ಕನ್ನಡ ಕಂಪನ್ನು ವಿಶ್ವಕ್ಕೆ ಸಾರಿದವರು ಹಂಪ ದಂಪತಿ: ಕಂಬಾರ
ಬೆಂಗಳೂರು, ಫೆ. 12: ಹಂಪ ನಾಗರಾಜಯ್ಯ ದಂಪತಿ ಕನ್ನಡದ ಸಾಹಿತ್ಯದ ಕಂಪನ್ನು ಇಡೀ ವಿಶ್ವಕ್ಕೆ ಸಾರಿದ ಏಕೈಕ ದಂಪತಿ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ತಿಳಿಸಿದ್ದಾರೆ.
ಶುಕ್ರವಾರ ನಗರದ ಉದಯಭಾನು ಕಲಾ ಸಂಘ ಸಾಂಸ್ಕೃತಿಕ ಭವನದಲ್ಲಿ ಬೆಂಗಳೂರು ರತ್ನ ಪತ್ರಿಕೆ ಮತ್ತು ಬೆಂಗಳೂರು ರತ್ನ ಪ್ರತಿಷ್ಠಾನ ಆಯೋಜಿಸಿದ್ದ ಕುವೆಂಪು ಆದರ್ಶ ದಂಪತಿ ಪುರಸ್ಕಾರವನ್ನು ನಾಡೋಜ ಹಂಪ ನಾಗರಾಜಯ್ಯ ಮತ್ತು ನಾಡೋಜ ಕಮಲಾ ಹಂಪನಾ ದಂಪತಿಗೆ ಪ್ರದಾನಿಸಿ ಅವರು ಮಾತನಾಡಿದರು.
ಹಂಪನಾ ದಂಪತಿ ಕನ್ನಡ ಸಾಹಿತ್ಯದ ಅತಿ ದೊಡ್ಡ ವಿದ್ವಾಂಸರು. ಕನ್ನಡ ಸಾಹಿತ್ಯ ಕೃಷಿಯಲ್ಲಿ ಅಪಾರವಾದ ಸಂಶೋಧನೆ ಮತ್ತು ಅಧ್ಯಯನ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೆ ಆಂಗ್ಲ ಭಾಷೆಯಲ್ಲಿ ಅಪಾರವಾದ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಬಣ್ಣಿಸಿದ ಕಂಬಾರರು, ಕನ್ನಡದ ಕಂಪನ್ನು ಇಡೀ ವಿಶ್ವಕ್ಕೆ ಸಾರಿದ ಏಕೈಕ ದಂಪತಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಎಂಟು ಜೋಡಿಗೆ ಕರ್ನಾಟಕ ಆದರ್ಶ ದಂಪತಿಗಳು-2016 ಪ್ರಶಸ್ತಿ ಮತ್ತು 11 ಜೋಡಿಗೆ ಬೆಂಗಳೂರು ಆದರ್ಶ ದಂಪತಿ-2016 ಪ್ರಶಸ್ತಿಯನ್ನು ಪ್ರದಾನಿಸಲಾಯಿತು.