ಕಡಬ : ಶಾಲಾವರಣದಲ್ಲಿ ಗರಿಬಿಚ್ಚಿ ನರ್ತಿಸುವ ನವಿಲು
ಕಡಬ, ಫೆ.5: ಇಲ್ಲಿಗೆ ಸಮೀಪದ ಕುಟ್ರುಪ್ಪಾಡಿ ಗ್ರಾಮದ ಕೇಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲೊಂದು ನವಿಲು, ಕಳೆದ 7 ವರ್ಷದಿಂದ ವಿಹರಿಸುತ್ತಾ, ಶಾಲಾ ಮಕ್ಕಳ ಜತೆ ಕುಣಿದು ಕುಪ್ಪಳಿಸಿ, ವಿದ್ಯಾರ್ಥಿಗಳೊಂದಿಗೆ ಬೆರೆಯುವ ಮೂಲಕ ಗಮನ ಸೆಳೆದಿದೆ
ಈ ನವಿಲು ಬೆಳಗ್ಗಿನಿಂದ ಸಂಜೆಯವರೆಗೆ ಶಾಲಾವರಣದಲ್ಲೇ ಗರಿ ಬಿಚ್ಚಿ ನರ್ತಿಸುತ್ತಿರುತ್ತವೆ. ಇದರಿಂದಾಗಿ ಶಾಲಾ ಸಮೀಪ ಹಾವು, ಕ್ರಿಮಿಕೀಟಗಳಾಗಲೀ ಕಂಡು ಬರುತ್ತಿಲ್ಲ. ಅಕ್ಟೋಬರ್‌ವರೆಗೆ ಮೈಪೂರ್ತಿ ಗರಿಗಳಿಂದ ಕಂಗೊಳಿಸುತ್ತಿದ್ದ ಈ ನವಿಲಿನ ಗರಿಗಳು ನವೆಂಬರ್‌ನಲ್ಲಿ ಉದುರಿದ್ದು, ಈಗ ಸಣ್ಣ ಸಣ್ಣ ಗಾತ್ರದ ಹೊಸ ಗರಿಗಳನ್ನು ಕಾಣಬಹುದಾಗಿವೆ.
ಮಳೆಗಾಲದಲ್ಲಿ ಮೈತುಂಬ ಗರಿಗಳಿರುವುದರಿಂದ ಕೆಸರು ಮೆತ್ತಿಕೊಂಡು ಶಾಲೆಯ ಸಭಾಂಗಣದಲ್ಲೆಲ್ಲಾ ಬಿದ್ದುಕೊಂಡಿರುತ್ತವೆ. ಮಕ್ಕಳ ನಡುವೆ ಬೆರೆಯುವ ಈ ನವಿಲು ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗೆ ಉಪಟಳ ನೀಡುವುದರಿಂದಾಗಿ ಶಾಲಾ ಅಧ್ಯಾಪಕರು ವಿದ್ಯಾರ್ಥಿನಿಯರನ್ನು ನವಿಲಿನ ಬಳಿ ತೆರಳಲು ಬಿಡುವುದಿಲ್ಲ.
2011ರ ಶಾಲಾ ಸುವರ್ಣ ಮಹೋತ್ಸವದ ಸಂದಭ ಈ ನವಿಲು ಗರಿಬಿಚ್ಚಿ ವಿದ್ಯಾರ್ಥಿಗಳ ನಡುವೆ ನಿಂತ ಅಪರೂಪದ ಫೊಟೋವೊಂದನ್ನು ಶಾಲಾ ಆಲ್ಬಂನಲ್ಲಿ ಕಾಣಬಹುದಾಗಿದೆ. ಕೆಲವೊಮ್ಮೆ ಈ ನವಿಲಿನ ಜತೆ ಇನ್ನೂ ಮೂರ್ನಾಲ್ಕು ನವಿಲುಗಳು ಶಾಲಾ ಕಾಂಪೌಂಡ್‌ವರೆಗೆ ಆಗಮಿಸಿ ಹೊರಗಿನಿಂದಲೇ ತಿರುಗಿ ಹೋಗುತ್ತವೆ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕರು. ಮೊಬೈಲ್ ಮೂಲಕ ನವಿಲಿನ ಫೋಟೊ ಕ್ಲಿಕ್ಕಿಸುವುದು ಗೊತ್ತಾದಲ್ಲಿ ಎಲ್ಲೆಂದರಲ್ಲಿ ಓಡಿಸುತ್ತವೆ. ಈ ನವಿಲನ್ನು ಕಾಣಲು ಹಲವರು ಶಾಲೆಗೆ ಆಗಮಿಸಿ ಮನಃ ತುಂಬಿಕೊಳ್ಳುತ್ತಿದ್ದಾರೆ.