ತಾಯ್ತನವನ್ನು ಧಾರೆಯೆರೆದ ಸಾವಿತ್ರಿಬಾಯಿ
‘ಕ್ರಾಂತಿ ಜ್ಯೋತಿ ಸಾವಿತ್ರಿ ಬಾಯಿ ಫುಲೆ’ ಕೃತಿಯ ಮೂಲಕ ಡಾ. ಎಚ್. ಎಸ್. ಅನುಪಮಾ ಅವರು ಜಾತಿವ್ಯವಸ್ಥೆಯ ಜೊತೆ ಜೊತೆಗೆ ಲಿಂಗಸಮಾನತೆಯನ್ನೂ ಚರ್ಚಿಸುತ್ತಾರೆ. ಮಹಿಳಾ ಶಿಕ್ಷಣ ಎನ್ನುವುದು ದೂರದ ಕನಸಾಗಿದ್ದ ಸಂದರ್ಭದಲ್ಲಿ, ಬಾಲಕಿಯರಿಗಾಗಿ ಶಾಲೆ ತೆರೆದು ಸಮಾನತೆಯತ್ತ ಹೆಜ್ಜೆಯಿಡುವುದು ಸಣ್ಣ ಸಾಹಸವೇನೂ ಅಲ್ಲ. ಸಾವಿತ್ರಿ ಭಾಯಿ ಫುಲೆ ಜಾತಿವ್ಯವಸ್ಥೆಯ ಜೊತೆಗೆ ಲಿಂಗ ಅಸಮಾನತೆಯ ವಿರುದ್ಧವೂ ಅಪ್ರಜ್ಞಾಪೂರ್ವಕವಾಗಿ ಹೇಗೆ ಕೆಲಸ ಮಾಡಿದರು ಎನ್ನುವುನ್ನು ಈ ಕೃತಿ ತೆರೆದಿಡುತ್ತದೆ. ಜಾತಿ ರಹಿತ ಸಮಾಜಕ್ಕಾಗಿ ಕನಸಿದ ಫುಲೆ ಜೋಡಿಯನ್ನು ಹೊಸ ಅರಿವಿನೊಂದಿಗೆ, ಹೊಸ ಬೆಳಕಿನೊಂದಿಗೆ ತಿಳಿಸುವ ಪ್ರಯತ್ನವನ್ನೂ ಈ ಕೃತಿ ಮಾಡುತ್ತದೆ. ಈ ಕೃತಿಯಲ್ಲಿ ಸಾವಿತ್ರಿ ಬಾಯಿ ಫುಲೆಯ ಬೇರೆ ಮುಖಗಳನ್ನು ತೆರೆದಿಡುತ್ತಾರೆ. ಆಕೆ ಶಿಕ್ಷಕಿಯಾಗಿ ಮಾತ್ರವಲ್ಲ, ಇನ್ನಿತರ ಕ್ಷೇತ್ರಗಳಲ್ಲೂ ಸಾಧನೆಯನ್ನು ಮಾಡಿದ್ದಾರೆ. ಸಮಾಜಕ್ಕೆ ತನ್ನೊಳಗಿನ ತಾಯ್ತನವನ್ನೆಲ್ಲ ದಾರೆಯೆರೆದಿದ್ದಾರೆ ಎನ್ನುವುದನ್ನು ಅತ್ಯಂತ ಆಪ್ತವಾಗಿ ಈ ಕೃತಿ ಕಟ್ಟಿಕೊಡುತ್ತದೆ.
ಲಡಾಯಿ ಪ್ರಕಾಶನ ಗದಗ ಹೊರತಂದಿರುವ ಈ ಕೃತಿಯ ಮುಖಬೆಲೆ 60 ರೂ. ಆಸಕ್ತರು 9480 211320 ದೂರವಾಣಿಯನ್ನು ಸಂಪರ್ಕಿಸಬಹುದು.