ಫೆಲೆಸ್ತೀನ್ ನೆಲದ ಸಂಕಟಗಳು
‘‘ಪ್ಯಾಲೆಸ್ತೀನ್ ಪ್ರಶ್ನೆ- ನಿಮಗೆ ತಿಳಿದಿರಲಿ’ ಪುಸ್ತಕವು ಫೆಲೆಸ್ತೀನಿಯರ ಸಂಕಟಗಳನ್ನ ಒಂದು ಮುಷ್ಟಿಯಲ್ಲಿ ನಿಮಗೆ ಪರಿಚಯಿಸುವ ಪ್ರಯತ್ನ. ಜಾಗತಿಕ ರಾಜಕಾರಣದ ಬಲಿಪಶುವಾಗಿರುವ ಫೆಲೆಸ್ತೀನ್ ನೆಲದ ಇತಿಹಾಸ, ವರ್ತಮಾನ ಮತ್ತು ಭವಿಷ್ಯವನ್ನು ಅತ್ಯಂತ ಸರಳವಾಗಿ, ಸಂಕ್ಷಿಪ್ತವಾಗಿ ಕಟ್ಟಿಕೊಡುವ ಪುಟ್ಟ ಪುಸ್ತಕ ಇದು. ಒಂದು ರೀತಿಯಲ್ಲಿ ಅಂತಾರಾಷ್ಟ್ರೀಯ ರಾಜಕಾರಣದ ಪ್ರವೇಶಕ್ಕೆ ಇದೊಂದು ಕಿರು ಬಾಗಿಲು. ಫೆಲೆಸ್ತೀನ್‌ನ ಇಂದಿನ ಸ್ಥಿತಿ, ಮತ್ತು ಅದಕ್ಕೆ ಕಾರಣವಾದ ಚಾರಿತ್ರಿಕ ಹಿನ್ನೆಲೆ, ಗಾಝಾ ನರಮೇಧ, ಫೆಲೆಸ್ತೀನ್ ಜೊತೆಗಿನ ಭಾರತದ ಸಂಬಂಧ, ಫೆಲೆಸ್ತೀನ್ ಕುರಿತಂತೆ ಜಗತ್ತಿನ ದ್ವಂದ್ವ ನಿಲುವುಗಳನ್ನು ಈ ಕೃತಿ ವಿವರಿಸುತ್ತದೆ. ಜಾಗತಿಕ ರಾಜಕಾರಣದ ಕುರಿತಂತೆ ತೀರಾ ಅನಕ್ಷರಸ್ಥರಾಗಿರುವವರಿಗೆ ಇದೊಂದು ಬಾಲಪಾಠ ಇದ್ದಂತೆ. ಜಗತ್ತಿನ ಭಯೋತ್ಪಾದನೆ, ಅದಕ್ಕೆ ಕಾರಣವಾದ ಇತರ ಸಂಗತಿಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕಾದರೆ ಫೆಲೆಸ್ತೀನನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಸಂಕಟಗಳನ್ನು ಅರ್ಥ ಮಾಡಿಕೊಳ್ಳಬೇಕು. ಅದನ್ನು ಅರ್ಥ ಮಾಡಿಸುವ ಪ್ರಯತ್ನವನ್ನು ಈ ಕೃತಿ ಮಾಡುತ್ತದೆ. ಈ ಕೃತಿ ಫೆಲೆಸ್ತೀನ್ ಪ್ರಶ್ನೆಯನ್ನು ಮಾನವ ಹಕ್ಕುಗಳ ಹಿನ್ನೆಲೆಯಲ್ಲಿ, ನ್ಯಾಯಯುತ ಅಂತಾರಾಷ್ಟ್ರೀಯ ನಿಯಮಗಳ ಹಿನ್ನೆಲೆಯಲ್ಲಿ ಚರ್ಚಿಸುತ್ತದೆ. ಫೆಲೆಸ್ತೀನ್ ಪ್ರಶ್ನೆ, ಮಧ್ಯಪ್ರಾಚ್ಯ ಮತ್ತು ಇತರ ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಕಳೆದ 2-3 ದಶಕಗಳಿಂದ ಸೂಕ್ಷ್ಮವಾಗಿ ವೀಕ್ಷಿಸುತ್ತಿರುವ, ವಿಶ್ಲೇಷಿಸುತ್ತಿರುವ ಇಕ್ಬಾಲ್ ಹುಸೇನ್ ಮತ್ತು ವಸಂತ ರಾಜ ಬರೆದಿದ್ದಾರೆ. ಚಿಂತನ ಪುಸ್ತಕ ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. ಕೃತಿಯ ಮುಖಬೆಲೆ 60 ರೂ. ಆಸಕ್ತರು 99022 49150 ದೂರವಾಣಿಯನ್ನು ಸಂಪರ್ಕಿಸಬಹುದು.