ಬೇಬಿಲೋನಿಯನ್ನರು 2,100 ವರ್ಷಗಳ ಹಿಂದೆಯೇ ರೇಖಾಗಣಿತ ಪ್ರವೀಣರಾಗಿದ್ದರು
ವಾಶಿಂಗ್ಟನ್, ಜ. 30: ಪ್ರಾಚೀನ ಬೇಬಿಲೋನ್‌ನ ಜನರು ಗುರು ಗ್ರಹದ ಚಲನೆಯನ್ನು ತಿಳಿಯಲು ನಾವು ಈಗ ಭಾವಿಸಿರುವುದಕ್ಕಿಂತಲೂ 1,400 ವರ್ಷಗಳ ಹಿಂದೆ ರೇಖಾಗಣಿತವನ್ನು ಬಳಸುತ್ತಿದ್ದರು ಎಂದು ಸಂಶೋಧಕರು ಶುಕ್ರವಾರ ಹೇಳಿದ್ದಾರೆ.
ಕ್ರಿಸ್ತಪೂರ್ವ 350ರಿಂದ 50ರ ನಡುವಿನ ಅವಧಿಯಲ್ಲಿ ಬೇಬಿಲೋನ್‌ನಲ್ಲಿ ಬರೆಯಲಾದ ನಾಲ್ಕು ಪ್ರಾಚೀನ ತಾಳೆಗರಿ ಗ್ರಂಥಗಳ ವಿಶ್ಲೇಷಣೆಯ ಆಧಾರದಲ್ಲಿ ಸಂಶೋಧಕರು ಈ ನಿರ್ಧಾರಕ್ಕೆ ಬಂದಿದ್ದಾರೆ. ಈ ಅಧ್ಯಯನ ವರದಿ ಅಮೆರಿಕದ ‘ಸಯನ್ಸ್’ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.
ಈ ಮಾದರಿಯ ಸುಧಾರಿತ ರೇಖಾಗಣಿತ 14ನೆ ಶತಮಾನದ ಯುರೋಪ್‌ನಲ್ಲಿ ಜನ್ಮ ತಾಳಿತ್ತು ಎಂಬುದಾಗಿ ಈ ಹಿಂದೆ ಇತಿಹಾಸಕಾರರು ಭಾವಿಸಿದ್ದರು.
‘‘ಆಕಾಶದಲ್ಲಿ ಗ್ರಹಗಳ ಚಲನೆಯನ್ನು ಲೆಕ್ಕ ಹಾಕಲು ರೇಖಾಗಣಿತವನ್ನು ಬಳಸಿರುವುದನ್ನು ತೋರಿಸುವ ಅತ್ಯಂತ ಪ್ರಾಚೀನ ಗ್ರಂಥಗಳು ಇದಾಗಿವೆ. ಪಾಶ್ಚಾತ್ಯ ವಿಜ್ಞಾನದಲ್ಲಿ ಇಂಥ ತಂತ್ರಗಾರಿಕೆಗಳ ಹುಟ್ಟಿಗೆ ಪ್ರಾಚೀನ ಬೇಬಿಲೋನಿಯನ್ ಖಗೋಳಶಾಸ್ತ್ರಜ್ಞರೇ ಪ್ರೇರಣೆಯಾಗಿರಬಹುದಾಗಿದೆ’’ ಎಂದು ಬರ್ಲಿನ್‌ನ ಹಮ್‌ಬೋಲ್ಟ್ ವಿಶ್ವವಿದ್ಯಾನಿಲಯದ ಮ್ಯಾಥ್ಯೂ ಆಸನ್‌ಡ್ರೈವರ್ ನೇತೃತ್ವದ ತಂಡ ನಡೆಸಿದ ಅಧ್ಯಯನ ಅಭಿಪ್ರಾಯಪಟ್ಟಿದೆ.‘‘ಈ ಗ್ರಂಥಗಳು ನಮ್ಮ ಇತಿಹಾಸ ಪುಸ್ತಕಗಳನ್ನು ಪುನರ್ರಚಿಸಲಿದೆ. ಈ ಮೊದಲು, 14ನೆ ಶತಮಾನದ ಆಕ್ಸ್‌ಫರ್ಡ್ ಮತ್ತು ಪ್ಯಾರಿಸ್‌ನಲ್ಲಿನ ಐರೋಪ್ಯ ವಿದ್ವಾಂಸರು ಗ್ರಹಗಳ ಚಲನೆಯ ಲೆಕ್ಕಾಚಾರವನ್ನು ನಡೆಸಿದ್ದರು ಎಂದು ಭಾವಿಸಲಾಗಿತ್ತು. ಆದರೆ, ಅವರಿಗಿಂತ ನೂರಾರು ವರ್ಷಗಳ ಮೊದಲೇ ಬೇಬಿಲೋನಿಯನ್ ಖಗೋಳ ವಿಜ್ಞಾನಿಗಳು ಈ ವಿಷಯದಲ್ಲಿ ಪ್ರಾವೀಣ್ಯತೆ ಪಡೆದಿದ್ದರು’’ ಎಂದಿದೆ.
ಗುರು ಗ್ರಹವು ದಿಗಂತದಲ್ಲಿ 60 ಮತ್ತು 120ನೆ ದಿನಗಳಲ್ಲಿ ಎರಡು ಅವಧಿಗಳಲ್ಲಿ ಕಾಣಿಸಿಕೊಳ್ಳುವುದನ್ನು ಗ್ರಂಥಗಳು ತೋರಿಸಿವೆ.ಆಕಾಶದಲ್ಲಿ ಗ್ರಹಗಳ ಚಲನೆಯನ್ನು ಲೆಕ್ಕ ಹಾಕಲು ರೇಖಾಗಣಿತವನ್ನು ಬಳಸಿರುವುದನ್ನು ತೋರಿಸುವ ಅತ್ಯಂತ ಪ್ರಾಚೀನ ಗ್ರಂಥಗಳು ಇದಾಗಿವೆ. ಪಾಶ್ಚಾತ್ಯ ವಿಜ್ಞಾನದಲ್ಲಿ ಇಂಥ ತಂತ್ರಗಾರಿಕೆಗಳ ಹುಟ್ಟಿಗೆ ಪ್ರಾಚೀನ ಬೇಬಿಲೋನಿಯನ್ ಖಗೋಳಶಾಸ್ತ್ರಜ್ಞರೇ ಪ್ರೇರಣೆಯಾಗಿರಬಹುದಾಗಿದೆ.
-ಮ್ಯಾಥ್ಯೂ ಆಸನ್‌ಡ್ರೈವರ್ ನೇತೃತ್ವದ ತಂಡ, ಬರ್ಲಿನ್‌ನ ಹಮ್‌ಬೋಲ್ಟ್ ವಿಶ್ವವಿದ್ಯಾನಿಲಯ