ನೀರ ಮೇಲಣ ಚಿತ್ರ: ಕನಸೊಂದ ಮೆತ್ತಿಕೊಂಡ ಕಣ್ಣ ರೆಪ್ಪೆ....
ಸಂಘಟಕಿಯಾಗಿ, ಪ್ರಕಾಶಕಿಯಾಗಿ, ಕವಯಿತ್ರಿಯಾಗಿ ಅಕ್ಷತಾ ಹುಂಚದಕಟ್ಟೆ ಅವರ ಹೆಸರು ಚಿರಪರಿಚಿತ. ಅವರ ಎರಡನೆ ಕವನಸಂಕಲನ ‘ನೀರ ಮೇಲಣ ಚಿತ್ರ’. ಸಂಕಲದ ಹೆಸರೇ ಒಂದು ಅಮೂರ್ತ ಅನುಭವ. ಇಲ್ಲಿರುವ ಕವಿತೆಗಳು ನಮ್ಮಲ್ಲಿ ಬಿಡಿಸಿ ಹೋಗುವ ಚಿತ್ರ, ನಿಧಾನಕ್ಕೆ ವಿಸ್ತಾರವಾಗುತ್ತಾ, ಬೇರೆ ಬೇರೆ ಆಕಾರಗಳನ್ನು ಪಡೆದುಕೊಳ್ಳುತ್ತಾ ನಮ್ಮನ್ನು ಚೋದ್ಯಕ್ಕೆ ಒಳಪಡಿಸುತ್ತದೆ. ‘‘ಕಣ್ಣ ರೆಪ್ಪೆಗೆ ಕನಸೊಂದ ಮೆತ್ತಿಕೊಂಡ
ಮುಖ ನಿದ್ದೆಯಲ್ಲೂ ಬೆಳಗಿರುತ್ತದೆ...’’
ಹೆಣ್ಣಿನ ಜೀವಂತಿಕೆ ಮತ್ತು ಸೂಕ್ಷ್ಮತೆಯ ಕಟ್ಟಿಕೊಡುವ 'ನಿದ್ದೆ ಚಿತ್ರ', ನರ್ತನದ ತನ್ಮಯತೆಯನ್ನು ಕೆಡಿಸಿದ ಫೋಟೋಗ್ರಾಫರನ ಫ್ಲಾಶ್, ಸಂಭ್ರಮದ ಮಿಥುನ ಹಕ್ಕಿಯ ಕೆಡವಿದ ಬಾಣಕ್ಕೆ ಹೋಲಿಸುವ ಕವಯಿತ್ರಿ, ಕಾಲನ ಹರಿವನ್ನು ಪ್ರೇಮದ ತಲ್ಲೀನತೆಯಲ್ಲಿ ತಡೆದು ನಿಲ್ಲಿಸುವ ಭರವಸೆಯನ್ನು ಹೊಂದಿದ್ದಾರೆ. ಇಲ್ಲಿರುವ ಎಲ್ಲ ಕವಿತೆಗಳೂ ಆ ಪ್ರೇಮರಾಹಿತ್ಯದ ಭರವಸೆಯಿಂದಲೇ ಒಡಮೂಡಿದವುಗಳು. ತನಗೆ ಹಸಿವಿನ ಪಾಠವನ್ನು ಹೇಳಿಕೊಡುತ್ತಾ, ಲತೆಯನ್ನು ಕಲ್ಲಾಗಿಸಿದ ತಾಯಿದೇವಿಯ ಬಗೆಯನ್ನು ವಿಶಿಷ್ಟವಾಗಿ ನಿರೂಪಿಸುತ್ತಾರೆ ಕವಯಿತ್ರಿ. ಕಿ.ರಂ.ನ ಚಿತ್ರವನ್ನು ಕವಿತೆಯಲ್ಲಿ ಹಿಡಿದಿಡುವ ಪ್ರಯತ್ನ ಆಪ್ತವಾಗಿದೆ. ಪಯಣದ ಪಯಣ ಕವಿತೆ ಮನಸ್ಸನ್ನು ಬೆಚ್ಚಗಾಗಿಸುವ ಇನ್ನೊಂದು ಅನುಭವ. 'ನಿಲ್ಲಿಸಿ' ಎಂಬೊಂದು ಸೂಚನೆಯ ಉಸರದೇ ಚಂಗನೆ ರಿಕ್ಷಾದಿಂದ ನೆಗೆದವಳ ಸೆಳೆದದ್ದೇನು? ಎನ್ನುವ ಪ್ರಶ್ನೆ, ಕವಿತೆಯನ್ನು ನಮ್ಮೆಳಗೇ ಬೆಳೆಸುತ್ತಾ ಹೋಗುತ್ತದೆ
ಅಕ್ಷತಾ ಸಾರ್ವಜನಿಕ ಜೀವನದಲ್ಲಿ ಹಾಗೂ ಒಂದು ವಿಶಾಲ ಅರ್ಥದಲ್ಲಿ ಸಾರ್ವಜನಿಕ ರಾಜಕಾರಣದಲ್ಲಿ ತೊಡಗ ಬಯಸುವ ಸೂಕ್ಷ್ಮಜೀವಿಯಾದುದರಿಂದ, ಆ ಹಿನ್ನೆಲೆ ಸಂಬಂಧವನ್ನು ಮುನ್ನುಡಿಯಲ್ಲಿ ವಿಮರ್ಶಕ ನಟರಾಜ್ ಹುಳಿಯಾರ್ ಬರೆಯುತ್ತಾರೆ. ಹಾಗೆಯೇ ಬೆನ್ನುಡಿಯಲ್ಲಿ ಖ್ಯಾತ ಕವಿ ಅಬ್ದುಲ್ ರಶೀದ್ ಅವರು, ಅಕ್ಷತಾ ಕವಿತೆಗಳಲ್ಲಿ ನಿಜದ ಸಾಕ್ಷಾತ್ಕಾರವನ್ನು ಕಾಣುತ್ತಾರೆ. ಇಲ್ಲಿನ ಸಾಲುಗಳು ಲವಲವಿಕೆಯನ್ನೂ ಕಳೆದುಕೊಳ್ಳದೆ ಕವಿತೆಯಾಗಿಯೂ ನಿಜವಾಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ. ಅಹರ್ನಿಶಿ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 65 ರೂ. ಆಸಕ್ತರು 94491 74662 ದೂರವಾಣಿಯನ್ನು ಸಂಪರ್ಕಿಸಬಹುದು.