ಕೆಲವು ಜನಪರ ಹೋರಾಟಗಳು
1980, ಉಡುಪಿ ಕ್ರಿಶ್ಚಿಯನ್ ಪ್ರೌಢಶಾಲೆಯ ವಿದ್ಯಾರ್ಥಿಯೊಬ್ಬ ಎಸೆಸೆಲ್ಸಿಯಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಂಡು ರಾಜ್ಯಕ್ಕೆ ಎರಡನೆ ರ್ಯಾಂಕ್ ಪಡೆದ. ಸಂಸ್ಕೃತವನ್ನು ಪ್ರಥಮಭಾಷೆಯಾಗಿ ತೆಗೆದುಕೊಂಡ ಬೇರೊಬ್ಬ ವಿದ್ಯಾರ್ಥಿ ಒಂದಂಕ ಹೆಚ್ಚು ಬಂದು ಪ್ರಥಮ ರ್ಯಾಂಕ್ ಗಿಟ್ಟಿಸಿದ. ಕರಾವಳಿಯ ದೈನಿಕದ ಪ್ರತಿನಿಧಿಯೊಬ್ಬರು ಅವನೊಂದಿಗೆ ಸಂದರ್ಶನ ನಡೆಸಿ ಮರುದಿನದ ಪತ್ರಿಕೆಯಲ್ಲಿ ‘ಕನ್ನಡ ಕಲಿತು ಕೆಟ್ಟೆ’ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟವಾಯಿತು. ಆ ವಿದ್ಯಾರ್ಥಿ ಹಾಗೆ ಹೇಳಿರಲಿಲ್ಲ. ಆದರೆ, ಕನ್ನಡ ಪ್ರಥಮ ಭಾಷೆಯಾಗಿ ಕಲಿತವರಿಗೆ ಸೂಕ್ತವಾದ ಅಂಕ ದೊರಕುವುದಿಲ್ಲ ಎಂಬ ಧ್ವನಿ ವ್ಯಕ್ತವಾಯಿತು. ರಾಜ್ಯದ ಶಿಕ್ಷಣ ಸಚಿವರಾಗಿದ್ದ ಸುಬ್ಬಯ್ಯ ಶೆಟ್ಟರು ಜಾಗೃತರಾಗಲೇ ಬೇಕಾಯಿತು. ರಾಜ್ಯದ ಎಲ್ಲೆಲ್ಲು ಕನ್ನಡಕ್ಕೆ ನ್ಯಾಯ ಸಿಗುತ್ತಿಲ್ಲ ಎಂಬ ಅಭಿಪ್ರಾಯ ಪ್ರಚುರವಾಯಿತು. ಇದರ ಪರಿಣಾಮವೇ ಕನ್ನಡ ಭಾಷೆಗೆ ಕಲಿಕೆಯಲ್ಲಿ ಸೂಕ್ತ ಮನ್ನಣೆ ದೊರಕಿಸುವ ಉದ್ದೇಶದಿಂದ ಪ್ರೊ. ವಿ.ಕೃ.ಗೋಕಾಕ್ ನೇತೃತ್ವದ ಸಮಿತಿ ನೇಮಕವಾಯಿತು. ಗೋಕಾಕರ ಶಿಷ್ಯರೇ ಆಗಿದ್ದ ಪ್ರೊ. ಚಂದ್ರಶೇಖರ ಪಾಟೀಲರು ಮತ್ತು ಧಾರವಾಡದ ಹೋರಾಟಗಾರರು ಕನ್ನಡಕ್ಕೆ ಅನ್ಯಾಯವಾಗದಂತೆ ನಿಗಾ ವಹಿಸುವಂತೆ ಗೋಕಾಕರ ಮೇಲೆ ಒತ್ತಡ ಹಾಕುವಂತಾಯಿತು. ಕ್ರಮೇಣ ಡಾ. ರಾಜಕುಮಾರ್ ಈ ಚಳವಳಿಯ ನೇತೃತ್ವ ವಹಿಸಿ ಹೋರಾಟ ಮುಂದುವರಿಯಿತು.
ನಮ್ಮ ಸಾರ್ವಜನಿಕ ಸ್ಮರಣಶಕ್ತಿ ಎಷ್ಟು ಶಿಥಿಲವಾಗಿದೆಯೆಂಬುದನ್ನು ಗಮನಿಸಿದಾಗ ದಿಗಿಲಾಗುತ್ತದೆ. 1992ರಲ್ಲಿ ಬಾಬರಿ ಮಸೀದಿ ನಾಶಮಾಡಲು ಪ್ರಮುಖ ಪಾತ್ರ ವಹಿಸಿದವರೇ ತಾನು ಮಾತ್ರ ಮಸೀದಿ ನಾಶಮಾಡದೆ ರಾಮಮಂದಿರ ನಿರ್ಮಾಣವಾಗಬೇಕೆಂದು ಘೋಷಿಸಿದುದನ್ನು ಲಜ್ಜೆಗೆಟ್ಟು ಉಲ್ಲೇಖಿಸುತ್ತಾರೆ. ಹಾಗೆನೇ ಗೋಕಾಕ್ ಚಳವಳಿಯ ಮೂಲ ಉಡುಪಿಯಲ್ಲೆಂಬುದು ಇಂದು ಯಾರಿಗೂ ಮುಖ್ಯವಾಗುವುದಿಲ್ಲವೇಕೋ, ಆಶ್ಚರ್ಯವಾಗುತ್ತದೆ.
1898ರಷ್ಟು ಹಿಂದೆಯೇ ಸ್ಥಾಪಿತವಾಗಿದ್ದ ಕ್ರಿಶ್ಚಿಯನ್ ಹೈಸ್ಕೂಲು ಪ್ರತಿಷ್ಠಿತ ಸಂಸ್ಥೆ, ಮಹಾನ್ ಕಲಾವಿದ ಕೆ.ಕೆ. ಹೆಬ್ಬಾರ್, ಬಾಹ್ಯಾಕಾಶ ವಿಜ್ಞಾನಿ ಪ್ರೊ. ಯು.ಆರ್.ರಾವ್, ಮುಂತಾದ ಮಹಾನ್ ಸಾಧಕರು ಕಲಿತ್ತಿದ್ದ ಶಾಲೆ, 1982ರ ಸುಮಾರಲ್ಲಿ ಮಾತೃಭಾಷೆ ಕನ್ನಡದಲ್ಲಿ ಶಿಕ್ಷಕರು ಉದಾರವಾಗಿ ಅಂಕ ನೀಡುತ್ತಿರಲಿಲ್ಲ. ಇಂದು ಎಸೆಸೆಲ್ಸಿ ಏಕೆ, ಪಿಯುಸಿಯಲ್ಲೂ ಕನ್ನಡದಲ್ಲಿ ಪಬ್ಲಿಕ್ ಪರೀಕ್ಷೆಯಲ್ಲಿ 125ರಲ್ಲಿ 125 ಅಥವಾ 100ರಲ್ಲಿ 100 ಅಂಕ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ 100ರ ಮೇಲಿರುತ್ತದೆ. ಆದರೆ, ಭಾಷೆಯಲ್ಲಿ ಪರಿಪೂರ್ಣತೆ ಒಂದು ಆದರ್ಶ, 100ಕ್ಕೆ 100ರಷ್ಟು ಅಂಕ ನೀಡದೆ 95ಕ್ಕೆ ನಿಲ್ಲಿಸಬೇಕೆನ್ನುವುದು ನನ್ನ ಸಿದ್ಧಾಂತ.
ಸರಿ. ಕನ್ನಡಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಇಡೀ ನಾಡೇ ಎದ್ದು ನಿಂತಿತು. ನಾವು ಅದೇ ವೇಳೆಗೆ ಉಡುಪಿಯಲ್ಲಿ ‘ಕನ್ನಡ ಬೆಳೆಸಿ ಬಳಗ’ ವನ್ನು ಸ್ಥಾಪಿಸಿದೆವು ‘ಕನ್ನಡ ಬಳಸಿ; ಕನ್ನಡ ಬೆಳೆಸಿ’ ಎಂಬುದೇ ಈ ಬಳಗದ ಧ್ಯೇಯವಾಕ್ಯ. ಗೆಳೆಯರಾದ ಬೊಳುವಾರು ಮಹಮ್ಮದ್ ಕುಂಞಿ, ವಾಸುದೇವ ಉಚ್ಚಿಲ, ಡಾ. ಉಪ್ಪಂಗಳ ರಾಮಭಟ್ಟ ಮತ್ತು ನಾನು ಇದರ ಸ್ಥಾಪಕರು. ಸಾವಿರಕ್ಕೂ ಹೆಚ್ಚು ಬಸ್ಸುಗಳಲ್ಲಿ ಚಾಲಕನ ಎದುರು ‘ಕನ್ನಡ ಬಳಸಿ; ಕನ್ನಡ ಬೆಳೆಸಿ’ ಎಂಬ ಕರಪತ್ರಗಳನ್ನು ಅಂಟಿಸಿದೆವು. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದು ಕನ್ನಡದ ಕುರಿತು ಸರಕಾರದ ತೀರ್ಮಾನ ಪ್ರಕಟವಾಗುವ ದಿನ ನಾವು ಉಡುಪಿ ನಗರಸಭೆಯೆದುರು ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಿದೆವು. ನಮ್ಮಿಂದಿಗೆ ಪ್ರಸಿದ್ಧ ಕಲಾವಿದ ಜಿ.ಎಸ್.ಶೆಣೈ ಕೂಡಾ ಇದ್ದರು. ಸಂಜೆಯಾಗುವಷ್ಟರ ಹೊತ್ತಿಗೆ ಎಲ್ಲದರಲ್ಲೂ ಮೂಗು ತುರುಕುವ ಉಡುಪಿಯ ಸ್ವಾಮೀಜಿ ಸಂಸ್ಕೃತ ಕಡ್ಡಾಯವಾಗಬೇಕೆಂದು, ಅದಕ್ಕೆ ಹೆಚ್ಚು ಅಂಕ ಮೀಸಲಿಡಬೇಕೆಂದು ಒತ್ತಾಯಿಸಿರುವುದು ಬಾನುಲಿಯಲ್ಲಿ ಪ್ರಸಾರವಾಯಿತು. ಶಾಲೆಗಳಲ್ಲಿ ಮಾತೃಭಾಷೆಯ ಸ್ಥಾನ, ಅದಕ್ಕೆ ನಿಗದಿ ಮಾಡಬೇಕಾದ ಅಂಕದ ವೈಜ್ಞಾನಿಕ ಕಲ್ಪನೆ ಈ ಸ್ವಾಮಿಗಿಲ್ಲ. ಮಾತೃಭಾಷೆಯೇ ಕಡ್ಡಾಯ ಭಾಷೆಯಾಗಬೇಕೆಂದು ನಾನು ಶೆಣೈ ಅವರೊಂದಿಗೆ ಚರ್ಚಿಸಿ ಮುಖ್ಯಮಂತ್ರಿಗಳಿಗೆ ತಂತಿ ಕೊಟ್ಟೆ. ಮರುದಿನ ದೈನಿಕಗಳಲ್ಲಿ ಕನ್ನಡ ಅಥವಾ ಮಾತೃಭಾಷೆಗೆ 125 ಅಂಕ, ಉಳಿದೆರಡು ಭಾಷೆಗಳಿಗೆ ತಲಾ 100 ಅಂಕ; ಮಾತೃಭಾಷೆ ಕನ್ನಡವಲ್ಲದಿದ್ದವರೂ ತೃತೀಯಭಾಷೆಯಾಗಿ 100 ಅಂಕದ ಕನ್ನಡವನ್ನು ಕಲಿಯಬೇಕೆಂಬುದು ಪ್ರಕಟವಾಯಿತು. ದೊಡ್ಡ ಸುದ್ದಿ ಮಾಡಿದ ಗೋಕಾಕ್ ಚಳವಳಿಯ ಫಲ ಇಂದೇನಾಗಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.
‘ಕನ್ನಡ ಬೆಳೆಸಿ ಬಳಗ’ ಬಹುಬೇಗ ಅವಿಭಜಿತ ದ.ಕ. ಜಿಲ್ಲೆಯ ಹಲವಾರು ಕಡೆ(ಕುಂದಾಪುರ, ಬ್ರಹ್ಮಾವರ, ಶಿರ್ವ, ಸುರತ್ಕಲ್, ಮಂಗಳೂರು, ಬಿ.ಸಿ.ರೋಡ್, ಸುಳ್ಯ ) ತನ್ನ ಶಾಖೆಗಳನ್ನು ವಿಸ್ತರಿಸಿಕೊಂಡಿತು. ಆದರೆ, ಈ ಬಗ್ಗೆ ನಾವೇನೂ ಭಾವೋದ್ವೇಗ ಪಡುವಂತಿರಲಿಲ್ಲ. ಏಕೆಂದರೆ, ಎಷ್ಟು ಬೇಗನೆ ಇದರ ಶಾಖೆಗಳೆದ್ದು ಕಾರ್ಯಕ್ರಮಗಳನ್ನು ಯೋಜಿಸುತ್ತ ಹೋಯಿತೋ ಅಷ್ಟೇ ಬೇಗ ಕಮರಿ ಹೋಗುವಂತಾಯಿತು.
ಏಕೆಂದರೆ, 1982-83ರಲ್ಲಿ ಮಂಗಳೂರು ಸ್ನಾತಕೋತ್ತರ ಕೇಂದ್ರಕ್ಕೆ ಎರವಲು ಸೇವೆಯ ಮೇರೆಗೆ ಮುಂಬಯಿಯಿಂದ ಪ್ರೊ.ಶ್ರೀನಿವಾಸ ಹಾವನೂರು ಪ್ರಾಧ್ಯಾಪಕರಾಗಿ ನೇಮಕಗೊಂಡುದಲ್ಲದೆ, ಅಗ್ಗದ ಪ್ರಚಾರಪ್ರಿಯರಾಗಿ ಸಂಸ್ಕೃತ ಪರಿಷತ್ತಿನ ಮುಖಂಡರ ಹಿತಾಸಕ್ತಿಗಳನ್ನು ಕಾಪಾಡಲು ಹಿಂಬಾಗಿಲಿನಿಂದ ಸಂಸ್ಕೃತ ಐಚ್ಛಿಕವನ್ನು (300 ಅಂಕ) ಕನ್ನಡ ಎಂ.ಎ. ಪದವಿ ಪರೀಕ್ಷೆಗೆ ತುರುಕಲು ಪ್ರಯತ್ನಿಸುವಂತಾಯಿತು. ಗೋಕಾಕ್ ಚಳವಳಿ ತೆಗೆದುಕೊಂಡ ‘ಸಮಿತಿ ನಿಷ್ಠ’ ನಿಲುವಿನಿಂದಾಗಿ ಎಡಪಂಥೀಯ ಸಾಹಿತಿಗಳು ಬಂಡಾಯ ಸಾಹಿತ್ಯ ಸಂಘಟನೆಯಿಂದ ದೂರವಾದರು. ಬಂಡಾಯ ಗೋಕಾಕ್ ಚಳವಳಿಯ ಬೆನ್ನಲ್ಲಿ ದುರ್ಬಲವಂತೂ ಆಗಿ, ಆ ಸಂಘಟನೆಯ ಹೆಸರಿನಲ್ಲಿ ಮಂಗಳೂರು ವಿ.ವಿ.ಯ ಅವೈಜ್ಞಾನಿಕ ಪ್ರಸ್ತಾವವನ್ನು ಪ್ರತಿಭಟಿಸುವಂತಾಗಲಿಲ್ಲ. ಆಗ ಅವಿಭಜಿತ ದ.ಕ. ಜಿಲ್ಲೆಯ ಸಂಚಾಲಕರು ಬೊಳುವಾರು. ಅವರೂ ಮಂಗಳೂರು ವಿ.ವಿ. ವಿರುದ್ಧದ ಹೋರಾಟಕ್ಕೆ ಮುಂದಾಗಲಿಲ್ಲ. ಆಗ ನಾನು, ‘ದ.ಕ. ಜಿಲ್ಲಾ ಕನ್ನಡ ಲೇಖಕರು ಮತ್ತು ಉಪನ್ಯಾಸಕರ ಬಳಗದ ಹೆಸರಿನಲ್ಲಿ ಕರಪತ್ರ ಮುದ್ರಿಸಿ ಹೋರಾಟ ಮಾಡಬೇಕಾಯಿತು. ಕೇಶವ ಉಚ್ಚಿಲ, ಶೇಖರ ಇಡ್ಯ, ರಾಮಚಂದ್ರ ಉಚ್ಚಿಲ, ಪ್ರೊ. ಡಿ. ರಘುನಾಥ ರಾವ್ ಮುಂತಾದವರು ಸಂಸ್ಕೃತ ಐಚ್ಛಿಕದ ವಿರುದ್ಧದ ಹೋರಾಟದಲ್ಲಿ ಸಹಕರಿಸಿದರು. ಇಲ್ಲೂ ಒಂದು ಅಪಾಯ ಎದುರಾಯಿತು. ಸಂಸ್ಕೃತ ಎಂದ ಕೂಡಲೇ ಬ್ರಾಹ್ಮಣರ ವಿರೋಧ ಕಟ್ಟಿಕೊಳ್ಳಬೇಕಾದೀತೆಂಬ ಆತಂಕ. ಈ ಹೋರಾಟ ಬ್ರಾಹ್ಮಣ ವಿರೋಧಿ ನೆಲೆಯನ್ನು ಕಂಡುಕೊಂಡು ವಿಫಲವಾಗಬಾರದೆಂಬ ಉದ್ದೇಶದಿಂದ, ಕಾರ್ಯಕರ್ತರ ಒತ್ತಾಸೆಯಂತೆ ಜಾತಿಯಲ್ಲಿ ನಂಬುಗೆಯಿಲ್ಲದ ನಾನು ಸಂಸ್ಕೃತ ಐಚ್ಛಿಕ ವಿರೋಧಿ ಹೋರಾಟದ ನೇತೃತ್ವ ವಹಿಸಬೇಕಾಯಿತು. ಶೈಕ್ಷಣಿಕ ಮಂಡಳಿ ಮತ್ತು ಸೆನೆಟ್ನಲ್ಲಿ ಚರ್ಚಿಸದೆ ಏಕಾಏಕಿ ಸಂಸ್ಕೃತ ಐಚ್ಛಿಕವನ್ನು ತುರುಕುವ ಪ್ರಸ್ತಾವದ ವಿರುದ್ಧ ನಮ್ಮ ಹೋರಾಟ ತೀವ್ರಗೊಂಡು, ಒಂದು ನಿಯೋಗ ಉಪಕುಲಪತಿ ಪ್ರೊ. ಶೇಖ್ ಆಲಿಯವರನ್ನು ಭೇಟಿಯಾಗಿ, ಆ ಪ್ರಸ್ತಾವವನ್ನು ವಪಾಸು ತೆಗೆದುಕೊಳ್ಳುವಂತಾಯಿತು.
1983ರಲ್ಲಿ ಮಂಗಳೂರು ವಿ.ವಿ. ಕನ್ನಡ ಎಂ.ಎ. ಉಪನ್ಯಾಸಕರ ಆಯ್ಕೆಯ ವೇಳೆ ಪಿಎಚ್ಡಿ ಯೋತ್ತರ ಸಂಶೋಧನೆಯ ಅನುಭವವಲ್ಲದೆ, ಆಧಿಕಕ ಅರ್ಹತೆಯಿದ್ದ ನನ್ನನ್ನು ಆಯ್ಕೆ ಮಾಡಲಿಲ್ಲ. ಹೋರಾಟದಲ್ಲಿ ಗೆದ್ದಂತೆನಿಸಿದರೂ, ವೈಯಕ್ತಿಕವಾಗಿ ಅನ್ಯಾಯಕ್ಕೊಳಗಾದೆ. ಪಿಎಚ್ಡಿ ಯಾಗಲಿ ಗಣನೀಯ ಪ್ರಕಟನೆಯಾಗಲಿ ಇಲ್ಲದ ಅಭ್ಯರ್ಥಿ ಆಯ್ಕೆಯಾದರು. ಆದರೆ, ಶೈಕ್ಷಣಿಕೇತರ ಕಾರಣಕ್ಕಾಗಿ ನನಗೆ ಅನ್ಯಾಯವಾಗಿದ್ದುದನ್ನು ಆಗಿನ ರಾಜ್ಯಪಾಲರಿಗೆ ವಿವರವಾಗಿ ವಿಶದೀಕರಿಸಿದ್ದೆ. 1987ರ ವರೆಗೆ ಆ ಹುದ್ದೆಗೆ ಆಯ್ಕೆ ಮಾಡದಿದ್ದಾಗ ‘ಆಯ್ಕೆಯಾಗಬೇಕಿದ್ದ’ ಉಪನ್ಯಾಸಕ ನ್ಯಾಯಾಲಯದಲ್ಲಿ ರಾಜ್ಯಪಾಲರ ವಿರುದ್ಧವೇ ದಾವೆ ಹೂಡಿ ಆಯ್ಕೆಯಾದರು. ಇದು ತಿಳಿದ ಕೂಡಲೇ ನಾನು ವಿ. ಗೋಪಾಲಗೌಡರ ಮೂಲಕ ಹೈಕೋರ್ಟ್ಗೆ ರಿಟ್ ಹಾಕಿದೆ. 10 ವರ್ಷಗಳ ನಂತರ ಗೌಡರು ಚುರುಕಾಗಿ ಕೆಲಸಮಾಡಲಿಲ್ಲವೋ ಅಥವಾ ಬೇರಾವ ಕಾರಣವೋ-ವ್ಯಾಜ್ಯ ನನ್ನ ವಿರುದ್ಧ ಹೋಯಿತು.
1984ರಲ್ಲಿ ಸಾಧು-ಸಜ್ಜನರೆಂದು ಹೆಸರಾಗಿದ್ದ ಡಾ.ಗುಂಡ್ಮಿ ಚಂದ್ರಶೇಖರ ಐತಾಳರು ಕನ್ನಡ ವಿಭಾಗಕ್ಕೆ ತನ್ನನ್ನು ಪ್ರಾಧ್ಯಾಪಕನಾಗಿ ಆಯ್ಕೆ ಮಾಡದಿದ್ದಾಗ, ನ್ಯಾಯಾಲಯದ ಮೊರೆಹೋಗದೆ ‘ಬ್ರಾಹ್ಮಣ ಬಂಡಾಯ’ ಎಂಬ ಪ್ರತಿಗಾಮಿ ಮತ್ತು ಬಂಡಾಯದ ತಿರುಚಿದ ವಿಕೃತ ಕಲ್ಪನೆಯ, ಕೆಟ್ಟ ‘ಕವನ ಸಂಕಲನ’ ಪ್ರಕಟಿಸಿದರು. ಅದರ ವಿರುದ್ಧ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಲ್ಲದೆ, ಕ್ರಾಂತಿಕಾರಿ ಮತ್ತು ದಲಿತ ಪತ್ರಿಕೆಗಳಲ್ಲಿ ಲೇಖನ ಬರೆದೆ. ಕರಾವಳಿಯ ದೈನಿಕವೊಂದು ನನ್ನ ಸಿದ್ಧಾಂತದ ಪರವಾಗಿ ಬಂದ ಪತ್ರಗಳಲ್ಲಿ ಹೆಚ್ಚಿನವುಗಳನ್ನು ಕಸದ ಬುಟ್ಟಿಗೆ ಹಾಕಿತು; ಇಲ್ಲವೇ ತಿರುಚಿ ಇನ್ನಷ್ಟು ವಿಕೃತ ಪತ್ರಗಳು ಬರುವ, ಪ್ರಕಟಿಸುವ ಹಾಗೆ, ಕುತಂತ್ರವಾಡಿತು. ಬ್ರಾಹ್ಮಣರು ಮತ್ತು ಬಂಧುಗಳೇ ನನ್ನನ್ನು ದ್ವೇಷಿಸುವಂತಾಯಿತು. ಬ್ರಾಹ್ಮಣರೇ ಶಿಕ್ಷಕರಾಗಬೇಕು, ಕೆಳಜಾತಿಯವರಿಗೆ ಬೋಧಿಸಬಾರದು. ಶಾಪ ಹಾಕಬೇಕೆಂಬ ವ್ಯಾಧಿಗ್ರಸ್ತ, ಸಂಕುಚಿತ ವಿಚಾರ ‘ಬಂಡಾಯ’ ವಾಗುವುದು ಹೇಗೆ? ಬಂಡಾಯ ಸಾಹಿತ್ಯ ಸಂಘಟನೆ 1979ರಲ್ಲಿ ರೂಪುಗೊಂಡಾಗ ಸಿ.ಜಿ.ಕೆ. ರೆಡ್ಡಿ ಮಾರ್ಮಿಕವಾಗಿ ಹೇಳಿದ್ದರು: ‘ಬಂಡಾಯದ ಹಕ್ಕು ಎಲ್ಲರಿಗೂ ಇದೆ; ಆದರೆ, ಹಕ್ಕಿನೊಂದಿಗೆ ಕಾರಣವಿರುವುದು ದಲಿತರಿಗೆ ಮಾತ್ರ’ ಎಂಬುದಾಗಿ ದಸಂಸದವರು ಗುಂಡ್ಮಿ ವಿರುದ್ಧ ಮಂಗಳೂರು ನ್ಯಾಯಾಲಯದಲ್ಲಿ ಕ್ರಿಮಿನಲ್ ವ್ಯಾಜ್ಯ ಹೂಡಿದರು. ಅವರು ನನ್ನ ‘ಪಂಚಮ’ ‘ಕೆಂಬಾವುಟ’ ದಲ್ಲಿ ಪ್ರಕಟವಾಗಿದ್ದ ಲೇಖನಗಳನ್ನು ಆಧಾರವಾಗಿಟ್ಟುಕೊಂಡು ವ್ಯಾಜ್ಯ ಹೂಡಿದುದರಿಂದ, ನ್ಯಾಯಾಲಯಕ್ಕೆ ವಿವರಣೆ ನೀಡುವುದು ನನ್ನ ಹೊಣೆಯಾಗಿತ್ತು. ಅದನ್ನು ಸಮರ್ಪಕವಾಗಿಯೇ ನಿರ್ವಹಿಸಿದೆ. ನ್ಯಾಯಾಲಯದಲ್ಲಿ ವಿಚಾರಣೆಯಾಗುವ ವೇಳೆ, ಕವಿ ಗುಂಡ್ಮಿ ಮತ್ತು ಸಂಕಲನದ ಪ್ರಕಾಶಕ ತೀರಿಯಾಗಿತ್ತು. ಅಲ್ಲಿಗೆ ಗುಂಡ್ಮಿ ‘ಬಂಡಾಯ’ ತೀರಿತು; ನನ್ನ ಬಂಡಾಯ ಮುಂದುವರಿಯಿತು. ಯಾರ್ಯಾರಿಗೋ ಇದರಿಂದ ಲಾಭವಾಗುವಂತಾಯಿತು. ನಮ್ಮ ಬಂಡಾಯದಿಂದ ಕೆಲವರಿಗೆ ‘ಉಂಡಾಯ!’ ಹಾಗೆಂದು ನಮ್ಮ ಬಂಡಾಯ ‘ದಂಡಾಯ’ ವೆಂದು ನಾವು ಯಾವತ್ತೂ ತೀರ್ಮಾನಿಸುವಂತಿಲ್ಲ.