ಪತಿಯ ಅಂತ್ಯಕ್ರಿಯೆಗಾಗಿ ಮಕ್ಕಳನ್ನೇ ಒತ್ತೆ ಇಟ್ಟ ಪತ್ನಿ
ಭುವನೇಶ್ವರ: ಕಡುಬಡ ಕುಟುಂಬದಲ್ಲಿ ಗಂಡನ ಅಂತ್ಯಸಂಸ್ಕಾರಕ್ಕಾಗಿ ವಿಧವಾಪತ್ನಿ ತನ್ನ ಇಬ್ಬರು ಮಕ್ಕಳನ್ನೇ ಒತ್ತೆ ಇಟ್ಟ ಹೃದಯವಿದ್ರಾವಕ ಘಟನೆ ಖನಿಜ ಸಂಪತ್ತಿನಿಂದ ಶ್ರೀಮಂತವಾದ ಒಡಿಶಾದಲ್ಲಿ ನಡೆದಿದೆ.
ಗಣರಾಜ್ಯೋತ್ಸವದಂದು ಈ ಘಟನೆ ನಡೆದಿದ್ದು, ಒತ್ತೆ ಇಟ್ಟ ಚಾಂಪುವ ಪ್ರದೇಶಕ್ಕೆ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿದ ಹಿನ್ನೆಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಕಿಯೋಂಜಾರ್ ಜಿಲ್ಲೆಯ ಗಾಧುಲಿ ಗ್ರಾಮದ ಸಾವಿತ್ರಿ ನಾಯಕ್ ಎಂಬ ಬುಡಕಟ್ಟು ಜನಾಂಗದ ಮಹಿಳೆ ತನ್ನ ಮಕ್ಕಳಾದ ಮುಕೇಶ್ (13) ಹಾಗೂ ಸುಕೇಶ್ (11) ಅವರನ್ನು ನೆರೆಮನೆಯಲ್ಲಿ 5000 ರೂಪಾಯಿಗೆ ಒತ್ತೆ ಇಟ್ಟರು ಎನ್ನಲಾಗಿದೆ. ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ ರೈಬಾ ಮೃತಪಟ್ಟಾಗ, ಆತನ ಅಂತ್ಯಸಂಸ್ಕಾರಕ್ಕೂ ಹಣವಿಲ್ಲದೇ ಹೀಗೆ ಮಾಡಿದ್ದಾಗಿ ತಿಳಿದುಬಂದಿದೆ.
"ಅಂತ್ಯಸಂಸ್ಕಾರಕ್ಕಾಗಿ ಮಕ್ಕಳನ್ನು ಒತ್ತೆ ಇಡುವುದು ಅನಿವಾರ್ಯವಾಯಿತು. ಇದೀಗ ಉಳಿದ ಮಕ್ಕಳ ಹೊಟ್ಟೆ ತುಂಬಿಸಲೂ ಹಣ ಇಲ್ಲ" ಎಂದು ಸಾವಿತ್ರಿ ಹೇಳಿದರು. ಇವರಿಗೆ ಆಕಾಶ್ (9), ಚಿಲಾರಿ (8) ಹಾಗೂ ವರ್ಷಾ (4) ಎಂಬ ಇತರ ಮೂವರು ಮಕ್ಕಳಿದ್ದಾರೆ.
ಸುಧೀರ್ಘ ಅಸ್ವಸ್ಥತೆಯಿಂದ ಬಳಲುತ್ತಿದ್ದ ರೈಬಾ ಜನವರಿ 26ರಂದು ಮೃತಪಟ್ಟ ಬಳಿಕ ಅನಿವಾರ್ಯವಾಗಿ ಮಕ್ಕಳನ್ನೂ ಶಾಲೆಯಿಂದ ಬಿಡಿಸಬೇಕಾಯಿತು. ಒತ್ತೆ ಮಕ್ಕಳು ಇದೀಗ ದನ ಕಾಯುವ ಕೆಲಸ ಮಾಡುತ್ತಿದ್ದಾರೆ.