ಎಂಎಂಎಸ್ ವೌನ!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಎಚ್.ಡಿ.ದೇವೇಗೌಡ ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರು ಇತ್ತೀಚೆಗೆ ರಾಜಧಾನಿಯಲ್ಲಿ ಕಮ್ಯುನಿಸ್ಟ್ ಮುಖಂಡ ಎ.ಬಿ.ಬರ್ಧನ್ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಇದರಲ್ಲಿ ಹಲವು ಮಂದಿ ಕಮ್ಯುನಿಸ್ಟ್ ಮುಖಂಡರು ಹಾಗೂ ಹಲವು ಪತ್ರಕರ್ತರು ಕೂಡಾ ಪಾಲ್ಗೊಂಡಿದ್ದರು. ಪ್ರತಿಯೊಬ್ಬರೂ ಬರ್ಧನ್ ಅವರ ಉನ್ನತ ಮಟ್ಟದ ನೈತಿಕತೆಯನ್ನು ಹಾಡಿ ಹೊಗಳಿದರು.ಅವರ ಜತೆಗಿನ ಸಂಬಂಧದ ತುಣುಕುಗಳನ್ನು ಮೆಲುಕು ಹಾಕಿದರು. ಆದರೆ ಮಾಧ್ಯಮ ಮಾತ್ರ ಮನಮೋಹನ್ ಸಿಂಗ್ ಪ್ರತಿಕ್ರಿಯೆಗೆ ಕಾದು ಕೂತಿತ್ತು. ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನಲ್ಲಿ ಮಾಡಿದ ಭಾಷಣದಲ್ಲಿ, ಸಿಂಗ್ ಅವರನ್ನು ಟೀಕಿಸಿದ್ದಕ್ಕೆ ಪ್ರತಿಕ್ರಿಯೆ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿತ್ತು.ಆದರೆ ಎರಡೂವರೆ ಗಂಟೆಯ ಕಲಾಪದ ಕೊನೆಯಲ್ಲಿ ಎಂಎಂಎಸ್‌ಗೆ ಗಂಟಲು ತೊಂದರೆ ಇರುವ ಕಾರಣ ಅವರು ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಘೋಷಿಸಲಾಯಿತು.ಬಹು ನಿರೀಕ್ಷೆ ಹೊಂದಿದ್ದ ಎಲ್ಲ ಮಾಧ್ಯಮಗಳಿಗೆ ನಿರಾಸೆಯಾಯಿತು.ಒಬ್ಬ ಪತ್ರಕರ್ತ ಅದನ್ನು, ಬರ್ಧನ್ ಜೀವಂತವಿದ್ದಾಗ ಎಂಎಂಎಸ್, ಅಣ್ವಸ್ತ್ರ ಒಪ್ಪಂದಕ್ಕೆ ಸಹಿ ಮಾಡುವ ಮೂಲಕ ಕಮ್ಯುನಿಸ್ಟರಿಗೆ ಮೋಸಮಾಡಿದರು.ಅವರ ನಿಧನದ ಬಳಿಕ ಎಂಎಂಎಸ್ ನಮ್ಮ ಜೊತೆ ಮಾತನಾಡದೆ ನಮಗೆ ಮೋಸಮಾಡಿದರು ಎಂಬ ಹಾಸ್ಯಚಟಾಕಿ ಹಾರಿಸಿದರು.
ತುಟಿ ಬಿಚ್ಚದ ಸಚಿವರು
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಶರಣಾದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಗರಂ ಆಗಿದ್ದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಂದ್ರ ಆಹಾರ ಖಾತೆ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರ ಪ್ರತಿಕ್ರಿಯೆಗಾಗಿ ಬೆನ್ನು ಬಿದ್ದರು.ಆದರೆ ಇತರ ಎನ್‌ಡಿಎ ಮುಖಂಡರಂತೆ ಅವರು ಕೂಡಾ ವಿವಾದಾತ್ಮಕ ವಿಷಯಗಳು ಬಂದಾಗ ಮಾಧ್ಯಮವನ್ನು ಕೈಯಳತೆ ದೂರದಲ್ಲೇ ಇಡಲು ನಿರ್ಧರಿಸಿದಂತಿತ್ತು. ಆದರೆ ಒಬ್ಬ ಪತ್ರಕರ್ತ, ಪಾಸ್ವಾನ್ ಹೇಗೆ ದಲಿತ ಐಕಾನ್ ಹಾಗೂ ಅವರು ಹೇಳಿದ್ದಕ್ಕೆ ಹೇಗೆ ಹೆಚ್ಚಿನ ತೂಕ ಇರುತ್ತದೆ ಎಂದು ಹೇಳುತ್ತಿದ್ದಂತೆ, ಅವರನ್ನು ಮಧ್ಯದಲ್ಲೇ ತಡೆದ ಪಾಸ್ವಾನ್, ನೀವು ನನ್ನನ್ನು ಎಲ್ಲಿಗೆ ಒಯ್ಯುತ್ತಿದ್ದೀರಿ ಎನ್ನುವುದು ನನಗೆ ಗೊತ್ತಿದೆ. ‘‘ಹೈದರಾಬಾದ್ ಮತ್ ಲೇ ಜಾಯೆ ಮೇರೆ ಕೊ. ಮೈನ್ ದಿಲ್ಲಿ ಮೈನ್ ಹಿ ಟಿಕ್ ಹೂನ್’’ಎಂದರು. ಕೇಂದ್ರ ಸಚಿವನಾಗಿ ಈ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ಸ್ಪಷ್ಟವಾಗಿ ಪಾಸ್ವಾನ್ ಹೇಳಿದರು. ಆದರೆ ಸಂಸದರಾಗಿರುವ ಅವರ ಮಗ ಚಿರಾಗ್ ಪಾಸ್ವಾನ್ ಮಾತನಾಡಿದರು.ಇದರಿಂದ ಸ್ಪಷ್ಟವಾಗುವ ಅಂಶವೆಂದರೆ ಸಚಿವರಾರೂ ತುಟಿ ಬಿಚ್ಚುವಂತಿಲ್ಲ.
ರಾಹುಲ್‌ಗೆ ಮೆಚ್ಚುಗೆಯಾಗದ ಕಿಶೋರ್
ಚುನಾವಣಾ ಚಾಣಕ್ಯ ತಂತ್ರಗಾರಿಕೆಗೆ ಹೆಸರಾದ ಪ್ರಶಾಂತ್ ಕಿಶೋರ್, ಬಿಹಾರದಲ್ಲಿ ಅದ್ಭುತ ಪವಾಡ ಮಾಡಿದರು.ಆದರೆ ರಾಹುಲ್‌ಗಾಂಧಿ ಮೇಲೆ ಮಾತ್ರ ಕಿಶೋರ್ ಯಾವ ಪ್ರಭಾವವನ್ನೂ ಬೀರಿಲ್ಲ. ಇದರಿಂದಾಗಿ ಕಿಶೋರ್ ಈ ಚುನಾವಣಾ ಸೆಷನ್‌ನಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸುವ ಸಾಧ್ಯತೆ ಕ್ಷೀಣವಾಗಿದೆ. ಕಿಶೋರ್ ಮಾಡಿದ ಎರಡು ಸಲಹೆಗಳನ್ನು ರಾಹುಲ್ ಈಗಾಗಲೇ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಮೊದಲನೆಯದು ಚುನಾವಣೆ ಸನ್ನಿಹಿತವಾಗಿರುವ ಅಸ್ಸಾಂನಲ್ಲಿ ಮುಖ್ಯಮಂತ್ರಿಯನ್ನು ಬದಲಿಸಬೇಕು ಎಂದು ಕಿಶೋರ್ ಬಯಸಿದ್ದರು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲಬಹುದು ಎಂದು ಖಚಿತವಾಗಿ ಹೇಳಿದ್ದರೂ, ಕಾಂಗ್ರೆಸ್ ಉಪಾಧ್ಯಕ್ಷ ಅದಕ್ಕೆ ಕಿವಿಗೊಡಲಿಲ್ಲ. ಎರಡನೆಯದಾಗಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಹಾಗೂ ಅಜಿತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕದಳ ಜತೆ ಮೈತ್ರಿ ಮಾಡಿಕೊಳ್ಳುವಂತೆ ಕಿಶೋರ್ ಸಲಹೆ ನೀಡಿದ್ದಾರೆ. ಆದರೆ ಬೆಹನ್‌ಜಿ ಕಾಂಗ್ರೆಸ್ ಪಕ್ಷದ ಜತೆ ಕಠಿಣ ಷರತ್ತುಗಳನ್ನು ಮುಂದಿಡುವ ಸಾಧ್ಯತೆ ಇದೆ ಎಂಬ ಕಾರಣಕ್ಕಾಗಿ ರಾಹುಲ್ ಇದನ್ನೂ ಬದಿಗಿಟ್ಟಂತಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಹೋರಾಡುವ ಸಾಧ್ಯತೆ ಇದೆ. ರಾಹುಲ್ ಅನುಭವಿಸುವ ನಷ್ಟ ದೀದಿಗೆ ಲಾಭವಾಗುವ ನಿರೀಕ್ಷೆ ಇದೆ. ಬಂಗಾಳದ ಚುನಾವಣೆಯ ಬಗ್ಗೆ ಕಿಶೋರ್ ಒಂದು ಗಂಟೆ ಕಾಲ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖಂಡೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆಯೂ ಚರ್ಚಿಸಿದ್ದಾರೆ.ಈ ಚರ್ಚೆ ಸಹಜವಾಗಿಯೇ ಶಕ್ತಿ ಕೇಂದ್ರಗಳಲ್ಲಿ ಆಸಕ್ತಿ ಮೂಡಿಸಿದೆ.
ಜನಪ್ರಿಯತೆಯ ಆಯ್ಕೆ
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚಿದ್ದರಿಂದಾಗಿ ಪಕ್ಷದ ಹಲವು ಮುಖಂಡರು ಹತಾಶರಾಗಿದ್ದಾರೆ. ಆದರೆ ಪ್ರತಿ ಕಾಂಗ್ರೆಸ್ ಮುಖಂಡರಿಗೂ ಪ್ರಸ್ತುತ ಸ್ಥಿತಿಗತಿ ಬಗ್ಗೆ ದೂರಲು ಕಾರಣಗಳಿಲ್ಲ. ಉದಾಹರಣೆಗೆ ಕಪಿಲ್ ಸಿಬಲ್ ಅವರನ್ನೇ ತೆಗೆದುಕೊಳ್ಳೋಣ.ಅವರಿಗೆ ಖಂಡಿತವಾಗಿಯೂ ಇವು ಅಚ್ಛೇ ದಿನಗಳು. ಅವರ ಪಕ್ಷ ವಿರೋಧ ಪಕ್ಷವಾಗಿರುವುದರಿಂದ ಸಿಬಲ್ ಅವರಿಗೆ ಇದು ಸುದಿನ ಎನ್ನುವುದು ಬಹುತೇಕ ಸುಪ್ರೀಂಕೋರ್ಟ್ ವಕೀಲರ ಒಮ್ಮತದ ಅಭಿಮತ. ಏಕೆಂದರೆ ಹಲವು ದೊಡ್ಡ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಮಂದಿ ಪ್ರಭಾವಿ ಕಕ್ಷಿದಾರರು, ತಮ್ಮ ಪ್ರಕರಣಗಳಿಗೆ ಸಿಬಲ್ ಅವರ ಮೊರೆ ಹೋಗುತ್ತಿದ್ದಾರೆ.ಈ ಮುತ್ಸದ್ಧಿ ಈಗ ಅಧಿಕ ಪ್ರಕರಣಗಳ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬಹುಶಃ ಸಿಬಲ್ ಕೋರ್ಟ್‌ಗೆ ಬಾರದ ದಿನಗಳು ಅಥವಾ ಕಾನೂನು ಟಿಪ್ಪಣಿಗಳಲ್ಲಿ ನಿರತರಾಗಿರದ ದಿನಗಳು ಇಲ್ಲ ಎನ್ನಬಹುದು!
ನಾಯ್ಡು ಹಾಸ್ಯ
ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಜೊತೆಗೂಡಿ ಹೊಸ ಬೆಳೆ ವಿಮೆ ಯೋಜನೆಗೆ ಚಾಲನೆ ನೀಡಿ, ರೈತರಿಗೆ ವ್ಯತ್ಯಾಸಗಳ ಬಗ್ಗೆ ಮಾತನಾಡಿದರು.ಪ್ರಶ್ನೋತ್ತರ ವೇಳೆಯಲ್ಲಿ, ಪತ್ರಕರ್ತರೊಬ್ಬರು ನಾಯ್ಡು ಅವರನ್ನು ಕುರಿತು, ಇದೇ ರೀತಿ ಮೀನುಗಾರರಿಗೆ ಯಾವುದಾದರೂ ಯೋಜನೆಗಳಿವೆಯೇ ಎಂದು ಪ್ರಶ್ನಿಸಿದರು.ಚುಟುಕು ಉತ್ತರಗಳಿಗೆ ಹೆಸರಾದ ನಾಯ್ಡು ಈ ಅವಕಾಶವನ್ನು ಕಳೆದುಕೊಳ್ಳಲಿಲ್ಲ. ತಕ್ಷಣ, ‘‘ಪೆಹಲೆ ಅನಾಜ್ ಪೇಟ್ ಮೈ, ಇಸ್ಕೆ ಬಾದ್ ಮಚಲಿ’ ಎಂದು ಉತ್ತರಿಸಿದರು. ಮೊದಲು ಹೊಟ್ಟೆಗೆ ಆಹಾರಧಾನ್ಯ. ಬಳಿಕ ಮೀನು ಎಂದು ಹೇಳುವ ಮೂಲಕ ಇಡೀ ಸಭಾಂಗಣವನ್ನು ನಗೆಗಡಲಲ್ಲಿ ತೇಲಿಸಿದರು.ಆದರೆ ರೈತರಿಗಾಗಿ ಯೋಜನೆಗಳು ಇವೆಯೇ ಎಂದು ನಾಯ್ಡು ಅವರನ್ನು ಯಾರೂ ಪ್ರಶ್ನಿಸಲಿಲ್ಲ.ಆ ವೇಳೆಗೆ ನಾಯ್ಡು ಶೋತೃಗಳನ್ನು ನಿಶ್ಶಸ್ತ್ರಗೊಳಿಸಿದ್ದರು.