ಮತದ ಮೌಲ್ಯವನ್ನು ಹುಡುಕುತ್ತಾ...
ಜನವರಿ 25: ರಾಷ್ಟ್ರೀಯ ಮತದಾರರ ದಿನಾಚರಣೆ
ಮೇ ತಿಂಗಳಿನಲ್ಲಿ ಗ್ರಾಮಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ನಡೆದ ಘಟನೆಯೊಂದು ನೆನಪಿಗೆ ಬರುತ್ತದೆ. ಉತ್ತರ ಕರ್ನಾಟಕದ ಜಿಲ್ಲೆಯೊಂದರ ಗ್ರಾಮ ಪಂಚಾಯತ್‌ನ ಚುನಾವಣೆಗೆ ಸ್ಪರ್ಧಿಸಿದ್ದ ಅರ್ಭ್ಯರ್ಥಿಯೊಬ್ಬರಿಗೆ ಮತ ಎಣಿಕೆ ಆದಾಗ ಆಘಾತವೊಂದು ಕಾದಿತ್ತು. ಅವರಿಗೆ ಲಭಿಸಿರುವ ಮತ ಕೇವಲ 03. ಅವರ ಮನೆಯ ಸದಸ್ಯರೇ ಮೂರು ಮಂದಿ. ಅಭ್ಯರ್ಥಿ, ಅವರ ಪತ್ನಿ ಮತ್ತವರ ಮಗ. ಹೇಗೆ ಲೆಕ್ಕ ಹಾಕಿದರೂ ಅಭ್ಯರ್ಥಿ ಮತ್ತವರ ಮನೆ ಮಂದಿಯ ಹೊರತು ಬೇರಾವುದೇ ಮತಗಳು ಅವರಿಗೆ ಬಿದ್ದಿಲ್ಲ ಎನ್ನುವುದು ಖಚಿತವಾಯಿತು. ಸೋತು ಕೋಪಗೊಂಡ ಅಭ್ಯರ್ಥಿ ಮತ ಎಣಿಕೆಯ ಮರುದಿನವೇ ಬೆಳಗ್ಗೆ ತನ್ನ ವಾರ್ಡಿನ ಮತದಾರರ ಮನೆ ಬಾಗಿಲಲ್ಲಿ ನಿಂತು, ತಾವು ಪ್ರತಿಯೊಂದು ಮನೆಗೂ ಮತಕ್ಕಾಗಿ ಹಂಚಿದ ತಲಾ 500 ರೂಪಾಯಿಯನ್ನು ತಕ್ಷಣವೇ ಮರಳಿಸುವಂತೆ ಧಮಕಿ ಹಾಕಿ ಬಂದರು. ದುಡ್ಡು ಪಡೆದುಕೊಂಡಿದ್ದ ಮತದಾರರು ತಾವು ಪಡೆದ ಹಣವನ್ನು ವಾಪಸು ನೀಡಬೇಕಾಯಿತು. ವಾಧ್ಯಮಗಳಲ್ಲಿ ಪ್ರಕಟವಾದ ಈ ಸುದ್ದಿಯನ್ನು ಓದಿ ನನಗೆ ಆರಂಭದಲ್ಲಿ ನಗು ಬಂದರೂ, ಪ್ರಜಾಪ್ರಭುತ್ವದ ಪ್ರಬಲ ಅಸ್ತ್ರವಾದ ಮತದಾನ ಯಾವ ರೀತಿ ಮಾರಾಟದ ವಸ್ತುವಾಗಿದೆ ಎಂಬುದನ್ನು ಗಮನಿಸಿದಾಗ ಆತಂಕವೂ ಉಂಟಾಯಿತು.ನವರಿ 25ನೆ ದಿನವನ್ನು ಭಾರತ ಸರಕಾರ ರಾಷ್ಟ್ರೀಯ ಮತದಾರರ ದಿನವಾಗಿ ಇತ್ತೀಚಿನ ಕೆಲವು ವರ್ಷಗಳಿಂದ ಆಚರಿಸುತ್ತಿದೆ. ಕಾಕತಾಳೀಯವೆಂಬಂತೆ ಮರುದಿನ ದೇಶದ ಪ್ರಜಾಪ್ರಭುತ್ವ ದಿನಾಚರಣೆ. ಗಣರಾಜ್ಯ ಆಚರಣೆಯ ಮೂಲಕ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂಕಲ್ಪಮಾಡುವ ನಾವು ಅದರ ಹಿಂದಿನ ದಿನದ ಆಚರಣೆಗೆ ಭಾರೀ ಮಹತ್ವ ನೀಡಿಲ್ಲ. ಅಷ್ಟೇ ಅಲ್ಲ ಈ ದಿನದ ಬಗ್ಗೆ ಇನ್ನು ದೇಶದ ಹೆಚ್ಚಿನ ಜನರಲ್ಲಿ ಅರಿವಿಲ್ಲದಿರುವುದು ಖೇದಕರ ವಿಷಯ.
ಭಾರತ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದರ ಜೊತೆಯಲ್ಲೇ ಅತೀ ಹೆಚ್ಚು ಯುವ ಮತದಾರರನ್ನು ಒಳಗೊಂಡಿರುವ ದೇಶವೂ ಹೌದು. ಜಗತ್ತಿನ ಬಹುತೇಕ ಪ್ರಜಾಪ್ರಭುತ್ವ ರಾಷ್ಟ್ರಗಳು ಭಾರತದ ನಿಯತಕಾಲಿಕ ಚುನಾವಣೆಯನ್ನು ಕುತೂಹಲ ಮತ್ತು ಅಧ್ಯಯನ ದೃಷ್ಟಿಯಿಂದ ನೋಡಿದೆ. ಅತೀ ಹೆಚ್ಚಿನ ಮತದಾರರನ್ನು ಒಳಗೊಂಡಿದ್ದರೂ ಹೇಗೆ ಯಶಸ್ವಿಯಾಗಿ ಕಾಲಕಾಲಕ್ಕೆ ಚುನಾವಣೆ ನಡೆಯುತ್ತಿದೆ ಎಂಬುದನ್ನು ಅಧ್ಯಯನ ಮಾಡಲು ಹಲವು ದೇಶಗಳ ಪ್ರತಿನಿಧಿಗಳು ಬಂದು ಹೋಗಿದ್ದಾರೆ. ಸಾರ್ಕ್ ಗುಂಪಿನ ಇತರ 7 ರಾಷ್ಟ್ರಗಳಿಗಂತೂ ಭಾರತದ ಚುನಾವಣಾ ವ್ಯವಸ್ಥೆ ಒಂದು ಮಾದರಿ. 18 ವರ್ಷ ತುಂಬಿದ ಎಲ್ಲಾ ಪ್ರಜೆಗಳಿಗೂ ಯಾವುದೇ ತಾರತಮ್ಯವಿಲ್ಲದೆ ಮತದಾನದ ಹಕ್ಕನ್ನು ತನ್ನ ಮೊದಲ ಚುನಾವಣೆಯಿಂದಲೇ (ಮೊದಲು 21 ವರ್ಷ) ನೀಡುತ್ತಾ ಬಂದಿರುವ ಭಾರತವೂ ಜಗತ್ತಿನ ಇತರ ಪ್ರಜಾಪ್ರಭುತ್ವ ದೇಶಗಳಿಗೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದೆ. ಇದಕ್ಕೆ ದೇಶದ ಸಂವಿಧಾನ, 1951 ರ ಪ್ರಜಾಪ್ರತಿನಿಧಿ ಕಾಯ್ದೆೆ ಪ್ರಮುಖ ಕಾರಣ ಎಂಬುದನ್ನು ಅಲ್ಲಗಳೆಯುವಂತ್ತಿಲ್ಲ. ಸಂವಿಧಾನ ಬದ್ಧವಾಗಿ ರಚಿಸಲ್ಪಟ್ಟಿರುವ ನಮ್ಮ ಆಯೋಗದ ಕೊಡುಗೆಯು ಇದರಲ್ಲಿ ಸಾಕಷ್ಟಿದೆ. ದೇಶದ ಒಂದು ಮಾದರಿಯಾದ ಚುನಾವಣಾ ವ್ಯವಸ್ಥೆಯ ನಡುವೆಯೂ ಕೂಡ ಮತದಾನದ ಪ್ರಕ್ರಿಯೆಯನ್ನು ಭ್ರಷ್ಟಗೊಳಿಸುವ ಕಾರ್ಯ ನಮ್ಮವರಿಂದಲೇ ನಡೆಯುತ್ತಿದೆ. ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳು, ಹಲವು ಸುಧಾರಣೆಗಳ ಹೊರತಾಗಿಯೂ ಮತದಾನವೆಂಬ ಪ್ರಜಾಪ್ರಭುತ್ವದ ಕೀಲಿಕೈಯನ್ನು ಮತಧನದ ಸುಳಿಗೆ ಸಿಲುಕಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಯಾರು ಹೊಣೆ ? ಇದಕ್ಕೆ ಹೇಗೆ ಕೊನೆ? ಮತದಾರರ ದಿನಾಚರಣೆಯ ನೇಪಥ್ಯದಲ್ಲಿ ನಿಂತು ನೋಡಿದಾಗ ಮತದಾರ ಮತ್ತು ಅಭ್ಯರ್ಥಿ ಮತದಾನ ಪ್ರಕ್ರಿಯೆಯ ಮಾಲಿನ್ಯಕ್ಕೆ ಕಾರಣಕರ್ತರೇ ಆಗಿದ್ದಾರೆ. ಎಲ್ಲಿಯವರೆಗೆ ಮತದಾರರು ಆಮಿಷಕ್ಕೆ ಒಳಗಾಗುತ್ತಾರೆ ಅಲ್ಲಿಯವರೆಗೆ ಅಮಿಷ ನೀಡುವವರು ಇರುತ್ತಾರೆ. ಇನ್ನೊಂದು ಕೋನದಲ್ಲಿ ನೋಡಿದರೆ, ಎಲ್ಲಿಯವರೆಗೆ ಆಮಿಷ ನೀಡುತ್ತಾರೋ ಅಲ್ಲಿಯವವರೆಗೆ ಕೈ ಚಾಚುವವರಿರುತ್ತಾರೆ. ಹಾಗೆಂದ ಮಾತ್ರಕ್ಕೆ ಎಲ್ಲಾ ಮತದಾರರು ಕೈ ಚಾಚುತ್ತಾರೆ ಎಂದು ಅರ್ಥವಲ್ಲ. ತಮ್ಮದೇ ಹಣದಿಂದ ನೂರಾರು ರೂಪಾಯಿ ಖರ್ಚು ಮಾಡಿ ದೂರದಿಂದ ಬಂದು ಮತವನ್ನು ಚಲಾಯಿಸಿ ಧನ್ಯತಾ ಭಾವದಿಂದ ಹಿಂದಿರುಗುವ ಮಂದಿ ಅದೆಷ್ಟೋ ಇದ್ದಾರೆ. ಹಣ ನೀಡಲು ಹೋದವರಿಗೆ ಮುಖಕ್ಕೆ ರಾಚುವಂತೆ ಪ್ರತಿಕ್ರಿಯಿಸಿ ದುಡ್ಡನ್ನು, ಉಡುಗೊರೆಗಳನ್ನು ನಿರಾಕರಿಸಿದ ದಕ್ಷ ಮತದಾರರು ಲಕ್ಷ ಲಕ್ಷ ಇದ್ದಾರೆ. ಇದು ಒಂದು ಮುಖವಾದರೆ ಅಭ್ಯರ್ಥಿಗಳ ಕಡೆಯಿಂದಲೂ ಹಣ ಚೆಲ್ಲಲಾರದೆ, ಅವಕಾಶವನ್ನೇ ನಿರಾಕರಿಸಿದ ಮಾದರಿ ಜನನಾಯಕರು ನಮ್ಮ ಕಣ್ಣ ಮುಂದೆ ಹಾದುಹೋಗುತ್ತಾರೆ. ಮತದಾನದ ಪ್ರಕ್ರಿಯೆ ಹಣದ ಮೇಲಾಟವಾಗುವ ಹೊತ್ತಿಗೆ ಟಿಕೆಟ್ ನಿರಾಕರಿಸಿ ಚುನಾವಣಾ ಕಣದಿಂದ ಹಿಂದೆ ಸರಿದ ವ್ಯಕ್ತಿ ಮೊನ್ನೆ ಮೊನ್ನೆ ತಾನೆ ನಮ್ಮನಗಲಿದ ಎಚ್. ಜಿ. ಗೋವಿಂದೇಗೌಡ ಅವರು. ಇದೇ ಹಾದಿಯಲ್ಲಿ ಕರಾವಳಿಯ ಬಿ. ಎಂ. ಇದಿನಬ್ಬ ಅವರು ಕೂಡ ಸ್ಪರ್ಧಿಸುವ ಅವಕಾಶ ನಿರಾಕರಿಸಿ ಮತದಾನದ ಪಾವಿತ್ರ್ಯತೆ ಕಾಪಾಡಲು ಯತ್ನಿಸಿದ್ದರು. ರ್ವ ಚಿಂತನಶೀಲ ಸಮಾಜವಾದಿ ರಾಜಕಾರಣಿಯಾಗಿದ್ದ ಎಂ.ಪಿ.ಪ್ರಕಾಶ್ ಅವರಿಗೆ ತಮ್ಮ ಜೀವಿತದ ಕೊನೆಯ ಚುಣಾವಣೆಯನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಅವರೊಮ್ಮೆ ತಮ್ಮ ಅಂತರಂಗವನ್ನು ತೆರೆದಿಟ್ಟು, ತನ್ನ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದಾಗ, ಮತದಾರರ ಒಂದು ಗುಂಪು ಹಳ್ಳಿಯೊಂದರ ಧಾರ್ಮಿಕ ಕೇಂದ್ರವನ್ನು ತೋರಿಸಿ ಮತ್ತೋರ್ವ ಸ್ಪರ್ಧಿ ಈ ಕೇಂದ್ರಕ್ಕೆ ನೀಡಿದ ಹಣದ ಮೊತ್ತವನ್ನು ಹೇಳಿ, ನೀವೆಷ್ಟು ನೀಡುತ್ತೀರಿ ಎಂದು ನೇರವಾಗಿ ಕೇಳಿದ್ದರಂತೆ. ಮತ ಮಾರಾಟವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಎಂ. ಪಿ. ಪ್ರಕಾಶ್ ಅವರಿಗೆ ಹಣದ ಮೇಲಾಟದಲ್ಲಿ ಆ ಚುನಾವಣೆಯನ್ನು ಗೆಲ್ಲಲಾಗಲಿಲ್ಲ ಎನ್ನುವುದು ಬೇರೆ ಮಾತು. ರ ದಶಕ ಮತ್ತು ನಂತರದಲ್ಲಿ ಚುನಾವಣಾ ಆಯೋಗ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು ಚುನಾವಣಾ ಪ್ರಚಾರದ ವೈಖರಿಯನ್ನು ಸಾಕಷ್ಟು ಸುಧಾರಿಸಿದೆ. ಆಭ್ಯರ್ಥಿಗಳು ಸಲ್ಲಿಸುವ ದಾಖಲೆಗಳು ಪಾರದರ್ಶಕವಾಗಿವೆ. ಆಸ್ತಿ, ಸಂಪತ್ತಿನ ಬೆಳವಣಿಗೆಯನ್ನು ಯಾವುದೇ ಮತದಾರ ನೋಡಬಹುದಾಗಿದೆ. ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಧುಮುಕಲು ಹಿಂದೆ ಮುಂದೆ ನೋಡುವಂತಾಗಿದೆ. ಮತಗಟ್ಟೆಯ ಮೇಲೆ ದಾಳಿ, ಮತಪೆಟ್ಟಿಗೆಯ ಅಪಹರಣ ಮೊದಲಾದ ಅನಿಷ್ಟಗಳು ನಿವಾರಣೆಯಾಗಿವೆ. ಬಹಿರಂಗವಾಗಿ ನಡೆಯುತ್ತಿದ್ದ ಬಹುಪಾಲು ಅಕ್ರಮಗಳು ಆಯೋಗದ ಬಿಗಿ ನಿಲುವಿನಿಂದ ಕಡಿಮೆಯಾಗಿರುವುದು ಆಶಾದಾಯಕ ಅಂಶವಾಗಿದ್ದರೂ, ಅಂತರ್ಗತವಾಗಿ ಹರಿಯುತ್ತಿರುವ ಹಣದ ಹೊಳೆಗೆ ತಡೆಯೊಡ್ಡುವ ಕಾರ್ಯ ಇನ್ನೂ ಆಗಬೇಕಿದೆ. ಇದನ್ನು ಆಯೋಗದಿಂದ ಮಾತ್ರ ಆಗಬೇಕೆಂದು ನಿರೀಕ್ಷಿಸುವುದು ತಪ್ಪು. ಮತದಾರ ತನ್ನ ಮತವನ್ನು ಆತ್ಮ ಸಾಕ್ಷಿಯಾಗಿ ಚಲಾಯಿಸುವುದು, ಇರುವ ಅಭ್ಯರ್ಥಿಗಳ ಪೈಕಿ ಶಾಂತಿ, ಪ್ರಗತಿ, ಸಹಬಾಳ್ವೆ, ಪ್ರಾಮಾಣಿಕತೆಗೆ ಒತ್ತು ಕೊಡುವವರನ್ನು ಆಯ್ಕೆ ಮಾಡುವ ಪ್ರತಿಜ್ಞೆಮಾಡಿದಾಗ ರಾಷ್ಟ್ರೀಯ ಮತದಾರರ ದಿನಾಚಾರಣೆಗೆ ಹೆಚ್ಚು ಮೌಲ್ಯ ಬರುತ್ತದೆ. ಸಂವಿಧಾನಬದ್ಧವಾಗಿ ಕಾರ್ಯ ನಿರ್ವಹಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕೂಡ ಇಂದಿನ ಅತಿ ಜರೂರಿನ ಕಾರ್ಯವಾಗಿದೆ. ಸಂವಿಧಾನದ ಪ್ರತಿಜ್ಞೆಯನ್ನು ತೆಗೆದುಕೊಂಡು ಸಂವಿಧಾನಕ್ಕೆ ವಿರುದ್ಧವಾಗಿ ಕಾರ್ಯ ನಿರ್ವಹಿಸುವ ಪ್ರವೃತ್ತಿ ಅಲ್ಲಲ್ಲಿ ಹೆಚ್ಚುತ್ತಿರುವ ಈ ದಿನಗಳಲ್ಲಿ ದೇಶದ ಮತದಾರರು ಮತದಾನದ ನೈಜ ಸಾಮರ್ಥ್ಯವನ್ನು ಅರಿತುಕೊಂಡರೆ ರಾಷ್ಟ್ರೀಯ ಮತದಾರರ ದಿನಾಚರಣೆಯು ಅರ್ಥಪೂರ್ಣವಾಗುತ್ತದೆ.