ಕಡಬದಲ್ಲೊಂದು ತರಕಾರಿ ಮೇಳ : 10 ರೂ.ಗೆ 2 ಕೆ.ಜಿ. ಟೊಮೆಟೋ, ಇನ್ನಿತರ ತರಕಾರಿಗಳಿಗೆ ಕೆ.ಜಿ.ಗೆ 10 ರೂ.
ಕಡಬ, ಫೆ.10. ಇಲ್ಲಿನ ಯಶೋದ ಜನರಲ್ ಸ್ಟೋರ್ಸ್- ಸೂಪರ್ ಶಾಪ್ನಲ್ಲಿ ಮೂರು ದಿನಗಳ ಬೃಹತ್ ತರಕಾರಿ ಮೇಳವು ಬಹಳ ಜನಜಂಗುಳಿಯಿಂದ ನಡೆಯುತ್ತಿದೆ. 10 ರೂ.ಗೆ ಎರಡು ಕೆ.ಜಿ. ಟೊಮೆಟೋ ಸೇರಿದಂತೆ ಇನ್ನುಳಿದ ತರಕಾರಿಗಳಿಗೆ ಕೆ.ಜಿ.ಗೆ 10 ರೂ. ನಂತೆ ಮಾರಾಟ ಮಾಡಲಾಗುವುದು ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡತೊಡಗಿತ್ತು. ನೇರವಾಗಿ ಕೃಷಿಕರಿಂದ ತರಕಾರಿಗಳನ್ನು ಖರೀದಿಸಿ ಗ್ರಾಹಕರಿಗೆ ಸುಲಭವಾಗಿ ತಲುಪಿಸುವ ಈ ತರಕಾರಿ ಮೇಳದಿಂದ ಸಾವಿರಾರು ಗ್ರಾಹಕರು ಸದುಪಯೋಗ ಪಡೆದರು. ಜನ ಮರುಳೋ-ಜಾತ್ರೆ ಮರುಳೋ ಎಂಬಂತೆ ಅಂಗಡಿಯ ಮುಂದೆ ಕಾಲು ಇಡಲು ಜಾಗವಿಲ್ಲದೆ ಜನಜಂಗುಳಿಯಿಂದ ತುಂಬಿತ್ತು. ಇದರ ಪರಿಣಾಮವಾಗಿ ಕಡಬ ಪೇಟೆಯಲ್ಲಿನ ಹಲವು ತರಕಾರಿ ಅಂಗಡಿಗಳವರು ವ್ಯಾಪಾರವಿಲ್ಲದೆ ಪರದಾಡುತ್ತಿದ್ದ ದೃಶ್ಯ ಕಂಡು ಬಂದಿತ್ತು. ಕಡಬ ಪರಿಸರದವರಲ್ಲದೆ ಪಂಜ, ಗುತ್ತಿಗಾರು, ಸವಣೂರು, ಸುಬ್ರಹ್ಮಣ್ಯ, ಆತೂರು ಪರಿಸರದವರೂ ಈ ಮೇಳದ ಪ್ರಯೋಜನ ಪಡೆದರು. ಅಂಗಡಿಯ ಹೊರಗಡೆ ವಿಶೇಷವಾಗಿ ನಿರ್ಮಿಸಿದ ಟೆಂಟ್ನಲ್ಲಿ ತರಕಾರಿಗಳು ವ್ಯಾಪಾರವಾಗುತ್ತಿದ್ದಂತೇ ತರಕಾರಿಯನ್ನು ಹೊತ್ತ ಇನ್ನೊಂದು ಲಾರಿ ಬಂದು ಮಾರಾಟಕ್ಕೆ ರೆಡಿಯಾಗಿತ್ತು.
ಸುಮಾರು 3 ತಿಂಗಳ ಹಿಂದೆ ಇದೇ ರೀತಿಯಲ್ಲಿ ಮೀನು ವ್ಯಾಪಾರಿಗಳ ಪೈಪೋಟಿಯಿಂದಾಗಿ ಬಂಗುಡೆ ಮೀನು 100.ರೂಗಳಿಗೆ 5 ಕೆ.ಜಿ.ವರೆಗೆ ಬಿಕರಿಯಾಗಿತ್ತು. ಆಗಲೂ ಪರವೂರಿನ ನಾಗರಿಕರು ಕಡಬಕ್ಕೆ ಬಂದು ಮೀನು ವ್ಯಾಪಾರ ಮಾಡಿಕೊಂಡು ಹೋಗಿ ಗ್ರಾಮ ಗ್ರಾಮಗಳಲ್ಲಿ ಮಾರಾಟ ಮಾಡಿ ಲಾಭ ಮಾಡಿಕೊಂಡಿದ್ದರು. ವಿವಿಧ ಮಾಧ್ಯಮಗಳು ಈ ಬಗ್ಗೆ ವರದಿಯನ್ನು ಮಾಡಿದ್ದವು. ಈ ದಿನ ತರಕಾರಿಯಲ್ಲೂ ಕೆಲವು ನಾಗರೀಕರು ತಲಾ 5 ಕೆಜಿಯಂತೆ ಖರೀದಿಸಿ ಜಾಣತನ ಮೆರೆಯುವುದು ಕಂಡು ಬಂದಿತ್ತು. ಈ ಬಗ್ಗೆ ಯಶೋದ ಜನರಲ್ ಸ್ಟೋರ್ಸ್ ಮಾಲಕರಾದ ದಯಾನಂದ ಪ್ರಭುವನ್ನು ಮಾತನಾಡಿಸಿದಾಗ, ರೈತರಿಂದ ನೇರವಾಗಿ ತರಕಾರಿಗಳನ್ನು ಖರೀದಿಸಿ ಗ್ರಾಹಕರಿಗೆ ತಲುಪಿಸುವುದರಿಂದಾಗಿ ನಮ್ಮ ಇನ್ನಿತರ ವ್ಯವಹಾರದಲ್ಲೂ ಹೆಚ್ಚಿನ ಲಾಭವಾಗಿದೆ. ಇನ್ಮುಂದೆಯೂ ಈ ರೀತಿಯದೇ ತರಕಾರಿ ಮೇಳವನ್ನು ಆಯೋಜಿಸುವ ಬಗ್ಗೆಯೂ ಉತ್ಸುಕರಾಗಿದ್ದೇವೆಯೆಂದರು.
ಒಟ್ಟಿನಲ್ಲಿ ಈ ರೀತಿಯ ತರಕಾರಿ ಮೇಳದಿಂದಾಗಿ ಕಡಬ ಪರಿಸರದ ವ್ಯಾಪಾರಿಗಳೆಲ್ಲರಿಗೆ ವ್ಯಾಪಾರವಿಲ್ಲದೆ ನಷ್ಟವಾಗಿದೆಯೋ...? ಅಲ್ಲ ಮೇಳವನ್ನು ಆಯೋಜಿಸಿದ ಯಶೋದ ಸೂಪರ್ ಶಾಪ್ ಮಾಲಕರಿಗೆ ಲಾಭವಾಗಿದೆಯೋ...? ಗೊತ್ತಿಲ್ಲ. ಆದರೆ ತರಕಾರಿಗೋಸ್ಕರ ಪೇಟೆಗೆ ಆಗಮಿಸಿ ಖರೀದಿಸಿದ ಪ್ರತಿಯೊಬ್ಬ ತರಕಾರಿ ಪ್ರಿಯನಿಗೂ ಬಂಪರ್ ಬಹುಮಾನ ದೊರೆತಂತಾಗಿದೆ.