varthabharthi


ಒರೆಗಲ್ಲು

ಕೆಲವು ಜನಪರ ಹೋರಾಟಗಳು

ವಾರ್ತಾ ಭಾರತಿ : 4 Feb, 2016
ಡಾ.ಆರ‍್ಕೆ, ಮಣೆಪಾಲ

1986ರ ವೇಳೆಗೆ ರಘುಪತಿ ರಾಜ್ಯ ಶಿಕ್ಷಣ ಸಚಿವರಾಗಿದ್ದಾಗ ನಡೆದ ಪ್ರಕರಣ. ಸತ್ಯಸಾಯಿ ಲೋಕಸೇವಾ ಸಂಸ್ಥೆಯಡಿ ಏಳನೆ ತರಗತಿಯ ನಂತರ ವಿದ್ಯಾರ್ಥಿನಿಯರಿಗೆ ಕಲಿಯಲು ಅವಕಾಶವನ್ನು ಆಡಳಿತ ನೀಡಲಿಲ್ಲ. ದಿನಂಪ್ರತಿ ಪತ್ರಿಕೆಗಳಲ್ಲಿ ವಿವಿಧ ದೂರುಗಳು ಮತ್ತು ಅವುಗಳಿಗೆ ಆಡಳಿತದ ಸ್ವರಕ್ಷಣಾತ್ಮಕ ಹೇಳಿಕೆಗಳು ಪ್ರಕಟವಾಗುತ್ತಿದ್ದುವು. ಆಗಲೇ ಆಡಳಿತ ಸತ್ಯಸಾಯಿ ಬಾಬಾನನ್ನು ಏಕೈಕ ಧರ್ಮದರ್ಶಿಯೆಂದು ಘೋಷಿಸಿಯಾಗಿತ್ತು. ನಾನು ತಿಳಿದಂತೆ ಊರವರ ಜಾಗ ಅದಾಗಿತ್ತು. ಆದರೆ, ಊರವರ ಹೆಣ್ಮಕ್ಕಳಿಗೆ ಏಳನೆ ತರಗತಿಯ ನಂತರ ಆ ಶಾಲೆಯಲ್ಲಿ ಕಲಿಯಲು ಅವಕಾಶವಿಲ್ಲ. ಅವರು ಉನ್ನತ ವ್ಯಾಸಂಗಕ್ಕಾಗಿ 8 ಕಿ.ಮೀ. ದೂರದ ವಿಟ್ಲಕ್ಕೆ ಹೋಗಬೇಕಾಗಿತ್ತು. ಬಸ್ಸು ಮತ್ತಿತರ ವೆಚ್ಚವನ್ನು ಭರಿಸುವ ಶಕ್ತಿ ಊರವರಿಗಿರಲಿಲ್ಲ. ಆಡಳಿತದ ದ್ವಂದ್ವಾತ್ಮಕ ಹೇಳಿಕೆಗಳು, ಸಮರ್ಥನೆಗಳನ್ನು ಗಮನಿಸಿದ ನಾನು ಸಂಚಾಲಕರಿಗೊಂದು ಪತ್ರ ಬರೆದೆ. ಯಾಕೆ ವಿದ್ಯಾರ್ಥಿನಿಯರಿಗೆ ಪ್ರೌಢಶಿಕ್ಷಣದ ಅವಕಾಶದಿಂದ ವಂಚಿಸಲಾಗುತ್ತಿದೆ ಎಂಬ ವಿವರವನ್ನು ನೀಡಲು ವಿನಂತಿಸಿದೆ. ನನ್ನ ಕ್ರಮವನ್ನು ಮೆಚ್ಚಿದ ಸಂಚಾಲಕರು, ‘ನೀವಾದರೂ ಸತ್ಯವನ್ನು ತಿಳಿಯಲು ಬಯಸಿದ್ದೀರ. ನೀವು ಯಾವಾಗ ನಮ್ಮಲ್ಲಿಗೆ ಬಂದರೂ ನಾವು ವಿವರಗಳನ್ನು ನಿಮಗೆ ಸಾದರಪಡಿಸುತ್ತೇವೆ’ ಎಂಬಂತೆ ಉತ್ತರಿಸಿದರು. ಕೊನೆಗೆ, ನಾನು ಕೆಲವು ಪ್ರಗತಿಪರ ಲೇಖಕರು ಮತ್ತು ವಿದ್ಯಾರ್ಥಿ - ಯುವ ಸಂಘಟನೆಗಳ ನಾಯಕರೊಂದಿಗೆ ಅಳಿಕೆಗೆ ಬರುವವನಿದ್ದು, ಸತ್ಯ ಸಂಗತಿಗಳನ್ನು ವಿಶದೀಕರಿಸಬೇಕೆಂದು ವಿನಂತಿಸಿ ಬರೆದೆ. ಈ ಪತ್ರಕ್ಕೆ ಉತ್ತರ ಬರಲಿಲ್ಲವಾದರೂ ನಾವು (ಸಾರಾ ಅಬೂಬಕರ್, ಪ್ರೊ. ನರೇಂದ್ರ ನಾಯಕ್, ಫಕೀರ್ ಮುಹಮ್ಮದ್ ಕಟ್ಪಾಡಿ, ವಾಸುದೇವ ಉಚ್ಚಿಲ, ಸುನೀಲ್ ನಟೇಕರ್, ರಾಮಚಂದ್ರ ಉಡುಪ, ಅನಂತಕೃಷ್ಣ ಹೆಬ್ಬಾರ್) ಅಳಿಕೆಗೆ ಹೋದೆವು. ಆಡಳಿತದವರು ನಮ್ಮನ್ನು ಭೇಟಿಯಾಗುವ ಮನಃಸ್ಥಿತಿಯಲ್ಲಿರಲಿಲ್ಲ. ಆದರೂ ನಾವು ಹತ್ತಾರು ಕಡೆ ಹೋಗಿ ಅಗತ್ಯವೆನಿಸಿದ ವ್ಯಕ್ತಿಗಳನ್ನು ಸಂದರ್ಶಿಸಿದೆವು. ಆಡಳಿತದವರ ಊಟ ತಿನ್ನದೆ, ನಾವಾಗಿ ಕುಚ್ಚಿಗೆ ಅನ್ನ ಮತ್ತು ಉಪ್ಪಿನಕಾಯಿಗೆ ವ್ಯವಸ್ಥೆ ಮಾಡಿದೆವು. ಅಪರಾಹ್ನ ನಾಗರಿಕ ಕ್ರಿಯಾಸಮಿತಿಯನ್ನು ಭೇಟಿಯಾಗಿ ಚರ್ಚಿಸಿದೆವು. ಪ್ರಕರಣದ ಸಂಪೂರ್ಣ ಚಿತ್ರ ಲಭ್ಯವಾಯಿತು.
ಆಗಿನ ಶಿಕ್ಷಣ ಮಂತ್ರಿ ರಘುಪತಿ ಹಾಗೂ ವಿ.ಪ.ಸದಸ್ಯೆ ಆರತಿ ಭೇಟಿಯಾದಾಗಲೂ ಆಡಳಿತ ಅವರಿಗೆ ನಿಜಚಿತ್ರವನ್ನು ನೀಡಲಿಲ್ಲ. ಈ ಭಂಡ ಧೈರ್ಯ ಆಡಳಿತಕ್ಕೆ ಬರಲು ಕಾರಣ ಆಗಿನ ಅವಿಭಜಿತ ಜಿಲ್ಲೆಯ ವಿದ್ಯಾಂಗ ಉಪನಿರ್ದೇಶಕಿ. ಅವರ ಸುಪುತ್ರ ಆಗ ಅಳಿಕೆಯಲ್ಲೇ ಕಲಿಯುತ್ತಿದ್ದ. ಪ್ರತೀ ಶನಿವಾರ ಅಲ್ಲಿಗೆ ಭೇಟಿಕೊಡುತ್ತಿದ್ದ ಅಶೋಕಕುಮಾರಿ, ಸರಕಾರದಿಂದ ಏನೇ ಪತ್ರ ಬಂದರೂ ಹೇಗೆ ಸಮಜಾಯಿಷಿ ನೀಡಬೇಕೆಂದು ಬೋಧಿಸುತ್ತಿದ್ದರು.
ನಾವು ಧಾರಾಳ ಮಾಹಿತಿ ಸಂಗ್ರಹಿಸುವಷ್ಟರಲ್ಲಿ ಸಂಜೆಯಾಯಿತು. ಊರಲ್ಲಿ ಆಡಳಿತದ ವಿರುದ್ಧ ಆಕ್ರೋಶವಿದ್ದುದರಿಂದ ವಿಟ್ಲದ ಆರಕ್ಷಕರು ಏನೂ ಮಾಡುವಂತಿರಲಿಲ್ಲ. ಅದಕ್ಕಾಗಿ ಆಡಳಿತವು ಮಂಗಳೂರಿನ ಆರಕ್ಷಕ ವರಿಷ್ಠಾಧಿಕಾರಿಗೆ ದೂರವಾಣಿ ಮೂಲಕ ‘ಇಲ್ಲಿ ಕೆಲವು ಕಮ್ಯುನಿಷ್ಟರು, ನಾಸ್ತಿಕರು ನಮ್ಮ ವಿರುದ್ಧ ಮನೆಮನೆಗೆ ಹೋಗಿ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ದೂರಿದರು. ಅಲ್ಲಿಂದ ಆರಕ್ಷಕರು ಅಳಿಕೆಗೆ ಬರುವಷ್ಟರಲ್ಲಿ ನಾವು ಎರಡು ರಿಕ್ಷಾಗಳ ಮೂಲಕ ವಿಟ್ಲಪೇಟೆಗೆ ಹೊರೆಟೆವು.
ಯಾವುದೇ ಸರಕಾರಿ ಆಜ್ಞೆಗಳಿಗೆ ಬೆಲೆ ನೀಡದ ಆಡಳಿತದ ಉಡಾಫೆ, ಉಧ್ವತ್ತಿಗೆ ಡಿಡಿಪಿಐಯ ಬೆಂಬಲವೇ ಕಾರಣವೆಂದು ಸಾಬೀತಾದ ಮೇಲೆ, ನಾನು ನನ್ನ ಹಳೆ ವಿದ್ಯಾರ್ಥಿಯೊಬ್ಬರ ಮೂಲಕ ಕೆಲವು ಪ್ರಶ್ನೆಗಳಿಗೆ ಉತ್ತರ ಪಡೆಯುವಂತೆ ಸೂಚಿಸಿ ತೊಟ್ಟಂನ ಅವರ ಮನೆಗೆ ಕಳಿಸಿಕೊಟ್ಟೆ. ನಾನು ಕಳಿಸಿಕೊಟ್ಟುದೆಂದು ಕೇಳಿ ಆತನಿಗೆ ಪ್ರವೇಶ ನೀಡಲಿಲ್ಲ. ಕೊನೆಗೆ ನಾನು, ಮಂಗಳೂರಿನ ಸ್ಟೇಟ್‌ಬ್ಯಾಂಕಿನಲ್ಲಿದ್ದ ಫಕೀರ್ ಮುಹಮ್ಮದ್ ಕಟ್ಪಾಡಿ ಅವರಿಗೆ ಆ ಪ್ರಶ್ನೆಗಳನ್ನು ಕಳಿಸಿ ಡಿಡಿಪಿಐಯಿಂದ ಉತ್ತರ ಪಡೆಯಲು ಸೂಚಿಸಿದೆ. ಆಕೆ ಅವರಿಗೂ ಉತ್ತರ ನೀಡಲಿಲ್ಲ. ಒಂದು ವಾರದ ನಂತರ ‘ಮುಂಗಾರು’ ದೈನಿಕದಲ್ಲಿ ಮುಖಪುಟದಲ್ಲೆ ‘ಹುಡುಗಿಯರನ್ನು ಹೊರಗಿಟ್ಟವರು’ ಎಂಬ ತನಿಖಾ ವರದಿ ನನ್ನ ಹೆಸರಿನಲ್ಲೇ ಪ್ರಕಟವಾಯಿತು. ಒಟ್ಟು ಮೂರು ದಿನ ವರದಿ ಪ್ರಕಟವಾಗಿ ಅಳಿಕೆ ಮತ್ತು ಸತ್ಯಸಾಯಿಯ ಬಗ್ಗೆ ಅತೀವ ಭಕ್ತಿಯಿದ್ದವರಿಗೂ ಧಿಗಿಲಾಗುವಂತಾಯಿತು. ಸ್ಥಳೀಯರಿಗೂ ತಿಳಿಯದ ಆಡಳಿತದ ಜಗಭಂಡತನ ಮತ್ತು ಸೋಗಲಾಡಿತನದ ಸಂಪೂರ್ಣ ವಿವರ ಅವರಿಗೆ ದೊರಕುವಂತಾಯಿತು. ಇದರಿಂದಾದ ಪ್ರಯೋಜನವೆಂದರೆ ಬಾಲಕಿಯರು ಪ್ರತ್ಯೇಕವಾಗಿಯಾದರೂ ಪ್ರೌಢ ಶಾಲಾಶಿಕ್ಷಣ ಮುಂದುವರಿಸಲು ಸಾಧ್ಯವಾದುದು.
ನಾನು ಖಾಸಗಿ ಪದವಿಪೂರ್ವ ವಿದ್ಯಾಲಯದಲ್ಲಿ ಉಪನ್ಯಾಸಕನಾಗಿದ್ದ, ಡಿಡಿಪಿಐಯವರು ನನ್ನ ಬಗ್ಗೆ ಸಿಡಿದೆದ್ದರೂ ಏನೂ ಮಾಡುವಂತಿರಲಿಲ್ಲ. ಆಡಳಿತದ ಪ್ರತಿಯೊಂದು ಅನ್ಯಾಯ - ದುಷ್ಕೃತ್ಯದ ಬಗ್ಗೆ ಊರವರನ್ನು ಕೇಳಿ ವರದಿ ಮಾಡಿದ್ದೆ. ಊರವರನ್ನು ಭೇಟಿಯಾಗದಷ್ಟೂ ಮಖೀನವಾಗಿತ್ತು ಆಡಳಿತ ಮಂಡಳಿ!
  ಸಾಮಾಜಿಕ ನ್ಯಾಯಕ್ಕಾಗಿ ಇನ್ನೊಂದು ಹೋರಾಟ ನಡೆದುದು ನನ್ನ ಕಾಲೇಜಿನ ವಿರುದ್ಧ. ದಲಿತ ಅಭ್ಯರ್ಥಿಗೆ ಮೀಸಲಾಗಿದ್ದ ವಾಣಿಜ್ಯಶಾಸ್ತ್ರ ಉಪನ್ಯಾಸಕರ ಕಾರ್ಯಭಾರದಲ್ಲಿ ಲೆಕ್ಕಶಾಸ್ತ್ರವನ್ನು ಆಗಿನ ಪ್ರಾಂಶುಪಾಲರೇ ಬೋಧಿಸುತ್ತಿದ್ದರು. ಅರ್ಥಶಾಸ್ತ್ರ ಉಪನ್ಯಾಸಕರು ವಾಣಿಜ್ಯಶಾಸ್ತ್ರವನ್ನು ಒಟ್ಟು ಹನ್ನೆರಡು ವರ್ಷ ಕಾಲ ಬೋಧಿಸುತ್ತಿದ್ದರು. ಅವಿಭಜಿತ ದ.ಕ. ಜಿಲ್ಲಾ ಖಾಸಗಿ ಅನುದಾನಿತ ಪ.ಪೂ. ಕಾಲೇಜು ಉಪನ್ಯಾಸಕರ ಸಂಘದಲ್ಲಿ ದೂರು ವಿಭಾಗದ ಸಂಚಾಲಕ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ನಾನು ಎಷ್ಟೋ ಪಪೂ ಕಾಲೇಜುಗಳಲ್ಲಿ ಅರ್ಹತೆಯಿಲ್ಲದಿದ್ದವರು ಬೋಧಿಸುತ್ತಿದ್ದುದನ್ನು ನಿಲ್ಲಿಸಿದ್ದು, ಸಂಘದಲ್ಲಿ ನನ್ನನ್ನು ಹಲವರು ಆಕ್ಷೇಪಿಸಿದಾಗ ನನ್ನ ಕಾಲೇಜಿನಲ್ಲಾಗುತ್ತಿದ್ದ ಅನ್ಯಾಯವನ್ನು ಪ್ರಾಂಶುಪಾಲರಿಗೆ ತಿಳಿಯಹೇಳಿ ನಿಲ್ಲಿಸಲು ಪ್ರಯತ್ನಿಸಿದೆ. ಪ.ಪೂ. ಕಾಲೇಜುಗಳಲ್ಲಿ ಉಪನ್ಯಾಸಕನೊಬ್ಬ ಬೋಧಿಸುತ್ತಿರುವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕೆಂಬ ನಿಯಮವಿದೆ. ನಾನೇನೂ ದಲಿತನಲ್ಲ; ಆದರೆ, ದಲಿತರಿಗೆ ಮೀಸಲಾದ ಹುದ್ದೆಯನ್ನು ಅವರಿಗೇ ನೀಡಬೇಕೆಂಬ ನಿಯಮವಿದ್ದು, ಅದನ್ನು ಉಲ್ಲಂಘಿಸಿದುದಕ್ಕೆ ಕಾಲೇಜಿನ ಅನುದಾನವನ್ನು ತಡೆಹಿಡಿಯುವ ಅಪಾಯವಿತ್ತು. ಆದರೆ, ಅದನ್ನು ವಿವೇಚಿಸದ ಪ್ರಾಂಶುಪಾಲರು ಆಡಳಿತದ ಮೂಲಕ ನನ್ನ ಮೇಲೆ ದೂರುಪಟ್ಟಿ ಸಲ್ಲಿಸಿ ಏಕವ್ಯಕ್ತಿ ಆಯೋಗವನ್ನು ನೇಮಿಸಿದ್ದಲ್ಲದೆ, ವೇತನವನ್ನೂ ತಡೆಹಿಡಿಯಲಾಯಿತು. ಪ್ರಕರಣದ ಎಲ್ಲಾ ವಿವರಗಳನ್ನು ನನ್ನ ಗೆಳೆಯ, ಆಗ ವಿ.ಪ. ಸದಸ್ಯರಾಗಿದ್ದ ದಲಿತ ಕವಿ ಪ್ರೊ.ಸಿದ್ದಲಿಂಗಯ್ಯ ಪಡೆದೂ ವಿಧಾನಪರಿಷತ್ತಿನಲ್ಲಿ ಏನೂ ಕಿಸಿಯಲಾಗಲಿಲ್ಲ. ಪ್ರೊ.ಚಂಪಾ ಮೂಲಕ ಎಂ.ಪಿ.ಪ್ರಕಾಶ್ ಅವರಿಗೂ ಮಾಹಿತಿ ತಿಳಿಸಲಾಯಿತು. ಯಾವ ಸಕಾರಾತ್ಮಕ ಪ್ರಯೋಜನವಾಗಲಿಲ್ಲ. ಹತ್ತಾರು ಖಾಸಗಿ ಕಾಲೇಜುಗಳ ಉಪನ್ಯಾಸಕರು ನನ್ನ ಹೋರಾಟದ ಮೂಲಕ ಆಡಳಿತದ ದಬ್ಬಾಳಿಕೆ ದೌರ್ಜನ್ಯಗಳಿಂದ ಪಾರಾಗುವಂತಾಗಿದ್ದರೂ, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನನ್ನ ಬೆಂಬಲಕ್ಕೆ ಯಾರೂ ಬಂದಿರಲಿಲ್ಲ. ಸಾಮಾಜಿಕ ನ್ಯಾಯಾಕ್ಕಾಗಿ ಹೋರಾಡಿದ್ದಕ್ಕೆ ನನಗೆ ಒಳ್ಳೆಯ ಸಂಭಾವನೆ ಸಿಕ್ಕಂತಾಯಿತೆಂದು ಹಲುಬುವ ಸಿನಿಕ ನಾನಲ್ಲ. ಪ್ರಪಂಚವಿರುವುದೇ ಹೀಗೆ: ನೀವು ನನಗಾಗಿ, ನಾನು ನನಗಾಗಿ ಎಂಬುದೇ ಮಧ್ಯಮ ವರ್ಗದ ಸಿದ್ಧಾಂತವಾಗಿರಬಹುದೇ? ಎಂದು ನಾನೂ ಆ ವೇಳೆಗೆ ಆತಂಕಪಡುವಂತಾಗಿತ್ತು.
 2008ರಿಂದ 2012ರವರೆಗೆ ನನ್ನ ಕಾಲೇಜಿನಲ್ಲಿ ಪ್ರಾಂಶುಪಾಲನಾದೆ. ಸೇವಾ ಹಿರಿತನ, ಅರ್ಹತೆ, ಶೈಕ್ಷಣಿಕ - ಸಾಹಿತ್ಯಿಕ ಸಾಧನೆ, ಶಿಸ್ತು ನೈತಿಕತೆ ನನ್ನಲ್ಲಿ ಧಾರಳವಾಗಿದ್ದರೂ, ಆಡಳಿತ ಮಂಡಳಿ ತುಂಬಾ ಕಿರುಕುಳ ಕೊಟ್ಟಿತು. ಆ ಮಾನಸಿಕ ಹಿಂಸೆ - ಶೋಷಣೆಗಳಿಂದ ಹತಾಶನಾಗದೆ, ವಿದ್ಯಾರ್ಥಿಗಳು ಮತ್ತು ಪೋಷಕರ ಬೆಂಬಲದಿಂದ 50 ತಿಂಗಳು ಪ್ರಾಂಶುಪಾಲನಾಗಿ ಉತ್ತಮ ಸಾಧನೆ ಮಾಡಿರುವುದನ್ನು ನಿರ್ಮಲ ಮನಸ್ಸಿನವರು ತಿಳಿದಿದ್ದಾರೆ. ನಾನು ನಾಸ್ತಿಕನೆಂದೋ ಕ್ರಾಂತಿಕಾರಿ ಎಡಪಂಥೀಯನೆಂದೋ ಈ ಹಿಂಸೆಗೆ ಬಲಿಯಾದೆನೇ - ನನಗೆ ತಿಳಿಯದಂತಾಯಿತು. ವಿದ್ಯಾರ್ಥಿನಿಯರಿಗೆ ವಿಶ್ರಾಂತಿ ಕೊಠಡಿ, ಬಡವಿದ್ಯಾರ್ಥಿಗಳಿಗೆ ಪುಸ್ತಕನಿಧಿ, ಪೋಷಕರು - ಅಭಿಮಾನಿಗಳ ಮೂಲಕ ಬಡವಿದ್ಯಾರ್ಥಿಗಳಿಗೆ ಧನಸಹಾಯ, ವಿಶೇಷ ಸವಲತ್ತು, ಪುರಸ್ಕಾರ ಹೀಗೆ ಹತ್ತಾರು ಜನಪರ ಕಾರ್ಯಗಳನ್ನು ಮಾಡಿದ್ದೆ. ಆಡಳಿತ ಎಂದರೆ ಸುಳ್ಳು ಸಟೆಗಳ ಅಮಾನವೀಯ ರಕ್ಕಸರಾದರೂ ನಾವು 100% ಮನುಷ್ಯರಾಗಿರೋಣ ಎಂಬುದು ನನ್ನ ಮನೀಶೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)