varthabharthi


ಫೋಕಸ್

ಗಾಂಜಾ ವ್ಯಸನಿಗಳ ಪರಿವರ್ತನೆ: ಮಸೀದಿ ಖತೀಬರ ಸದ್ದಿಲ್ಲದ ಸೇವೆ

ವಾರ್ತಾ ಭಾರತಿ : 17 Feb, 2016

ಪುತ್ತೂರು, ಫೆ.17: ಅಮಲು ಪದಾರ್ಥ ಸೇವನೆಗಳಿಂದ ಆರೋಗ್ಯಕ್ಕೆ ಹಾನಿಕರ, ಸಾಮಾಜಿಕ ನೆಲೆಗೆ ಸಂಚಕಾರ ಹಾಗೂ ಕುಟುಂಬದಲ್ಲಿ ತಾತ್ಸಾರಕ್ಕೊಳಪಟ್ಟು ಅನೇಕ ಯುವಕರು ಬೀದಿ ಪಾಲಾಗುತ್ತಾರೆ. ನಿರುದ್ಯೋಗದಿಂದ ಜೀವನ ಸಾಗಿಸಲು ಕಷ್ಟವಾದಗ ಯುವಕರು ಹಣ ಸಂಪಾದನೆಗಾಗಿ ಅನ್ಯ ಮಾರ್ಗ (ಕಳ್ಳತನ, ಕೊಲೆ, ದರೋಡೆ, ವಂಚನೆ) ಹಿಡಿಯುವುದು ಸಾಮಾನ್ಯವಾಗಿದೆ.

ಅಮಲು ಪದಾರ್ಥ ಸೇವನೆಗೆ ಎಲ್ಲಾ ಜನಾಂಗದ ಯುವ ಸಮುದಾಯ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಪೊಲೀಸರು ಇದರ ನಿಯಂತ್ರಣಕ್ಕಾಗಿ ಸಾಕಷ್ಟು ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಇದರ ಸಂಪೂರ್ಣ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಶಾಲಾ ಕಾಲೇಜು ಕ್ಯಾಂಪಸ್‌ಗಳು, ನಗರ ಪ್ರದೇಶಗಳು ಅಮಲು ಪದಾರ್ಥಗಳ ಅಡ್ಡೆಯಾಗಿ ಪರಿವರ್ತನೆಯಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಪುತ್ತೂರಿನ ಮಸೀದಿ ಖತೀಬರೊಬ್ಬರು ಅಮಲು ಪೀಡಿತ ಯುವಕರಿಗೆ ಕೌನ್ಸಿಲಿಂಗ್ ನೀಡಿ ಅಮಲು ಮುಕ್ತರಾಗಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಪುತ್ತೂರಿನ ಕೂರ್ನಡ್ಕ ಜುಮಾ ಮಸೀದಿಯ ಖತೀಬ್ ಹಾಗೂ ಮುದರ್ರಿಸ್ ಆಗಿ ಸೇವೆ ಮಾಡುತ್ತಿರುವ ಯುವ ಧಾರ್ಮಿಕ ಪಂಡಿತ ಅಬೂಬಕರ್ ಸಿದ್ದೀಕ್ ಅಹ್ಮದ್ ಅಲ್ ಜಲಾಲಿ ಪೊನ್ಮಲ ಈ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿರುವ ವಿಶಿಷ್ಟ ಸಮಾಜ ಸೇವಕ.

ಕಳೆದ 7 ತಿಂಗಳಿನಿಂದ ಅಮಲು ಪೀಡಿತರನ್ನು ಸರಿದಾರಿಗೆ ತರಲು ಶ್ರಮಿಸುತ್ತಿರುವ ಇವರು ಈವರೆಗೆ ಸುಮಾರು 70 ಯುವಕರನ್ನು ಅಮಲು ಪದಾರ್ಥ, ಗಾಂಜಾ ಪಿಡುಗಿನಿಂದ ಮುಕ್ತಿಗೊಳಿಸಿರುವುದಾಗಿ ಹೇಳುತ್ತಾರೆ.

ಸೃಷ್ಟಿಕರ್ತನ ಭಯ ಬಂದಲ್ಲಿ ಔಷಧಿ ಬೇಡ:

   ಯಾವುದೇ ವ್ಯಕ್ತಿಗೆ ಸೃಷ್ಟಿಕರ್ತನ ಮತ್ತು ಪರಲೋಕದ ಭಯ ಮೂಡಿದಲ್ಲಿ ಯಾವುದೇ ಔಷಧಿಗಳಿಲ್ಲದೆ ಆತನ ಪಿಡುಗುಗಳನ್ನು ಸರಿಪಡಿಸಬಹುದು ಎನುವುದು ಅಬೂಬಕ್ಕರ್ ಉಸ್ತಾದ್ ಅವರ ಅಭಿಪ್ರಾಯ.

‘ ನಾನು ಮೊದಲಿಗೆ ಗಾಂಜಾ ಸೇವಿಸುತ್ತಿರುವ ಇಬ್ಬರು ಯುವಕರನ್ನು ಕರೆದು ಅವರಿಗೆ ಧಾರ್ಮಿಕ ಚೌಕಟ್ಟಿನಲ್ಲಿ ಕೌನ್ಸಿಲಿಂಗ್ ಮಾಡಿದೆ. ಪರಲೋಕದ ಶಿಕ್ಷೆಯ ಬಗ್ಗೆ ಮನವರಿಕೆ ಮಾಡಿದೆ. ಈ ಪಿಡುಗಿನಿಂದ ಆಗುತ್ತಿರುವ ದೈಹಿಕ ಸಮಸ್ಯೆಗಳ ಬಗ್ಗೆಯೂ ಅವರಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಎನ್ನುತ್ತಾರೆ. ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಬಂದ ಅವರೇ ಇತರ ವ್ಯಸನಿಗಳನ್ನು ಕರೆತಂದರು. ಹೀಗೆ ಸುಮಾರು ಗಾಂಜಾ ಸೇವಿಸುತ್ತಿದ್ದ 70ಯುವಕರು ಕೌನ್ಸಿಲಿಂಗ್ ಪಡೆದು ಅಮಲು ಮುಕ್ತರಾಗಿದ್ದಾರೆ ’ ಎನ್ನುತ್ತಾರೆ ಉಸ್ತಾದ್.

‘ಯಾವುದೇ ಯುವಕರು ಉದ್ದೇಶಪೂರ್ವಕವಾಗಿ ಈ ಪಿಡುಗಿಗೆ ಬಲಿಯಾಗುತ್ತಿಲ್ಲ. ನಿರುದ್ಯೋಗ, ಗೆಳೆತನ, ಮನೆಯ ವಾತಾವರಣ, ಮಾನಸಿಕ ಒತ್ತಡಗಳಿಂದಾಗಿ ತಮಗೆ ಅರಿವಿಲ್ಲದೇ ಬಲಿ ಬೀಳುತ್ತಾರೆ. ಅಂತಹವನ್ನು ಸಮಾಜ ದೂರವಿಡುವುದರಿಂದ ಅವರಲ್ಲಿ ಪರಿವರ್ತನೆ ಕಾಣಲು ಸಾಧ್ಯವಿಲ್ಲ. ಬದಲಿಗೆ ಅವರನ್ನು ಹತ್ತಿರ ಕರೆದು ಪ್ರೀತಿಯಿಂದ ಪರಿವರ್ತಿಸಬೇಕು. ಆದರೆ ಅಮಲು ಪೀಡಿತರನ್ನು ವ್ಯಂಗ್ಯ ಮಾಡುತ್ತಾ ದೂರ ಮಾಡುತ್ತಿರುವ ನಾವು ಅವರಿಗೆ ಪರೋಕ್ಷ ಬೆಂಬಲ ನೀಡುತ್ತಿದ್ದೇವೆ ’ಎಂಬುದು ಇವರ ಅಭಿಪ್ರಾಯ.

ಗಾಂಜಾ ವ್ಯಸನಿಗಳನ್ನು ವೈಯಕ್ತಿಕವಾಗಿ ಕರೆದು ಆಪ್ತವಾಗಿ ಮಾತನಾಡಿ, ಸಮಾಲೋಚಿಸಿ ಮನಸ್ಸು ಬದಲಾಯಿಸಬಹುದು. ಧಾರ್ಮಿಕ ವಿದ್ವಾಂಸರು, ಮುಖಂಡರು ಈ ಕೆಲಸ ಮಾಡಬೇಕಾದ ಜವಾಬ್ದಾರಿಯಿದೆ. ನಾವೇ ಮಾಡದಿದ್ದಲ್ಲಿ ಇದನ್ನು ಮಾಡಬೇಕಾದವರು ಯಾರು ಎಂದು ಪ್ರಶ್ನಿಸುತ್ತಾರೆ.

ದುರುದ್ಧೇಶಗಳಿಲ್ಲದ ಇಂತಹ ಕೆಲಸಗಳಿಗೆ ಸಮಾಜದ ಎಲ್ಲಾ ವರ್ಗಗಳಿಂದಲೂ ಬೆಂಬಲ ಸಿಗುತ್ತದೆ. ನನ್ನ ಕೆಲಸಕ್ಕೆ ಜಮಾಅತ್‌ನವರು, ಊರಿನವರು ಪೂರ್ಣ ಬೆಂಬಲ ನೀಡುತ್ತಿದ್ದಾರೆ. ನಗರ ಠಾಣಾಧಿಕಾರಿಗಳು ಈ ಬಗ್ಗೆ ಕಾಳಜಿ ವಹಿಸಿ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸುತ್ತಾರೆ ಖತೀಬರು. 

 ಎಲ್ಲಾ ಕಡೆಗಳಲ್ಲಿಯೂ ಗಾಂಜಾ ವ್ಯಸನಿಗಳಿದ್ದಾರೆ. ಬಹತೇಕ ಯುವಕರೇ ಇದಕ್ಕೆ ಬಲಿ ಬೀಳುತ್ತಾರೆ. ಈ ಹಿನ್ನಲೆಯಲ್ಲಿ ಎಲ್ಲೆಡೆಯಲ್ಲಿಯೂ ಇಂತಹ ಜಾಗೃತಿ ಕಾರ್ಯಕ್ರಮವಾಗಬೇಕು. ಗಾಂಜಾ ವ್ಯಸನಿಗಳನ್ನು ದೂರವಿಡುವ ಬದಲು, ವ್ಯಸನವನ್ನು ದೂರವಿಡುವ ಕೆಲಸ ನಮ್ಮೆಲ್ಲರಿಂದ ನಡೆಯಬೇಕು. ಇದಕ್ಕಾಗಿ ಜಿಲ್ಲೆಯ ಯಾವುದೇ ಮೂಲೆಯಲ್ಲಿ ಯಾರೇ ಕರೆದರೂ ಯಾವುದೆ ಪ್ರತಿಫಲಾಪೇಕ್ಷೆ ಇಲ್ಲದೆ ತಾನು ಸೇವೆ ನೀಡಲು ಸಿದ್ದನಾಗಿದ್ದೇನೆ ಎನ್ನುತ್ತಾರೆ ಈ ಖತೀಬರು.


ಮಸೀದಿ ಗುರುಗಳ ಸಮಾಜಮುಖಿ ಕೆಲಸ- ಮಹೇಶ್ ಪ್ರಸಾದ್, ವೃತ್ತ ನಿರೀಕ್ಷರು ಪುತ್ತೂರು 
ಡ್ರಗ್ಸ್‌ಗೆ ಹಲವಾರು ಯುವಕರು ಬಲಿಯಾಗುತ್ತಿದ್ದಾರೆ. ಇಂತಹ ಯುವಕರನ್ನು ಪರಿವರ್ತನೆಗೊಳಿಸುವ ಕೂರ್ನಡ್ಕ ಮಸೀದಿ ಗುರುಗಳ ಕೆಲಸವು ಸಮಾಜ ಮುಖಿಯಾಗಿದೆ.

ಡ್ರಗ್ಸ್ ವ್ಯಸನಿಗಳಾಗಿದ್ದು, ಇಬ್ಬರು ರೌಡಿಶೀಟರ್‌ಗಳು ಇದೀಗ ಗುರುಗಳ ಸಲಹೆಯಂತೆ ಸಂಪೂರ್ಣವಾಗಿ ತ್ಯಜಿಸಿದ್ದಾರೆ. ಇಂತಹ ಪರಿವರ್ತನೆಯ ಕೆಲಸಗಳಿಗೆ ಇಲಾಖೆಯೂ ಬೆಂಬಲ ನೀಡುತ್ತದೆ. ಜಮಾಅತ್‌ನ ಅಧ್ಯಕ್ಷರೊಂದಿಗೆ ನಾವು ಚರ್ಚೆ ನಡೆಸಿದ್ದೇವೆ. ಹಿಂದೆಲ್ಲಾ ರಾತ್ರಿ ವೇಳೆಯಲ್ಲಿ ಡ್ರಗ್ಸ್ ಸೇವಿಸಿದ ಯುವಕರಿಂದ ಗಲಾಟೆಗಳು ಉಂಟಾಗುತ್ತಿತ್ತು. ಇದೀಗ ಈ ಪ್ರದೇಶ ಶಾಂತಿಯುತವಾಗಿದೆ. ಇಲ್ಲಿ ಇಲಾಖೆಯ ಸಹಯೋಗದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಕ್ರಮವನ್ನು ನಡೆಸಲಿದ್ದೇವೆ.

ಇಲ್ಲಿಗೆ ಯಾರಾದರೂ ಗಾಂಜಾ ಮಾರಾಟಕ್ಕೆ ಬಂದಲ್ಲಿ ವ್ಯಸನಮುಕ್ತ ಯುವಕರೇ ನಮಗೆ ಮಾಹಿತಿ ನೀಡುತ್ತಿದ್ದಾರೆ. ನಾವು ಅಂತಹ ವ್ಯಕ್ತಿಗಳನ್ನು ಠಾಣೆಗೆ ಕರೆಸಿ ಕ್ರಮ ಕೈಗೊಳ್ಳುತ್ತಿದ್ದೇವೆ. ಇಂತಹ ಪ್ರಕರಣದ 2 ಎಫ್‌ಐಆರ್ ದಾಖಲಿಸಿಕೊಂಡಿದ್ದೇವೆ. ಒಟ್ಟಿನಲ್ಲಿ ಧರ್ಮಗುರುಗಳು ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. 

ನಮ್ಮ ಸಹಕಾರ ಇದೆ

"ನಮ್ಮ ಜಮಾಅತ್‌ನ ಉಸ್ತಾದ್ ಅವರು ತನ್ನ ಮಸೀದಿ ಕರ್ತವ್ಯದ ಜೊತೆಗೆ ಯುವಕರಲ್ಲಿರುವ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವ ಕೆಲಸವನ್ನು ಮಾಡುತ್ತಿರುವುದು ಉತ್ತಮ ಉದ್ದೇಶವಾಗಿದೆ. ಈ ಕಾರ್ಯಕ್ಕೆ ಜಮಾಅತ್ ಆಡಳಿತ ಮಂಡಳಿ ಮತ್ತು ಊರವರು ಸಹಕಾರ ನೀಡುತ್ತಿದ್ದೇವೆ. ಪೊಲೀಸ್ ಇಲಾಖೆಯೂ ಬೆಂಬಲ ನೀಡುತ್ತಿದೆ. ಗಾಂಜಾ ಪೀಡಿತರ ಪರಿವರ್ತನೆ ಮಾಡುವ ವಿಚಾರವನ್ನು ಸವಾಲಾಗಿ ಸ್ವೀಕರಿಸಿದ ಉಸ್ತಾದ್ ಅವರು ಕೇವಲ ಯುವಕರಿಗೆ ಮಾತ್ರವಲ್ಲ, ಜಮಾಅತ್ ನ ಎಲ್ಲಾ ಸದಸ್ಯರಿಗೂ ಈ ಬಗ್ಗೆ ತರಗತಿ ನಡೆಸುತ್ತಿದ್ದಾರೆ. ಅವರ ಈ ಸೇವಾ ಕಾರ್ಯಕ್ಕೆ ನಮ್ಮ ಸಹಕಾರ ಇದೆ".

ಅಬೂಬಕರ್ ಕೂರ್ನಡ್ಕ -ಅಧ್ಯಕ್ಷರು, ಜಮಾಅತ್ ಕಮಿಟಿ

ಈಗ ಎಲ್ಲರ ಪ್ರೀತಿ ಸಿಗುತ್ತಿದೆ:

ನಾನು ಕಳೆದ 12 ವರ್ಷಗಳಿಂದ ಗಾಂಜಾ ಸೇವಿಸುತ್ತಿದ್ದೆ. ಅಮಲು ಸೇವಿಸುವ ಗೆಳೆಯರ ಸಹವಾಸದಿಂದ ಈ ಪಿಡುಗು ಅಂಟಿಸಿಕೊಂಡಿದ್ದೆ. ಇದೀಗ ಉಸ್ತಾದ್ ಅವರ ಕೌನ್ಸಿಲಿಂಗ್‌ನಿಂದಾಗಿ ಸಂಪೂರ್ಣವಾಗಿ ತ್ಯಜಿಸಿದ್ದೇನೆ. ಈಗ ತುಂಬಾ ನೆಮ್ಮದಿ ಮತ್ತು ಸಂತೋಷವಿದೆ. ಗಾಂಜಾ ವ್ಯಸನಿಯಾಗಿದ್ದ ಸಂದರ್ಭ ನನಗೆ ಹೆದರಿ ಯಾರೂ ನನ್ನನ್ನು ಹತ್ತಿರ ಸೇರಿಸಿಕೊಳ್ಳುತ್ತಿರಲಿಲ್ಲ. ಆಗ ಒಬ್ಬಂಟಿಯಾಗಿದ್ದೆ. ಇದೀಗ ಎಲ್ಲರೂ ನನ್ನನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದಾರೆ.

ಅಮಲು ಮುಕ್ತ ಯುವಕ

ಪಿಡುಗಿನ ವಿರುದ್ಧ ಸೇವೆಗೆ ಸಿದ್ಧ:

ನಾನು ಅತಿಯಾಗಿ ಗಾಂಜಾ ಸೇವಿಸುತ್ತಿದ್ದೆ. ಇದಕ್ಕಾಗಿ ದುಡಿದ ಹಣವನ್ನೆಲ್ಲಾ ಖರ್ಚು ಮಾಡುತ್ತಿದ್ದೆ. ಉಸ್ತಾದ್ ಅವರ ಕೌನ್ಸಿಲಿಂಗ್‌ನ ಪರಿಣಾಮವಾಗಿ ಗಾಂಜಾ ವ್ಯಾಪಾರಿಯ ಕಡೆಗಿದ್ದ ನನ್ನ ಸೆಳೆತ ಮಸೀದಿಯ ಕಡೆಗಾಗಿದೆ. ಗಾಂಜಾ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ಈ ಪಿಡುಗು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ನಾನು ದಾರಿ ತಪ್ಪಿದಂತೆ ಯಾವುದೇ ಯುವಕರು ದಾರಿ ತಪ್ಪಬಾರದು. ನಾವು ಸುಮ್ಮನಿದ್ದಲ್ಲಿ ಮುಂದಿನ ಜನಾಂಗವೂ ಗಾಂಜಾ ಪಿಡುಗಿಗೆ ಬಲಿಯಾಗುವ ಅಪಾಯವಿದೆ. ಅದಕ್ಕಾಗಿ ಜಿಲ್ಲೆಯಲ್ಲಿ ಎಲ್ಲಿಯೇ ಆದರೂ ಅಮಲು ಪಿಡುಗಿನ ವಿರುದ್ಧ ಸೇವೆ ಮಾಡಲು ಸಿದ್ಧನಿದ್ದೇನೆ.

ಅಮಲು ಮುಕ್ತ ಯುವಕ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)