ಬೆಂಗಳೂರು:ದೇಶಾದ್ಯಂತ ಏಕರೂಪದ ವೈದ್ಯಕೀಯ ಸೀಟು ಹಂಚಿಕೆ, ಕೇಂದ್ರದ ನಿರ್ಧಾರಕ್ಕೆ ರಾಜ್ಯ ಸರ್ಕಾರದ ವಿರೋಧ
ಬೆಂಗಳೂರು,ಫೆ.8: ದೇಶಾದ್ಯಂತ ಏಕರೂಪದ ವೈದ್ಯಕೀಯ ಸೀಟು ಹಂಚಿಕೆ ವ್ಯವಸ್ಥೆಯನ್ನು ಜಾರಿಗೆ ತರಲು ಹೊರಟಿರುವ ಕೇಂದ್ರದ ನಿರ್ಧಾರಕ್ಕೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಲು ಮುಂದಾಗಿದೆ. ಬಹು ಹಿಂದಿನಿಂದಲೇ ಸಿಇಟಿ ವ್ಯವಸ್ಥೆ ಮೂಲಕ ವ್ಯವಸ್ಥಿತವಾಗಿ ಸೀಟು ಹಂಚಿಕೆ ನಡೆಯುತ್ತಿದ್ದು, ರಾಜ್ಯ ಸರ್ಕಾರ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ತಿಳಿಸಲು ಉದ್ದೇಶಿಸಿದೆ. ಏಕರೂಪದ ಪರೀಕ್ಷಾ ಪದ್ಧತಿ ಜಾರಿಗೆ ಕೇಂದ್ರ ಸರ್ಕಾರದ ಮುಂದಾದೆ. ಕೇಂದ್ರ ಆರೋಗ್ಯ ಇಲಾಖೆ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿ, ಕೇಂದ್ರ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಬೆಳವಣಿಗೆಯಿಂದ ಆತಂಕಗೊಂಡಿರುವ ರಾಜ್ಯ ಸರ್ಕಾರ, ಈ ರೀತಿಯ ಪರೀಕ್ಷೆಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಸೀಟು ತಪ್ಪುವಂತಾದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಆದರೆ ಈ ರೀತಿ ಏಕರೂಪದ ಸಿಇಟಿ ವ್ಯವಸ್ಥೆ ಜಾರಿಗೆ ಬಂದರೆ ರಾಜ್ಯದ ವಿದ್ಯಾರ್ಥಿಗಳು ಬೇರೆ ರಾಜ್ಯಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಜತೆಗೆ ರಾಜ್ಯದ ಸೀಟುಗಳ ಸಿಂಹಪಾಲು ನೆರೆ ರಾಜ್ಯದವರಿಗೆ ದೊರೆತು ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎನ್ನುವ ಆತಂಕ ವ್ಯಕ್ತವಾಗಿದೆ. ರಾಜ್ಯದಲ್ಲಿ ವೈದ್ಯಕೀಯ ಹಾಗೂ ದಂತವೈದ್ಯಕೀಯ ಕೋರ್ಸುಗಳ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರ ಹಾಗೂ ಆಡಳಿತ ಮಂಡಳಿಗಳ ನಡುವೆ ಒಪ್ಪಂದವಾಗಿದ್ದು ಅದರನುಸಾರ ಪ್ರತಿಭಾವಂತ ಮತ್ತು ಬಡವಿದ್ಯಾರ್ಥಿಗಳಿಗೆ ಸೀಟು ದೊರೆಯುತ್ತಿದೆ. ಆದರೆ ಈಗ ಕೇಂದ್ರ ಸರ್ಕಾರ ಏಕರೂಪದ ಸಿಇಟಿ ವ್ಯವಸ್ಥೆಯನ್ನು ಜಾರಿಗೆ ತಂದರೆ ಈ ಒಪ್ಪಂದ ತಾನೇ ತಾನಾಗಿ ರದ್ದಾಗುತ್ತದೆ. ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳು ತಮಗೆ ಯಾವ ರಾಜ್ಯದಲ್ಲಿ ಸೀಟು ಸಿಕ್ಕರೂ ಹೋಗಬೇಕಾಗುತ್ತದೆ. ಹಾಗೇನಾದರೂ ಆದರೆ ಶ್ರೀಮಂತ ವಿದ್ಯಾರ್ಥಿಗಳು ಮಾತ್ರ ವೈದ್ಯಕೀಯ,ದಂತ ವೈದ್ಯಕೀಯ ಕೋರ್ಸುಗಳನ್ನು ಮಾಡಬಹುದೇ ವಿನ: ಪ್ರತಿಭೆಯಿದ್ದರೂ ಬಡ ವಿದ್ಯಾರ್ಥಿಗಳು ಈ ಕೋರ್ಸು ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ಇತ್ತೀಚೆಗಷ್ಟೇ ವೈದ್ಯರ ಗ್ರಾಮೀಣ ಸೇವೆಯನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರ ಆಧಾರದ ಮೇಲೆಯೇ ಹಳ್ಳಿಗಾಡಿನ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಿಂದ ಹಿಡಿದು,ಜಿಲ್ಲಾ ಮಟ್ಟದ ಆಸ್ಪತ್ರೆಗಳ ತನಕ ಇರುವ ವೈದ್ಯರ ಕೊರತೆ ನೀಗಿಸುವ ವಿಶ್ವಾಸ ಇದೆ.
ಆದರೆ ಕೇಂದ್ರ ಸರ್ಕಾರ ಇದೀಗ ಇದ್ದಕ್ಕಿದ್ದಂತೆ ವೈದ್ಯಕೀಯ,ದಂತ ವೈದ್ಯಕೀಯ ಸೀಟುಗಳಿಗೆ ಪ್ರವೇಶ ಪಡೆಯಲು ಏಕರೂಪದ ಸಿಇಟಿ ವ್ಯವಸ್ಥೆಯನ್ನು ಜಾರಿಗೆ ತಂದರೆ ರಾಜ್ಯದ ವಿದ್ಯಾರ್ಥಿಗಳೂ ಪರದಾಡುವಂತಾಗುತ್ತದೆ.
ಅದೇ ಕಾಲಕ್ಕೆ ತೀವ್ರ ಪ್ರಮಾಣದಲ್ಲಿ ವೈದ್ಯರ ಕೊರತೆಯನ್ನು ಎದುರಿಸುತ್ತಿರುವ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರನ್ನು ಭರ್ತಿ ಮಾಡುವ ಸರ್ಕಾರದ ಕಾನೂನಿಗೆ ತೊಂದರೆ ಎದುರಾಗಲಿದೆ ಅನ್ನುವುದು ರಾಜ್ಯ ಸರ್ಕಾರದ ಆತಂಕ. ಹೀಗಾಗಿ ವೈದ್ಯಕೀಯ ಹಾಗೂ ದಂತವೈದ್ಯಕೀಯ ಕೋರ್ಸುಗಳ ವ್ಯಾಸಂಗವನ್ನು ಮೇಲ್ದರ್ಜೆಗೇರಿಸಲಿ. ಆದರೆ ಸೀಟುಗಳ ಹಂಚಿಕೆ ವ್ಯವಸ್ಥೆ ಮಾತ್ರ ಈಗಿರುವಂತೆ ಇರಲಿ ಎಂಬುದು ರಾಜ್ಯ ಸರ್ಕಾರದ ವಾದವಾಗಿದೆ. ಆದ್ದರಿಂದ ಈಗಾಗಲೇ ಆರೋಗ್ಯ ಇಲಾಖೆಯ ವತಿಯಿಂದ ಒಪ್ಪಿಗೆ ಪಡೆದ ಏಕರೂಪದ ತಿದ್ದುಪಡಿ ಮಸೂದೆಯ ವಿವರ ಪಡೆಯಲು ಮುಂದಾಗಿರುವ ಸರ್ಕಾರ ಒಂದು ವೇಳೆ ಈ ಏಕರೂಪದ ಸಿಇಟಿ ವ್ಯವಸ್ಥೆಯಿಂದ ತಮಗೆ ಹಾನಿಯಾಗುತ್ತದೆ ಎಂದಾದರೆ ಯಾವ ಸ್ವರೂಪದಲ್ಲಾದರೂ ಹೋರಾಟ ನಡೆಸಲು ನಿರ್ಧರಿಸಿದೆ.
ಒಂದು ವೇಳೆ ರಾಜ್ಯದ ಸರ್ಕಾರಿ ಕಾಲೇಜುಗಳು,ಖಾಸಗಿ ಕಾಲೇಜುಗಳಲ್ಲಿ ಹೊರರಾಜ್ಯದವರಿಗೇ ಹೆಚ್ಚಿನ ಅವಕಾಶ ದಕ್ಕುವಂತಾದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂಬುದು ಸರ್ಕಾರದ ವಾದವಾಗಿದೆ.