ಆದರ್ಶ ತಂದೆಯ ಕುರಿತಂತೆ ಮಕ್ಕಳ ಹೆಮ್ಮೆ
ಸನತ್ ಕುಮಾರ್ ಅವರು ಕನ್ನಡದ ಹಿರಿಯ, ವಸ್ತುನಿಷ್ಠ ಪತ್ರಕರ್ತರಲ್ಲಿ ಒಬ್ಬರು. ಸಂಯುಕ್ತ ಕರ್ನಾಟಕ, ಜನವಾಹಿನಿ, ವಾರ್ತಾಭಾರತಿಯೂ ಸೇರಿದಂತೆ ಕನ್ನಡದ ಹಲವು ಪತ್ರಿಕೆಗಳಲ್ಲಿ ದುಡಿದವರು. ಬರಹಗಾರರಾಗಿ ಗುರುತಿಸಲ್ಪಟ್ಟವರು. ಅದೆಂತಹ ಕಷ್ಟ, ನಿಷ್ಠುರ, ಬಿಕ್ಕಟ್ಟುಗಳು ಎದುರಾದರೂ, ತಮ್ಮ ಆದರ್ಶವನ್ನು ಬಲಿಕೊಡದೆ ಇಂದಿಗೂ ತತ್ವ, ವಸ್ತುನಿಷ್ಠತೆಗೆ ಬದ್ಧರಾಗಿ ಬರೆಯುತ್ತಿರುವವರು. ಸನತ್‌ಕುಮಾರ್ ಬೆಳಗಲಿ ಕುರಿತಂತೆ ಅವರ ಮಕ್ಕಳೇ ಬರೆದರೆ ಹೇಗಿರಬಹುದು? ‘ಪಪ್ಪಾ...’ ಎನ್ನುವ ಕಿರು ಕೃತಿಯು ಮಕ್ಕಳು ತಮ್ಮ ತಂದೆಗೆ ನೀಡಿದ ಕಿರು ಉಡುಗೊರೆ. ಇಲ್ಲಿ ಸನತ್ ಕುಮಾರ್ ಅವರ ಮಕ್ಕಳಾದ ರಾಹುಲ ಬೆಳಗಲಿ ಮತ್ತು ಭುಪೇಶ್ ಬೆಳಗಲಿ ಅವರು ತಾವು ಕಂಡ ‘ಪಪ್ಪ’ನ ಬಗ್ಗೆ ಪುಟ್ಟ ಪುಟ್ಟ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ತಂದೆಯಾಗಿ, ಪತಿಯಾಗಿ, ಪತ್ರಕರ್ತನಾಗಿ, ಸಾಮಾಜಿಕ ಹೋರಾಟಗಾರನಾಗಿ, ಎಡಪಂಥೀಯ ಸಂಘಟಕನಾಗಿ ಸನತ್ ಅವರು ಹೇಗೆ ಬದ್ಧತೆಯಿಂದ, ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದರು ಎನ್ನುವುದನ್ನು ಮಕ್ಕಳು ತಾವು ಕಂಡ ಘಟನೆಗಳ ಮೂಲಕ ವಿವರಿಸಿದ್ದಾರೆ. ಹಾಗೆ ನೋಡಿದರೆ ಇದು ದೀರ್ಘ ಲೇಖನವೋ, ಆತ್ಮಕಥೆಯೋ ಅಲ್ಲ. ಸಣ್ಣಪುಟ್ಟ ಚಿತ್ರಗಳಷ್ಟೇ ಇಲ್ಲಿವೆ. ಬಹುಷಃ ಇನ್ನೂ ಒಂದಿಷ್ಟು ಶ್ರಮವಹಿಸಿಕೊಂಡು, ಇನ್ನಷ್ಟು ವಿವರಗಳನ್ನು ಇತರರಿಂದಲೂ ಕಲೆ ಹಾಕಿ ಇದನ್ನು ಸನತ್ ಅವರ ಬದುಕಿನ ಪ್ರಮುಖ ದಾಖಲೆಗಳ ಕೃತಿಯಾಗಿ ಬದಲಾಯಿಸುವ ಅವಕಾಶಗಳು ಇದ್ದವು. ಈ ಕೃತಿ, ಸನತ್ ಕುಮಾರ್ ಅವರ ಕುರಿತಂತೆ ಇನ್ನಷ್ಟು ವಿವರಗಳನ್ನು ನಾವು ಹುಡುಕಾಡುವಂತೆ ಮಾಡುತ್ತದೆ.
ಆದರ್ಶಕ್ಕಾಗಿಯೇ ತಮ್ಮ ಬದುಕನ್ನು ಮೀಸಲಿಟ್ಟ, ಸಾತ್ವಿಕ ಸನತ್ ಅವರನ್ನು ಸಮಾಜ, ಸರಕಾರ ಗುರುತಿಸುವ ಅಗತ್ಯವಿದೆ. ಅವರ ಬರಹಗಳೆಲ್ಲವನ್ನೂ ಒಂದುಗೂಡಿಸಿ ಪುಸ್ತಕವಾಗಿಸುವ ಕಾರ್ಯವೂ ಅಗತ್ಯವಾಗಿ ನಡೆಯಬೇಕಾಗಿದೆ. ಏಕತಾ ಪ್ರಕಾಶನ ಬೆಂಗಳೂರು ಈ ಕೃತಿಯನ್ನು ಹೊರತಂದಿದ್ದು, ಮುಖಬೆಲೆ 60 ರೂಪಾಯಿ. ಆಸಕ್ತರು 9448 444 252 ದೂರವಾಣಿಯನ್ನು ಸಂಪರ್ಕಿಸಬಹುದು.