ಸೀದ ವಾಸನೆಯ ಭಾರತ ವರ್ಸಸ್ ಸೀಯದ ಸುರಗಿ
(ಅ)ಪೂರ್ವ
ಕೆಲವು ಮೂಲಗಳನ್ನು ಕೆದಕಬಾರದಂತೆ ನದಿಮೂಲವೂ ಸೇರಿದಂತೆ. ಆದರೆ ಲಕ್ಯಾ ಹೊಳೆಯನ್ನು ಹುಟ್ಟಿದಲ್ಲೇ ಹುಟ್ಟಡಗಿಸಿ ಹೂಳಿನಲ್ಲಿ ಹೂತು ನುಂಗಿ ನೀರು ಕುಡಿದು ತುಂಗೆ ಭದ್ರೆಯರನ್ನೂ ಮಲಿನಗೊಳಿಸಿದ್ದ ಕುದುರೆಮುಖದ ಗಣಿಗಾರಿಕೆಯೆಂಬುದು ಹೆದ್ದಾರಿಯಲ್ಲಿ ಪ್ರಯಾಣ ಮಾಡುವ ಅಮಾಯಕ ಪ್ರಯಾಣಿಕರಿಗೂ ಕಾಣುವ ನಿತ್ಯ ನರಕವಾಗಿತ್ತು. ಬರುತ್ತಾ ಬರುತ್ತಾ ಕುದುರೆಮುಖ ಗಣಿಗಾರಿಕೆಯೆಂಬ ರಾಯರ ಕುದುರೆ ಮಲೆನಾಡನ್ನೇ ಹಿಗ್ಗಮುಗ್ಗಾ ಒದೆಯುವ ಕತ್ತೆಯಾಗಿತ್ತು. ಕುವೆಂಪುರವರು ಸಂಭ್ರಮಿಸಿ ಸಾಂದ್ರ ಆರ್ದ್ರ ಆಧ್ಯಾತ್ಮಿಕ ಕಾಣ್ಕೆಯಲ್ಲಿ ಇನ್ನಿಲ್ಲದಂತೆ ಕಟ್ಟಿಕೊಟ್ಟ ಮಲೆನಾಡೆಂಬ ಸ್ವರ್ಗ ಹೋಗುವೆನು ಮಲೆಯನಾಡಿಗೆ, ಮಳೆಯ ಬೀದಿಗೆ, ಮರಳಿ ನನ್ನೀ ಗೂಡಿಗೆ... ಎಂಬ ಕರುಳ ಹಂಬಲವನ್ನು ಅಣಕಿಸುವಂತೆ, ಹಾಸ್ಯಾಸ್ಪದಗೊಳಿಸುವಂತೆ ಭೂಮಿಯ ಮೇಲಿನ ನರಕವಾಗಲು ತಯಾರಾಗಿತ್ತು. ನಿರ್ಮಲ ನಿಸರ್ಗ ಮಲಮಲ ಮರುಗುತ್ತಾ ವಿಸರ್ಜನೆಗೊಳ್ಳುವುದರಲ್ಲಿತ್ತು. ನಾವೊಂದು ದೊಡ್ಡ ಪಡೆ...ನಕ್ಸಲರು ಎಂದು ಅನಂತರ ಪಡೆದ ಅಪಕೀರ್ತಿಗಾಗಿಯೇ ಎಂಬಂತೆ ಇಂಬಳಗಳಿಂದ ರಕ್ಷಿಸಿಕೊಳ್ಳಲು ಕಾಲುಗಳಿಗೆ ತೊಡೆಯವರೆಗೂ ತಂಬಾಕನ್ನು ಧಾರಾಳವಾಗಿ ಉಜ್ಜಿ ತೀಡಿಕೊಂಡು, ಹಾಗಿದ್ದೂ ಜಿಗಣೆಗಳಿಗೆ ಅವುಗಳ ಆಹಾರವಾದ ನೆತ್ತರನ್ನು ಯಥಾಶಕ್ತಿ ಸಮರ್ಪಿಸಿ ಎತ್ತರೆತ್ತರದ ಗುಡ್ಡಬೆಟ್ಟಗಳನ್ನೇರಿ, ನಮಗಿಂತ ಎತ್ತರವಾದ (ಮಳೆಕಾಡು ಗುಡ್ಡಗಳ ಮರಮಟ್ಟುಗಳಿರದ ತುದಿಯಲ್ಲಿ ಹುಲುಸಾಗಿ ಬೆಳೆಯುವ) ಶೋರಾ ಹುಲ್ಲುಗಾಡಿನ ನಡುವೆ ಹುಲುಮಾನವರಾಗಿ ಏರಿ, ಹುಲ್ಲು ಹಸುರು ಮೋಡ ಮಂಜುಗಳ ನಡುವೆ ಚುಮುಚುಮು ಚಳಿಯಲ್ಲಿ ಆಳ ಕೆಳ ಪ್ರಪಾತದಲ್ಲಿ ನಾವು ಕಂಡ ತುಂಗಾಮೂಲ ಅದೊಂದು ಅಪೂರ್ವ ದರ್ಶನ, ನಮ್ಮ ಪಾಲ ಕಾಣ್ಕೆ.
ಆ ತುಂಗೆಯ ರೂಪ ವಿರೂಪಗೊಳ್ಳಬಾರದು ಆ ಪುಣ್ಯನದಿಯ ಮಾತು ನಾವಾಗಬೇಕು, ಆದರೆ ಬರಿಯ ಬುರುಗು ಮಾತು/ಘೋಷಣೆಗಳ ಬದಲು/ ಮೊದಲು ನಮಗೆ ನಮ್ಮ ಕಣ್ಣಿನ ಅಳವಿಗೆ ಒದಗಬಹುದಾದ ವಾಸ್ತವ ದರ್ಶನವಾಬೇಕು ಎಂಬುದು ನಮ್ಮ ಆ ಹರಸಾಹಸದ ಉದ್ದೇಶವಾಗಿತ್ತು. ಆನಂತರ ನಡೆದದ್ದು ದಶಕ ಮೀರಿದ ಸಂಘಟಿತ ನಿರಂತರ ಚಳವಳಿ. ತೀರ್ಥಹಳ್ಳಿಯ ಹಾಗೂ ತುಂಗೆಭದ್ರೆಯರ ಆಸುಪಾಸಿನ ಮನೆಮನೆಮುಂಗಟ್ಟುಗಳಿಗೂ ಅನಂತಮೂರ್ತಿ ಕೊಂಡೊಯ್ದ ವಾತ್ಸಲ್ಯದ ಅಭೂತಪೂರ್ವ ಅಭಿಯಾನ ಒಂದೆಡೆ. ಅದರಲ್ಲಿ ತೀರ್ಥಹಳ್ಳಿಯ ಸೌಮ್ಯ ಗೆಳೆಯ ಶ್ರೀಧರ ಮತ್ತು ಅವರ ಬಳಗ. ಶೃಂಗೇರಿಯ ದಣಿವರಿಯದ ಗೆಳೆಯ ವಿಠಲ ಹೆಗಡೆ, ಕರ್ನಾಟಕ ವಿಮೋಚನಾ ರಂಗದ ಅಶೋಕ ಮತ್ತು ನಾವೆಲ್ಲ ಇನ್ನೊಂದೆಡೆ. ನಾವಂತು ಊರು ಪೇಟೆಗಳೆನ್ನೆದೇ ಜಡಿಮಳೆ ಬಿರುಬಿಸಿಲೆನ್ನದೆ ಕಾಡು ಮೇಡುಗಳೆನ್ನದೆ ಓಡಾಡಿ ಭಾಷಣಗಳನ್ನು ಬಿಗಿದದ್ದೇ ಬಿಗಿದದ್ದು, ತುಂಗೆಯ ಉಬ್ಬರ ಅಬ್ಬರದಂತೆ ಹಾಗೂ ಈ ಇತ್ತಂಡಗಳೂ ಹಲಕಾಲ ಆಗಾಗ ಪದೇಪದೇ ಸಂಧಿಸಿದೆವು, ಮಾನವ ಸರಪಳಿಗಳನ್ನು ಹೆಣೆದೆವು. ಪೊಲೀಸರ ಸರ್ಪಗಾವಲನ್ನು ಎದುರಿಸಿ ಹಾಗೂ ಧಿಕ್ಕರಿಸಿ: ಸಂಧಿಸದಿದ್ದಾಗಲೂ ಸಮಾನಾಂತರವಾಗಿ ಒಬ್ಬರಿಗೊಬ್ಬರು ಪೂರಕವಾಗಿ ಹೋರಾಡಿದೆವು. ಲೆಕ್ಕವಿಡಲಾಗದಷ್ಟು ಸಭೆ, ಪ್ರತಿಭಟನೆ, ಧರಣಿ, ಸಮಾವೇಶಗಳು ಜೊತೆಜೊತೆಯಾಗಿಯೂ ಪ್ರತ್ಯೇಕವಾಗಿಯೂ ಹಳ್ಳಿಪೇಟೆಗಷ್ಟೇ ಅಲ್ಲದೆ ಕಾಡುಕೊಂಪೆಗಳಲ್ಲೂ ನಡೆದವು, ಬೇರೆಬೇರೆಯಾಗಿದ್ದೂ ಬೇರಲ್ಲವಾಗಿ ಕಡೆಗೂ ತುಂಗಾಮೂಲ ಗೆದ್ದಿತು ( ನಮ್ಮ ‘ಗೆಲುವು ಆನುಷಂಗಿಕ), ಕುದುರೆಯ ಮುಖ ಹೊತ್ತ ಕತ್ತೆ ಹಿಮ್ಮೆಟ್ಟಿತು ಎಂಬುದಷ್ಟೇ ನಮ್ಮೆಲ್ಲರಿಗೂ ಒದಗಿಬಂದ ಹೋರಾಟದ ಫಲ. ಎಲ್ಲ ಸ್ವರೂಪ ವಿರೂಪಗಳ ಸರಕಾರಗಳ ಜೊತೆಗೂ ಮಾತುಕತೆಯ ನಂಟನ್ನು ನಿಸ್ವಾರ್ಥವಾಗಿ ಉಳಿಸಿಕೊಂಡು ಬಂದ ಅನಂತಮೂರ್ತಿಯವರ ಪ್ರಭಾವ ಚಳವಳಿ ಹೋರಾಟದಲ್ಲಿ ಮಾತ್ರವಲ್ಲದೇ ಮುತ್ಸದ್ಧಿತನದಲ್ಲೂ ಕೆಲಸಮಾಡಿತ್ತು.
ಎಷ್ಟೋ ಕಾಲದ ಮೇಲೆ, ಬಳ್ಳಾರಿಯನ್ನು ಬರ್ಗುಡಿ ಮಾಡಿದ ಗಣಿಧಣಿಗಳು ಜೈಲುಕಂಬಿ ಎಣಿಸಲಾರಂಭಿಸಿದ ಮೇಲಂತೂ.... 48 ಕೋಟಿಯ ವಜ್ರದ ಕಿರೀಟ ಸ್ವೀಕರಿಸಿಯೂ ಸ್ವತಃ ಸಾಲಿಗನಾದ ತಿರುಪತಿ ತಿಮ್ಮಪ್ಪ ದಯೆ ತೋರದೆ ಹೋದಮೇಲಂತೂ, ಮತ್ತು ನನ್ನದೇ ಹೆಸರಿನ (ಪಟ್ಟಾಭಿರಾಮ) ಆಂಧ್ರದ ನ್ಯಾಯಾಧೀಶರು ಎಂಜಲು ತಿಂದು ಜಾಮೀನು ಕೊಟ್ಟು ಮುಖಹೀನರಾದ ಮೇಲಂತೂ... ತುಂಗೆಯ ಪಾವಿತ್ರವು ಗಣಿಗಾರಿಕೆಯ ವಿರೋಧಗಳಿಗೆ ಕುದುರೆಮುಖದಾಚೆಗೂ ಆನೆಯ ಬಲದಂತೆ ಒದಗಿಬಂದು, ನಾವು ಪಾವನರಾದೆವೆಂದು ನಮ್ಮಷ್ಟಕ್ಕೆ ಭಾವಿಸಲು ಅಡ್ಡಿಯಿಲ್ಲದ ಪ್ರಜಾತಂತ್ರವೇ ನಮ್ಮದೊಂದು ಹೊಸ ಅನುಭವ. ನಮ್ಮ ಈ ಸಂಭ್ರಮದ (ಅ) ಪೂರ್ವಸೂರಿಗಳು ‘ರಾಮತೀರ್ಥದಲ್ಲಿ ಕಲ್ಲುಸಾರದ ಮೇಲೆ’ಯಿಂದ ತೊಡಗಿ, ತೀರ್ಥಹಳ್ಳಿ, ಮೇಗರವಳ್ಳಿ, ದೂರ್ವಾಸಪುರ, ಕುಂದಾಪುರ, ಕುಡು ಮಲ್ಲಿಗೆ ಮುಂತಾದವುಗಳನ್ನು ಅಕ್ಷರ ಕಾವ್ಯವಾಗಿಸಿದ ಕುವೆಂಪು ಮತ್ತು ಅನಂತಮೂರ್ತಿ ‘ತುಂಗಮೂಲ ಉಳಿಸಿ’ ಎಂಬ ಈ ಹೋರಾಟ ಹಲವು ಕೈಗಳಿಗೆ ಕೊಟ್ಟ ಬಲವೂ, ಸಮದೂಗಿಸಿದ ಛಿದ್ರಗಳೂ ಎತ್ತಿದ ಆ ಕೈಗಳಿಗೆ ದೊರಕಿಸಿದ ಗುರಿಮುರಿತಣಿವುಗಳು.... ಅದೊಂದು ಎಂದೆಂದೂ ಮುಗಿಯದ ಕಥೆಯಂತೆಯೇ ಇಂದು ಭಾಸವಾಗುತ್ತಿರುವಂಥದ್ದು. ತುಂಗೆ ಕೇವಲ ತುಂಗೆಯಲ್ಲ. ಭದ್ರೆ ಕೇವಲ ಭದ್ರೆಯಲ್ಲ. ತುಂಗೆಭದ್ರೆಯವರು ಸೇರಿದಂತೆ ಹೋರಾಟದ ಸಾಗರಕ್ಕೆ ಹಲವಾರು ನದಿಗಳು. ಹಾಗೆ, ಪಶ್ಚಿಮ ಘಟ್ಟದಲ್ಲಿ ಹುಟ್ಟಿದ್ದೊಂದು (ಅ)ಪೂರ್ವ ಕ್ರಾಂತಿಗೀತೆ.
ಪಶ್ಚಿಮ
ಹಸುರು ಸದಾ ಹಸುರಾಗಿರುವ ನಮ್ಮ ಕರಾವಳಿಯಲ್ಲಿ ಎಷ್ಟೊಂದು ಹೊಳೆಗಳು, ಅರಬ್ಬೀ ಸಮುದ್ರದಂಥ ಅರಬ್ಬೀ ಸಮುದ್ರಕ್ಕೇ ನೀರಿನ ಬರ ಬರಬಾರದು ಎನ್ನುವೋಪಾದಿಯಲ್ಲಿ ಅಭಯ ನೀಡುವ ನೀರಿನ ಘಟ್ಟ ಪಶ್ಚಿಮ ಘಟ್ಟ. ಕೊಂಕಿ ಬಳುಕಿ ಟಿಸಿರೊಡೆದು ಹರಸಿ ಹಾರೈಸಿ ಕರಾವಳಿಯನ್ನು ಪ್ರೇಮಜಲ/ಜಾಲದಲ್ಲಿ ಮುಳುಗೇಳಿಸುವ ಅಸಂಖ್ಯ ಹೊಳೆಗಳು; ಹೊಳೆಕೈಗಳು ಕರಾವಳಿಗರನ್ನು ಕೈ ಹಿಡಿದು ನಡೆಸಲು ಘಟ್ಟ ಸಾಗರಗಳ (ಪೂರ್ವದ ಪಶ್ಚಿಮ ಘಟ್ಟ ಹಾಗೂ ಪಶ್ಚಿಮದ ಅರಬ್ಬೀ ಸಮುದ್ರ) ಈ ವಾತ್ಸಲ್ಯದಾಟದಲ್ಲಿ ಗೆದ್ದವರು ಕರಾವಳಿಗರು: ಜಲ ಫಲ ಸಮೃದ್ಧಿ...ಮಧ್ಯದ ಮೂರನೆಯ...ಕರಾವಳಿಗರ ತೀರದ ಲಾಭ.
afterthought
ನದಿಗಳು ಸಾಗರ ಸೇರುತ್ತವೆ ಎಂಬುದೊಂದು ಪ್ರಸಿದ್ಧ ಪ್ರತೀತಿ. ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಕರಾವಳಿಯ ಆಡುಂಬೊಲದಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿ ಅರಬ್ಬೀ ಸಮುದ್ರದಲ್ಲಿ ವಿರಮಿಸುವ ಹುಡುಗಾಟದ ಅಸಂಖ್ಯ ಹೊಳೆಗಳು ಈ ಪ್ರತೀತಿಗೇನೂ ಅಪವಾದವಲ್ಲ. ಆದರೆ ಪಶ್ಚಿಮ ಘಟ್ಟದಲ್ಲೇ ಹುಟ್ಟಿಯೂ ಪೂರ್ವಕ್ಕೆ ಹರಿಯವ (ಅಪೂರ್ವ) ತುಂಗಭದ್ರೆಯರು ನೆಲವನ್ನಷ್ಟೇ ಅಲ್ಲದೇ ಕಲೆಯನ್ನೂ ನೆಲೆಗೊಳಿಸಿ...ಕುವೆಂಪು ಅನಂತಮೂರ್ತಿ ಮುಂತಾದವರು ಕಾಣಿಸಿದ ಮಲೆನಾಡ ಈ ನದಿಗಳು...ಸಾಗರ ಸೇರಿದ್ದು ಮಾತ್ರ... ಒಂದು ಎಂಬಂತೆ ಎಷ್ಟೋ ಕಾಲದ ನಂತರ, ರಾಜ್ಯಾಂತರಗಳಲ್ಲಿ ಹರಿದು ಎಲ್ಲೋ ಪೂರ್ವದಲ್ಲಿ, ಬಡ/ಜಡ ಜನರಿಗೆ ಶ್ರೀಮಂತ ಸಂಸ್ಕೃತಿಯನ್ನು ಕರಣಿಸುತ್ತಾ, ಪೂರ್ವ ಸಾಗರದಲ್ಲಿ. ‘ಕಡಲ ತಡಿಯ ಭಾರ್ಗವ’ ಎಂಬ ಅಭಿದಾನವನ್ನು ಮುಳ್ಳಿನ ಕಿರೀಟದಂತೆ ತೊಟ್ಟ ಶಿವರಾಮ ಕಾರಂತರು ನಮ್ಮ (ಕರಾವಳಿಗರಿಗಂತೂ) ದಿಗ್ಗಜ್ಜ. ಅನಂತಮೂರ್ತಿ ಸರಿಯಾಗಿ ವರ್ಣಿಸಿರುವಂತೆ ಆತನನ್ನು ಆಚಾರ್ಯ ಪುರುಷ. ವರ್ಗೀಕರಣಗಳಿಗೆ ಬಗ್ಗದ ವಿಶೇಷ. ತನ್ನನ್ನೂ ‘ಸಾಹಿತಿ ಎಂದು ಮಾತ್ರವೇ ಗುರುತಿಸುವುದು ತನಗೆ ತೋರುವ ಅನಾದರ ಎಂದು ಸ್ವತಃ ಕಾರಂತರೇ ತಮ್ಮ ಕೊನೆಯ ವರ್ಷಗಳಲ್ಲಿ ಗುಡುಗುತ್ತಿದ್ದರು. ಕಾರಂತರು ತೀರಿಕೊಂಡ ದಿನ ಮಣಿಪಾಲದ ಆಸ್ಪತ್ರೆಯಿಂದ ಸಾಲಿಗ್ರಾಮದ ಅವರ ಮನೆ ‘ಸುಹಾಸ’ದವರೆಗೂ ಅವರನ್ನು ನೋಡಲು ದಾರಿಯುದ್ದಕ್ಕೂ ಕಿಕ್ಕಿರಿದು ನಿಂತು ಕಣ್ಣೀರುಗರೆದವರು, ಕೊಂಜೆಟ್ರಿಕ್ಸ್ ವಿರುದ್ಧದ ಅಭಿಯಾನದಲ್ಲಿ ಮಂಗಳಾ ಸ್ಟೇಡಿಯಂನಿಂದ ನೆಹರೂ ಮೈದಾನದವರೆಗೂ ಪಾದಯಾತ್ರೆಯ ಮುಂಚೂಣಿಯಲ್ಲಿ ನಡೆದು ಮಧ್ಯಾಹ್ನ ಹನ್ನೆರಡು ಗಂಟೆಯ ಸುಡುಬಿಸಿಲಲ್ಲಿ ಕಾರಂತರ ಮಾತುಗಳಿಗೆ ಮನಮಿಡಿದ ಮೀನುಗಾರ ಮಹಿಳೆಯರು.... ಅನಂತಮೂರ್ತಿ ಅಂದಂತೆ ಈ ಅಮಾಯಕ ಜನರನ್ನು ಚೋಮನನ್ನೆಂತೋ ಅಂತೆ ಜಗತ್ತಿಗೆ ಪರಿಚಯಿಸಿದವರು. ಅನಂತಮೂರ್ತಿಯೇ ಹಿಂದಿರುಗಿತ್ತಾ ನಮ್ಮಾಡನೆ ಹೇಳಿದಂತೆ, ಕಾರಂತರು ಅಂದು ತಮ್ಮ ಕಥನಲೋಕದ ಪಾತ್ರಗಳೊಡನೆ ನೇರವಾಗಿ ಮಾತನಾಡಿದ್ದರು. ಅನಂತಮೂರ್ತಿ ಹೇಳಿದ ಇನ್ನೂ ಒಂದು ಮಾತು ಮತ್ತಷ್ಟು ಅಪೂರ್ವವಾದದ್ದು,: ಕರಾವಳಿಗರು ಸುಲಭಕ್ಕೆ ಕರಗದ ಜಿಗುಟರು: ಕಾರಂತರ ಜೊತೆಗೂ ಜಗಳ ಕಾಯುವವರು; ಕಾರಂತರೂ ಜಗಳ ಕಾಯುವವರೇ; ಹೀಗಿದ್ದೂ ಕರಾವಳಿಗರು ನಿಜಕ್ಕೂ ನಡೆದುಕೊಳ್ಳುವ ದೈವ ಕಾರಂತರೇ.
ದೈವದ ಸಿಟ್ಟು ದೇವರ ಸಿಟ್ಟಿನಂತಲ್ಲ. ಕಾರಂತರು ಸಿಟ್ಟಿಗೆ ಕಾವ್ಯದ ಕರ್ತವ್ಯದ ಮಿರುಗುವ ಉರಿಯುವ ಮೆರೆಗು ಕೊಟ್ಟವರು. ಹಾಗಲ್ಲದೆ ಒಬ್ಬ ಚೋಮ, ಆತನ ದುಡಿ, ಕಲೆಯಲ್ಲಿ ಜನಿಸಬಲ್ಲುದೇ? ಅನಂತಮೂರ್ತಿ ಪಳಗಿದ್ದು ಕೂಡಾ ಕಾರಂತರು ಮರಳಿಮಣ್ಣಿಗೆಯ ಮುನ್ನುಡಿಯಲ್ಲಿ ಪ್ರಸಿದ್ಧಿಗೊಳಿಸಿದ ‘‘ಜೀವನ ಸಂಗ್ರಾಮ’’ ಎಂಬ ಸೂರಿಲ್ಲದ ನೀರಿಲ್ಲದ ಶಾಲೆಯಲ್ಲಿ. ಕೊಜೆಂಟ್ರಿಕ್ಸ್, ಕೈಗಾಗಳು ಕಾರಂತರಲ್ಲದಿದ್ದರೆ ಕರಾವಳಿಯನ್ನೆ ಬರಿಗುಡಿ ಮಾಡುತ್ತಿದ್ದವು. ಕಾರಂತರು ನಿರ್ಣಾಯಕ ಹೋರಾಟ ಮಾಡಿದವರು. ದೂರದ ನರ್ಮದಾ ಹೋರಾಟದಲ್ಲೂ ಮೇಧಾ ಪಾಟ್ಕರ್ ಜೊತೆ ಉಪವಾಸ ಕುಳಿತ ಋಷಿಗಳು. ಕೈಗಾ ವಿರುದ್ಧದ ಹೋರಾಟದ ಕಾಲದಲ್ಲಿ ಅನಂತನಾಗ್‌ನಂಥ ಸೂಕ್ಷ್ಮಜ್ಞರು ಅವರ ಎದುರಾಳಿ. ಕಾರಂತರು ಸೋತು ಗೆದ್ದವರು: ಅನಂತಮೂರ್ತಿಯಲ್ಲಿ, ನಿಮ್ಮ ನಮ್ಮಂಥವರಲ್ಲಿ; ದುಡಿ ಇನ್ನೂ ಮಿಡಿಯುತ್ತಿದೆ ಎಂಬಲ್ಲಿ ಇವತ್ತು ಮರಳಿಸಲ್ಪಡುತ್ತಿರುವ ಪ್ರಶಸ್ತಿಗಳಿಗೆ ಮುನ್ನುಡಿ ಬರೆದವರೂ ಕಾರಂತರೇ. ತುರ್ತುಪರಿಸ್ಥಿತಿ ಎದುರಿಸಿ, ಪ್ರಶಸ್ತಿ ಮರಳಿಸಿ, ಇಂದಿರಾಗಾಂಧಿಯಂಥ ಇಂದಿರಾಗಾಂಧಿಯನ್ನೇ ಎದುರು ಹಾಕಿಕೊಂಡ ಅಸಮಬಲರು ಕಾರಂತರು.
speaking truth to power ಕಾರಂತರು, ಎಡ್ವರ್ಡ್ ಸೈದ್ ಪ್ರತಿಪಾದಿಸಿ ಪ್ರಸಿದ್ಧಗೊಳಿಸಿದ ಎಂಬ ಒಕ್ಕಣೆಯ ಮೂರ್ತರೂಪವಾಗಿದ್ದವರು. ಯಾವುದೋ ರಾಜ್ಯಪತ್ರಿಕೆಯ ವಾಚಕರ ವಾಣಿಯಿಂದಲೂ ಅವರು ಹಲವರು ಗಡಗುಟ್ಟಿಸುತ್ತಿದ್ದರು. ಪತಿ ಎಂದರವರಿಗೆ ಪ್ರೇತಿ ಎಂದು ಹೆದರಿಸುವಂತೆ ನಮ್ಮ ಅವಿದ್ಯೆಯನ್ನು ತುದಿಗಾಲು ದಿಗಿಲಿಗೆ ಸಿಲುಕಿಸಿದರು.
ಅನಂತಮೂರ್ತಿ ಸುರಗಿಯಲ್ಲಿ ಬರೆದ ಈ ಮಾತುಗಳು ನಮ್ಮೆಲ್ಲರ ಅಂತರಾಳದ ಮಾತುಗಳೇ:
ಒಂದು ವಿಚಿತ್ರಾ ಅನುಭವ: ಆಗಿ ನಾವು ದೂರ್ವಾಸಪುರದಲ್ಲಿ ಶಾಲೆಗೆ ಹೋಗುತ್ತಿದ್ದ ಹುಡುಗ. ಚೋಮನದುಡಿ ಓದುತ್ತಿದ್ದೆ. ನಮ್ಮ ಮನೆಗೆ ಚೌಡ ಎನ್ನುವವನು ಕೊಟ್ಟಿಗೆ ಕೆಲಸಕ್ಕೆ ಬರುತ್ತಿದ್ದ. ನಾನು ಆ ಕಾದಂಬರಿಯನ್ನು ಆಗಷ್ಟೇ ಓದಿ ಮುಗಿಸಿದ್ದರಿಂದ ಚೌಡನನ್ನು ಆವತ್ತು ನೋಡಿದ ಕೂಡಲೇ ನನಗನ್ನ್ನಿಸಿದ್ದು ಈ ಚೌಡನಿಗೊಂದು ಒಳಜೀವನ ಇದೆ ಅಂತ. ಅದು ನನ್ನಲ್ಲಿ ಹೊಸಪ್ರಜ್ಞೆ ಹುಟ್ಟಿದ ಹೊತ್ತು. ಚೋಮನದುಡಿಯ ಚೋಮ ದುಡಿ ಬಾರಿಸುವುದು, ಬಾಯಿಯಲ್ಲಿ ಹೇಳುವುದಕ್ಕಾಗದ್ದನ್ನು ಅದರ ಮೂಲಕ ಬೇರೆ ಬೇರೆ ದನಿಯಲ್ಲಿ ಹೊರಡಿಸುವುದು, ಹಾಗೇ ಈ ಚೌಡನಿಗೂ ಕೂಡಾ ಮನಸ್ಸಿನಲ್ಲಿ ಏನೇನೋ ಅವನದೇ ಭಾವನೆಗಳು ಇರಬಹುದು ಅನ್ನಿಸಿದ ಕೂಡಲೇ ನನಗೆ ಅವನು ಅಸ್ಪಶ್ಯ ಅನ್ನುವ ಭಾವನೆ ಪೂರ್ಣ ಕಳೆದು ಹೋಯಿತು. ಹಾಗೆ ಕಾನೂರು ಹೆಗ್ಡಡಿತಿಯನ್ನು ಓದಿದಾಗ ‘ನಾನು ಹೂವಯ್ಯ, ನಾನು ಈ ಕಲ್ಲುಸಾರ ದಾಟುತ್ತಿದ್ದೇನೆ. ಅವನಿಗನಿಸಿದ್ದೆಲ್ಲ ನನಗೂ ಅನ್ನಿಸುತ್ತಿದೆ’ ಎನ್ನಿಸಿತ್ತು. ಸಾಹಿತ್ಯದ ಅನುಭವ ಅಂದರೆ ನನಗೆ ಇದೇ. ಚೋಮನಿಗೆ ಒಳಜೀವನ ಇರುವುದಾದರೆ ಚೌಡನಿಗೂ ಇದೆ ಅಂತ ನನಗೆ ದೃಢವಾಯಿತು.(ಸುರಗಿ, ಪುಟ 51)
ಕಾರಂತರು ಜೀವಕಾರುಣ್ಯದ ದರ್ಶನ ಮಾಡಿಸಿದವರು. ಕಾರಂತರು ದೂರ್ವಾಸರಂತೆ ಮುಖತೊಟ್ಟು ಜೀವಕಾರುಣ್ಯವನ್ನು ಹರಿಸಿದರೆ, ಅನಂತಮೂರ್ತಿ ಕಾಲಕ್ಕೆ ಕುಲಗೆಟ್ಟು ಹೋಗಿದ್ದ ಸಾಂಸ್ಕೃತಿಕ ರಾಜಕಾರಣದ ಭಾಷೆ ಬೇರೆಯೇ. ಅನಂತಮೂರ್ತಿಯವರು ಈ ಕುಲಗೆಟ್ಟ ರಾಜಕಾರಣದ ಜೊತೆಗೆ ಮುತ್ಸದ್ದಿತನದಿಂದಲೂ ಅನುನಯದಿಂದಲೂ ವ್ಯವಹರಿಸಿ ಅಧಿಕಾರದ/ಪ್ರಭುತ್ವದ ಮಂಪರನ್ನು ಹರಿದರು. ಅವರ ವಿಶೇಷವೆಂದರೆ, ಹಲವಾರು ಪ್ರತಿಷ್ಠಿತ ಅಧಿಕಾರ ಸ್ಥಾನಗಳನ್ನು ಕ್ರಿಯಾಶೀಲಗೊಳಿಸಿ, ಆಯಕಟ್ಟಿನ ಕ್ಷಣಗಳಲ್ಲಿ ನೇರವಾಗಿ ಪ್ರಶ್ನಿಸಿಯೂ, ಅವರು ಸಂವಾದದ ಸಾಧ್ಯತೆಯನ್ನು ಎಂದೂ ಬಲಿಕೊಡದಿದ್ದುದು. ಮಾತುಕತೆಗಳಿಲ್ಲದೆ ಅನಂತಮೂರ್ತಿ ಉಸಿರಾಡಿದ್ದೇ ಇಲ್ಲ: ವಂದಿ ಮಾಗಧರ ಜೊತೆ ಮಾತ್ರವಲ್ಲ, ವಿಶೇಷವಾಗಿ ತರಲೆ ತೆಗೆಯುವವರ ಜೊತೆಗೆ ಕೂಡಾ, ನನ್ನಂಥವರೂ ಸೇರಿದಂತೆ. ಇದು ಪ್ರಾಯಶಃ ಅವರು ಎಫ್‌ಆರ್ ಲೀವಿಸನ (common pursuit culture and anarchy, ಪುಸ್ತಕದ ಪ್ರತಿಪಾದನೆ) -ಥರ್ಡ್ ರೆಲ್ಮ್ (ಮೂರನೆಯ ಠಾವು), ಮ್ಯಾಥ್ಯೂ ಆರ್ನಾಲ್ಡನ ಗಾಂಧಿಯ ಹಿಂದ್ ಸ್ವರಾಜ್, ಲೋಹಿಯಾರ ರಾಜಕೀಯದ ಮಧ್ಯೆ ಬಿಡುವುಗಳ ದಿನಂಪ್ರತಿಯ ನಿಜದ ಬೆಳಕಲ್ಲಿ ತಿದ್ದಿಕೊಂಡ ಪಾಠ. ಕಡೆಗೂ, ಹಲವು ಬದಲಾವಣೆಗಳು ನಮ್ಮ ಪಾರ್ಲಿಮೆಂಟರಿ ಪ್ರಜಾಪ್ರಭುತ್ವದಲ್ಲಿ ಅಧಿಕಾರ ಪ್ರಭುತ್ವ ಮನಸ್ಸು ಮಾಡಿದಾಗಲೇ. ಇಂದಿರಾಗಾಂಧಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ್ದಾಗಲೀ, ದೇವರಾಜ ಅರಸರು ಭೂಮಿಯನ್ನು ಉಳುವವರಿಗೆ ಕೊಟ್ಟದ್ದಾಗಲೀ ನೆಹರೂ ಎಲ್ಲ ಪ್ರಬುದ್ಧರಿಗೂ ಮತದಾನದ ಹಕ್ಕು ಕೊಟ್ಟದ್ದಾಗಲೀ ಸೋನಿಯಾಗಾಂಧಿ ನರೇಗಾದ ಮುಖಾಂತರ ಬಡಜನರಿಗೆ ಕೆಲಸ ಕೊಡಿಸುವ ಮನಸ್ಸು ಮಾಡಿದ್ದಾಗಲೀ... ಈ ಯಾವುದೂ ಪ್ರಭುತ್ವವಲ್ಲದೇ ಬರಿಯ ಹೋರಾಟಗಳಿಂದಷ್ಟೆ ನಮ್ಮ ಪಾರ್ಲಿಮೆಂಟರಿ ಪ್ರಜಾಪ್ರಭುತ್ವದಲ್ಲಿ ಸಾಧಿತವಾಗುವುದಿಲ್ಲ. ಹಾಗೆಂದು ಹೋರಾಟಗಳು ಖಂಡಿತ ಅಪ್ರಸ್ತುತ ಅಲ್ಲ. ಬಾಯಿಬಿಡದ ಪಕ್ಷ ಮತ್ತು ಸರಕಾರಗಳು ತಿಂದು ತೇಗುವ ಬದಲು ಮಾತನಾಡಲು ಕಲಿಯುವುದೇ ಸಾರ್ವಜನಿಕ ಪ್ರತಿರೋಧಗಳಿಂದ. ದಲಿತ ಚಳವಳಿ, ರೈತ ಸಂಘದ ಹೋರಾಟಗಳ ಉಚ್ಛ್ರಾಯ ಕಾಲದಲ್ಲಿ ನಡೆದ ಹೋರಾಟ ಮತ್ತು ಸಂಚಲನದ ಶಕ್ತಿ ಸಾಮರ್ಥ್ಯಗಳು ಈಗಲೂ ಅಳೆಯಲು ಅಸರಳವಾದಂಥ ದೃಷ್ಟಾಂತಗಳು ಆದರೂ ಈಗ, ಅನಂತಮೂರ್ತಿ ಕಂಡಂತೆ, ಉಳಿದಿರುವುದು ಮಾತು ಸೋತ ಭಾರತ. ಗಾಂಧಿಯಂಥ ಗಾಂಧಿಯೇ ಇದ್ದಾಗ ಚಳವಳಿಯೇ ಪ್ರಭುತ್ವನ್ನು ಅಲುಗಾಡಿಸಬಲ್ಲುದು. ನಮ್ಮ ಈ ಕಲಿಗಾಲದಲ್ಲಿ ಹಾಗಲ್ಲದ್ದರಿಂದ, ಅನಂತಮೂರ್ತಿ ಕಂಡುಕೊಂಡ ಹೋರಾಟ-ಅನುನಯಗಳ ಮಿಳಿತ ಮಾಗವೇ ನಮಗೆ ಉಳಿದಿರುವುದು; ಈ ಮಿಳಿತ ಮಾರ್ಗಕ್ಕೆ ಗಾಂಧಿ ಲೋಹಿಯಾರೇ ಅಮ್ಮ ಅಪ್ಪಂದಿರು; ಅನಂತಮೂರ್ತಿ ಅವರ ಸಂತಾನ.
ಉತ್ತರೋತ್ತರ: ಮೂರಕ್ಕಿಳಿದ ಭಾರತ
ಭಾರತ ಇಳಿಯಬಹುದಾದ ಅಸಹಿಷ್ಣುತೆ, ಹಿಂಸೆ, ಹುಸಿ ಮಾತುಗಾರಿಕೆ ಮತ್ತು ಬೌದ್ಧಿಕ ದಾರಿದ್ರಗಳ ರಸಾತಳ 2014ರ ಜೂನ್-ಜುಲೈಗಿಂತ ಮೊದಲೇ ಅನಂತಮೂರ್ತಿಯವರಿಗೆ ತಿಳಿದಿತ್ತು. ಜುಲೈ 17, 2014ರಂದು ತಮ್ಮ ಹಿಂದೂತ್ವ ಅಥವಾ ಹಿಂದ್‌ಸ್ವರಾಜ್
ಎಂಬ ಕೊನೆಯ ಪುಸ್ತಕದ ಮೊದಲ ಕರಡನ್ನು ನನಗೆ ಕಳುಹಿಸಿ ಇಂಗ್ಲಿಷಿಗೆ ಅನುವಾದಿಸುವಂತೆ ನನ್ನನ್ನು ಕೇಳಿದ್ದರು. ಆಗಸ್ಟ್ 22, 2014ರಂದು ತೀರಿಕೊಳ್ಳುವ ನಾಲ್ಕಾರು ದಿನ ಮುಂಚೆ ಐದೋ, ಆರನೆಯದೋ ಪರಿಷ್ಕೃತ/ ವಿಸ್ತೃತ ಆವೃತ್ತಿಯನ್ನು ನನಗೆ ಕಳುಹಿಸುವ ತನಕವೂ ದಿನದಲ್ಲಿ ಆರು ಗಂಟೆ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಲೇ ಗೆಲುವಾಗಿ ಸಾಂದ್ರವಾಗಿ ಆರ್ದ್ರವಾಗಿ ಹಾಸಿಗೆಯ ಮೇಲೆ ಅರೆ ಒರಗಿದ ಭಂಗಿಯಲ್ಲೇ ಅವರು ಬರೆದೇ ಬರೆದರು (ನನ್ನ ಇಂಗ್ಲಿಷ್ ಅನುವಾದವನ್ನು ಯಾರೋ ಕೊಂದರು ಎಂಬುದಲ್ಲಿ ಅಪ್ರಸ್ತುತ). ಇಂಗ್ಲಿಷಲ್ಲಿ ಈ ಕಾಣ್ಕೆಯ ಹೆಸರು clairvoyance ಅಂದರೆ ಮುಂಗಾಣ್ಕೆ ಎಂಬ ವಿಲಕ್ಷಣ ಪ್ರತಿಭೆ. ಹಿಂದೂತ್ವ ಅಥವಾ ಹಿಂದ್ ಸ್ವರಾಜ್ ಅಂಥ ಮುಂಗಾಣ್ಕೆಯ ಉಜ್ವಲ ದಾಖಲೆ. ಅನಂತಮೂರ್ತಿ ತೀರಿಕೊಂಡ ದಿನ ಹೊಡೆಯಲ್ಪಟ್ಟ ಪಟಾಕಿಗಳಿಂದ ಆರಂಭವಾಗಿ ಇವತ್ತಿಗೂ ಮೊಳಗುತ್ತಿರುವ ಮೋದಿಯ ಬಾಯಿ ಪಟಾಕಿಯವರೆಗೂ ಅನಂತಮೂರ್ತಿ ಕಂಡ ಅಪಾಯಗಳ ಮುಂಗಾಣ್ಕೆ ಪದೇ ಪದೇ ಅನುರಣಿಸುತ್ತಲೇ ಇದೆ.
ಇವತ್ತು ಪ್ರಶಸ್ತಿಗಳನ್ನು ದೇಶದಾದ್ಯಂತ ಹಿಂದಿರುಗಿಸುತ್ತಿರುವವರಿಗೆ ಈಗಷ್ಟೇ ಮನದಟ್ಟಾಗುತ್ತಿರುವ ಸತ್ಯ ಕೂಡಾ ಅದೇ. ಹಾಗೂ, ಈ ವಿದ್ಯಮಾನ ನಮ್ಮ ದೇಶವಷ್ಟೇ ಅಲ್ಲದೇ ಜಗತ್ತಿನ ಗಮನವನ್ನೇ ಬಲವಾಗಿ ಸೆಳೆದಿದೆ. ಅನಂತಮೂರ್ತಿ ಎಂದೂ ತಾನೊಬ್ಬ ಬರಿಯ ಲೇಖಕ ಎಂಬಂತೆ ಇದ್ದವರಲ್ಲ ಎಂಬುದು ಅವರ, ಅವರ ಪೂರ್ವ ಸೂರಿಗಳು ಅವರಿಗೆ ದಯಪಾಲಿಸಿದ ವಿವೇಕದ ವಿಶೇಷ ಹಿರಿಮೆ. ಇವತ್ತು ಲೇಖಕರಾಗಿಯೂ, ಆಪ್ತ ಹಿರಿಯ ವಿವೇಕಿಯಾಗಿಯೂ, ನಮ್ಮ ನಿಮ್ಮೆಲ್ಲರ ಮಿತ್ರ ಮಾರ್ಗದರ್ಶಿಯಾಗಿಯೂ, ಸುಟ್ಟ ಪಟಾಕಿಗಳ ಸೀದ ವಾಸನೆ ಅಡರಿದ ಮೇಲೆಯೂ ಸುರಗಿಯಾಗಿ ಕಮ್ಮನೆ ಅರಳಿ ನಮ್ಮೆಡನೆ ಬದುಕುತ್ತಿರುವವರು ಅವರು. ದ್ವೇಷವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಅದನ್ನು ಸಂವಾದವಾಗಿ, ಆ ಮೂಲಕ ಪ್ರೀತಿಯಾಗಿ ಪರಿವರ್ತಿಸಲು ಗಾಂಧಿಯ ದಾರಿ ಹಿಡಿದು ಅವರು ದುಡಿದವರು. ಇದು ಕೇವಲ 2014ರ ಕತೆಯಲ್ಲ. ಅನಂತಮೂರ್ತಿ ಎಂದೂ ಹಾಗೆ ಇವತ್ತಿನ ಮಾತು ಇವತ್ತಿಗೆ ಎಂದು ಬದುಕಿದವರೇ ಅಲ್ಲ. ಅವರ ಮೊತ್ತ ಮೊದಲ ಕಥಾಸಂಕಲನದ ಹೆಸರೇ ಎಂದೆಂದೂ ಮುಗಿಯದ ಕಥೆ, ಗೋಪಾಲಕೃಷ್ಣ ಅಡಿಗರು ಕನ್ನಡಕ್ಕೆ ಬರಮಾಡಿಕೊಂಡಿರುವಂಥದ್ದು. 2014ರ ಆಗಸ್ಟ್ 22ರಂದು ತೀರಿಕೊಳ್ಳುವವರೆಗೂ ವಿಷಮ ಕರ್ಕಶವನ್ನು ಶ್ರಾವ್ಯ ಮಾತಾಗಿಸಲು ತೀರದೆ ದುಡಿದವರು: ಗಾಂಧಿಗೆ ಹೀಗೆ, ಒಂದಿಲ್ಲ, ಹಲವು ಮರುಹುಟ್ಟುಗಳನ್ನು, ಹಲವರಂತೆ ಕೊಟ್ಟವರು, ಹಲವರಲ್ಲಿ ಹಲವರಾಗಿ, ಅಪೂರ್ವವಾಗಿ.
ಹಿಂದುತ್ವ ಅಥವಾ ಹಿಂದ್‌ಸ್ವರಾಜ್(2014)
ಅನಂತಮೂರ್ತಿಯವರ ಬಾಳಲಿರುವ ಇನ್ನೊಂದು ಮಹತ್ಕೃತಿ. ಅನಂತಮೂರ್ತಿಯನ್ನು ಪಾಕಿಸ್ತಾನಕ್ಕೆ ಕಳುಹಿಸಿ ಎಂದ ನಂಜಿಗೆ ಮರ್ಯಾದೆಯ ಆದರೆ ಮುಲಾಜಿಲ್ಲದ ತಕ್ಕ ಉತ್ತರ ನೀಡಿ ಅನಂತ ಮೂರ್ತಿ ತೀರಿಕೊಂಡರು. ಕಾಕತಾಳಿಯವೆಂದರೆ, ಅನಂತಮೂರ್ತಿಯವರನ್ನು ತಪ್ಪಾಗಿ ಓದಿ ತಪ್ಪಾಗಿ ಉದಾಹರಿಸಿದ ಎಂ.ಎಂ. ಕಲಬುರ್ಗಿ ಎಂಬ ಸಜ್ಜನರು, ಪೆಟ್ರೋಲು ಮುಗಿದ ಸಂಘಪರಿವಾರದ ಮುರುಕಲು ಡಕೋಟಾ ಬಂಡಿಗೆ ಇಂಧನ ತುಂಬಿಯೂ ಕೊಲೆಯಾದದ್ದು, ಹಾಗೂ ದೇಶವಿದೇಶಗಳ ಕಲಾವಿದರು ವಿಜ್ಞಾನಿಗಳು ಧೀಮಂತರು ಕಲಬುರ್ಗಿ ಮುಂತಾದವರ ಪರ ವಹಿಸಿರುವುದು; ಅನಂತಮೂರ್ತಿ ಇಲ್ಲೇ ಈಗಲೂ (ಕಲಬುರ್ಗಿಯಂಥ ಎದುರಾಳಿಗಳಲ್ಲೂ) ಬದುಕಿರುವುದು.
‘ಅಧ್ವಾನೀಜಿಗೊಂದು ಕಿವಿಮಾತು’ ಎಂಬ ಮೊನಚಾದ ನಂಜಿಲ್ಲದ ಕವನ ಬರೆದಿದ್ದ ಅನಂತಮೂರ್ತಿ, ಈಗ ಬದುಕಿರುತ್ತಿದ್ದರೆ ‘ಮೋದೀಜಿಗೊಂದು ಕಹಿಮಾತು’ ಎಂಬುದೊಂದು ಕವನವನ್ನು ವಿಶ್ವಾಸಕ್ಕೆ ಕೇಡಿಲ್ಲದಂತೆ ಬರೆಯಬಲ್ಲವರಾಗಿದ್ದರು. ಅಥವಾ, ‘ಹಿಂದುತ್ವ ಅಥವಾ ಹಿಂದ್‌ಸ್ವರಾಜ್’ ಎಂಬ ಅವರ ಪುಸ್ತಕ ಅದುವೇ-ಮೋದೀಜಿಗೊಂದು ಕಹಿಮಾತು. ಸಾಲು ಸಾಲು ಲೇಖಕರು, ಕಲಾವಿದರು, ಸಿನೆಮಾ ರಂಗದವರು, ಇತಿಹಾಸಜ್ಞರು, ವಿಜ್ಞಾನಿಗಳು, ಸೇನಾನಿಗಳು-ದೇಶದೊಳಗೂ ಹೊರಗೂ-ಕಂಡು ತತ್ತರಿಸಿರುವ ಈ ದಿನಗಳ ಭಾರತದ ಹಿಂದುತ್ವವಾದೀ ಅಸಹಿಷ್ಣುತೆ, ಹಿಂಸೆ ಹಾಗೂ ಎಲುಬಿಲ್ಲದ/ಆಚಾರವಿಲ್ಲದ ನಾಲಗೆಗಳನ್ನು ಧ್ಯಾನದಲ್ಲೆಂಬಂತೆ ಗ್ರಹಿಸಿ ಉತ್ತರಗಳನ್ನು ಗಾಂಧಿಯಂತೆ ತನ್ನೊಳಗೇ ಹುಡುಕಿಕೊಂಡ ‘ಹಿಂದುತ್ವ ಅಥವಾ ಹಿಂದ್ ಸ್ವರಾಜ್’, ಇಂದು ದೇಶವಿದೇಶಗಳಲ್ಲಿ ಮಾರ್ದನಿಸುತ್ತಿರುವ, ಅನಂತಮೂರ್ತಿ ಮುಂಗಂಡ, ಈಗ ನಮ್ಮಲ್�