30 ವರ್ಷಗಳ ಹಿಂದೆ ನಾಪತ್ತೆಯಾದಾತ ಪತ್ತೆ: ಒಮ್ಮೆಲೇ ತನ್ನ ಹೆಸರು ಜ್ಞಾಪಿಸಿಕೊಂಡ ಭಿನ್ನಚೇತನ
ಒಟ್ಟಾವ, ಫೆ. 12: ಈ ಭಿನ್ನ ಸಾಮರ್ಥ್ಯದ ವ್ಯಕ್ತಿ 30 ವರ್ಷಗಳಿಂದ ನಾಪತ್ತೆಯಾಗಿದ್ದರು. ಅವರು ಸತ್ತಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಒಂದು ದಿನ ಅವರು ತನ್ನ ಹೆಸರನ್ನು ಒಮ್ಮೆಲೇ ಜ್ಞಾಪಿಸಿಕೊಂಡರು. ಈಗ ತನ್ನ ಕುಟುಂಬವನ್ನು ಸೇರಲು ಅವರು ಸಜ್ಜಾಗಿದ್ದಾರೆ.
ಎಡ್ಗರ್ ಲಾತುಲಿಪ್ ಮೆದುಳು ಸಂಪೂರ್ಣ ಬೆಳೆಯದ ವ್ಯಕ್ತಿ. ಒಂಟಾರಿಯೊದ ಕಿಚನರ್ನಲ್ಲಿರುವ ವಿಶೇಷ ಮನೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು 1986ರಲ್ಲಿ ನಾಪತ್ತೆಯಾದರು. ಆಗ ಅವರ ವಯಸ್ಸು 21, ಆದರೆ, ಅವರ ಮನಸ್ಸಿನ ವಯಸ್ಸು ಮಕ್ಕಳದಾಗಿತ್ತು.
ಅದಕ್ಕೂ ಮೊದಲು ಅವರು ಆತ್ಮಹತ್ಯೆಗೂ ಪ್ರಯತ್ನಿಸಿದ್ದರು ಹಾಗೂ ಚಿಕಿತ್ಸೆ ಪಡೆಯುತ್ತಿದ್ದರು.
ನಾಪತ್ತೆಯಾದಂದಿನಿಂದ ಅವರ ಸುದ್ದಿಯೇ ಇರಲಿಲ್ಲ. ಆತ ಕೊಲೆಯಾಗಿರಬೇಕು ಎಂಬ ತೀರ್ಮಾನಕ್ಕೆ ತಾಯಿ ಬಂದಿದ್ದರು. ಇದೇ ವ್ಯಕ್ತಿ 120 ಕಿಲೋಮೀಟರ್ ದೂರದಲ್ಲಿ ಬೇರೆ ಹೆಸರಿನಲ್ಲಿ ಬದುಕುತ್ತಿದ್ದರು. ಅವರಿಗೆ ಕಳೆದ ತಿಂಗಳು ಕೆಲವು ಹಳೆಯ ನೆನಪುಗಳು ಮರುಕಳಿಸಿದವು ಎನ್ನಲಾಗಿದೆ. ತನ್ನ ಹೆಸರು ಎಡ್ಗರ್ ಲಾತುಲಿಪ್ ಆಗಿರಬೇಕು ಎಂದು ಅವರು ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ಹೇಳಿದರು.
ಅವರ 76 ವರ್ಷದ ತಾಯಿ ಸಿಲ್ವಿಯಾ ವಿಲ್ಸನ್ ಬಳಿಕ ಒಟ್ಟಾವಕ್ಕೆ ಸ್ಥಳಾಂತರಗೊಂಡಿದ್ದರು. ಕಳೆದ ವಾರ ಪೊಲೀಸ್ ಅಧಿಕಾರಿಯೊಬ್ಬರು ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದರು.
ಆತ ನಾಪತ್ತೆಯಾದ ಸಂದರ್ಭದಲ್ಲಿ ಬಿದ್ದು ಗಾಯಗೊಂಡಿದ್ದು, ಅವರ ಸ್ಮರಣಶಕ್ತಿಗೆ ಪೆಟ್ಟಾಗಿತ್ತು. ಎಷ್ಟು ಪೆಟ್ಟಾಗಿತ್ತೆಂದರೆ ಅವರಿಗೆ ತನ್ನ ಹೆಸರೂ ನೆನಪಿಗೆ ಬರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.