ಉರಗ ಸಂರಕ್ಷಣೆಯಲ್ಲಿ ಅರಣ್ಯ ವೀಕ್ಷಕ ಕೃಷ್ಣಮೂರ್ತಿ ಹೆಬ್ಬಾರ್
ಪಶ್ಚಿಮಘಟ್ಟಗಳಲ್ಲಿ ಮಾತ್ರ ಕಂಡುಬರುವ ಅಪರೂಪದ ಹಾಗೂ ಅತ್ಯಂತ ಅಪಾಯಕಾರಿಯಾಗಿರುವ ಕಾಳಿಂಗ ಸರ್ಪವನ್ನು ಹಿಡಿಯುವುದರ ಜೊತೆ ಅದರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಶಂಕರನಾರಾಯಣದ ವಲಯ ಅರಣ್ಯ ವ್ಯಾಪ್ತಿಯ ಹೊಸಂಗಡಿಯ ಅರಣ್ಯ ವೀಕ್ಷಕ ಕೃಷ್ಣ ಮೂರ್ತಿ ಹೆಬ್ಬಾರ್(43), ಕಳೆದ 10 ವರ್ಷಗಳಲ್ಲಿ ಬರೋಬ್ಬರಿ 43 ಕಾಳಿಂಗ ಸರ್ಪಗಳನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.
ಕಚ್ಚಿದರೆ ಕೆಲವೇ ಕ್ಷಣಗಳಲ್ಲಿ ಪ್ರಾಣ ಬಿಡುವಂತಹ ಅತ್ಯಂತ ವಿಷಕಾರಿ ಹಾವು ಇದಾಗಿದ್ದು, ತನ್ನ ಪ್ರಾಣವನ್ನು ಲೆಕ್ಕಿಸದೇ ಅದೆಷ್ಟೋ ಹಾವುಗಳನ್ನು ಅಪಾಯದ ಅಂಚಿನಿಂದ ಇವರು ರಕ್ಷಿಸಿ ಅದರ ವಾಸಸ್ಥಳವಾಗಿರುವ ಪಶ್ಚಿಮ ಘಟ್ಟಕ್ಕೆ ಬಿಟ್ಟಿದ್ದಾರೆ. ಇದರ ಜೊತೆ ಇವರು 23 ನಾಗರ ಹಾವು, 9 ಹೆಬ್ಬಾವು ಮತ್ತು ಬಾವಿಗೆ ಬಿದ್ದ ಐದು ಚಿರತೆಗಳನ್ನು ರಕ್ಷಣೆ ಮಾಡಿದ್ದಾರೆ.
2007ರಿಂದ ಹಾವು ಹಿಡಿಯವ ಕಾಯಕ ಮಾಡುತ್ತಿರುವ ಹೆಬ್ಬಾರ್, ಕೊಲ್ಲೂರು, ಮುದೂರು, ಶಂಕರನಾರಾಯಣ, ಹೊಸಂಗಡಿ, ಹಾಲಾಡಿ, ಅಮಾಸೆಬೈಲು, ಹೆಬ್ರಿ ಸೇರಿದಂತೆ ಹಲವು ಕಡೆಗಳಿಗೆ ತೆರಳಿ ಮನೆ, ಗ್ರಾಮ, ಅಂಗಡಿಯೊಳಗೆ ನುಗ್ಗಿದ ಕಾಳಿಂಗ ಸರ್ಪಗಳನ್ನು ಹಿಡಿದು ಕಾಡಿಗೆ ಸೇರಿಸಿದ್ದಾರೆ. ಇವರು ಅತ್ಯಂತ ಉದ್ದ ಅಂದರೆ 16 ಅಡಿಯ ಕಾಳಿಂಗ ಸರ್ಪವನ್ನು ಹಿಡಿದ ಸಾಹಸಿಯಾಗಿದ್ದಾರೆ.
ಈ ಹಾವು ಅತ್ಯಂತ ಅಪಾಯಕಾರಿ. ಇದರ ಒಂದೇ ಕಡಿತಕ್ಕೆ ಆನೆ ಕೂಡ ಸಾಯುತ್ತದೆ. ಇಂತಹ ಹಾವನ್ನು ಹಿಡಿಯುವ ಸಾಹಸದಲ್ಲಿ ತೊಡಗಿಸಿಕೊಂಡಿರುವ ಇವರು ಜಗತ್ತಿನ ಅತ್ಯಂತ ವಿಷಕಾರಿ ಹಾವು ಕಾಳಿಂಗ ಸರ್ಪ ಹಿಡಿಯುವ ಧೈರ್ಯ ಮೆಚ್ಚುವಂಥದ್ದು. ಶಂಕರನಾರಾಯಣದ ಆರ್ಜಿಯ ನಿವಾಸಿ ಗಣಪತಿ ಹೆಬ್ಬಾರ್ ಹಾಗೂ ಯಮುನಾ ದಂಪತಿಯ ಪುತ್ರರಾಗಿರುವ ಕೃಷ್ಣಮೂರ್ತಿ ಹೆಬ್ಬಾರ್, ಪಿಯುಸಿ ಶಿಕ್ಷಣದ ಬಳಿಕ ಬೆಂಗಳೂರಿನಲ್ಲಿ ಇಲೆಕ್ಟ್ರಾನಿಕ್ಸ್ ಇನ್ ಡಿಪ್ಲೋಮಾ ಮಾಡಿದರು. ಆನಂತರ 1989ರಲ್ಲಿ ಶಂಕರನಾರಾಯಣ ವಲಯ ಅರಣ್ಯ ಕಚೇರಿಯಲ್ಲಿ ದಿನ ಗೂಲಿಗೆ ಟೈಪಿಸ್ಟ್ ಆಗಿ ಕೆಲಸಕ್ಕೆ ಸೇರಿದರು. ಮುಂದೆ 2007ರಲ್ಲಿ ಇವರನ್ನು ಹೊಸಂಗಡಿಯ ವ್ಯಾಪ್ತಿಯಲ್ಲಿ ಅರಣ್ಯ ವೀಕ್ಷಕರಾಗಿ ನೇಮಕ ಮಾಡಲಾಯಿತು.
ಬಾಲ್ಯದಲ್ಲಿ ಪ್ರಾಣಿಗಳ ಬಗ್ಗೆ ಪ್ರೀತಿ ಹೊಂದಿದ್ದ ಹೆಬ್ಬಾರ್, ಮುಂದೊಂದು ದಿನ ಇಂತಹ ಅಪಾಯಕಾರಿ ಹಾವುಗಳನ್ನು ಹಿಡಿಯುವ ಸಾಹಸ ಮಾಡುತ್ತೇನೆ ಎಂಬುದನ್ನು ಕನಸಿನಲ್ಲೂ ಎಣಿಸಿರಲಿಲ್ಲ. 2007ರಲ್ಲಿ ಅರಣ್ಯ ವೀಕ್ಷಕರಾಗಿ ನೇಮಕಗೊಂಡ ನಂತರ ಸಾರ್ವಜನಿಕ ಸೇವೆಯ ದೃಷ್ಟಿಯಿಂದ ಹಾವು ಹಿಡಿಯುವ ಧೈರ್ಯಕ್ಕೆ ಕೈಹಾಕಿದರು. ಅಂದಿನಿಂದ ಹಾವು ಹಿಡಿಯುವ ಕಾಯಕದಲ್ಲಿ ತೊಡಗಿಸಿಕೊಂಡ ಇವರು ಇದೀಗ ಅಪಾಯಕಾರಿ ಹಾವುಗಳನ್ನು ಹಿಡಿಯುವ ಸಾಹಸದಿಂದಾಗಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೆಬ್ಬಾರರ ಸೇವೆಯನ್ನು ಮೆಚ್ಚಿ ಅರಣ್ಯ ಇಲಾಖೆಯು 2014-15 ಹಾಗೂ 15-16ರಲ್ಲಿ ಇವರಿಗೆ ಸನ್ಮಾನ ಹಾಗೂ ಗೌರವವನ್ನು ಸಲ್ಲಿಸಿದೆ. ಹಾವುಗಳ ಸಂರಕ್ಷಣೆಯ ಉದ್ದೇಶದಿಂದ ಹಾವನ್ನು ಹಿಡಿಯುವವರಿಗೆ ಕಳೆದ ವಾರ ಆಗುಂಬೆಯಲ್ಲಿರುವ ಕಾಳಿಂಗ ಸರ್ಪ ಸಂರಕ್ಷಣಾ ಕೇಂದ್ರದಲ್ಲಿ ಹಮ್ಮಿಕೊಳ್ಳ ಲಾದ ಕಾರ್ಯಕ್ರಮದಲ್ಲಿ ಇವರು ಪಾಲ್ಗೊಂಡಿದ್ದರು. ಅಲ್ಲಿ ಭಾಗವಹಿಸಿದ್ದ ಸುಮಾರು 30 ಮಂದಿಗೆ ಹಾವು ಹಿಡಿಯುವ ಕೋಲು, ಚೀಲಗಳನ್ನು ವಿತರಿಸಲಾಗಿದೆ. ‘ಕಾಡು ನಾಶದಿಂದಾಗಿ ಆಹಾರ ಸಿಗದೆ ಹಾವು, ಪ್ರಾಣಿಗಳು ನಾಡಿಗೆ ಪ್ರವೇಶ ಮಾಡುತ್ತವೆ. ಈ ವೇಳೆ ಮನುಷ್ಯ ಹಾಗೂ ವನ್ಯಜೀವಿಗಳು ಮುಖಾಮುಖಿ ಯಾಗಿ ಭಯದಿಂದ ಪರಸ್ಪರ ದಾಳಿ, ಸಂರ್ಘಷಗಳು ನಡೆಯುತ್ತವೆ. ಇಂತಹ ಸಂದರ್ಭದಲ್ಲಿ ವನ್ಯಜೀವಿಗಳ ರಕ್ಷಣೆಗೆ ನಾನು ಮುಂದಾಗುತ್ತೇನೆ. ಪರಿಸರ ರಕ್ಷಣೆಯಲ್ಲಿ ಇವುಗಳ ಪಾತ್ರ ಅಪಾರ. ಹಾವುಗಳ ಬಗ್ಗೆ ಜನರಲ್ಲಿಯೂ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದೇನೆ ಎನ್ನುತ್ತಾರೆ ಕೃಷ್ಣಮೂರ್ತಿ ಹೆಬ್ಬಾರ್.