಗಾಂಧಿ 'ಖಜಿಠಿ ಓಜಿಠ್ಚಿಛ್ಞಿ' ಎಂಬ ಗ್ರಂಥ ಬರೆದರು. (ಇದನ್ನು ಮೊತ್ತ ಮೊದಲು ಓದಿ ಕನ್ನಡದಲ್ಲಿ ಸಮೀಕ್ಷೆ ಬರೆದ ಹೆಮ್ಮೆ ನನ್ನದು.) ರಾಮಚಂದ್ರ ಗಾಂಧಿ 'ರಾಮಜನ್ಮಭೂಮಿ' ಎನ್ನುವ ಜಾಗದ ಒಂದು ಬದಿಯನ್ನು ಈಗಲೂ ಸ್ಥಳೀಯರು 'ಸೀತಾಳ ಅಡುಗೆಮನೆ' ಎಂದು ಕರೆಯುತ್ತಿರುವುದು ಯಾಕೆ? ರಾಮನಿಗೆ ಗುಡಿ ಕಟ್ಟುವ ಭಕ್ತರೇ! ಸೀತಾಳಿಗೆ ಗುಡಿ ಬೇಡವೆ? ಶಬರಿಗೆ? ಗುಹನಿಗೆ? - ಈ ಪ್ರಶ್ನೆಗಳು ಮತ್ತೆ ಮತ್ತೆ ಉದ್ಭವವಾಗುವಂಥ ವಿಶ್ಲೇಷಣೆ ಬಹುವಚನ ಪ್ರವಾದಿ ರಾಜಶೇಖರರಿಂದ ದತ್ತವಾಗಿದೆ. ಇದು ನನ್ನ - ನಿಮ್ಮ ಪುಣ್ಯವಲ್ಲದೆ ಇನ್ನೇನು?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)