ಆದಿಜಾಂಬವರಿಗೆ ರಾಜಕೀಯ ಪ್ರಾತಿನಿಧ್ಯವಿಲ್ಲ: ಆರೋಪ
ಬೆಂಗಳೂರು, ಫೆ. 1: ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಸರಕಾರಗಳು ಆದಿಜಾಂಬವ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡದೆ ವಂಚಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಆದಿಜಾಂಬವ ಸಂಘದ ರಾಜ್ಯಾಧ್ಯಕ್ಷ ಸಿ.ಸಿದ್ದರಾಜು ಆರೋಪಿಸಿದರು.
ಸೋಮವಾರ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಲವಾರು ವರ್ಷಗಳಿಂದ ನೆಲೆ ನಿಂತ, 52 ಕ್ಕೂ ಹೆಚ್ಚು ಹೆಸರುಗಳಿಂದ ಕರೆಯಲ್ಪಡುವ ಆದಿಜಾಂಬವ ಸಮುದಾಯವನ್ನು ರಾಜಕೀಯ ರಂಗದಲ್ಲಿ ನೆಲೆ ನಿಲ್ಲದಂತೆ ಮಾಡುವ ಹುನ್ನಾರವನ್ನು ಆಳುತ್ತಿರುವ ಸರಕಾರಗಳು ನಡೆಸುತ್ತಿವೆ ಎಂದರು.
ಇತ್ತೀಚೆಗೆ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಕ್ರಮವಾಗಿ 62ನೆ ವಾರ್ಡ್‌ನಲ್ಲಿ ಮೇಲ್ಜಾತಿಗೆ ಸೇರಿದವರು ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನು ನೀಡಿ ಚುನಾವಣೆಗೆ ನಿಲ್ಲಿಸಲಾಗಿದೆ. ಇದನ್ನು ಸರಕಾರ ಮತ್ತು ಪಕ್ಷದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅದೇ ರೀತಿಯಾಗಿ ಲೋಕಸಭಾ ಚುನಾವಣೆಯ ನಂತರ ರಾಜ್ಯದಿಂದ ಆಯ್ಕೆಯಾದ ಸದಸ್ಯರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಒಬ್ಬರಿಗೂ ಸಚಿವ ಸ್ಥಾನ ನೀಡಿಲ್ಲ. ಎಂಎಲ್‌ಸಿ ಚುನಾವಣೆಯಲ್ಲಿ ಹಣದ ಹೊಳೆ ಹರಿಸಿದವರಿಗೆ ಟಿಕೆಟ್ ಹಂಚಿಕೆ ಮಾಡಲಾಯಿತು ಎಂದು ದೂರಿದರು.
ದಲಿತರಿಂದ ಮತ ಪಡೆದು ಅಧಿಕಾರ ಹಿಡಿಯುತ್ತಾರೆ. ಸ್ಥಾನ ಹಂಚಿಕೆ ಮತ್ತು ರಾಜಕೀಯ ಪ್ರಾತಿನಿಧ್ಯ ವಿಚಾರ ಬಂದಾಗ ದಲಿತರನ್ನು ದೂರ ಇಡುತ್ತಾರೆ. ಸಾಮಾಜಿಕ ನ್ಯಾಯ ಮತ್ತು ಸಮಪಾಲು ಎಂಬುದು ಬರಿ ಮಾತಾಗಿದೆ. ಮುಂದಿನ ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಶೇ. 22 ರಷ್ಟು ಮೀಸಲಾತಿಯನ್ನು ನಿಗದಿಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ದಲಿತ ಮಹಾ ಸಭಾ ರಾಜ್ಯಾಧ್ಯಕ್ಷ ಡಾ. ಭೀಮರಾಜ್, ಅಖಿಲ ಕರ್ನಾಟಕ ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಂ.ಎನ್.ಶ್ರೀರಾಮ್, ಆದಿಜಾಂಬವ ಮಹಿಳಾ ಸಂಘದ ಅಧ್ಯಕ್ಷೆ ಮುತ್ತುಲಕ್ಷ್ಮೀ, ಕರ್ನಾಟಕ ಅಹಿಂದ ಚಳವಳಿ ರಾಜ್ಯಾಧ್ಯಕ್ಷ ಮುತ್ತುರಾಜು ಇನ್ನಿತರರು ಉಪಸ್ಥಿತರಿದ್ದರು.