ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯ
ಬೆಂಗಳೂರು, ಜ. 25: ಕೆಎಸ್ಸಾರ್ಟಿಸಿ, ಡಿವಿಓಐಎಸ್ ಕಮ್ಯೂನಿಕೇಷನ್ಸ್ ಪ್ರೈವೇಟ್ ಲಿ. ಸಹಯೋಗದಲ್ಲಿ ನಿಗಮದ ಆಯ್ದ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಇಂಟರ್ನೆಟ್ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರ ಬಸ್ ನಿಲ್ದಾಣ ಹಾಗೂ ಹಾಸನ, ಮಂಡ್ಯ, ಮೈಸೂರು, ಮಡಿಕೇರಿ, ಧರ್ಮಸ್ಥಳ, ಮಂಗಳೂರು, ಕುಂದಾಪುರ, ಶಿವಮೊಗ್ಗ, ಹರಿಹರ, ದಾವಣಗೆರೆ, ಚಿಕ್ಕಮಗಳೂರು ಮತ್ತು ತುಮಕೂರು ನಗರಗಳ ಬಸ್ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಇಂಟರ್ನೆಟ್ ಸೇವೆಯನ್ನು ಒದಗಿಸಲಾಗಿದೆ.
ಸಾರ್ವಜನಿಕ ಪ್ರಯಾಣಿಕರು ಸದರಿ ವೈ-ಫೈ ಸೌಲಭ್ಯವನ್ನು ಉಚಿತವಾಗಿ ಪಡೆಯಬಹುದು. ಈ ಸೇವೆಯನ್ನು ಸದ್ಯದಲ್ಲಿಯೇ ಕೋಲಾರ ಮತ್ತು ಚಿತ್ರದುರ್ಗ ನಗರ ಬಸ್ ನಿಲ್ದಾಣಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಭಾರತ ದೇಶದಲ್ಲಿಯೇ ಪ್ರಥಮವಾಗಿ ನಿಗಮವು ಮೇಲ್ಕಂಡ ಯೋಜನೆಯನ್ನು ಜಾರಿಗೆ ತಂದಿದ್ದು, ಸುಮಾರು 1ಲಕ್ಷ ಪ್ರಯಾಣಿಕರು ಈ ಸೌಕರ್ಯವನ್ನು ಪಡೆಯಬಹುದಾಗಿದೆ.
ವೈ-ಫೈ ಬಳಸಲು ಕ್ರಮ: ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ನಲ್ಲಿ ಲಭ್ಯವಿರುವ ವೈ-ಫೈನಲ್ಲಿ ಐ-ಒಎನ್ ವೈ-ಫೈಯನ್ನು ಆಯ್ಕೆ ಮಾಡಿ, ಐ-ಒಎನ್ ನೆಟ್‌ವರ್ಕ್ ಅಥವಾ ಗೂಗಲ್ ಪ್ಲೆ ಸ್ಟೋರ್‌ನಿಂದ ಉಚಿತ ಒಎನ್ ವೈ-ಫೈ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
ಐ-ಫೋನ್ ಬಳಕೆದಾರರಿಗೆ, ಲಾಗಿನ್ ಪುಟ ಬ್ರೌಸರ್ ಮೂಲಕ ಕಾಣಿಸಿಕೊಳ್ಳುತ್ತದೆ ಅಥವಾ ಅಪ್ಲಿಕೇಷನ್‌ನ್ನು ಐಸ್ಟೋರ್‌ನಿಂದಲೂ ಮಾಡಬಹುದು, ಹತ್ತು(10) ಅಂಕಿಯ ಮೊಬೈಲ್ ಸಂಖ್ಯೆ ನಮೂದಿಸಿ ನಂತರ, ಎಸ್‌ಎಂಎಸ್ ಮೂಲಕ ಪಾಸ್‌ವರ್ಡ್ ಸ್ವೀಕರಿಸುತ್ತೀರಿ, ತದನಂತರ ಸಬ್‌ಮಿಟ್ ಬಟನ್ ಒತ್ತಿರಿ, ತಕ್ಷಣ ಇಂಟರ್ನೆಟ್ ಸಂಪರ್ಕ ಮಾಡಬಹುದು..!
ಬಳಕೆದಾರರು ಯಾವುದೇ ಸಹಾಯಕ್ಕಾಗಿ ದೂ.ಸಂಖ್ಯೆ 080-4511 4512/ 4511 4513ಗೆ ಕರೆ ಮಾಡಬಹುದು. ‘ಡಿಜಿಟಲ್ ಇಂಡಿಯಾ’ದೆಡೆಗೆ ಸಾರಿಗೆ ನಿಗಮದ ವಿಶೇಷ ಕೊಡುಗೆ ಇದಾಗಿದ್ದು, ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕೆಎಸ್ಸಾರ್ಟಿಸಿ ಪ್ರಕಟನೆಯಲ್ಲಿ ಕೋರಿದೆ.