ಯಕ್ಷರಂಗದ ಕುರಿತ-ಹರಿತ ನಿಲುವುಗಳು
ಯಕ್ಷಗಾನದ ಭೂತ, ವರ್ತಮಾನ ಮತ್ತು ಭವಿಷ್ಯಗಳ ಕುರಿತ ಗಂಭೀರ ವಿಶ್ಲೇಷಣೆ ನೀಡುವ ಕಲಾವೌಲ್ಯ ಪ್ರಸಾರಕ ಗ್ರಂಥವಾಗಿದೆ ಡಾ. ಎಂ. ಪ್ರಭಾಕರ ಜೋಷಿ ಅವರು ಬರೆದ ‘ಯಕ್ಷಗಾನ ಸ್ಥಿತಿ ಗತಿ’. ಯಕ್ಷಗಾನದ ಕುರಿತಂತೆ ಆಳವಾದ ಅಧ್ಯಯನ ಮಾಡಿರುವ, ಸ್ವತಃ ಹವ್ಯಾಸಿ ಕಲಾವಿದರಾಗಿಯೂ ಗುರುತಿಸಲ್ಪಟ್ಟಿರುವ, ತಾಳಮದ್ದಲೆಗಳಲ್ಲಿ ಈಗಾಗಲೇ ಜನಪ್ರಿಯರಾಗಿರುವ ಎಂ. ಪ್ರಭಾಕರ ಜೋಷಿ ಅವರು ವಿವಿಧ ಸಂದರ್ಭಗಳಲ್ಲಿ ಬರೆದ ಲೇಖನಗಳು, ಗೋಷ್ಠಿಗಳ ಉಪನ್ಯಾಸಗಳು ಕೆಲವು ಪರಿಷ್ಕಾರಗಳೊಂದಿಗೆ ಇಲ್ಲಿ ಪುಸ್ತಕ ರೂಪವನ್ನು ಪಡೆದಿದೆ.ಯಕ್ಷಗಾನದ ರಂಗ ಕಲಾಭಾಷೆ, ಕಲಾ ರಚನಾ ಸ್ವರೂಪ, ಸಾಂಪ್ರದಾಯಿಕ ನೆಲೆಗಳು ಮತ್ತು ಅದರ ಭವಿಷ್ಯ, ಚಿತ್ರಾಭಿನಯ, ಭಾಗವತಿಕೆ, ವಸ್ತು ಮಂಡನೆ, ಆಯ್ಕೆ ಅರ್ಥೈಸುವಿಕೆ ಹಾಗೆಯೇ ಕೆಲವು ಪ್ರಸಂಗಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಯಕ್ಷಗಾನದ ಕುರಿತಂತೆ ಚರ್ಚಿಸಲಾಗಿದೆ.
ಯಕ್ಷಗಾನದ ಸಂಪ್ರದಾಯ ಮತ್ತು ಶಾಸ್ತ್ರೀಯತೆಗೆ ಹೆಚ್ಚು ಒತ್ತುಕೊಟ್ಟು ಬರೆಯುವ ಜೋಷಿ, ಕಾವ್ಯ ಪ್ರಕಾರವಾಗಿಯೂ, ರಂಗಪ್ರಕಾರವಾಗಿಯೂ ತಾವು ಅರ್ಥೈಸಿಕೊಂಡ ಬಗೆಯನ್ನು ಇಲ್ಲಿ ಹಂಚಿಕೊಳ್ಳುತ್ತಾರೆ. ಇಲ್ಲಿ ಕಥಾವಸ್ತುವು ಯಕ್ಷಗಾನದಲ್ಲಿ ಪಡೆಯುವ ರೂಪಾಂತರಗಳ ಕುರಿತಂತೆಯೂ ವಿಶ್ಲೇಷಿಸುತ್ತಾರೆ. ಈ ಕೃತಿಯಲ್ಲಿ ರಂಗಕಲೆಯನ್ನು ಆರ್ಥಿಕ, ಸಾಮಾಜಿಕ ಹಿನ್ನೆಲೆಯಾಗಿಟ್ಟುಕೊಂಡು ಜೋಷಿಯವರು ಚರ್ಚಿಸುವುದು ವಿಶೇಷ ವಾಗಿದೆ. ವರ್ತಮಾನದಲ್ಲಿ ಅದು ಪಡೆಯುವ ರೂಪಾಂತರಗಳ ಕಾರಣಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ಅವರು ಈ ಕೃತಿಯಲ್ಲಿ ಮಾಡುತ್ತಾರೆ. ಲೇಖನಕ್ಕೆ ಪೂರಕವಾಗಿ, ವಿಷಯವನ್ನು ಇನ್ನಷ್ಟು ಆಪ್ತಗೊಳಿಸುವಂತಹ ವರ್ಣಚಿತ್ರಗಳು ಕೃತಿಯ ಇನ್ನೊಂದು ಹೆಗ್ಗಳಿಕೆಯಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಮಂಗಳ ಕೃತಿ ಮಾಲಿಕೆಯ ಅಂಗವಾಗಿ ಈ ಕೃತಿಯನ್ನು ಹೊರತರಲಾಗಿದೆ. ಕೃತಿಯ ಮುಖಬೆಲೆ 150ರೂ. ಆಸಕ್ತರು 0824 2284537 ದೂರವಾಣಿಯನ್ನು ಸಂಪರ್ಕಿಸಬಹುದು.