ಬ್ರಾಹ್ಮಣಿಕೆಯ ಸೊಕ್ಕು...
ಇಂಡಿಯಾ ಟುಡೇ ಬಳಗದ ‘ಡೈಲಿ ಒ.ಇನ್’ ಎಂಬ ಆನ್‌ಲೈನ್ ಜಾಲತಾಣವೊಂದಿದೆ. ಅದು 27 ನವೆಂಬರ್-2015ರಂದು ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಸ್. ಎನ್. ಬಾಲಗಂಗಾಧರ ಎನ್ನುವವರ ‘ಯಾವ ಅಸಹಿಷ್ಣುತೆ ಭಾರತದಲ್ಲಿ ಬೆಳೆಯುತ್ತಿದೆ’ ಎಂಬ ಲೇಖನವೊಂದನ್ನು ಪ್ರಕಟಿಸಿತ್ತು. ಇದು ಈ ಬಾಲಗಂಗಾಧರರ ದುರಹಂಕಾರದ ನಡತೆಯ ವಿರುದ್ಧ ಭಾರತದಲ್ಲಿ ಬೆಳೆಯುತ್ತಿರುವ ಆಕ್ರೋಶಕ್ಕೆ ಆತನ ಪ್ರತಿಕ್ರಿಯೆಯಾಗಿತ್ತು. ಈತ ಈ ಹಿಂದೆ, ಅಂದರೆ, ಕಳೆದ ನವೆಂಬರ್ ಮೊದಲ ವಾರದಲ್ಲಿ ಹೈದರಾಬಾದಿನ ಇಂಗ್ಲಿಷ್ ಅಂಡ್ ಫಾರಿನ್ ಲಾಂಗ್ವೇಜಸ್ ಯುನಿವರ್ಸಿಟಿ(ಇಎಫ್‌ಎಲ್‌ಯು)ಯಲ್ಲಿ ನಡೆದ ಒಂದು ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರನ್ನು ‘‘ಅವನು ಆಲಿಯಾ ಭಟ್‌ನಷ್ಟೂ ಪ್ರತಿಭಾವಂತನಲ್ಲ’’ ಇತ್ಯಾದಿ... ಹೀನಾಯವಾಗಿ ನಿಂದಿಸಿದ್ದರು. ಇದಕ್ಕೆ ಭಾರತದಲ್ಲಿ ತೀವ್ರ ಪ್ರತಿರೋಧವೆದ್ದಾಗ, ಕ್ಷಮೆಯಾಚಿಸುವ ಬದಲು ಮೇಲೆ ಹೇಳಿದ ಲೇಖನ ಬರೆದಿದ್ದ.
ಈ ಥರದ ಬೀದಿ ಬೈಗುಳ, ಅಪಮಾನಗಳು ಅಂಬೇಡ್ಕರ್ ವಿಷಯದಲ್ಲಿ ಹೊಸವೇನೂ ಅಲ್ಲ. ಆದರೆ ಈವರೆಗೂ ಯಾರೂ ಒಂದು ಬೌದ್ಧಿಕ ಸಮಾವೇಶದಲ್ಲಿ ಇವನಷ್ಟು ಕೀಳುಭಾಷೆಯನ್ನು ಬಳಸಿರಲಿಲ್ಲ. ಒಂದಡೆ, ಆಡಳಿತದಲ್ಲಿರುವ ಬಲಪಂಥೀಯ ಸರಕಾರದ ನೆರಳಿನಲ್ಲಿ ಅಂಬೇಡ್ಕರ್‌ರನ್ನು ಹಾಡಿ ಹೊಗಳುವ ಕೆಲಸ ನಡೆಯುತ್ತಿದ್ದರೆ, ಹಿಂದೂ ಸಂಸ್ಕತಿ ಮತ್ತು ಸಂಪ್ರದಾಯಗಳ ಪ್ರವಾಚಕನಾದ ಇನ್ನೊಬ್ಬ ಇಷ್ಟೊಂದು ನಿರ್ಲಜ್ಜನಾಗಿ ಮಾತನಾಡಿರುವುದು ಆಶ್ಚರ್ಯಕರವಾಗಿದೆ.
ಸಂಘಪರಿವಾರದ ಎಲ್ಲ ರೋಗಲಕ್ಷಣಗಳನ್ನು ಹೊಂದಿದ್ದರೂ ಇವರೆಂದೂ ತನ್ನನ್ನು ಅದರೊಂದಿಗೆ ನೇರವಾಗಿ ಗುರುತಿಸಿಕೊಂಡಿಲ್ಲ. ಆದರೆ ತನ್ನ ಬ್ರಾಹ್ಮಣಿಕೆಯನ್ನು ಸಮರ್ಥಿಸಿಕೊಳ್ಳಲು ಇವರಿಗಿರುವ ಹೆಮ್ಮೆ ಅಪಾರವಾದದ್ದು. ಇವರಿಗಿಂತ ಮುಂಚೆ ಅರುಣ್ ಶೌರಿ ಎಂಬ ಮಹಾಶಯ ‘ವರ್ಶಿಪಿಂಗ್ ದಿ ಫಾಲ್ಸ್ ಗಾಡ್ಸ್’ ಎಂಬ ಪುಸ್ತಕ ಬರೆದು ಅದರಲ್ಲಿ ‘ಭಾರತದ ಸಂವಿಧಾನ ಅಂಬೇಡ್ಕರ್ ಬರೆದಿದ್ದಲ್ಲ’ ಎಂದು ಹೇಳಿದ್ದರು (ವಾಸ್ತವವೆಂದರೆ ಇಂತಹ ನಿಂದಕರು ದಲಿತರೊಳಗೂ ಇದ್ದಾರೆ). ಈತನಿಗೆ ತಿಳಿದಿಲ್ಲ, ಸ್ವತಃ ಅಂಬೇಡ್ಕರ್‌ರವರೇ ಸಂವಿಧಾನದ ಕರ್ತೃತ್ವವನ್ನು ನಿರಾಕರಿಸಿ, ಬ್ರಾಹ್ಮಣರು ಪಿತೂರಿಮಾಡಿ ನನ್ನನ್ನು ಈ ನಿಷ್ಪ್ರಯೋಜಕ ಕೆಲಸದಲ್ಲಿ ತೊಡಗಿಸಿದ್ದರು ಎಂದು ಹೇಳಿದ್ದರು. ಬಾಲಗಂಗಾಧರ ತನಗೆ ಸಂಘಪರಿವಾರದೊಂದಿಗೆ ಯಾವ ಸಂಬಂಧವೂ ಇಲ್ಲವೆಂದು ಹೇಳಿಕೊಂಡರೂ, ಇವರ ಭಾಷೆ, ಮಾತು, ಕಾರ್ಯ ಅದೇ ಜಾತಿ ಶ್ರೇಷ್ಠತೆಯ ವ್ಯಾಧಿಗೆ ಸೇರಿದ್ದು. ಹೊರಗಿದ್ದುಕೊಂಡೇ ಹಿಂದುತ್ವದ ತತ್ವಕ್ಕೆ ಜಾತ್ಯತೀತತೆಯ ಮುಖವಾಡ ತೊಡಿಸಿ ವಂಚಿಸುವಂಥದ್ದು. ಇತ್ತೀಚೆಗೆ ಇಡೀ ಬಿಜೆಪಿ ಬಳಗ ಅಂಬೇಡ್ಕರ್‌ರ ಭಜನೆ ಮಾಡುತ್ತಿರುವ ಹೊತ್ತಿನಲ್ಲಿ ಈ ಪ್ರಕರಣ ಬ್ರಾಹ್ಮಣವಲಯದಲ್ಲಿ ಅಂಬೇಡ್ಕರ್ ಬಗ್ಗೆ ಆಳವಾಗಿ ಬೇರೂರಿರುವ ಜಿಗುಪ್ಸೆಯನ್ನು ಅನಾವರಣಗೊಳಿಸಿದೆ.
ಅಧಿಕಪ್ರಸಂಗಿ ಆಧಾರಗಳು
ಮೂರು ದಿನಗಳು ನಡೆದ ಈ ಸಮಾವೇಶದ ವಿಷಯ ‘ದ ಫೋರ್ಸ್ ಆಫ್ ಲಾ ಆ್ಯಂಡ್ ಲಾ ಆಫ್ ಫೋರ್ಸ್’ ಎಂಬ ಡೆರಿಡಾನ ಧರ್ಮಶಾಸ್ತ್ರದ ಮೇಲೆ. ಸಹಜವಾಗಿ ಇಲ್ಲಿ ಅಂಬೇಡ್ಕರ್ ಆಗಲೀ ಅಂಬೇಡ್ಕರ್‌ವಾದಿಗಳ ವಿಷಯವಾಗಲೀ ಪ್ರಸ್ತಾಪವಾಗುವ ಅಗತ್ಯವೇ ಇರಲಿಲ್ಲ. ಅಲ್ಲಿದ್ದ ವಿಷಯ ಜಾಕ್ವಸ್ ಡೆರಿಡಾನ ಋಣಾತ್ಮಕ ಧರ್ಮಶಾಸ್ತ್ರದ ಬಗ್ಗೆ. ಇಲ್ಲಿ ಇನ್ಯಾವುದೇ ಭಾಷಣಕಾರರು ಅಂಬೇಡ್ಕರ್ ಹೆಸರನ್ನು ಪ್ರಸ್ತಾಪಿಸಿಲ್ಲ. ಆದರೆ ಈ ಪಂಡಿತ ವೀರಾವೇಶದಿಂದ ಮಾತನಾಡುತ್ತಾ ಅಂಬೇಡ್ಕರ್‌ರನ್ನು ‘‘ಅವರೊಬ್ಬ ಮೂರ್ಖ, ಕೊಲಂಬಿಯಾ ವಿಶ್ವವಿದ್ಯಾನಿಲಯ ಅದ್ಹೇಗೆ ಅವರಿಗೆ ಡಾಕ್ಟರೇಟ್ ಕೊಟ್ಟಿತೋ? ಆಶ್ಚರ್ಯಕರವಾಗಿದೆ’’ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಈ ಬಾಲಗಂಗಾಧರ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳ ಮೇಲೆಯೂ ಹರಿಹಾಯ್ದು ಹೀನಾಯವಾಗಿ ನಿಂದಿಸಿದ್ದಾನೆ. ಆ ಸಮಾವೇಶದ ಉದ್ದೇಶಕ್ಕಾಗಲೀ ಈತನ ವಿಷಯಕ್ಕಾಗಲೀ ಸರ್ವಥಾ ಸಂಬಂಧವಿಲ್ಲದ ವಿಷಯಗಳನ್ನು ಅನಾವಶ್ಯಕವಾಗಿ ಪ್ರಸ್ತಾಪಿಸಿದ್ದಾರೆ. ಅಷ್ಟೇ ಅಲ್ಲ ಸ್ವತಃ ಈ ಸಮಾವೇಶ ಆಯೋಜಿಸಿದ್ದ ಸಂಸ್ಥೆಯನ್ನು ಸಹ ಬಿಟ್ಟಿಲ್ಲ. ಇಎಫ್‌ಎಲ್‌ಯು ಅನ್ನು ‘ಹುಚ್ಚರ ಮನೆ’ ಎಂದು ಕರೆದಿದ್ದಾರೆ. ಬೇರೆ ಸಂಸ್ಥೆಗಳಿಗೆ ಹೋಲಿಸಿದಲ್ಲಿ ಅತಿಹೆಚ್ಚು ಬ್ರಾಹ್ಮಣೇತರ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಹೊಂದಿರುವ ಈ ಸಂಸ್ಥೆಯ ಮೇಲೆ ಆತನಿಗೆ ಸಹಜವಾಗಿಯೇ ಅಪಾರ ಸಿಟ್ಟಿದೆ. ಮರುದಿನ ಅಲ್ಲಿನ ಹಿರಿಯ ಪ್ರಾಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು ಹಿಂದಿನ ದಿನದ ಆತನ ಅನಾವಶ್ಯಕ ಟೀಕೆಗಳ ಬಗ್ಗೆ ಪ್ರಸ್ತಾಪಿಸಿದಾಗ, ಹುಚ್ಚನಂತೆ ಸಿಟ್ಟಿಗೆದ್ದು ‘‘ಈ ಜಾತಿ ಪ್ರಮಾಣಪತ್ರದ ಆಧಾರದಲ್ಲಿ ಬಂದಿರುವ ಅಯೋಗ್ಯರ ಬಳಿ ಪಾಠ ಕೇಳುವ ಇಲ್ಲಿನ ವಿದ್ಯಾರ್ಥಿಗಳು ಅವರ ಭವಿಷ್ಯದ ಬಗ್ಗೆ ಯೋಚಿಸಿಬೇಕು’’ ಎಂದು ಹೇಳಿದ್ದಾರೆ. ಖಂಡಿತವಾಗಿಯೂ ಅವನು ಪ್ರಸ್ತಾಪ ಮಾಡುತ್ತಿರುವುದು ಅಲ್ಲಿನ ಎಸ್ಸಿ/ಎಸ್ಟಿ ಮತ್ತು ಒಬಿಸಿ ಸಿಬ್ಬಂದಿಯನ್ನು. ಹಾಗೆಯೇ ಮುಸ್ಲಿಮ್ ಸಿಬ್ಬಂದಿ ಕೇಳಿದ ಕೆಲವು ಪ್ರಶ್ನೆಗಳಿಗೆ ಅವರ ಮೇಲೆ ಉರಿದು ಬಿದ್ದು ‘‘ನೀವು ಭಯೋತ್ಪಾದನೆಯನ್ನು ಹರಡುವ ಸೂತ್ರಧಾರರು’’ ಎಂದು ಹೇಳಿದ್ದಾನೆ. ಇವನ ಇಂಥ ಜಾತಿ ಮತ್ತು ಮತಾಂಧ ಮಾತುಗಳಿಂದ ಅಲ್ಲಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಉರಿದು ಹೋಗಿದ್ದಾರೆ. ಹೈದರಾಬಾದಿನ ಕ್ಯಾಂಪಸ್‌ಗಳಿಗೆ ಪ್ರಬಲ ದಲಿತ ಚಳವಳಿಗಳ ಹಿನ್ನೆಲೆ ಮತ್ತು ಇತಿಹಾಸವಿದೆ. ಇಂಥಲ್ಲಿ ಆತ ಹದ್ದು ಮೀರಿದ ದುರಹಂಕಾರದ ಮಾತುಗಳನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಿದ್ದಾರೆ. ಈತನ ಮಾತುಗಳು ವಿದ್ಯಾರ್ಥಿ ಮತ್ತು ಬೋಧಕ ಸಿಬ್ಬಂದಿಯನ್ನು ಅಪಮಾನಗೊಳಿಸುವುದೇ ಅಲ್ಲದೆ ಇವು ಐಪಿಸಿ ಕಾಯ್ದೆಯ ಸೆಕ್ಷನ್295(ಎ) ಮತ್ತು 198ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಾಗಿವೆ. ಹಾಗೆಯೇ ದಲಿತ ದೌರ್ಜನ್ಯದ ವಿರೋಧಿ ಕಾಯ್ದೆ 1989ರ ಅಡಿಯಲ್ಲಿ ಸಹ ಶಿಕ್ಷಾರ್ಹ ಅಪರಾಧವಾಗಿದೆ. ಆದರೆ ಇಎಫ್‌ಎಲ್ ಇವರ ವಿರುದ್ಧ ಕಾನೂನು ಕ್ರಮ ಜರಗಿಸಲು ಮುಂದೆ ಬರಲಿಲ್ಲವಾದ್ದರಿಂದ, ಇದು ಸಂಭವಿಸಲಿಲ್ಲ.
ಅಸಹನೆಯಲ್ಲ ಭಯೋತ್ಪಾದನೆ
ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ ಮತ್ತು ಎಂ. ಎಂ. ಕಲಬುರ್ಗಿ ಇವರ ಹತ್ಯೆಗಳು ಮತ್ತು ದಾದ್ರಿ, ಉದಾಂಪುರ್‌ಗಳಲ್ಲಿ ಜನಸಾಮಾನ್ಯರ ಮೇಲೆ ನಡೆದ ಹಲ್ಲೆ, ಹತ್ಯಾ ಪ್ರಕರಣಗಳನ್ನು ನಾವು ಕೇವಲ ‘ಅಸಹಿಷ್ಣುತೆ’ ಎಂದು ಹೇಳಲಾಗುವುದಿಲ್ಲ. ಈ ಹಿಂಸೆಯನ್ನು ಕರೆಯಬಹುದಾದ ಒಂದೇ ಹೆಸರೆಂದರೆ ಅದು ‘ಭಯೋತ್ಪಾದನೆ’. ಏಕೆಂದರೆ, ಈ ಯಾವ ಘಟನೆಗಳೂ ಯಾವುದೋ ಒಂದು ಸಾಂದರ್ಭಿಕ ಸನ್ನಿವೇಶದಿಂದ ಪ್ರೇರಿತರಾಗಿ ಯಾರೋ ಒಬ್ಬ ವ್ಯಕ್ತಿ ಅಥವಾ ಒಂದು ಗುಂಪು ಹಠಾತ್ತಾಗಿ ಪ್ರತಿಕ್ರಿಯಿಸಿದಾಗ ಸಂಭವಿಸಿದ ಘಟನೆಗಳಲ್ಲ. ಇವು ಸಾಂಘಿಕವಾಗಿ ಪೂರ್ವತಯಾರಿಯೊಂದಿಗೆ ದುರುದ್ದೇಶಪೂರ್ವವಾಗಿ ಯೋಜಿಸಲ್ಪಟ್ಟ ಹತ್ಯೆಗಳು.
ಆದರೆ ಈ ಬಾಲಗಂಗಾಧರ ತನ್ನ ಅಪೂರ್ವ ಬುದ್ಧಿಮತ್ತೆಯನ್ನು ಪ್ರಯೋಗಿಸಿ ಹೇಳಿದ್ದೇನೆಂದರೆ... ‘‘ದಾದ್ರಿ ಘಟನೆಯನ್ನು ತಿರುಚಲಾಗಿದೆ, ಅಲ್ಲಿ ನಡೆದಿದ್ದೇನೆಂದರೆ ಅಲ್ಲಿ ಸತ್ತುಹೋದ ಅಖ್ಲಾಕ್ ಮತ್ತು ಅವನ ಮಗ ಡ್ಯಾನಿಷ್ ಹಸುಗಳನ್ನು ಕದ್ದಿದ್ದರಿಂದ ಅವರನ್ನು ಶಿಕ್ಷಿಸಲಾಯಿತು. ಇಂಥ ದನಗಳ್ಳತನ ಮತ್ತು ಅದಕ್ಕೆ ಈ ರೀತಿಯ ಶಿಕ್ಷೆ ಒಂದು ಕಾಲದಲ್ಲಿ ಯೂರೋಪ್ ಮತ್ತು ಅಮೆರಿಕದಲ್ಲಿ ಸಾಮಾನ್ಯವಾಗಿದ್ದವು’’ ಎಂದು.
ಹಾಗೆಯೇ ‘‘ಕಲಬುರ್ಗಿಯ ಕೊಲೆ ಅವರ ಅನೈತಿಕ ನಡವಳಿಕೆಯ ಕಾರಣದಿಂದ ಸಂಭವಿಸಿದೆ’’ ಎಂದೂ... ಒಬ್ಬ ಪ್ರಾಜ್ಞ ಇತಿಹಾಸತಜ್ಞ ಹಾಗೂ ಕನ್ನಡ ಸಾಹಿತ್ಯದ ನೈತಿಕ ಶಕ್ತಿಯಾಗಿದ್ದ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದಲ್ಲದೆ ‘‘ಕಲಬುರ್ಗಿ ಕುಖ್ಯಾತ ಭೂಗತ ಪಾತಕಿ ಛೋಟಾರಾಜನ್‌ಗಿಂತ ಕೀಳಾದವರು’’ ಎಂದು ಹೇಳಿದ್ದಾರೆ. ಇವರ ಒಟ್ಟು ಮಾತುಗಳು, ತರ್ಕಸರಣಿಯನ್ನು ನೋಡಿದರೆ ಈತ ತೀವ್ರವಾದ ಬೌದ್ಧಿಕ ದಾರಿದ್ರ್ಯದಲ್ಲಿ ನರಳುತ್ತಿದ್ದು ಆ ಕಾರಣದಿಂದಲೇ ಇನ್ನೂ ಭಾರೀ ಕಗ್ಗತ್ತಲಿನಲ್ಲಿದ್ದಾನೆ.
ಇವರ ಬೌದ್ಧಿಕ ದಾರಿದ್ರ್ಯ ಯಾವಮಟ್ಟಕ್ಕಿದೆ ಎಂದರೆ ದೇಶದ ಸಂಕೀರ್ಣ ಸಮಸ್ಯೆಗಳನ್ನು ಅವನಿಗೆ ಬೇಕಾದಂತೆ ಸರಳಗೊಳಿಸಿಕೊಂಡು, ‘‘ಭಾರತದಲ್ಲಿ ಜಾತಿ ಪದ್ಧತಿ ಇದೆಯೇ’? ಎಂದು ಕೇಳಿಕೊಳ್ಳುತ್ತಾನೆ! ಅದಕ್ಕೆ ಅವನದೇ ಉತ್ತರ: ಇಲ್ಲ!!. ಅದಕ್ಕೆ ಆತ ದೂಷಿಸುವುದು ಕ್ರಿಶ್ಚಿಯನ್ ಮಿಷನರಿಗಳನ್ನು. ಅದರಲ್ಲೂ ಮುಖ್ಯವಾಗಿ ಪ್ರೊಟಸ್ಟಂಟ್‌ರನ್ನು. ‘‘ಬರುವಾಗ ಕೈಯಲ್ಲಿ ಧರ್ಮಶಾಸ್ತ್ರವನ್ನಿಡಿದುಕೊಂಡು ಬಂದ ಕ್ರೈಸ್ತ ಪುರೋಹಿತರು ಅವರ ಧರ್ಮದ ಭ್ರಷ್ಟ ದುಷ್ಟತನಗಳನ್ನು ಇಲ್ಲಿ ತುರುಕಿ ಈ ಸಮಾಜವನ್ನು ಜಾತಿ ಸಮಾಜ ಎಂದು ವ್ಯಾಖ್ಯಾನ ಮಾಡಿದರು’’ ಎಂದು ಹೇಳುತ್ತಾರೆ. ‘‘ಇಂಥ ಜಾತಿಪದ್ಧತಿಯ ವಿರುದ್ಧ ಇಡೀ ಶ್ರಮಾಧಾರಿತ ಸಮುದಾಯ ತಿರುಗಿಬಿದ್ದಾಗ ಹಿಂದೂ ಧರ್ಮಶಾಸ್ತ್ರಗಳು ಅವರನ್ನು ವೀರ್ಯವತ್ತಾಗಿ ಸಮರ್ಥಿಸಿಕೊಂಡವು ಮತ್ತು ಕ್ರಿಶ್ಚಿಯನ್ ಧರ್ಮ ಕೋಟಲೆಗಳಿಂದ ಇವರನ್ನು ಬಿಡಿಸಿದವು’’ ಎಂದು ಹೇಳುತ್ತಾರೆ.
ಈ ಬಾಲಗಂಗಾಧರರ ಬರಹಗಳ ಮೇಲೆ ಸುಮ್ಮನೆ ಕಣ್ಣಾಡಿಸುತ್ತಾ ಹೋದರೆ ಪದ ವಿಕೃತತೆಯಲ್ಲಿ ತರ್ಕಜಾಲವನ್ನು ನೇಯ್ದು ಪಶ್ಚಿಮದವರನ್ನು ಮೂರ್ಖರನ್ನಾಗಿ ಮಾಡುತ್ತಾ, ಭಾರೀ ತಜ್ಞನಂತೆ ಪೊಸುಕೋಡುತ್ತಿರುವ ಕೆಡುಕನೆನ್ನುವುದು ನಿಚ್ಛಳವಾಗಿ ತಿಳಿಯುತ್ತದೆ. ಆದರೆ ಈತ ಸಂಘ ಪರಿವಾರ ದಳದಿಂದ ಬಂದು ಶಿಥಿಲಾವಸ್ಥೆಯಲ್ಲಿರುವ ಅದನ್ನು ಬೌದ್ಧೀಕರಿಸಲು ಪ್ರಯತ್ನಿಸುತ್ತಿರುವುದಂತೂ ನಿಜ.
ಅಂಬೇಡ್ಕರ್‌ಗೆ ಹಿಂದಿರುಗಿದರೆ
ಬ್ರಾಹ್ಮಣಿಕೆಗೆ ಸವಾಲು ಹಾಕಿದ ಅಂಬೇಡ್ಕರ್‌ರವರಿಗೆ ಇವರು ಶಾಪ ಹಾಕುತ್ತಿರುವುದಲ್ಲಿ ಅಚ್ಚರಿ ಏನೂ ಇಲ್ಲ! ಆದರೆ, ಅಂಬೇಡ್ಕರ್ ಹೀಗೆಲ್ಲಾ ಪದ ವಿಕೃತಿಯ ತರ್ಕಜಾಲಕ್ಕೆ ಬಿದ್ದವರಲ್ಲ. ಮಾನವೀಯತೆಯ ಸತ್ವಪೂರ್ಣ ಅಂಶಗಳನ್ನು ಸಿದ್ಧಾಂತ ಮತ್ತು ಆಚರಣೆಗಳ ತನಿಖೆಯ ಮೂಲಕ ವಿಶ್ಲೇಷಿಸಿ, ಸ್ವತಂತ್ರ, ಸಮಾನ ಹಾಗೂ ಭ್ರಾತೃತ್ವದ ಕನಸಿನತ್ತ ನಡೆದವರು. ಅಂಬೇಡ್ಕರ್ ತಪ್ಪಿರಬಹುದು! ಒಟ್ಟಾರೆ ಎಲ್ಲ ಮನುಷ್ಯರಂತೆ! ಆದರೆ ಅವರನ್ನು ಮೂರ್ಖ ಎಂದು ಸಂಭೋದಿಸುವುದು ಮಾತ್ರ ಸೊಕ್ಕಿನ ಪರಮಾವಧಿಯನ್ನು ಸೂಚಿಸುತ್ತದೆ.
ಬಾಲಗಂಗಾಧರ ‘‘ಜಾತಿ ಪ್ರಮಾಣಪತ್ರ ಆಧಾರಿತರು’’ಎಂದು ತುಚ್ಛೀಕರಿಸಿದ್ದಾರೆ. ಆದರೆ ಅವರಿಗೆ ಈ ‘ಯೋಗ್ಯತೆ’ಯ ಹಳಸಲುವಾದದ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಅದು ಈವರೆಗೂ ಮತ್ತೆ ಮತ್ತೆ ಈ ಮಾತೆತ್ತಿದವರಿಗೇ ತಿರುಗುಬಾಣವಾಗಿದೆ. ಈ ಮೂಲಕ ನಾನು ಮೀಸಲಾತಿಯನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಇದು ಒಟ್ಟರ್ಥದಲ್ಲಿ ದಲಿತರಿಗೆ ಪರಿಮಿತಿಯನ್ನು ವಿಧಿಸುತ್ತದೆ ಎಂದು ನಾನು ಯಾವಾಗಲೂ ಹೇಳುತ್ತಾ ಬಂದಿದ್ದೇನೆ. ಆದರೆ ಈ ಉಪಖಂಡದ ಇತಿಹಾಸದಲ್ಲಿ ಈ ದಾಸ್ಯವನ್ನು ಹುಟ್ಟಿಹಾಕಿದ ಯೋಗ್ಯತೆಯುಳ್ಳವರೆನಿಸಿಕೊಂಡವರ (ಉಚ್ಚ ಜಾತಿಗಳ) ವರ್ತನೆಗಳನ್ನಿಟ್ಟುಕೊಂಡು ‘ಯೋಗ್ಯತೆ’ಯ ವಾದವನ್ನು ಖಂಡಿಸಬಹುದು. ಇತಿಹಾಸದಲ್ಲಿನ ಅವರ ವರ್ತನೆಯ ಬಗ್ಗೆ ಅವರಿಗೇ ನಾಚಿಕೆಯಾಗಬೇಕಿತ್ತು!. ಆದರೆ ಹಿಂದುತ್ವ ಹೆಸರಿನಲ್ಲಿ ಅದೇ ದಾಸ್ಯವನ್ನು ಮರುಸೃಷ್ಟಿಸಲು ಹೊರಟಿದ್ದಾರೆ!!
ಇದು ಕೇವಲ ಒಬ್ಬ ನಿಂದಕ ಬರಹಗಾರನ ಮಾತಲ್ಲ!. ಇದು ಹಿಂದುತ್ವ ಕ್ಯಾಂಪನ್ನು ಪ್ರತಿನಿಧಿಸುವ ಇಂಥದ್ದೇ ಅನೇಕರಲ್ಲಿ ಒಬ್ಬ ವಿದ್ವಾಂಸನ ಮಾತು!! ಈ ಹಿಂದುತ್ವ ಕ್ಯಾಂಪ್‌ನ ಒಂದು ಬಗಲು ಅಂಬೇಡ್ಕರ್‌ರ ಗುಣಗಾನದಲ್ಲಿ ತೊಡಗಿದ್ದರೆ! ಆದೇ ಕ್ಯಾಂಪಿನ ಇನ್ನೊಂದು ಮಗ್ಗುಲು ಅವರ ಬೌದ್ಧಿಕತೆಯನ್ನೇ ನಿರಾಕರಿಸಿ, ಛೀಮಾರಿ ಹಾಕುತ್ತಿದೆ.!! ಇದೇ ನಿಜವಾದ ಹಿಂದುತ್ವದ ಆತ್ಮ, ಇದೇ ಬಾಲಗಂಗಾಧರನ ಮೂಲಕ ತೆರೆದು ಕೊಳ್ಳುತ್ತಿರುವುದು. ಕತ್ತರಿಸಿದಂತೆಲ್ಲಾ ಮರುಜೀವ ಪಡೆವ ಈ ಘಟಸರ್ಪಗಳ ನಿಜ ಸ್ವರೂಪದ ಅರಿವಾಗುವವರೆಗೆ ಬೌದ್ಧಿಕ ವಲಯ ಇಂತಹ ಮತಿಗೆಟ್ಟ ಪ್ರಚೋದನಾಕಾರಿ ಮಾತುಗಳಿಂದ ಸ್ವತಃ ಅಂತರ ಕಾಯ್ದುಕೊಳ್ಳಬೇಕು. ಈ ಮೂಲಕ ಭಾರತದಲ್ಲಿ ಜಾತೀಯತೆ ಎಂಬುದು ‘ಒಂದು ಮಿಥ್ಯೆ’ ಮತ್ತು ‘ವಸಾಹತುಶಾಹಿ ಪಿತೂರಿ’ ಎಂದು ಹೇಳುವ ಮೂಲಕ ಅಂಬೇಡ್ಕರ್ ವಾದಿಗಳನ್ನು ನಾಶಗೊಳಿಸಲು ಹೊರಟಿದೆ. ಕೇವಲ; ಒಂದು ಸುಳ್ಳನ್ನು ಮತ್ತೆ ಮತ್ತೆ ಹೇಳುತ್ತಾ ಹೋದಲ್ಲಿ ಜನ ಅದನ್ನು ನಂಬುತ್ತಾರೆ, ಇಲ್ಲಾ ನಂಬುವವರೆಗೂ ಅದೇ ಸುಳ್ಳನ್ನು ಮತ್ತೆ ಮತ್ತೆ ಹೇಳುತ್ತಾ ಹೋಗುವುದು ಎಂಬ ಗೋಬೆಲ್ಸ್‌ನ ನೀತಿಗೆಟ್ಟ ಕುತಂತ್ರದ ಇವತ್ತಿನ ರೂಪವಾಗಿದೆ.
“ BRAHMINICAL ARROGANCE”* Economic & Political Weekly- 9th January-2016, Vol.LI No 2