ದಲಿತ ಸಾಹಿತ್ಯಕ್ಕೊಂದು ಪ್ರತ್ಯೇಕ ಸೌಂದರ್ಯ ಶಾಸ್ತ್ರ
ದಲಿತ ಸಾಹಿತ್ಯಕ್ಕೆ ಪ್ರತ್ಯೇಕ ಸೌಂದರ್ಯ ಶಾಸ್ತ್ರವೊಂದು ಇದೆಯೆ? ಎನ್ನುವ ಪ್ರಶ್ನೆಯನ್ನು ಕೇಳುವ ಮತ್ತು ಆ ಕುರಿತಂತೆ ಚರ್ಚಿಸುವ ಮಹತ್ವ ಪೂರ್ಣ ಕೃತಿ ಹಿಂದಿಯಲ್ಲಿ ಓಂ ಪ್ರಕಾಶ ವಾಲ್ಮೀಕಿ ಬರೆದಿರುವ ‘ದಲಿತ ಸಾಹಿತ್ಯದ ಸೌಂದರ್ಯ ಶಾಸ್ತ್ರ’. ಇದನ್ನು ಆರ್. ಪಿ. ಹೆಗಡೆಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ದಲಿತ ಸಾಹಿತ್ಯಕ್ಕೆ ತನ್ನದೇ ಆದ ವಿಭಿನ್ನ ಭಾಷೆಯೊಂದು ಇದೆ ಎನ್ನುವುದು ಕನ್ನಡ ಸಾಹಿತ್ಯದಲ್ಲಿ ಚರ್ಚೆಗೆ ಬಂದುದು ದೇವನೂರು ಮಹಾದೇವ ಅವರ ‘ಕುಸುಮಬಾಲೆ’ ಕೃತಿ ಹೊರ ಬಂದಾಗ. ಇದು ದಲಿತ ಸಾಹಿತ್ಯದ ಕುರಿತ ಆಯಾಮವನ್ನೇ ಬದಲಿಸಿತು. ದಲಿತ ಸಾಹಿತ್ಯಕ್ಕೆ ಅವರ ಬದುಕು, ಸಂಸ್ಕೃತಿಗೆ ಪೂರಕವಾದ ತನ್ನದೇ ಭಾಷೆ, ಲಯಗಳಿವೆ ಎನ್ನೋದನ್ನು ತೋರಿಸಿಕೊಟ್ಟ ಕೃತಿ ‘ಕುಸುಮ ಬಾಲೆ’. ಹಲವು ಹಿರಿಯ ವಿಮರ್ಶಕರು ಈ ಕೃತಿಯನ್ನು ಸ್ವೀಕರಿಸುವುದಕ್ಕೇ ಸಿದ್ಧರಿಲ್ಲದ ವಾತಾವರಣ ಕನ್ನಡದಲ್ಲಿತ್ತು. ಕೆಲವರಂತೂ ‘ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಬೇಕು’ ಎಂದು ವ್ಯಂಗ್ಯವಾಡಿದ್ದರು. ಅದೇನೇ ಇರಲಿ, ದಲಿತ ಸಾಹಿತ್ಯಕ್ಕೆ ಇತರ ಮುಖ್ಯವಾಹಿನಿಯಲ್ಲಿರುವ ಸಾಹಿತ್ಯಕ್ಕೆ ಹೊರತಾದ ವಿಶೇಷ ನುಡಿಗಟ್ಟು, ಪ್ರಯೋಗಗಳು ಇವೆ. ಈ ಕಾರಣದಿಂದಲೇ ಕುಸುಮ ಬಾಲೆಯ ಮುಂದೆ ಕನ್ನಡದ ಹಲವು ಹಿರಿಯ ವಿಮರ್ಶಕರು, ಸಾಹಿತಿಗಳು ಕಕ್ಕಾಬಿಕ್ಕಿಯಾದರು. ಈ ನಿಟ್ಟಿನಲ್ಲಿ ಹಿಂದಿಯಲ್ಲಿ ಬಂದಿರುವ ಈ ಕೃತಿ ಇನ್ನಷ್ಟು ಗಂಭೀರವಾಗಿ, ವಿಸ್ತಾರವಾಗಿ ದಲಿತ ಸಾಹಿತ್ಯ ಸೌಂದರ್ಯವನ್ನು ಚರ್ಚಿಸುತ್ತದೆ. ಇದು ಅಕಾಡೆಮಿಕ್ ಆಗಿಯೂ ಅಧ್ಯಯನ ಮಾಡಬಹುದಾದ ಕೃತಿ. ವೈಜ್ಞಾನಿಕ ಶಿಸ್ತು ಇದರ ಹಿಂದೆ ಇದೆ. ದಲಿತ ಸಾಹಿತ್ಯದ ಭಾಷೆ, ಪ್ರತಿಮೆ, ಪ್ರತೀಕ, ಭಾವದ ಅನುಭವ ಪರಂಪರಾವಾದಿ ಸಾಹಿತ್ಯಕ್ಕಿಂತ ಭಿನ್ನವಾಗಿವೆ, ಅದರ ಸಂಸ್ಕಾರಗಳು ಭಿನ್ನವಾಗಿವೆ ಎಂದು ಕೃತಿ ಪ್ರತಿಪಾದಿಸುತ್ತದೆ.