ಧೆರ್ಯ, ಛಲ, ಸ್ವಂತಿಕೆಗಳ ಸಾತ್ವಿಕ ಅರಸು -ಪಿ.ರಾಮಯ್ಯ
ಅರಸು ಅವರನ್ನು ಹತ್ತಿರದಿಂದ ಕಂಡವರು ನೀವು, ಹೇಗಿದ್ದರು ಅರಸು?
-ಅರಸು ಅವರನ್ನು 20 ವರ್ಷಗಳ ಕಾಲ, ಅವರು ರಾಜಕಾರಣಿಯಾಗಿದ್ದು ನಾನು ಪತ್ರಕರ್ತನಾಗಿ ಬಹಳ ಹತ್ತಿರದಿಂದ ನೋಡಿದ್ದೇನೆ. ಇಬ್ಬರಲ್ಲೂ ಪರಸ್ಪರ ಗೌರವವಿತ್ತು. ಧೀಮಂತ ನಾಯಕ. ಬಹುಮುಖ ವ್ಯಕ್ತಿತ್ವ. ರಾಜಕಾರಣಿಗಳಲ್ಲಿ ಇರಬೇಕಾದ ಛಲ, ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸುವ ಶಕ್ತಿ- ಅಂದರೆ, ಹೈಕಮಾಂಡನ್ನು ಎದುರು ಹಾಕಿಕೊಳ್ಳಲೂ ಹಿಂಜರಿಯದ ಧೈರ್ಯ ಅವರಲ್ಲಿತ್ತು.
ನಾನು ಕಂಡಂತೆ ಅರಸು ಅವರದು ಹೆಂಗರುಳು. ಕಣ್ಣೀರಿಗೆ-ಕಷ್ಟಕ್ಕೆ ಕರಗುತ್ತಿದ್ದರು. ಕರಗುವುದಷ್ಟೇ ಅಲ್ಲ, ಕೈಲಾದ ಸಹಾಯವನ್ನು ನಿಂತಲ್ಲಿಯೇ ಮಾಡುತ್ತಿದ್ದರು. ವಿರೋಧಿಗಳು ಮುಂದೆ ನಿಂತು ಬಯ್ದು, ಟೀಕಿಸಿದರೂ ಯಾವುದೇ ರೀತಿಯ ದೂಷಣೆ ಮಾಡುತ್ತಿರಲಿಲ್ಲ. ‘ಆಯ್ತು ಬಿಡು’ ಎಂದು ಸುಮ್ಮನಾಗುತ್ತಿದ್ದರು.
ನೀವು ವಿಧಾನಸೌಧಕ್ಕೆ ಪ್ರತಿನಿತ್ಯ ಹೋಗುತ್ತಿದ್ದವರು, ವರದಿಗಾರರ ಕಣ್ಣಲ್ಲಿ ಅರಸು ?
-ಅರಸು ನಿಜಲಿಂಗಪ್ಪನವರ ಕ್ಯಾಬಿನೆಟ್ನಲ್ಲಿ ರೇಷ್ಮೆ ಮತ್ತು ಸಾರಿಗೆ ಮಂತ್ರಿಯಾಗಿದ್ದರು. ರಾಜಕಾರಣಕ್ಕೆ ಹೊಸಬರಲ್ಲದಿದ್ದರೂ, ಮಂತ್ರಿಯಾಗಿ ಅಂತಹ ಅನುಭವವನ್ನೇನೂ ಗಳಿಸಿರಲಿಲ್ಲ. ಆಗ ನಾವು- ವಿಧಾನಸೌಧದ ರೌಂಡ್ಸ್ನಲ್ಲಿರುವ ಪತ್ರಕರ್ತರು- ಏಳೆಂಟು ಜನ ಮಾತ್ರ- ಮಂತ್ರಿಗಳ ರೂಮಿಗೆ ಹೋಗುತ್ತಿದ್ದೆವು. ಆಗ ಒಬ್ಬ ಪತ್ರಕರ್ತರು, ಅರಸು ಮಾತನಾಡಿಸೋಣ ಎಂದರು. ಮತ್ತೊಬ್ಬರು, ‘ಅರಸೂನ ಹಸು’ ಎಂದು ನಿರ್ಲಕ್ಷಿಸಿದರು. ಮಗದೊಬ್ಬರು, ‘ಏನು ಕೊಡ್ತಾರ್ರಿ, ಅವರತ್ರ ಏನೂ ಸಿಗಲ್ಲ’ ಎಂದರು. ಅದು ನಿಜವೂ ಕೂಡ. ಆಗಿನ್ನು ಅರಸು ಚಿಕ್ಕವರು. ಅವರಿಗಿಂತ ಹಿರಿಯರು, ಅನುಭವಸ್ಥರು, ಬುದ್ಧಿವಂತರು ಸಚಿವರಾಗಿದ್ದರು. ಅವರ ವಾಗ್ಪಟುತ್ವ ಮತ್ತು ಅಂಕಿಅಂಶಗಳುಳ್ಳ ನಿಖರ ಉತ್ತರಗಳ ಮುಂದೆ ಅರಸು ಕೊಂಚ ಡಲ್ಲಾಗಿಯೇ ಕಾಣುತ್ತಿದ್ದರು. ಆದರೆ ವ್ಯಕ್ತಿಗೆ ಅವಕಾಶ ಸಿಕ್ಕಾಗ ನಿಜವಾದ ವ್ಯಕ್ತಿತ್ವ ಅನಾವರಣವಾಗುತ್ತದೆ ಎಂಬ ಮಾತಿದೆ. ಅದನ್ನು ನಾನು ಅರಸು ಮುಖ್ಯಮಂತ್ರಿಯಾದ ನಂತರ ಅವರಲ್ಲಿ ಕಂಡೆ. ಅರಸು ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಬೆಳೆದ ವ್ಯಕ್ತಿ.
ನಿಮ್ಮ ಕಾಲದ ಪತ್ರಿಕೋದ್ಯಮ ಹೇಗಿತ್ತು ಸರ್?
-ಸ್ವಾತಂತ್ರಾನಂತರದ ರಾಜಕಾರಣಿಗಳು ಮತ್ತು ಪತ್ರಕರ್ತರು ಇಬ್ಬರಲ್ಲೂ ರಾಷ್ಟ್ರೀಯತೆ ಇತ್ತು. ಇಬ್ಬರೂ ಭ್ರಷ್ಟರಾಗೋದರ ಬಗ್ಗೆ ಭಯವಿತ್ತು. ಇಬ್ಬರಲ್ಲೂ ನಮ್ಮನ್ನು ನಂಬುವ ಸಮಾಜಕ್ಕೆ ಒಳ್ಳೆಯದು ಮಾಡಬೇಕೆಂಬ ತುಡಿತವಿತ್ತು. ಪತ್ರಿಕೆ ಎಂದರೆ ಸಮಾಜದ ಶಿಶು. ಮಾಹಿತಿ ಕೊಡುವಾಗ ದುರುಪಯೋಗ ಸಲ್ಲ, ಚಾರಿತ್ರಹರಣವಿಲ್ಲ, ವಸ್ತುನಿಷ್ಠ ವರದಿ, ತಪ್ಪು ವರದಿ ಕೊಟ್ಟರೆ ಹೆಂಗಪ್ಪ ಅಂತ ಹೆದರುತ್ತಿದ್ದ ಪತ್ರಕರ್ತರು ಆಗಿದ್ದರು. ಈಗ ಪತ್ರಿಕೆ ಮಾಲಕರೆ ‘ಅವರು ಬರ್ತಾರೆ, ಅವರಿಗೆ ಪಬ್ಲಿಸಿಟಿ ಕೊಡಿಯಪ್ಪ’ ಅಂತಾರೆ. ನನಗೆ ನನ್ನ ಮಾಲಕರು ಎಂದೂ ಹಾಗೆ ಹೇಳಿದವರಲ್ಲ, ನಾನೂ ಅಂಥದ್ದನ್ನು ಮಾಡಿದವನಲ್ಲ. ಆ ಸಂದರ್ಭದಲ್ಲಿ ಅರಸು ಸ್ಥಿತಿ ಗತಿ ಹೇಗಿತ್ತು?
-ಅರಸು ಕಲ್ಲಳ್ಳಿಯಿಂದ ಬಂದವರು. ಕೃಷಿ ಕೆಲಸ ಮಾಡಿ ಗೊತ್ತಿದ್ದವರು. ಅಷ್ಟೇಕೆ, ಒಂದು ಸಲ ಮೈಸೂರಿನಿಂದ ಕಲ್ಲಳ್ಳಿಗೆ ಹೋಗಲು ಜೇಬಲ್ಲಿ ಹತ್ತು ರೂಪಾಯಿಯೂ ಇಲ್ಲದೆ, ಕಾಲ್ನಡಿಗೆಯಲ್ಲಿ ಊರಿಗೆ ಹೋಗಿ ಕಷ್ಟ, ಬಡತನವನ್ನು ಕಣ್ಣಾರೆ ಕಂಡಿದ್ದ್ದವರು. ಇದು ಗೊತ್ತಿದ್ದರಿಂದ ಅರಸು ಅವರು ಮಂತ್ರಿಯಾದಾಗ ಯಾವುದೇ ಹಮ್ಮು ಬಿಮ್ಮು ತೋರಲಿಲ್ಲ. ನಿಮಗೆ ಗೊತ್ತಿಲ್ಲ, ಮಂತ್ರಿ ಸ್ಥಾನದಿಂದ ಕೆಳಗಿಳಿದಾಗ, ಮಲ್ಲೇಶ್ವರಂನಲ್ಲಿ ಬಾಡಿಗೆ ಮನೆ ಮಾಡಿದ್ದರು. ಅಷ್ಟೇ ಅಲ್ಲ, ಜೀವನಕ್ಕಾಗಿ ಹಸು ಕಟ್ಟಿ ಹಾಲು ಕರೆದು ಮಾರಾಟ ಮಾಡಿದ್ದರು.
ನಮ್ಮ ಮನೆ ಸದಾಶಿವನಗರ, ಸ್ಯಾಂಕಿ ಕೆರೆ ಪಕ್ಕದಲ್ಲಿ. ನಾನು ಪ್ರತಿದಿನ ವಾಕ್ ಹೋಗುವ ಸಮಯಕ್ಕೆ ಸರಿಯಾಗಿ, ಅರಸು ಚೆಡ್ಡಿ ಹಾಕಿಕೊಂಡು, ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಹಸು ಹೊಡೆದುಕೊಂಡು ಕೆರೆ ಏರಿ ಮೇಲೆ ಕಾಣಿಸಿಕೊಳ್ಳುತ್ತಿದ್ದರು. ಭಾಷ್ಯಂ ಸರ್ಕಲ್ಲಿನಲ್ಲಿ ಸಾಮಾನ್ಯವಾಗಿ ನನಗೆ ಸಿಗುತ್ತಿದ್ದರು. ಸಿಕ್ಕಾಗ ಮತ್ತದೇ ರಾಜಕೀಯ, ರಾಜ್ಯದ ಆಗುಹೋಗುಗಳ ಬಗ್ಗೆ ಮಾತುಕತೆ. ಆಮೇಲೆ ನಾನು ಅವರಲ್ಲಿ ಗುರುತಿಸಿದ ಬಹಳ ಮುಖ್ಯವಾದ ಮತ್ತೊಂದು ಗುಣವೆಂದರೆ, ಕಷ್ಟ-ಸುಖ ಯಾವುದನ್ನೂ ಮರೆಮಾಚುತ್ತಿರಲಿಲ್ಲ.
ಅರಸರಲ್ಲಿ ನೀವು ಗುರುತಿಸಿದ ವಿಶೇಷ ಗುಣಗಳೇನು?
-ರಾಜ್ಯದಲ್ಲಿ ಅರಸು ಜಾತಿಯ ಜನ 4 ಪರ್ಸೆಂಟ್ ಕೂಡ ಇಲ್ಲ. ಇದನ್ನು ನಾನು ಏಕೆ ಹೇಳುತ್ತಿದ್ದೇನೆಂದರೆ, ಅಲ್ಲಿಯವರೆಗಿನ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ, ನಾನು ಕಂಡಂತೆ ಬಹುಸಂಖ್ಯಾತರಾದ ಲಿಂಗಾಯತರು ಮತ್ತು ಒಕ್ಕಲಿಗರದೇ ರಾಜ್ಯಭಾರ. ಆ ಜಾತಿಗಳಿಗೆ ಸೇರಿದವರೇ ಮುಖ್ಯಮಂತ್ರಿಗಳು. ಅವರ ಮುಂದೆ ಮತ್ತೊಬ್ಬರು ಎದ್ದು ನಿಲ್ಲುವುದು ಕಷ್ಟವಾಗಿತ್ತು. ಆದರೆ ಅದೇ ಬಲಾಢ್ಯ ಜಾತಿಯಿಂದ ಬಂದು ಮುಖ್ಯಮಂತ್ರಿಗಳಾಗಿದ್ದವರಾರೂ, ಫುಲ್ ಟರ್ಮ್ ಮುಗಿಸಿರಲಿಲ್ಲ. ಅಂತಹ ಸಂದರ್ಭದಲ್ಲಿ ಸಣ್ಣ ಸಂಖ್ಯೆಯ ಜಾತಿಯಿಂದ ಬಂದ ದೇವರಾಜ ಅರಸು, ಎರಡು ಪ್ರಬಲ ಜಾತಿಗಳ ಮಧ್ಯೆ ಜಾಗ ಮಾಡಿಕೊಂಡು ನುಗ್ಗಿ ಬಂದು, ಅವರಿಗಿಂತ ಹೆಚ್ಚಿನ ಅವಧಿ ಮುಖ್ಯಮಂತ್ರಿಯಾಗಿದ್ದು- ಕರ್ನಾಟಕ ರಾಜಕೀಯದ ಚಿತ್ರಣವನ್ನು ಬದಲಿಸಿತು. ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಜನಪರ ಯೋಜನೆಗಳನ್ನು, ಸಮಾಜಮುಖಿ ಕಾರ್ಯಕ್ರಮಗಳನ್ನು ಜಾರಿಗೆ ತಂದರಲ್ಲ, ಅದು ಅವರ ಹೆಗ್ಗಳಿಕೆ. ಅಲ್ಲಿಯವರೆಗೆ ರಾಜಕೀಯ ಕ್ಷೇತ್ರದಿಂದ ದೂರವಿದ್ದ ಸಣ್ಣಪುಟ್ಟ ಜಾತಿಯ ಜನರನ್ನು ರಾಜಕೀಯ ಮುಂಚೂಣಿಗೆ ತಂದು ನಿಲ್ಲಿಸಿದರಲ್ಲ, ಅದು ಅವರ ಔದಾರ್ಯ. ಅನಾಮಧೇಯ ವ್ಯಕ್ತಿಗಳನ್ನು ವಿಧಾನಸೌಧಕ್ಕೆ ಕರೆದುಕೊಂಡು ಬಂದು ಅಧಿಕಾರದ ಕುರ್ಚಿಯಲ್ಲಿ ಕೂರಿಸಿ, ಎದೆಯುಬ್ಬಿಸಿ ನಡೆಯುವಂತೆ ನೋಡಿಕೊಂಡರಲ್ಲ, ಆ ಕಾರಣಕ್ಕಾಗಿ ಅರಸು ಶತಮಾನದ ಸ್ಮರಣೀಯ ವ್ಯಕ್ತಿ.
ಅರಸು ಅವರ ಆಡಳಿತ ಶೈಲಿ ಹೇಗಿತ್ತು?
-ಯಾವುದಾದರೂ ವಿಷಯಕ್ಕೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಳ್ಳಬೇಕಾದಾಗ ಅರಸು, ಅಧಿಕಾರಿಗಳ ಸಭೆ ಕರೆಯುತ್ತಿದ್ದರು. ಪರ-ವಿರೋಧ ಚರ್ಚಿಸುತ್ತಿದ್ದರು. ಅಕಸ್ಮಾತ್ ಅಧಿಕಾರಿಗಳು ಅರಸು ಅವರು ಪ್ರಸ್ತಾಪಿಸಿದ ವಿಷಯಕ್ಕೆ ವಿರೋಧ ವ್ಯಕ್ತಪಡಿಸಿದರೆ, ಬೇಸರಿಸಿಕೊಳ್ಳುತ್ತಿರಲಿಲ್ಲ. ನಿಮ್ಮ ನೋಟ್ ನೀವು ಹಾಕಿ ಎಂದು ಖಡಕ್ಕಾಗಿ ಹೇಳುತ್ತಿದ್ದರು. ನೋಟ್ಗಳನ್ನು ಪೂರ್ತಿ ಓದುತ್ತಿದ್ದರು. ಮಾಡಬೇಕಾಗಿದ್ದನ್ನು ಮಾಡುತ್ತಿದ್ದರು. ಆ ವಿಷಯಗಳೆಲ್ಲ ಹೆಚ್ಚಿನ ಪಾಲು ಜನಪರವಾಗಿರುತ್ತಿದ್ದವು. ಅರಸು ಅವರ ವಿಶೇಷತೆ ಎಂದರೆ, ಅವರು ತೆಗೆದುಕೊಂಡ ನಿರ್ಧಾರದಿಂದ ಮುಂದೊಂದು ದಿನ ಅಧಿಕಾರಿಗಳಿಗೇನಾದರೂ ತೊಂದರೆಯಾಗಬಹುದೆಂದು, ಮೊದಲೇ ಅವರಿಂದ ತೆಗೆದುಕೊಂಡಿದ್ದ ನೋಟ್ಗಳನ್ನು ಲಗತ್ತಿಸಿರುತ್ತಿದ್ದರು. ಬಂದರೆ ಅಪವಾದ ನನ್ನ ಮೇಲೆಯೇ ಬರಲಿ ಎಂಬುದು ಅವರ ಇಂಗಿತವಾಗಿತ್ತು. ಅನಗತ್ಯವಾಗಿ ಅಧಿಕಾರಿಗಳನ್ನು ಸಿಕ್ಕಿಸುತ್ತಿರಲಿಲ್ಲ. ಅರಸು ಅವರಲ್ಲಿದ್ದ ಛಲ, ಧೈರ್ಯ ಮತ್ತು ದೂರದೃಷ್ಟಿ ವಿಶೇಷವಾದ್ದು. ಏಕೆಂದರೆ ನಿಜಲಿಂಗಪ್ಪನವರು ಈ ನಾಡು ಕಂಡ ಬಹಳ ದೊಡ್ಡ ನಾಯಕರು. ಅವರ ಬೆನ್ನಿಗೆ ಬಹುಸಂಖ್ಯಾತ ಲಿಂಗಾಯತರಿದ್ದರು. ಅವರಿಗೂ ಕೂಡ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡುವ, ಕರ್ನಾಟಕ ಎಂದು ನಾಮಕರಣ ಮಾಡುವ ಇಚ್ಛಾಶಕ್ತಿ- ಬರಿ ಮಾತಿಗಷ್ಟೇ ಸೀಮಿತವಾಗಿತ್ತು. ಆದರೆ ಅರಸು, ದಕ್ಷಿಣ ಕರ್ನಾಟಕಕ್ಕೆ ಸೇರಿದವರಾದರೂ ಅಖಂಡ ಕರ್ನಾಟಕದ ಕನಸು ಕಂಡರು, ಕರ್ನಾಟಕವೆಂದು ನಾಮಕರಣ ಮಾಡಿದರು.
ಚಿಕ್ಕಮಗಳೂರಿನ ಉಪಚುನಾವಣೆಯನ್ನು ನೀವು ಖುದ್ದಾಗಿ ಕಂಡವರು, ಆ ಅನುಭವ...
-ಅದೊಂದು ನನ್ನ ವೃತ್ತಿಬದುಕಿನಲ್ಲಿ ವಂಡರ್ಫುಲ್ ಎಕ್ಸ್ ಪೀರಿಯನ್ಸ್. ಅದು ಮತ್ತೊಮ್ಮೆ ರಿಪೀಟ್ ಆಗಲ್ಲ. ದೇಶ-ವಿದೇಶದ ಪತ್ರಕರ್ತರೆಲ್ಲ ಅಲ್ಲಿಗೆ ಬಂದಿದ್ದರು. ಸುಮಾರು ಒಂದೂವರೆ ತಿಂಗಳ ಕಾಲ ನಾನು ಅಲ್ಲಿ ಬೀಡುಬಿಟ್ಟು, ಪ್ರತಿದಿನ ವರದಿ ಮಾಡುತ್ತಿದ್ದೆ. ಮುಖ್ಯವಾಗಿ ವೀರೇಂದ್ರಪಾಟೀಲರು ಮತ್ತು ಇಂದಿರಾ ಗಾಂಧಿಯ ಮೇಲೆ ನಮ್ಮ ವರದಿಗಳು ಕೇಂದ್ರೀಕರಿಸಿದ್ದವು. ಆದರೆ ಕಣದಲ್ಲಿದ್ದ ಅಭ್ಯರ್ಥಿಗಳ ಸಂಖ್ಯೆ 50ಕ್ಕಿಂತ ಹೆಚ್ಚಿತ್ತು. ಒಬ್ಬ ಕುದುರೆ ಮೇಲೆ ಬರೋನು, ಕ್ಯಾನವಾಸಿಗೆ. ಮತ್ತೊಬ್ಬ ನಮ್ಮನ್ನು ಅಡ್ಡಗಟ್ಟಿ, ನಾವೆಲ್ಲ ನಿಮ್ಮ ಕಣ್ಣಿಗೆ ಕಾಣುವುದಿಲ್ಲವಾ, ಬರೀ ಅವರದ್ದನ್ನೇ ಬರೀತೀರ ಎಂದು ಬಯ್ದು ಹೋಗಿದ್ದ. ಸ್ಥಳೀಯರು, ಅವನು ಸ್ವಲ್ಪ ನಟೋರಿಯಸ್ ಸಾರ್, ಮರ್ಡರ್ ಮಾಡಕ್ಕೂ ಹೇಸಲ್ಲ ಎಂದು ಎಚ್ಚರಿಸಿದ್ದರು. ಆದರೂ ನಾನು ಮಾಡುವ ವರದಿ ಮಾಡ್ತಿದ್ದೆ. ಒಂದು ದಿನ ಪೇಪರ್ನಲ್ಲಿ ಅವನ ಹೆಸರೂ ಬಂದಿತ್ತು. ಅವನು ಒಂದು ಬ್ಯಾಗ್ ನೇತಾಕಿಕೊಂಡು ನನ್ನ ಮುಂದೆ ಪ್ರತ್ಯಕ್ಷನಾದ. ಅಷ್ಟೇ ಅಲ್ಲ, ರೂಮಿನೊಳಕ್ಕೆ ಬನ್ನಿ ಎಂದು ಕರೆದ. ನನಗೆ ಜೀವ ಕೈಗೆ ಬಂದಂಗಾಯಿತು. ಇನ್ನೇನು ಮಾಡದು, ಒಳಕ್ಕೆ ಹೋದೆ. ನೋಡಿದ್ರೆ, ಬ್ಯಾಗ್ನಿಂದ ಹೂವಿನ ಹಾರ ತೆಗೆದು ಹಾಕಿ, ಕಾಲಿಗೆ ಬಿದ್ದು, ಅವತ್ತು ಏನೋ ಬಯ್ದುಬುಟ್ಟೆ, ತಪ್ಪಾಯ್ತು ಅಂದ.
ಒಂದು ದಿನ ಕಾರಲ್ಲಿ ರಾತ್ರಿ ಎರಡು ಗಂಟೆಯಲ್ಲಿ ಕಾರ್ಕಳದಿಂದ ಮಂಗಳೂರಿಗೆ ಹೋಗ್ತಿದ್ದೆ. ಘಾಟ್ ರಸ್ತೆ. ಅತ್ತ ಕಡೆಯಿಂದ ಒಂದು ಕಾರು. ಅದಕ್ಕೆ ಅಡ್ಡಲಾಗಿ ನಮ್ಮ ಕಾರು. ಕಾರಿನಿಂದ ನಾನು ಇಳಿದೆ. ಆ ಕಾರಿನಿಂದ ಅವರೂ ಇಳಿದರು. ನೋಡಿದರೆ ದೇವರಾಜ ಅರಸರು. ಅವರಿಗೂ ಆಶ್ಚರ್ಯ. ‘ಏನ್ ಸಾರ್ ಇದು’ ಅಂದೆ. ಅದಕ್ಕವರು, ‘ಏನ್ಮಾಡೋದಪ್ಪ, ಒಪ್ಪಿಕೊಂಡಿದೀನಿ, ಗೆಲ್ಲಿಸಿ ಕಳಿಸಲೇಬೇಕು, ಮರ್ಯಾದೆ ಪ್ರಶ್ನೆ’ ಎಂದರು. ಅಂದರೆ ಅವರು ನಿದ್ದೇನೆ ಮಾಡ್ತಿರಲಿಲ್ಲ. ಬರೀ ಸುತ್ತಾಟ. ಎಕ್ಸ್ಪ್ರೆಸ್ ಗ್ರೂಪ್ನವರು ಆರು ಜನ ಬಂದಿದ್ರು. ಟೈಪಿಂಗ್ ಮೆಷಿನ್, ಫೋನ್ ಎಲ್ಲಾ ವ್ಯವಸ್ಥೆ ಇತ್ತು. ನಾನು ಒಬ್ಬನೆ. ನನ್ನತ್ರ ಏನಿಲ್ಲ. ಹತ್ತಿರದ ಟೆಲಿಫೋನ್ ಎಕ್ಸ್ಚೇಂಜ್ಗೆ ಹೋಗಿ, ಆಪರೇಟರ್ನ ಸಹಾಯ ಕೇಳಿ, ಮದ್ರಾಸಿಗೆ ಟ್ರಂಕ್ಕಾಲ್ ವ್ಯವಸ್ಥೆ ಮಾಡಿಸಿಕೊಂಡಿದ್ದೆ. ಆಗ ರಾಮಲಿಂಗಂ ಎಸ್ಪಿಯಾಗಿದ್ರು, ಅವರೂ ನನಗೆ ಹೆಲ್ಪ್ ಮಾಡುದ್ರು. ನಾನು ತಾಲೂಕುವಾರು ಸಮೀಕ್ಷೆ ಮಾಡಿ ಇಂದಿರಾ ಗಾಂಧಿ ಗೆಲ್ಲುತ್ತಾರೆಂದು ವರದಿ ಮಾಡಿದ್ದೆ. ಆದರೆ ಹೊರ ಜಗತ್ತಿನಲ್ಲಿ ಇಂದಿರಾ ಗಾಂಧಿ ಸೋಲುತ್ತಾರೆಂದು ಸುದ್ದಿ ಹಬ್ಬಿತ್ತು. ನಮ್ಮ ಎಡಿಟರ್ ಫೋನ್ ಮಾಡಿ, ‘ಸರಿಯಾಗಿ ನೋಡಿ ವರದಿ ಮಾಡಿ’ ಎಂದರು. ನಾನು ‘ಇಲ್ಲ, ಸಾಧ್ಯವೇ ಇಲ್ಲ’ ಎಂದು ಹೇಳಿದೆ. ಫಲಿತಾಂಶದ ದಿನ ಮದ್ರಾಸಿನಿಂದ ನನಗೆ ಅರ್ಧ ಗಂಟೆಗೊಮ್ಮೆ ಫೋನ್, ಇಂದಿರಾಗಾಂಧಿ ಲೀಡ್ ಹೆಚ್ಚಾಗುತ್ತಿದ್ದಂತೆ ಫೋನ್ ಬರೋದು ನಿಂತುಹೋಗಿತ್ತು.
ಅರಸು ಜೊತೆಗಿನ ನೆನಪುಗಳು...
-ಚಿಕ್ಕಮಗಳೂರು ಎಲೆಕ್ಷನ್ನಲ್ಲಿ ಇಂದಿರಾ ಗಾಂಧಿಯನ್ನು ಗೆಲ್ಲಿಸಿದ್ದೇ ಅರಸು ಅವರಿಗೆ ಮುಳುವಾಯಿತು. ಅಲ್ಲಿಂದಲೇ ಇಂದಿರಾ ಕೈ ಮೇಲಾಯಿತು. ಅರಸು ವಿರುದ್ಧವಿದ್ದ ಪಕ್ಷದೊಳಗಿನ ಭಿನ್ನಮತೀಯರು ಎದ್ದು ನಿಂತರು. ಅದಕ್ಕೆ ಸರಿಯಾಗಿ ಅರಸು ಕೂಡ ತಮ್ಮದೇ ಪಕ್ಷ ಕಟ್ಟಿ, ಎಲೆಕ್ಷನ್ ಫೇಸ್ ಮಾಡಿ ಸೋತರು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಆಗ ಅರಸು ಅವರ ಮನಸ್ಸಿನಲ್ಲಿ ನನ್ನ ನಂತರ ಶ್ರೀಕಂಠಯ್ಯ ಮುಖ್ಯಮಂತ್ರಿಯಾಗಲಿ ಅನ್ನುವ ಆಸೆ ಇತ್ತು. ಅದನ್ನು ನನ್ನ ಬಳಿ ಹೇಳಿಕೊಂಡಿದ್ದರು. ಅದಕ್ಕಾಗಿ ಅವರು ಶ್ರೀಕಂಠಯ್ಯನವರ ಮನೆಗೆ ಫೋನ್ ಮಾಡಿದರೆ, ಮನೆಯಲ್ಲಿದ್ದೂ ಇಲ್ಲ ಎನ್ನಿಸಿಕೊಂಡರು. ಅವರು ಆಗಲೇ ಗುಂಡೂರಾವ್ ಗುಂಪು ಸೇರಿಯಾಗಿತ್ತು. ಅದು ಅರಸುಗೆ ಗೊತ್ತಾದರೆ ಗತಿ ಏನು ಅಂತ ಹೆದರಿದ ಶ್ರೀಕಂಠಯ್ಯ, ಫೋನ್ ಎತ್ತದೆ ತಪ್ಪಿಸಿಕೊಂಡು ತಿರುಗತೊಡಗಿದರು. ಆದರೆ ಅರಸುಗೆ ಅವೆಲ್ಲ ಗೊತ್ತಿತ್ತು. ರಾಜೀನಾಮೆ ಕೊಟ್ಟಾದ ಮೇಲೆ ನಾಲ್ಕೈದು ದಿನ ಟೈಮಿರುತ್ತದೆ- ಮತ್ತೊಂದು ಸರಕಾರ ರಚನೆಯಾಗುವವರೆಗೆ. ಹಾಗಾಗಿ ಅರಸು ರಾಜೀನಾಮೆ ಕೊಟ್ಟು ಮತ್ತೆ ವಿಧಾನಸೌಧದ ಕಾರಿಡಾರ್ನಲ್ಲಿ ಭಾರವಾದ ಹೆಜ್ಜೆಗಳನ್ನಿಡುತ್ತ ನಡೆದು ಬರುತ್ತಿದ್ದರು. ಅಲ್ಲಿ ಕಂಡ ದೃಶ್ಯ ನನ್ನನ್ನು ಇವತ್ತಿಗೂ ಕಾಡುತ್ತಿದೆ. ಕಾಲಿಗೆ ಬೀಳೋರೆಷ್ಟು, ಗೊಳೋ ಎಂದು ಕಣ್ಣೀರು ಹಾಕೋರೆಷ್ಟು, ಬಿದ್ದು ಒದ್ದಾಡೋರೆಷ್ಟು... ನೀವಿಲ್ದೆ ನಾವಿಲ್ಲ ಅನ್ನುವವರು, ನಿಮಗಾಗಿ ಪ್ರಾಣ ಬೇಕಾದರೂ ಕೊಡುತ್ತೇನೆ ಎನ್ನುವವರು... ಛೆ, ಹೀಗೂ ಉಂಟಾ ಎನ್ನಿಸಿಬಿಡ್ತು. ಅದನ್ನು ನೋಡಿದ ಅರಸು ಕೂಡ ಭಾವುಕರಾದರು. ಕಣ್ಣಲ್ಲಿ ನೀರಾಡತೊಡಗಿತು. ಪಕ್ಕದಲ್ಲಿದ್ದ ನನ್ನನ್ನು, ‘ನನ್ನ ಮನಸ್ಸು ಭಾರವಾಗಿದೆ, ಮನೆಗೆ ಹೋಗೋಣ ಬನ್ನಿ’ ಎಂದು ಅವರ ಕಾರಿನಲ್ಲಿ ಕರೆದುಕೊಂಡು ಹೋದರು. ಮುದ್ದೆ ಸಾರು ಊಟ ಮಾಡಿಸಿದರು. ಅಪ್ಪನ ಸ್ಥಿತಿಯನ್ನು ಧ್ಯಾನಿಸಿದ ಮಗಳು, ‘ಯಾಕೆ ಡ್ಯಾಡಿ ಬೇಜಾರು, ಅಧಿಕಾರ ಶಾಶ್ವತವಲ್ಲ ಅಂತ ನೀವೇ ಹೇಳ್ತಿದ್ರಲ್ಲ’ ಎಂದು ಸಮಾಧಾನ ಮಾಡಿದಳು. ಒಂದು ವಾರ ಬಿಟ್ಟು ಅರಸು ನೋಡಲು ಹೋದೆ. ಯಾರಂದ್ರೆ ಯಾರೂ ಇಲ್ಲ, ಅವತ್ತು ಆ ರೀತಿ ಬಿದ್ದು ಒದ್ದಾಡಿದ ಜನ, ಕಣ್ಣೀರಾಕಿದವರು ಒಬ್ಬರೂ ಇರಲಿಲ್ಲ. ನಾನು, ‘ಏನ್ ಸಾರ್, ಎಲ್ಲ ಎಲ್ಲೋದ್ರು’ ಅಂದೆ. ‘ಯಾಕೆ ನಾನಿಲ್ವ, ನಾನೊಬ್ನೆ ಇರ್ತೀನಿ’ ಎಂದು ಸಿಟ್ಟಾದರು. ಆ ಕೋಪ ಕಂಡು ನಾನು ಸುಮ್ಮನಾಗಿಬಿಟ್ಟೆ.
ಅರಸು ರಾಜಕೀಯಕ್ಕೆ ಕರೆತಂದ ಹಿಂದುಳಿದ ನಾಯಕರೇ ಅವರಿಗೆ ಕೈ ಕೊಟ್ಟರು. ಮನೆ ಹತ್ತಿರ ಸುಳಿಯದಾದರು. ಅಷ್ಟೇ ಅಲ್ಲ, ಹೈಕಮಾಂಡ್ಗೆ ಹೇಗೆ ಬೇಕೋ ಹಾಗೆ ವರ್ತಿಸುತ್ತ ಅರಸು ಭ್ರಷ್ಟ ಎಂದು ಹೇಳಿಕೊಂಡು ತಿರುಗಾಡತೊಡಗಿದರು. ಇದು ಅವರಿಗೆ ತುಂಬಾ ನೋವು ಕೊಟ್ಟಿತು.
ಅರಸು ಮತ್ತೊಂದು ಸಲ ಭಾವುಕರಾಗಿದ್ದು, ಅವರ ಮಗಳು ಬಾವಿಗೆ ಬಿದ್ದು ಸತ್ತಾಗ. ದೇವನಹಳ್ಳಿಯ ಬಳಿ ತೋಟ ಮಾಡಿದ್ದರು. ಅಲ್ಲಿಗೆ ಹೋಗಿದ್ದ ಮಗಳು (ಡಾ.ನಟರಾಜ್ ಪತ್ನಿ) ಕಾಲು ಜಾರಿ ಬಾವಿಗೆ ಬಿದ್ದು ಸತ್ತುಹೋಗಿದ್ದರು. ಅದನ್ನು ಆತ್ಮಹತ್ಯೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಆಗ ಅರಸು ವಿರೋಧ ಪಕ್ಷದ ನಾಯಕರಾಗಿದ್ದರು. ಎಲ್ಲಿಗೋ ಹೋಗಿದ್ದವರು ಧಾವಿಸಿ ಬಂದು, ಮಗಳ ಮುಖ ನೋಡಿ ಕುಸಿದು ಕೂತರು. ಮಾತು ನಿಂತು ಹೋದವು. ಯಾರೊಬ್ಬರೂ ಅರಸು ಅವರನ್ನು ಎದುರಿಸಲಾಗದ ಸ್ಥಿತಿ ಅದು. ಸಾಂತ್ವನ-ಧೈರ್ಯ ಹೇಳಲಿಕ್ಕೂ ಆಗದ ನಾಯಕರು ಅವರಿಂದ ದೂರವೇ ನಿಂತಿದ್ದರು. ನಾನು ಹೋಗಿ, ಅವರ ಬೆನ್ನ ಮೇಲೆ ಕೈ ಇಟ್ಟೆ. ತಕ್ಷಣ ಸಹಜ ಸ್ಥಿತಿಗೆ ಬಂದ ಅರಸು ಮತ್ತೆ ರಾಜಕಾರಣ ಮಾತನಾಡತೊಡಗಿದರು. ಆಮೇಲೆ ಅವರೆ ತೋಟಕ್ಕೆ ಹೋಗಿ ಬಂದು, ‘ಇಲ್ಲ ರಾಮಯ್ಯರೆ, ಆಕೆದು ಆಕಸ್ಮಿಕ ಸಾವು, ಕಾಲು ಜಾರಿ ಬಿದ್ದಿದ್ದಾಳೆ, ನನ್ನ ಇಷ್ಟದ ಒಳ್ಳೆ ಹುಡುಗಿ’ ಎಂದು ಅವರಿಗೆ ಅವರೇ ಸಂತೈಸಿಕೊಂಡರು. ಅವರ ಕಷ್ಟವನ್ನು, ಕಣ್ಣೀರನ್ನು ಅವರೇ ನುಂಗಿಕೊಂಡರು. ತಣ್ಣಗಾದರು.