ಕವಿಗೆ ನೂರು, ಕಾವ್ಯಕ್ಕೆ ಎಪ್ಪತ್ತೈದು
‘‘ದೂರ...ದೂರ ಅಲ್ಲೆ ನಿಲ್ಲಿ ನನ್ನ ದೇವರೆ’’
- ಪದುಮಳು ವಿಲಂಬದಲಿ ‘ವಿಸ್ಪರಿಸಿದಾಗ’, ಅಳಿಯ ದೇವರು ‘ಸರಿ ಹೊರಡುವೆ’ ಎಂದು ತುದಿಗಾಲಲಿ ನಿಲ್ಲಲು, ನಾದಿನಿ ಹೊಸದಾಗಿ ತಂದ ಕ್ಯಾಸೆಟ್ಟೊಂದನ್ನು ಹಚ್ಚಿದಳು:
‘‘ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು’’
ತುಟಿಯಲೇನೋ ಬಂದು, ಕಣ್ಣಲೇನೋ ನಿಂದ ಪದುಮಳ ಧೃತ-ವಿಲಂಬಗಳಿಗೆ ಬೆರಗಾದ ಅಳಿಯ ದೇವರು ಸಾವರಿಸಿಕೊಂಡು ಕಾವ್ಯಾಭಿನಯದಲಿ ಹೆಜ್ಜೆಗೂಡಿಸಿದರು.
***
ಹೊನ್ನೂರ ಕೇರಿಯಲಿ ಬಂದಿದ್ದ ಹೊಸ ಗಂಡು
ತನ್ನ ಕೂದಲಿಗಿಂತ ಕಪ್ಪು
ಈ ಶತಮಾನದ ಲತಾಂಗಿಯರು ‘ಬ್ಲ್ಯಾಕ್ ಈಸ್ ಗೋಲ್ಡ್’ ಎನ್ನುತ್ತ ಕೃಷ್ಣ ಸುಂದರರ ಜೋಡಿ ನಲನಲಿಯುತಲೇ ‘ಶ್ಯಾನುಭೋಗರ ಮಗಳ’ ಮುಗ್ಧತೆಗೆ ಕನಿಕರಿಸಿದರು.
***
ಒಂದಿರುಳ ಕನಸಿನಲಿ ನನ್ನವಳ ಕೇಳಿದೆನು
ಚೆಂದ ನಿನಗಾವುದೆಂದು
ನಮ್ಮೂರು ಹೊನ್ನೂರೊ, ನಿಮ್ಮೂರು ನವಿಲೂರೊ
ಚೆಂದ ನಿನಗಾವುದೆಂದು
ದೂರದ ನ್ಯೂಯಾರ್ಕ್-ಬೆಂಗಳೂರುಗಳಲ್ಲಿ ಕುಳಿತ ಇ-ಮೇಲ್ ದಂಪತಿಗಳು ಹೀಗೆ ಇ-ಟಪಾಲುಗಳ ವಿನಿಮಯ ಮಾಡಿಕೊಂಡಿದ್ದರು.
ಎಪ್ಪತ್ತೈದಾದರೂ ನಳನಳಿಸುವ ಮೈಸೂರು ಮಲ್ಲಿಗೆ. ಪ್ರಾಯ ನೂರು ತುಂಬಿದರೂ ಕನ್ನಡ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನಿಂತ ಚಿರಯೌವನಿಗ ಕವಿ.
ನಮ್ಮ ಕಾಳಿಂಗ ರಾವ್, ಮೈಸೂರು ಅನಂತ ಸ್ವಾಮಿ, ಅಶ್ವತ್ಥ, ರತ್ನಮಾಲಾ ಪ್ರಕಾಶ್, ಮಾಲತಿ ಮೊದಲಾದವರ ಸಿರಿ ಕಂಠಗಳಲ್ಲಿ, ಇಂದಿಗೂ, ಇಂದಿನ ಜಾಗತಿಕ ಸಂಸ್ಕೃತಿಯ ಭರಾಟೆಗಳ ಮಧ್ಯೆಯೂ ಜನುಮಜಾತ ಸಂಬಂಧಗಳೊಂದಿಗೆ, ಸೊರಗಿದ ಭಾವನಾತ್ಮಕ ಸಂಬಂಧಗಳೊಂದಿಗೆ ತಮ್ಮ ಕವಿತೆಗಳಿಂದ ಮನಸ್ಸುಗಳನ್ನು ಬೆಸೆಯುತ್ತಿರುವ ಈ ಕವಿ ನಮ್ಮ ಕೆ.ಎಸ್. ನರಸಿಂಹಸ್ವಾಮಿಗಳು.
ಪ್ರೇಮ ಕಾವ್ಯ, ದಾಂಪತ್ಯ ಗೀತೆಗಳು ಎಂಬೆಲ್ಲ ಪ್ರಶಂಸೆ-ಪ್ರಸಿದ್ಧಿಗಳಿಗೆ ಪಾತ್ರವಾಗಿರುವ ‘ಮೈಸೂರು ಮಲ್ಲಿಗೆ’ ಪ್ರಕಟವಾಗಿ ಎಪ್ಪತ್ತೈದು ವರ್ಷಗಳಾದವು. ಇದರ ಕರ್ತೃ ಕವಿ ಕೆ.ಎಸ್.ನರಸಿಂಹಸ್ವಾಮಿಗಳು ಈಗ ನಮ್ಮ ಮಧ್ಯೆ ಇದ್ದಿದ್ದರೆ ಅವರು ನೂರು ತುಂಬಿ ನೂರೊಂದಕ್ಕೆ ಪದಾರ್ಪಣ ಮಾಡಿರುತ್ತಿದ್ದರು.
ಆಪ್ತ ವರ್ಗದಲ್ಲಿ, ಕಾವ್ಯ ಪ್ರೇಮಿಗಳಲ್ಲಿ ಕೆ.ಎಸ್.ನ. ಎಂದೇ ಪ್ರಿಯನಾಮರಾದ ನರಸಿಂಹಸ್ವಾಮಿಗಳು ಜನಿಸಿದ್ದು, 26 ಜನವರಿ 1915, ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ. ತಂದೆ ಕಿಕ್ಕೇರಿ ಸುಬ್ಬರಾಯರು. ತಾಯಿ ಹೊಸಹೊಳಲು ನಾಗಮ್ಮನವರು. ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಮೈಸೂರಿನಲ್ಲಿ ಶಿಕ್ಷಣ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ.ವರೆಗೆ. ಮುಂದೆ ಉದರ ನಿಮಿತ್ತಂ ಉದ್ಯೋಗ. 1936 ಮಾರ್ಚಿಯಲ್ಲಿ ಶ್ರೀಮತಿ ವೆಂಕಮ್ಮನವರೊಡನೆ ಗೃಹಸ್ಥಾಶ್ರಮ. ಕೆ.ಎಸ್.ನ. ಅವರ ತಂದೆ ಮೈಸೂರನಲ್ಲಿ ಶೆಟ್ಟರ ಅಂಗಡಿಯೊಂದರಲ್ಲಿ ಗುಮಾಸ್ತೆಯಾಗಿದ್ದರು. ಸಂಜೆಯಾದರೆ ಮನೆಗೆ ಬಂದು ಪಿಟೀಲು ನುಡಿಸುತ್ತಿದ್ದರು. ಸುಪ್ರಸಿದ್ಧ ಸಂಗೀತ ವಿದ್ವಾಂಸರು ಮನೆಗೆ ಬರುತ್ತಿದ್ದರು. ಸಂಗೀತ ಹೀಗೆ ಬಾಲಕನ ಮನ ಸೆಳೆಯಿತು. ಮೈಸೂರಿನ ದೊಡ್ಡ ಗಡಿಯಾರದ ಎದುರು ಒಂದು ಹೂವಿನ ಅಂಗಡಿ. ಅದರ ಮಾಲಕರಾದ ಸಾಹೇಬರು ನನ್ನೊಂದಿಗೆ ಮಾತನಾಡುತ್ತಲೇ ರೇಸಿಮೆಯ ನೂಲಿಗಿಂತ ತೆಳುವಾದ ಬಾಳೆಯ ನಾರಿನಲ್ಲಿ ದೂರದೂರಕೆ ಗುಲಾಬಿ, ಸಂಪಿಗೆ, ಮರುಗ, ಪಚ್ಚೆತೆನೆ ಇಟ್ಟು ಮಲ್ಲಿಗೆ ದಂಡೆ ಹೆಣೆದರೆಂದರೆ ಅದೇ ಒಂದು ಭಾವ ಗೀತೆ -ಇಂಥ ಪರಿಸರದಲ್ಲಿ ಬೆಳೆದವರು ಕವಿಯಾಗದೇ ಮತ್ತೇನಾಗಲು ಸಾಧ್ಯ?
ಯಾರೋ ಒಬ್ಬ ಪುಣ್ಯಾತ್ಮರು ಬರ್ನ್ಸ್ ಕವಿಯ ಸಂಕಲನವೊಂದನ್ನು ಈ ಹುಡುಗನ ಕೈಗೆ ಹಾಕಿದರು. ಪ್ರಭಾವಿತರಾದ ಕೆ.ಎಸ್.ನ. ಕುವೆಂಪು ಅವರಂತೆ ಇಂಗ್ಲಿಷ್ನಲ್ಲಿ ಪದ್ಯ ಬರೆಯಲಾರಂಭಿಸಿದರು. ಓದಿದ ಮೇಷ್ಟ್ರು ಪಟ್ಟಾಭಿರಾಮನ್, ‘ಪದ್ಯ ಏನೋ ಚೆನ್ನಾಗಿದೆ. ಆದರೆ ನಿನ್ನ ಈ ಇಂಗ್ಲಿಷ್ ಯಾರು ಕೇಳ್ತಾರೆ? ಕನ್ನಡದಲ್ಲಿ ಬರಿ’ ಅಂತ ಕನ್ನಡದ ದೀಕ್ಷೆ ಕೊಟ್ಟರು.
ಆಂಗ್ಲ ಕವಿ ಬರ್ನ್ಸ್ ಕೆ.ಎಸ್.ನ ಅವರ ಕಾವ್ಯದ ಹಿಂದಿನ ಪ್ರಾರಂಭಿಕ ಪ್ರಭಾವ, ಪ್ರೇರಣೆ. ಬರ್ನ್ಸ್ ಮೂಲತ: ಜಾನಪದ ಕವಿ.
ಬರ್ನ್ಸನಂತೆ ತಾವೂ ಜನಪದ ಪ್ರೇಮ ಗೀತೆಗಳಿಂದ ತಮ್ಮ ಪ್ರೇಮ ಗೀತೆಗಳಿಗೆ ಸ್ಫೂರ್ತಿ ಪಡೆದುದಾಗಿ ಕೆ.ಎಸ್.ನ. ಒಂದು ಕಡೆ ಹೇಳಿಕೊಂಡಿದ್ದಾರೆ. ಅಷ್ಷೇ ಅಲ್ಲದೆ ಬರ್ನ್ಸ್ನಿಂದ ಕೆ.ಎಸ್.ನ ‘ಜನತೆಯ ಕವಿ’ಯಾಗಬೇಕೆಂಬ ಪ್ರೇರಣೆ ಪಡೆದರು. ಜನಸಾಮಾನ್ಯರ ಬದುಕನ್ನು ಒಳಹೊಕ್ಕು ನೋಡುವ, ಅವರ ಸಹಜ ಭಾವನೆಗಳಿಗೆ ಮಾತುಕೊಡುವ ಬರ್ನ್ಸ್ನ ಕಾವ್ಯಶಕ್ತಿ ಕೆ.ಎಸ್.ನ ಅವರ ಮನಸ್ಸಿನಲ್ಲಿ ತಾವು ರಚಿಸಬೇಕೆಂದಿದ್ದ ಕಾವ್ಯದ ಕಲ್ಪನೆಯನ್ನು ರೂಪಿಸಿತು ಎನ್ನುತ್ತಾರೆ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ.
ಬರ್ನ್ಸ್ನಿಂದ ಪ್ರಭಾವಿತರಾದ, ಪ್ರೇರಿತರಾದ ಕೆ.ಎಸ್.ನ. ಅವರಿಗೆ ಅಗ ತಾನೆ ಬಂದಿದ್ದ ಬಿ.ಎಂ.ಶ್ರೀಯವರ ‘ಇಂಗ್ಲಿಷ್ ಗೀತೆಗಳು’, ಹೊಸ ಕಾವ್ಯ ಹೇಗಿರಬೇಕೆಂಬುದಕ್ಕೆ ಸ್ಪಷ್ಟ ಮಾದರಿಯಾಗಿ ದಾರಿ ತೋರಿದವು. ಹಾಗೂ ತೀನಂಶ್ರೀಯವರ ‘ಒಲುಮೆ’ಯ ಪ್ರಭಾವವನ್ನು ನಾವು ಮರೆಯಲಾಗದು. (ನನ್ನ ಮದುವೆಯಲ್ಲಿ ತೀನಂಶ್ರೀ ಕೊಟ್ಟ ಉಡುಗೊರೆ ‘ಒಲುಮೆ’. ಅದರ ಪ್ರಭಾವ ನನ್ನ ಮೇಲಿ ಆಗಿದೆ.).
ಕೆ.ಎಸ್.ನ. ಅವರ ಮೊದಲ ಕವನ ‘ಕಬ್ಬಿಗನ ಕೂಗು’ ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟವಾಯಿತು,ಅದರ ಕೊನೆಯ ಸಾಲುಗಳು ಹೀಗಿವೆ:
ಕಬ್ಬಿಗ ತನ್ನಯ ಕವನವ ಹಾಡಲು
ಜನದಲಿ ಮೂಡುವುದಾನಂದ
ಕವಿತೆಗಳ ಮೂಲಕ ನಾಡಿನ ಜನತೆಗೆ ಸಂತೋಷ ನೀಡುವುದು ತಮ್ಮ ಕಾವ್ಯದ ಗುರಿಗಮ್ಯತೆಯಾಗಬೇಕೆಂಬ ತಿಳಿವಳಿಕೆ ಶುರುವಿನಿಂದಲೆ ಕೆ.ಎಸ್.ನ ಅವರಲ್ಲಿತ್ತೆಂಬುದು ಇದರಿಂದ ಸ್ಪಷ್ಟವಾಗುತ್ತದೆ.
‘ಮೈಸೂರು ಮಲ್ಲಿಗೆ’ ಪ್ರಕಟವಾದದ್ದು 1942ರಲ್ಲಿಕೆ.ಎಸ್.ನ. ಅವರ ಈ ಸಂಗ್ರಹ ಕನ್ನಡ ಪ್ರಕಟಣ ಪ್ರಪಂಚದಲ್ಲಿ ಒಂದು ಚರಿತ್ರೆಯನ್ನೇ ಸೃಷ್ಟಿಸಿತು. ಅದರಷ್ಷ್ಟು ಮರುಮುದ್ರಣ ಕಂಡ, ಅದರಷ್ಟು ಪ್ರತಿಗಳು ಮಾರಾಟವಾದ ಇನ್ನೊಂದು ಪುಸ್ತಕ ಕನ್ನಡದಲ್ಲಿ ಇಂದಿಗೂ ಇಲ್ಲ. ಮೈಸೂರು ಮಲ್ಲಿಗೆಯ ನಂತರ, 1945ರಿಂದ1960ರ ನಡುವಣ ಅವಧಿಯಲ್ಲಿ ನರಸಿಂಹಸ್ವಾಮಿಗಳ ಒಂಬತ್ತು ಸಂಕಲನಗಳು ಪ್ರಕಟವಾದವು. ಆಶ್ಚರ್ಯದ ಸಂಗತಿಯೆಂದರೆ ‘ಮನೆಯಿಂದ ಮನೆಗೆ’(1960) ನಂತರ ಕೆ.ಎಸ್.ನ. ಹದಿನಾರು ವರ್ಷಗಳಷ್ಟು ಸುದೀರ್ಘ ಅವಧಿಯಲ್ಲಿ ಮತ್ತೊಂದು ಸಂಗ್ರಹ ತರಲಿಲ್ಲ. ಅವರೇ ಹೇಳಿಕೊಂಡಿರುವಂತೆ ಅದು ಚಿಂತನೆಯ ಅವಧಿ-‘ಕವನದಿಂದ ಕವನಕ್ಕೆ, ಸಂಗ್ರಹದಿಂದ ಸಂಗ್ರಹಕ್ಕೆ ನನ್ನ ಕವಿತೆ ಹೇಗೆ ಸಾಗುತ್ತಿದೆ’ ಎಂಬುದನ್ನು ಶ್ರದ್ಧೆಯಿಂದ ಸಮೀಕ್ಷೆ ಮಾಡಿಕೊಂಡ, ಭಾಷೆಯ ಬಳಕೆ ಬಗ್ಗೆ, ‘ಕಾವ್ಯಾಲಂಕಾರಗಳ ಬಗ್ಗೆ ಇನ್ನಷ್ಟು ಪರ್ಯಾಲೋಚನೆ ಮಾಡಿಕೊಂಡ’ ಅವಧಿ ಇದಾಗಿತ್ತು. ಇಂದು ಎಷ್ಟು ಜನ ಕವಿಗಳು ಹೀಗೆ ತಮ್ಮ ಆತ್ಮಾವಲೋಕನ ಮಾಡಿಕೊಳ್ಳುತ್ತಾರೊ ತಿಳಿಯದು. ಮುಂದೆ, 1976ರಲ್ಲಿ ಪ್ರಕಟವಾಯಿತು ‘ತೆರೆದ ಬಾಗಿಲು’. ಈ ಸಂಕಲನ, ಭಾಷೆಯ ಬಳಕೆ, ಕಥನ ಶೈಲಿ, ಲೌಕಿಕ-ಆಧ್ಯಾತ್ಮಿಕಗಳ ನಡುವಣ ಗಮ್ಯ-ಅಗಮ್ಯ ನೆಲೆಗಳನ್ನು ಶೋಧಿಸುವ ಹೊಸ ಚಿಂತನಕ್ರಮ ಮೊದಲಾದುವುಗಳಲ್ಲಿ ಕೆ.ಎಸ್.ನ. ಕಾವ್ಯದ ಅಧ್ಯಯನಕ್ಕೆ ಹೊಸ ಬಾಗಿಲನ್ನೇ ತೆರೆಯಿತು. ಈ ಸಂಕಲನದ ಕುಂಕುಮಭೂಮಿ, ಗಡಿಯಾರದಂಗಡಿ ಮುಂದೆ, ಹೆಜ್ಜೆಗುರುತು, ಶಿಲೆಗೆ ಹೂವಿನ ವಂಕಿ, ತೆರೆದ ಬಾಗಿಲು ಮೊದಲಾದ ಕವನಗಳು ಕಾವ್ಯ ವಿಮರ್ಶಕರ ತೀಕ್ಷ್ಣ ಚರ್ಚೆಗೊಳಗಾದವು.
‘ತೆರೆದ ಬಾಗಿಲ’ನು ಹಿಂಬಾಲಿಸಿ ಇನ್ನು ಏಳು ಸಂಕಲನಗಳು ಬಂದವು. ದೀಪಸಾಲಿನ ನಡುವೆ (2003) ಕೊನೆಯ ಸಂಕಲನ. ಈ ಎಲ್ಲ ಹದಿನೇಳು ಸಂಕಲನಗಳನ್ನು ಒಗ್ಗೂಡಿಸಿ ಬೆಂಗಳೂರಿನ ವಸಂತ ಪ್ರಕಾಶನದವರು ಈಗ ಮಲ್ಲಿಗೆಯ ಮಾಲೆಯಾಗಿ ಕೆ.ಎಸ್.ನ. ಅವರ ಸಮಗ್ರ ಕಾವ್ಯದ ಬೃಹತ್ ಸಂಪುಟವನ್ನು ಪ್ರಕಟಿಸಿದ್ದಾರೆ.
ಯಾವುದೇ ಚಳವಳಿಯೊಂದಿಗೆ ಗುರುತಿಸಿಕೊಳ್ಳದೆ, ತಮ್ಮದೇ ಹುಡುಕಾಟದಲ್ಲಿ ಹಾದಿ ಸವೆಸಿ, ತಮ್ಮ ಅಸ್ಮಿತೆಯನ್ನು ಬಲು ಜತನವಾಗಿ ಕಾಪಾಡಿಕೊಂಡಿರುವ ಈ ಕವಿಯ ಕಾವ್ಯ ಪಯಣ, ನವೋದಯ, ನವ್ಯ ಬಂಡಾಯಗಳ ಕಾಲಘಟ್ಟಗಳಲ್ಲಿ ಸಾಗಿಬಂದಿರುವ ಪರಿ ವಿಮರ್ಶಕರನ್ನು ಬೆರಗುಗೊಳಿಸಿದೆ. ಕೆ.ಎಸ್.ನ. ಅವರ ಕಾವ್ಯವನ್ನು ಅಡಿಗರ ನವ್ಯಕ್ಕೆ ಹೆಗಲೆಣೆಯಾಗಿ ನೋಡುವ ಪ್ರಯತ್ನವನ್ನೂ ಕನ್ನಡ ವಿಮರ್ಶೆಯಲ್ಲಿ ಕಾಣುತ್ತೇವೆ. ಅಡಿಗರು ಮತ್ತು ನರಸಿಂಹಸ್ವಾಮಿಗಳ ಜೀವನದೃಷ್ಟಿ,ಕಾವ್ಯಮಾರ್ಗಗಳ ನಡುವಣ ಭಿನ್ನತೆ, ವೈದೃಶ್ಯಗಳನ್ನು ಶೋಧಿಸಲು ‘ಭೂತ’ ಮತ್ತು ‘ಕುಂಕುಮ ಭೂಮಿ’ ಕವನಗಳ ತೌಲನಿಕ ವಿಮರ್ಶೆ ಮಾಡುವುದು ಒಂದು ಕುತೂಹಲಕಾರಿ ಅಧ್ಯಯನವಾದೀತು. ಅಡಿಗರದು ಭೂಮಿಯ ಆಳದಿಂದ ಚಿನ್ನದದಿರು ಹೊರ ತೆಗೆದು ಅಪರಂಜಿಯಾಗಿಸುವ ತ್ರಾಸದಾಯಕ ಕಾಯಕವಾದರೆ, ಕೆ.ಎಸ್.ನ. ಅವರದು, ನುಣುಪು ಕುಂಕುಮ ಭೂಮಿಯಲಿ ಸಾಮಾನ್ಯನಂತೆ ಪಯಿರು ಎಬ್ಬಿಸುವ ಕಾಯಕ. ಇಬ್ಬರದೂ ಸಂಸ್ಕೃತಿ-ಪರಂಪರೆಗಳ ಉತ್ಖನನವೇ ಆದರೂ ಮಾದರಿಗಳು ಬೇರೆಬೇರೆ. ಅಡಿಗರದು ಆಳಕ್ಕಿಳಿದು ಚಿನ್ನ ತೆಗೆವ, ಅದನ್ನು ಬಡಿದಿಷ್ಟದೇವತಾ ವಿಗ್ರಹವಾಗಿಸಿಕೊಳ್ಳುವ ಶ್ರೇಷ್ಠತೆಯ ವ್ಯಸನದ ಮಹತ್ವಾಕಾಂಕ್ಷೆಯಾದರೆ, ಕೆ.ಎಸ್.ನ ಅವರದು ಜನಸಾಮಾನ್ಯರ ಹುಟ್ಟು, ಶ್ರಮಗಳನ್ನು ಬೆಳಕಿಗೊಡ್ಡುವ ಜನಪ್ರೀತಿ.
ಅಡಿಗರು-ಕೆ.ಎಸ್.ನ. ನಡುವಣ ಕಾವ್ಯ ಸಂವಾದವೂ ಸ್ವಾರಸ್ಯಕರವಾದುದು. ಆ ಕಾಲಕ್ಕೆ ಕೆ.ಎಸ್.ನ. ಅಡಿಗರಿಗೆ ಸವಾಲಾದಂತೆ, ಅಡಿಗರು, ಕೆ.ಎಸ್.ನ.ಗೆ ಸವಾಲಾದಂತೆ ಕಾಣುತ್ತದೆ ಎನ್ನುವುದು ವಿಮರ್ಶಕರ ಅಂಬೋಣ. ಅಡಿಗರು ‘ಪುಷ್ಪ ಕವಿಯ ಪರಾಕು’ ಕವಿತೆಯಲ್ಲಿ ಕೆ.ಎಸ್.ನ. ಅನುಭವ ತೆಳುವಾದದ್ದು ಎನ್ನುತ್ತಾರೆ. ಇದಕ್ಕೆ ಉತ್ತರವಾಗಿ ಕೆ.ಎಸ್.ನ. ಒಂದು ಕವಿತೆಯನ್ನೇ ರಚಿಸಿ ತಮ್ಮ ಕಾವ್ಯ ರೀತಿ ಹೇಗೆ ಭಿನ್ನ ಎಂಬುದನ್ನು ನಿರೂಪಿಸಿದ್ದಾರೆ. ‘ಇವನ ಅನುಭವ ತೆಳುವು ಎಂದ ಮಾತಿಗೆ ನಕ್ಕೆ’ ಎನ್ನುತ್ತಲೇ ಕೆ.ಎಸ್.ನ. ತಮ್ಮ ಭಿನ್ನ ದನಿಯನ್ನು ಹೀಗೆ ಸಾರಿದ್ದಾರೆ:
ಗೋಪಾಲಕೃಷ್ಣ ಅಡಿಗರು ಒಮ್ಮೆ ಹೇಳಿದರು
ನನ್ನ ಅನುಭವ ತೆಳುವೆಂದು: ಒಪ್ಪುತ್ತೇನೆ.
ಅವರವರ ಪ್ರತಿಭೆ ಅವರವರದಾಗಿರುವಾಗ
ನನ್ನ ದನಿ ಅಡಿಗರದು ಎಂತು ಆದೀತು, ಬಿಡಿ
...................................... ನನ್ನ ದನಿ ತಂಪಾದ ಸಂಜೆಯಲಿ
ಗೆಳೆಯರಿಬ್ಬರು ಕುಳಿತು
ಎತ್ತರಕ್ಕೇರದಯೆ ಮಾತಾಡುವ ರೀತಿ ಪುಷ್ಪ ಕವಿ, ಸುಕುಮಾರಕವಿ ಎಂಬ ಹಣೆಪಟ್ಟಿಗಳ ಹಿಂದೆ, ಕೆ.ಎಸ್.ನ. ಅವರಿಗೆ ಬದುಕಿನ ಇನ್ನೊಂದು ಮುಖದ ಅರಿವಿಲ್ಲ ಎನ್ನುವ ಇಂಗಿತವೂ ಇದೆ. ಇದು ತಪ್ಪು. ಪ್ರಗತಿಶೀಲ ಚಳವಳಿ ಪ್ರಬಲವಾಗಿದ್ದ ಕಾಲಘಟ್ಟದಲ್ಲಿ ಬರೆಯುತ್ತಿದ್ದ ಅವರು,ಬದಕಿನ ಚೆಲುವುಒಲವುಗಳ ಜೊತೆಗೆ ಕಟುವಾಸ್ತವಗಳನ್ನೂ ಅನುಭವಿಸಿದ್ದರು. ಕಾವ್ಯ ನೋವಿನ ದನಿಯಾಗ ಬೇಕು ಎಂಬ ಸಾಮಾಜಿಕ ಕಳಕಳಿ ಅವರಲ್ಲಿತ್ತು. ದು:ಖದ ಹಡಗು, ಮೇಲು-ಕೀಳು, ಅನ್ನಪೂರ್ಣೆ -ಇಂಥ ಕವನಗಳು ಈ ಮಾತಿಗೆ ನಿದರ್ಶನ. ಅನ್ನಪೂರ್ಣೆ ಕವನದ ಈ ಸಾಲುಗಳನ್ನು ಗಮನಿಸಿ:
ನೀನಿಲ್ಲದ ಮನೆ ಮನೆಯಲಿ
ಏನಿದ್ದೂ ವ್ಯರ್ಥ
ಹಸಿದೊಡಲಿನ ಕಗ್ಗವಿಯಲಿ
ಹಾಡೆಲ್ಲ ಅನರ್ಥ
ಕಾವ್ಯ ರಸಿಕರಿಗೆ ಬೊಗಸೆ ಭರ್ತಿ ಸಂತೋಷ- ಉಲ್ಲಾಸಗಳನ್ನು ಉಣಬಡಿಸಿದ ಈ ಸಂಪದ್ಭರಿತ ಕವಿಯ ಖಾಸಗಿ ಬದುಕು ಕಷ್ಟಕಾರ್ಪಣ್ಯಗಳಿದ ಮುಕ್ತವಾಗಿರಲಿಲ್ಲ.
ಚಿತ್ರಗಾರನಿಗೆ ಮಕ್ಕಳಿಲ್ಲ
ಮನೆ ತುಂಬ ಪುಟ್ಟಪುಟ್ಟ ಮಕ್ಕಳ ಚಿತ್ರಗಳು ಗಾಯಕನ ಕಾಡುವುದು ಕಡುಬಡತನ
ತುಟಿಯ ಮೇಲೆ ಭಾಗ್ಯನಿಧಿ ನಾರಾಯಣನ ನಾಮಸ್ಮರಣೆ
ಲಕ್ಷ್ಮಿ ಮುನಿಸಿಕೊಂಡರೂ ಸರಸ್ವತಿ ಅವರಿಗೆ ಸಮೃದ್ಧವಾಗಿ ಒಲಿದಿದ್ದಳು. ಗೃಹ ನಿರ್ಮಾಣ ಮಂಡಲಿಯ ಉದ್ಯೋಗ ಕೈತುಂಬ ಸಂಬಳ ಕೊಡುವುದಾಗಿರಲಿಲ್ಲ. ಆದರೆ ಅವರೆಂದೂ ಇದರಿಂದ ವಿಚಲಿತರಾಗಿರಲಿಲ್ಲ. ಅಥವಾ ಮೀರಿದ ಭೋಗಭಾಗ್ಯಗಳನ್ನು ಬಯಸಿದವರೂ ಅಲ್ಲ.
ಕವಿಯೊಬ್ಬನ ಜೀವಿತಾವಧಿಯಲ್ಲೆ ತನ್ನ ಕಾವ್ಯ ಜನರ ನಾಲಿಗೆಗಳ ಮೇಲೆ ನಲಿದಾಡುವುದನ್ನು ಕಾಣುವ ಭಾಗ್ಯ ಎಷ್ಟು ಮಂದಿ ಕವಿಗಳಿಗಿದ್ದೀತು? ಅಂಥ ಭಾಗ್ಯ ನರಸಿಂಹಸ್ವಾಮಿಗಳದವರದಾಗಿತ್ತು. ಅವರು ಅಂಥ ದೊಡ್ಡ ಭಾಗ್ಯವಂತರು. ಕ್ಯಾಸೆಟ್ ಸಂಸ್ಕೃತಿ ಬರುವುದಕ್ಕೂ ಮುಂಚೆಯೇ ಅವರ ಕವನಗಳು ಜನರ ನಾಲಿಗೆಯ ಮೇಲೆ ನಲಿದಾಡುತ್ತಿದ್ದವು.
ಇಂಥ ಶ್ರೇಷ್ಠ ಕವಿಯ ಜನ್ಮ ಶತಾಬ್ದಿ ವರ್ಷ ಸದ್ದಿಲ್ಲದೆ ಬಂದು ಹೋಯಿತು. ನರಸಿಂಹಸ್ವಾಮಿಯವರ ಜನ್ಮ ಶತಾಬ್ದಿ ಆಚರಣೆಯ ಸಡಗರ-ಸಂಭ್ರಮಗಳು ಎಲ್ಲೂ ಕಂಡುಬರಲಿಲ್ಲ. ಕನ್ನಡ ಸಂಸ್ಕೃತಿ ಇಲಾಖೆಯಲ್ಲೂ ಕವಿ ಸ್ಮರಣೆಯ ಉತ್ಸಾಹ ಕಾಣಿಸಲಿಲ್ಲ.ಹೊಸ ವರ್ಷದ ಉದಯದಲ್ಲಾದರೂ ಕವಿಯ ನೆನಪಾಗಿ ಇಲಾಖೆ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಅಧ್ಯಕ್ಷತೆಯಲ್ಲಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಸ್ಥಾಪಿಸಿರುವುದು ಸಮಾಧಾನದ ಸಂಗತಿ.
ಭರತ ವಾಕ್ಯ
ದೀಪವೂ ನಿನ್ನದೆ, ಗಾಳಿಯೂ ನಿನ್ನದೆ,
-ಆರದಿರಲಿ ಬೆಳಕು!
ಕಡಲೂ ನಿನ್ನದೆ, ಹಡಗೂ ನಿನ್ನದೆ,
ಮುಳುಗದಿರಲಿ ಬದುಕು!