varthabharthi


ಒರೆಗಲ್ಲು

ಪುಸ್ತಕ ಪ್ರಕಟನೆಯ ಸವಾಲು

ವಾರ್ತಾ ಭಾರತಿ : 29 Jan, 2016
ಡಾ. ಆರ್ಕೆ, ಮಣಿಪಾಲ

ಇಪ್ಪತ್ತು ವರ್ಷಗಳಷ್ಟು ಹಿಂದಿನ ಮಾತು. ಉಡುಪಿಯಲ್ಲಿ ಅಚ್ಚುಕೂಟ ನಡೆಸುತ್ತಿದ್ದ ಹಿರಿಯರೊಬ್ಬರನ್ನು ಭೇಟಿಯಾಗಿ ನನ್ನ ವಿಮರ್ಶಾ ಬರಹಗಳ ಸಂಕಲನದ ಮುದ್ರಣಕ್ಕೆ ತಗುಲಬಹುದಾದ ಅಂದಾಜು ವೆಚ್ಚದ ಬಗ್ಗೆ ವಿಚಾರಿಸಿದೆ. ಅವರು ಸೂಚಿಸಿದ ಹಾಗೆ ಮುದ್ರಣ ಮಾಡುವುದಾದರೆ ಸಾಲ ಮಾಡಲೇಬೇಕಿತ್ತು. ಆನಂತರ ಪ್ರತಿಗಳ ಮಾರಾಟದ ಸಮಸ್ಯೆಯ ಬಗ್ಗೆ ತಿಳಿಸಿದೆ. ಅವರು ನನಗೆ ಹೇಳಿದ ಮಾತು ಇಂದಿಗೂ ನೆನಪಿದೆ: ‘‘ಸ್ವಾಮಿ, ನೀವು ಲೇಖಕರು. ನಿಮ್ಮ ಪುಸ್ತಕಗಳನ್ನು ನೀವೇ ಏಕೆ ಹೆಮ್ಮೆಯಿಂದ ಮಾರಾಟ ಮಾಡಬಾರದು? ಸಂಘ ಸಂಸ್ಥೆಗಳಿಗೋ ವ್ಯಕ್ತಿಗಳಿಗೋ ನೀವೇ ಮಾರಾಟ ಮಾಡಿ. ಸಂಕೋಚ ಬಿಟ್ಟುಬಿಡಿ’’. ಹೌದು, ಅವರು ಹುರಿದುಂಬಿಸಿದಂತೆ ಕಾಲೇಜು ರಜಾಕಾಲದಲ್ಲಿ ಸ್ಕೂಟರ್‌ನಲ್ಲಿ ಸುಮಾರು 30 ಕಿ.ಮೀ. ದೂರದ ಶಾಲಾ ಕಾಲೇಜುಗಳಿಗೆ ನಾನೇ ಹೋಗಿ ಬಿಲ್ ಸಹಿತ ಪುಸ್ತಕದ ಪ್ರತಿಗಳನ್ನು ನೀಡಿದೆ. ಕೆಲವರು ಸ್ಥಳದಲ್ಲೇ ಹಣ ತೆತ್ತರು; ಮತ್ತೆ ಕೆಲವರು ಕ್ರಮೇಣ ಕಳಿಸುವುದಾಗಿ ತಿಳಿಸಿದರು. ಸುಮಾರು 50-60 ಸಂಸ್ಥೆಗಳಿಗೆ ಪುಸ್ತಕಗಳ ಪ್ರತಿಗಳನ್ನು ನೀಡಿದೆ. ಅಂಥ ಕೆಟ್ಟ ಅನುಭವವಾಗಲಿಲ್ಲ; ನಷ್ಟವೇನೂ ಆದ ನೆನಪಿಲ್ಲ. ಅಲ್ಪ ಸ್ವಲ್ಪ ಪ್ರತಿಗಳಿಗೆ ಹಣವೂ ಇಲ್ಲ; ಪ್ರತಿಗಳು ವಾಪಸೂ ಸಿಗಲಿಲ್ಲ. ಆದರೆ, ನನ್ನ ಅನುಭವ ಕಹಿಯೆನಿಸಲಿಲ್ಲ.

ಹಿಂದೆ, ಮನೋಹರ ಗ್ರಂಥ ಮಾಲೆಯ ಜಿ.ಬಿ.ಜೋಶಿ (ಜಡಭರತ) ಜೋಳಿಗೆಯಿಂದ ಒಂದೊಂದೇ ಪುಸ್ತಕ ಹೊರತೆಗೆದು ಹೀಗೆಯೇ ಮಾರಾಟ ಮಾಡುತ್ತಿದ್ದರು. ಉಡುಪಿಯಲ್ಲಿ ಈಗ ಕು.ಗೋ. ಹಾಗೆಯೇ ಮಾಡುತ್ತಿದ್ದಾರೆ.

ಗ್ರಂಥ ಪ್ರಕಟಿಸಿ ನಿತ್ಯದ ಖರ್ಚನ್ನು ತೂಗಿಸಿಕೊಂಡ ಯಾವ ಲೇಖಕರೂ ಕನ್ನಡದಲ್ಲಿಲ್ಲ. ಅ.ನ.ಕೃ. ಅವರೊಬ್ಬರನ್ನು ಬಿಟ್ಟರೆ. ಶಿವರಾಮ ಕಾರಂತರ ‘ಚೋಮನ ದುಡಿ’ಯ 1,000 ಪ್ರತಿಗಳು ಮಾರಾಟವಾಗಲು 12 ವರ್ಷ ತಗುಲಿತ್ತು. ಕಾದಂಬರಿಗಳ ಪಾಡೇ ಹೀಗಾದರೆ, ವೈಚಾರಿಕ - ವಿಮರ್ಶಾತ್ಮಕ- ಕವಿತಾ ಸಂಕಲನಗಳ ಪಾಡು ಹೇಗಿದ್ದೀತು? ಸಾಕ್ಷರತೆಯ ಪ್ರಮಾಣ ಈಚೆಗೆ ಹೆಚ್ಚಾಗಿದ್ದರೂ ಪುಸ್ತಕ ಪ್ರಿಯತೆ ಮತ್ತು ವಾಚನೀಯತೆ ಹೆಚ್ಚಿದಂತೆ ಕಾಣುವುದಿಲ್ಲ. ಕೇರಳದಲ್ಲಿ ಶಾಸ್ತ್ರ ಸಾಹಿತ್ಯ ಪರಿಷತ್ತು ಲೇಖಕರ ಗ್ರಂಥಗಳ 25,000 ಪ್ರತಿಗಳನ್ನು ಮುದ್ರಿಸಿ ಮಾರಾಟ ಮಾಡಿಸುತ್ತದೆ; ಲೇಖಕರಿಗೆ ಕೈ ತುಂಬ ಸಂಭಾವನೆ ಸಿಗುತ್ತದೆ. ಇದು ಕೆಲವು ವರ್ಷಗಳ ಹಿಂದಿನ ಮಾತು. ಈಗ ಪರಿಸ್ಥಿತಿ ಹೇಗೋ ತಿಳಿದಿಲ್ಲ. ಸಂಪೂರ್ಣ ಸಾಕ್ಷರತೆ ಸಾಧಿಸಿದ ರಾಜ್ಯ ಕೇರಳ. ಪ್ರತಿಯೊಬ್ಬ ಕೇರಳೀಯನೂ ದಿನಪತ್ರಿಕೆ ಕೊಂಡು ಓದುತ್ತಾನೆ. ಮಣಿಪಾಲದ ಆಸ್ಪತ್ರೆಯಲ್ಲಿ ಶುಶ್ರೂಷೆಗೆಂದು ದಾಖಲಾದ ರೋಗಿಯ ಕುಟುಂಬಿಕರೂ, ಹಿತೈಷಿಗಳೂ ಮಧ್ಯಾಹ್ನದ ಹೊತ್ತಿಗೆ ಪತ್ರಿಕಾ ಮಳಿಗೆಯಲ್ಲಿರುವ ಮಲೆಯಾಳಿ ದಿನಪತ್ರಿಕೆಯ ಪ್ರತಿಗಳನ್ನು ಖಾಲಿ ಮಾಡುತ್ತಾರೆ. ನಮ್ಮಲ್ಲಿ ವಿದ್ಯಾವಂತರೂ ದಿನಪತ್ರಿಕೆ ಕೇರಳೀಯರಷ್ಟು ಪ್ರಮಾಣದಲ್ಲಿ ಕೊಂಡು ಓದುವುದಿಲ್ಲ ಎಂಬುದನ್ನು ಗಮನಿಸಬಹುದು. ದಿನಪತ್ರಿಕೆಗಳನ್ನು ಕೊಂಡು ಓದದೆ ನೋಡುತ್ತಾರೆ; ಅಥವಾ ಮತ್ತೊಬ್ಬರಿಂದ ಈಸಿಕೊಂಡು ಬಿಟ್ಟಿ ಕಣ್ಣಾಡಿಸುತ್ತಾರೆ.

ಪರಿಸ್ಥಿತಿ ಹೀಗಿದ್ದರೂ ನಮ್ಮಲ್ಲಿ ಪ್ರಕಾಶನ ಸಂಸ್ಥೆಗಳೇನೂ ಕಡಿಮೆಯಿಲ್ಲ. ಮಾರುಕಟ್ಟೆಯ ಗೊತ್ತು ಗುರಿ ಗಮನಿಸಿ ಲೇಖಕರಿಂದ ಜನರು ಹೆಚ್ಚಾಗಿ ಓದಲು ಇಷ್ಟಪಡುವ ಕಿರುಪುಸ್ತಕಗಳನ್ನು ಬರೆಸಿ ಪ್ರಕಟಿಸುತ್ತಾರೆ. ಪ್ರಗತಿಪರ ಪ್ರಕಾಶನ ಸಂಸ್ಥೆಗಳೂ ಇದನ್ನೇ ಮಾಡುತ್ತಿವೆ ಎಂದರೆ ಮಾರುಕಟ್ಟೆ ಅಥವಾ ಓದುಗನ ಅಭಿರುಚಿ ಯಾವ ಸ್ವರೂಪದ್ದೆಂಬುದು ಮನದಟ್ಟಾದೀತು.

ನಾವು ಕಿರಿಯರಾಗಿದ್ದಾಗ ಮಂಗಳೂರಲ್ಲಿ ಒಂದಾಣೆ ಮಾಲೆಯ ಕಿರುಪುಸ್ತಕಗಳು ಪ್ರಕಟವಾಗುತ್ತಿದ್ಜವು. ಕರ್ನಾಟಕದಲ್ಲಿ ಅತ್ಯಂತ ಪ್ರಾಚೀನ ವಿಶ್ವವಿದ್ಯಾನಿಲಯವಾದ ಮೈಸೂರು ವಿ.ವಿ. ಪ್ರಸಾರಾಂಗದ ಮೂಲಕ ನಾಲ್ಕಾಣೆಯ ಉಪನ್ಯಾಸಮಾಲಿಕೆಯನ್ನು ಪ್ರಕಟಿಸುತ್ತಿತ್ತು. ಸುಲಭವೂ, ಸುಭಗವೂ ಆದ ಶೈಲಿಯಲ್ಲಿ ಇಂಥ ಏಕವಿಷಯಕ ಗ್ರಂಥಗಳನ್ನು ಈಗಲೂ ಯಾವುದೇ ಸಂಸ್ಥೆ ಪ್ರಕಟಿಸಿದಲ್ಲಿ ಮಾರಾಟವಾಗದೆ ಇರುವುದಿಲ್ಲ. ಸುಮಾರು ಹತ್ತು ವರ್ಷಗಳಾಚೆ ಯುವ ಪ್ರಗತಿಪರ ಪ್ರಕಾಶಕರೊಬ್ಬರು ಸಿರ್ಸಿಯಿಂದ ಕೆಲವು ಕಿರುಹೊತ್ತಿಗೆಗಳನ್ನು ಪ್ರಕಟಿಸುತ್ತಿದ್ದರು; ಆನಂತರ ಅವರೂ ನಿಲ್ಲಿಸುವಂತಾಯಿತು.
ನಾವು ಜನಸಾಮಾನ್ಯರಲ್ಲಿ ಪುಸ್ತಕಪ್ರಿಯತೆಯ ಸಂಸ್ಕೃತಿಯನ್ನು ಬೆಳೆಸಲು ದೃಢ ಸಂಕಲ್ಪ ಮಾಡಬೇಕು; ಪೋಷಕರೂ ಸಾರ್ವಜನಿಕರೂ ಇದನ್ನು ಪ್ರೋತ್ಸಾಹಿಸುವಂತಾಗಬೇಕು. ನಾನೇ ಸಾರ್ವಜನಿಕ ವೇದಿಕೆಗಳಲ್ಲಿ ಬೋಧನೆಯ ನಡುವೆಯೂ ಹಾರ-ತುರಾಯಿ-ಪುಷ್ಪಗುಚ್ಛಗಳ ಬದಲು ಪುಸ್ತಕ ನೀಡಲು ಒತ್ತಾಯಿಸಿ ಎಂದು ಹುರಿದುಂಬಿಸುತ್ತಿದ್ದೆ; ಜನ್ಮದಿನದಂದು ಅದ್ದ್ದೂರಿ ನಡೆಸುವ ಬದಲು ಸಾಂಕೇತಿಕವಾಗಿ ಸಿಹಿ ಹಂಚಿ ಅಭಿಮಾನಿಗಳಿಂದ ಹಣ ಪಡೆಯಿರಿ; ನಿಘಂಟು - ಅದರಲ್ಲೂ ಈಚಿನ ಆವೃತ್ತಿಗಳನ್ನು ಕೊಂಡುಕೊಳ್ಳಿರಿ ಎಂದು ಸೂಚಿಸುತ್ತಿದ್ದೆ. ನೂರು ರೂ. ಉಡುಗೊರೆ ನೀಡುವ ಹಿತೈಷಿಗಳಲ್ಲಿ ‘ನನಗೆ ಹೊಚ್ಚ ಹೊಸ ನಿಘಂಟು ಕೊಂಡುಕೊಳ್ಳಬೇಕಾಗಿದೆ; ನನಗೆ ಇನ್ನಷ್ಟು ಉಡುಗೊರೆ ನೀಡಬೇಕೆಂದು ವಿನಂತಿಸಿ’ ಎಂದು ಸಲಹೆ ನೀಡುತ್ತಿದ್ದೆ. ಎಳೆಯರ ಜ್ಞಾನಪಿಪಾಸೆಗೆ ಯಾವೊಬ್ಬನೂ ತಣ್ಣೀರೆರೆಯುತ್ತಾನೆ ಎಂದು ನಾನು ತಿಳಿಯಲಾರೆ.

ಗೋಪರಾಜು ತಿಮ್ಮರಾಜು (ಗೋರಾ) ಎಂಬ ವಿಚಾರವಾದಿ ಇದ್ದರು. ಅವರು ಪುಷ್ಪಹಾರ ಹಾಕುವುದನ್ನು ಆಕ್ಷೇಪಿಸುತ್ತಿದ್ದರು. ಮನೆಯೆದುರು ಹೂಕುಂಡವಿಟ್ಟುಕೊಳ್ಳುವ ಬದಲು ತರಕಾರಿಯ ಕುಂಡಗಳನ್ನಿಟ್ಟುಕೊಳ್ಳಲು, ಪುಷ್ಪಹಾರದ ಬದಲು ತರಕಾರಿಯ ಮಾಲೆ ಹಾಕಲು ಬೋಧಿಸುತ್ತಿದ್ದರು. ವಿಲಕ್ಷಣವಾದ ಕ್ರಮವೆನಿಸಬಹುದಾದರೂ ತರಕಾರಿ ಬೆಳೆಯಲು, ಬಳಸಲು ಇದು ಸ್ಫೂರ್ತಿ ನೀಡಬಹುದಾದ ಅರ್ಥಪೂರ್ಣ ಕ್ರಮ.
ಇಂದು ಶಾಲಾಕಾಲೇಜುಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗ್ರಂಥರೂಪದಲ್ಲಿ ಬಹುಮಾನ ನೀಡೋಣವೆಂದರೆ, ವಿದ್ಯಾರ್ಥಿಗಳೇ ನಗದು ರೂಪದಲ್ಲಿ ನೀಡಬೇಕೆಂದು ವಿನಂತಿಸುತ್ತಾರೆ. ವಿವಿಧ ಆಸಕ್ತಿಯ ವಿದ್ಯಾರ್ಥಿಗಳಿಗೆ ಅವರ ವಯೋಮಾನಕ್ಕೆ ಹೊಂದುವಂಥ ಪುಸ್ತಕಗಳನ್ನಾಯ್ದು ಬಹುಮಾನ ನೀಡುವಾಗ ಶಿಕ್ಷಕನಿಗೆ ಹೆಚ್ಚು ಶ್ರಮವಾದರೂ ಅಡ್ಡಿಯಿಲ್ಲವೆಂದು ಶಿಕ್ಷಕರೇ ತೀರ್ಮಾನಿಸಿದರೂ ಯಾವ ಉತ್ತೇಜಕ ಪ್ರತಿಕ್ರಿಯೆಯಿಲ್ಲ.

ಕೆಲವು ಪ್ರಕಾಶಕರು ಒಂದು ಗ್ರಂಥ 250 ಪುಟಗಳಷ್ಟಿದ್ದರೆ 300 ರೂ. ಬೆಲೆಯಿಡುತ್ತಾರೆ. ಶೇ. 30-40 ರಿಯಾಯಿತಿ ನೀಡಿ ಲಾರಿ ಪಾರ್ಸೆಲ್ ಅಥವಾ ಕೊರಿಯರ್/ಅಂಚೆ ಮೂಲಕ ಕಳಿಸುವ ವೆಚ್ಚ ಬೇರೆ. ಇನ್ನು ಕೆಲವು ಪ್ರಕಾಶಕರು ಅಥವಾ ಮಾರಾಟಗಾರರು ಲೇಖಕರ ಅಷ್ಟೇ ಬೆಲೆಯ ಗ್ರಂಥಗಳ ಪ್ರತಿಗಳನ್ನು ವಿನಿಮಯ ಮಾಡಿಸಿಕೊಳ್ಳುತ್ತಾರೆ. ಲೇಖಕನ ದೃಷ್ಟಿಯಿಂದ ಇದು ಉಪಯುಕ್ತ. ಕೆಲವು ಪ್ರಕಾಶಕರು ಪುಸ್ತಕದ ಬೆಲೆಯನ್ನು ಮುದ್ರಣ ಮತ್ತು ಹಾಳೆಗಳ ವೆಚ್ಚದ ಮೂರು ಪಟ್ಟಿನಷ್ಟು ನಿಗದಿ ಮಾಡಿ ಮಾರಾಟ ಮಾಡುತ್ತಾರೆ. ಸಗಟು ಖರೀದಿ ಅಥವಾ ಕನ್ನಡ ಪುಸ್ತಕ ಪ್ರಾಧಿಕಾರದ ಅಧಿಕಾರಿಗಳೊಂದಿಗಿನ ತಮ್ಮ ‘ಆತ್ಮೀಯ’ ಸಂಬಂಧವನ್ನು ಈ ರೀತಿ ನಗದೀಕರಿಸಿಕೊಳ್ಳುತ್ತಾರೆ. ಪ್ರತಿಗಳನ್ನು ಮಾರಾಟ ಮಾಡುವ ಕಷ್ಟದಿಂದ ಪಾರಾಗಲು ಕೆಲವು ಪ್ರಕಾಶಕರು ಲೇಖಕನಿಗೆ ನೀಡಬೇಕಾದ ಸಂಭಾವನೆಯ ಪ್ರತಿಯಾಗಿ ಗ್ರಂಥಗಳ ಪ್ರತಿಗಳನ್ನೇ ದಾಟಿಸುತ್ತಾರೆ. ಇನ್ನು, ಲೇಖಕರೇ ಹಣ ಹಾಕಿ ಪುಸ್ತಕ ಅಚ್ಚು ಹಾಕಿ ಶೇ. 50ರಷ್ಟು ಪ್ರತಿಗಳನ್ನು ಪ್ರಕಾಶಕರಿಗೆ ಕಳಿಸಿ, ಅವರು ನೀಡಿದಾಗ/ನೀಡಿದರೆ ಹಣ ವಾಪಸು ಪಡೆಯುತ್ತಾರೆ. ಇನ್ನು ಕೆಲವು ಪ್ರಕಾಶಕರು ತಮ್ಮ ಪ್ರಕಾಶನದ ಹೆಸರನ್ನು ಬಳಸಿದ್ದಕ್ಕೆ ಲೇಖಕರೇ ಶೇ. 25 - 33 ರಿಯಾಯಿತಿ ದರದಲ್ಲಿ ಪ್ರತಿಗಳನ್ನು ಕೊಂಡುಕೊಳ್ಳಬೇಕೆಂದು ತಾಕೀತು ಮಾಡುತ್ತಾರೆ! ಅಥವಾ ಪ್ರಕಾಶಕರೇ ಲೇಖಕರ ಪರವಾಗಿ ರಾಜಾರಾಮ್ ಮೋಹನ್‌ರಾಯ್‌ರ ಪ್ರತಿಷ್ಠಾನಕ್ಕೋ ಕ. ಪು. ಪ್ರಾಧಿಕಾರಕ್ಕೋ ಕೇಂದ್ರ ಗ್ರಂಥಾಲಯ ಇಲಾಖೆಗೋ ಮಾರಾಟ ಮಾಡಿ ಹಣವನ್ನು ಜೇಬಿಗಿಳಿಸಿಕೊಳ್ಳುತ್ತಾರೆ ಹೊರತು ಲೇಖಕನಿಗೆ ನೀಡುವುದೇ ಇಲ್ಲ!

ಆದುದರಿಂದ, ಈ ಎಲ್ಲ ಉಪದ್ವಾಪಗಳನ್ನು ಅನುಲಕ್ಷಿಸಿದಾಗ ಮಾರಾಟದ ಸಮಸ್ಯೆ ಹೀಗಿರುವಾಗ, ಓದುಗನನ್ನು ನಾನಾ ರೀತಿ ಆಕರ್ಷಿಸಲು ಲೇಖಕರು ಮತ್ತು ಪ್ರಕಾಶಕರು ಶ್ರಮಿಸಬೇಕಾಗುತ್ತದೆ. ಐಷಾರಾಮಿ ವಸ್ತುಗಳ ಕೊಳ್ಳುಬಾಕ ಸಂಸ್ಕೃತಿಯ ಜಾಗದಲ್ಲಿ ಪುಸ್ತಕ ಪ್ರಿಯತೆಯ ಸಂಸ್ಕೃತಿಯನ್ನು ಜನಪ್ರಿಯಗೊಳಿಸುವಲ್ಲಿ ಪ್ರಜ್ಞಾವಂತ ನಾಗರಿಕರು, ಶಿಕ್ಷಕರು, ಪೋಷಕರು ಹೆಜ್ಜೆಯಿರಿಸುವಂತಾಗಬೇಕು. ಕೆಲವು ಪ್ರಕಾಶಕರು ನಿಗದಿಯಾದ ವಾರ್ಷಿಕ ಅಥವಾ ಆಜೀವ ಚಂದಾ ಸಂಗ್ರಹಿಸಿ ಇಂತಿಷ್ಟು ಪುಟಗಳ ಗ್ರಂಥಗಳನ್ನು ಚಂದಾದಾರರಿಗೆ ನೀಡುವುದಾಗಿ ಯೋಜನೆ ಹಾಕಿಕೊಂಡಿವೆ. ಈ ಯೋಜನೆ ಕೂಡ ಫಲಪ್ರದವಾಗಿರುವಂತೆ ಕಾಣುವುದಿಲ್ಲ. ಆದುದರಿಂದ ಲೇಖಕರಾಗಲಿ ಪ್ರಕಾಶರಾಗಲಿ ಸುಲಭ ಬೆಲೆಯಲ್ಲಿ ಕಿರು ಹೊತ್ತಿಗೆಗಳನ್ನು ಓದುಗನಿಗೆ ನೀಡುವಂತಾಗಬೇಕು. ಯಾವುದೇ ಸಭೆ, ಸಮಾರಂಭವಾಗಲಿ, ನಾವು ಗ್ರಂಥ ರೂಪದಲ್ಲಿ ಮಾತ್ರ ಉಡುಗೊರೆ- ಸನ್ಮಾನ ಸ್ವೀಕರಿಸುತ್ತೇವೆ ಎನ್ನುವ ಪ್ರತಿಜ್ಞೆ ನಾವೆಲ್ಲ ತೊಡಲೇಬೇಕು.


ಓದುಗನನ್ನು ನಾನಾ ರೀತಿ ಆಕರ್ಷಿಸಲು ಲೇಖಕರು ಮತ್ತು ಪ್ರಕಾಶಕರು ಶ್ರಮಿಸಬೇಕಾಗುತ್ತದೆ. ಐಷಾರಾಮಿ ವಸ್ತುಗಳ ಕೊಳ್ಳುಬಾಕ ಸಂಸ್ಕೃತಿಯ ಜಾಗದಲ್ಲಿ ಪುಸ್ತಕ ಪ್ರಿಯತೆಯ ಸಂಸ್ಕೃತಿ ಯನ್ನು ಜನಪ್ರಿಯಗೊಳಿಸುವಲ್ಲಿ ಪ್ರಜ್ಞಾವಂತ ನಾಗರಿಕರು, ಶಿಕ್ಷಕರು, ಪೋಷಕರು ಹೆಜ್ಜೆಯಿರಿಸುವಂತಾಗಬೇಕು. ಕೆಲವು ಪ್ರಕಾಶಕರು ನಿಗದಿಯಾದ ವಾರ್ಷಿಕ ಅಥವಾ ಆಜೀವ ಚಂದಾ ಸಂಗ್ರಹಿಸಿ ಇಂತಿಷ್ಟು ಪುಟಗಳ ಗ್ರಂಥಗಳನ್ನು ಚಂದಾದಾರರಿಗೆ ನೀಡುವುದಾಗಿ ಯೋಜನೆ ಹಾಕಿಕೊಂಡಿವೆ. ಈ ಯೋಜನೆ ಕೂಡ ಫಲಪ್ರದವಾಗಿರುವಂತೆ ಕಾಣುವುದಿಲ್ಲ. ಆದುದರಿಂದ ಲೇಖಕರಾಗಲಿ ಪ್ರಕಾಶರಾಗಲಿ ಸುಲಭ ಬೆಲೆಯಲ್ಲಿ ಕಿರು ಹೊತ್ತಿಗೆಗಳನ್ನು ಓದುಗನಿಗೆ ನೀಡುವಂತಾಗಬೇಕು. ಯಾವುದೇ ಸಭೆ, ಸಮಾರಂಭವಾಗಲಿ, ನಾವು ಗ್ರಂಥ ರೂಪದಲ್ಲಿ ಮಾತ್ರ ಉಡುಗೊರೆ- ಸನ್ಮಾನ ಸ್ವೀಕರಿಸುತ್ತೇವೆ ಎನ್ನುವ ಪ್ರತಿಜ್ಞೆ ನಾವೆಲ್ಲ ತೊಡಲೇಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)