ಮಿತ್ರಾ ಬರಹಗಳ ಕುರಿತ 'ಮಿತ್ರಾವಳಿ'
ಮುಂಬೈ ಕನ್ನಡಿಗರು ಸಾಹಿತ್ಯವಲಯಕ್ಕೆ ನೀಡಿದ ಕೊಡುಗೆಗಳನ್ನು ನೆನೆಯುವಾಗ ನೆನಪಾಗುವ ಹೆಸರು ಒಂದೆರಡಲ್ಲ. ವ್ಯಾಸರಾಯ ಬಲ್ಲಾಳ, ಯಶವಂತ ಚಿತ್ತಾಲ, ವ್ಯಾಸರಾಯ ನಿಂಜೂರು, ಜಯಂತ್ ಕಾಯ್ಕಿಣಿ...ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆ ಪಟ್ಟಿಯಲ್ಲಿ ಗಮನಾರ್ಹವಾಗಿ ಗುರುತಿಸಲ್ಪಟ್ಟ ಇತ್ತೀಚಿನ ಹೆಸರು ಮಿತ್ರಾ ವೆಂಕಟ್ರಾಜ್. ಕಳೆದ ನಾಲ್ಕು ದಶಕಗಳಿಂದ ಕತೆ, ಕಾದಂಬರಿ ಕ್ಷೇತ್ರದಲ್ಲಿ ಗುರುತಿಸುತ್ತಾ ಬಂದವರು ಮಿತ್ರ ವೆಂಕಟ್ರಾಜ್. ಆರಂಭದಲ್ಲಿ ಕತೆಗಳ ಮೂಲಕ ಗಮನ ಸೆಳೆದ ಇವರು, ಪಾಚಿಗಟ್ಟಿದ ಪಾಗಾರ ಕಾದಂಬರಿಯ ಮೂಲಕ ಓದುಗ ವಲಯವನ್ನು ಇನ್ನಷ್ಟು ವಿಸ್ತರಿಸಿಕೊಂಡರು. ರುಕುಮಾಯಿ, ಹಕ್ಕಿ ಮತ್ತು ಅವಳು, ಮಾಯಕದ ಸತ್ಯ ಇವರಿಗೆ ಹೆಸರು ತಂದುಕೊಟ್ಟ ಕಥಾ ಸಂಕಲನಗಳು. ಒಂದು ಒಸಗೆ ಒಯ್ಯುವುದಿತ್ತು ಕತೆಗೆ ದಿಲ್ಲಿಯ ಕಥಾ ಪ್ರಶಸ್ತಿಯೂ ದೊರಕಿತ್ತು.
ಇದೀಗ ಮಿತ್ರಾ ವೆಂಕಟ್ರಾಜ್ ಅವರ ಸಮಗ್ರ ಸಾಹಿತ್ಯ ದರ್ಶನವನ್ನು ಮಾಡುವ ಪ್ರಯತ್ನಕ್ಕಿಳಿದಿದೆ ಕನ್ನಡ ಸಾಹಿತ್ಯ ಪರಿಷತ್, ಮಹಾರಾಷ್ಟ್ರ ಘಟಕ, ಮುಂಬೈ. ಡಾ. ಜಿ. ಎನ್. ಉಪಾಧ್ಯ ಅವರು 'ಮಿತ್ರಾವಳಿ'ಯ ಬರಹಗಳ ಬಗೆಗೆ ಮಂಡಿಸಿದ ಬೇರೆ ಬೇರೆ ಅಭಿಪ್ರಾಯ, ವಿಮರ್ಶೆಗಳನ್ನು ಒಂದೆಡೆಗೆ ತಂದಿದ್ದಾರೆ. ಮಿತ್ರಾ ವೆಂಕಟ್ರಾಜ್ ಅವರು ಇನ್ನೂ ಬಹಳಷ್ಟು ಬರೆಯಲಿಕ್ಕಿದೆ. ಅಷ್ಟರಲ್ಲೇ ಇಂತಹದೊಂದು ಗ್ರಂಥ ತೀರಾ ಅವಸರದ್ದಾಗಲಿಲ್ಲವೇ ಎಂಬ ಅನಿಸಿಕೆ ಮೂಡಿದರೂ, ಒಬ್ಬ ಲೇಖಕಿಯನ್ನು ಓದುಗರಿಗೆ ಇನ್ನಷ್ಟು ಹತ್ತಿರವಾಗಿಸಲು ಈ ಕೃತಿ ಯಶಸ್ವಿಯಾದರೆ ಅದೊಂದು ಒಳ್ಳೆಯ ಪ್ರಯತ್ನವೇ ಸರಿ. ವ್ಯಾಸರಾಯ ಬಲ್ಲಾಳ, ಯಶವಂತ ಚಿತ್ತಾಲ, ಪ್ರೊ. ಟಿ.ಪಿ. ಅಶೋಕ, ಪ್ರೊ. ಮಾಧವ ಕುಲಕರ್ಣಿ, ರಾಮಚಂದ್ರ ದೇವ, ಡಾ. ಜಿ. ಎಸ್. ಅಮೂರ, ಗಿರಡ್ಡಿ ಗೋವಿಂದರಾಜ, ವ್ಯಾಸರಾವ್ ನಿಂಜೂರ್, ತುಳಸಿ ವೇಣುಗೋಪಾಲ್, ಮುರಳೀಧರ ಉಪಾಧ್ಯ ಹಿರಿಯಡ್ಕ, ಡಾ. ನಾ. ಮೊಗಸಾಲೆ, ಸುನೀತಾ ಎಂ. ಶೆಟ್ಟಿ ಮೊದಲಾದವರು ಮಿತ್ರಾ ಅವರ ಸಾಹಿತ,್ಯವನ್ನು ಬೇರೆ ಬೇರೆ ನೆಲೆಗಳಲ್ಲಿ ವಿಶ್ಲೇಶಿಸಿದ್ದಾರೆ. ಅಂತಹ ಸುಮಾರು 50ಕ್ಕೂ ಹೆಚ್ಚು ಬರಹಗಳು ಈ ಕೃತಿಯಲ್ಲಿವೆ. ಕೃತಿಯ ಮುಖಬೆಲೆ 150 ರೂ. ಆಸಕ್ತರು ದೂರವಾಣಿ ಸಂಖ್ಯೆ 2430 8316(ಮುಂಬೈ)ಯನ್ನು ಸಂಪರ್ಕಿಸಬಹುದು.