varthabharthi


ಮಾತು ಮೌನದ ಮುಂದೆ

ಮೃಣಾಲಿನಿ ಸಾರಾ ಭಾಯಿ ಅವರ ನೆನಪಲ್ಲಿ...

ವಾರ್ತಾ ಭಾರತಿ : 19 Feb, 2016

 ಭಾಗ2

ಇರಲಿ, ಇಷ್ಟು ವರ್ಷಗಳ ದೀರ್ಘಕಾಲದ ನಂತರೂ ದ್ರೌಪದಿಯ ಪಾತ್ರವನ್ನು ಸ್ಮರಣೀಯ ಎನ್ನುವ ರೀತಿಯಲ್ಲಿ ನಿರ್ವಹಿಸಿದ್ದ ಮಲ್ಲಿಕಾ ಸಾರಾಭಾಯಿ ಅವರು, ತಮ್ಮ ತಾಯಿಗೆ ಸಲ್ಲಿಸಿದ ಶ್ರದ್ಧಾಂಜಲಿಯ ನೃತ್ಯದ ಭಂಗಿಯು, ಆಕೆಯೊಡನೆ ನಟಿಸಿದ ಮಿರಿಯಂ ಗೋಲ್ಡ್‌ಸ್ಮಿತ್ ಎಂಬ ನೀಗ್ರೋ ಮಹಿಳೆ, ಜೆಫ್ರಿಕಸ್ಸೂನ್, ಮಮಡೋ ಡಿವೋಮೆ ಎಂಬ ಆಫ್ರಿಕನ್ ತರುಣ ಅವರು ಕುಂತಿ, ಕರ್ಣ, ಭೀಮನ ಪಾತ್ರಗಳಲ್ಲಿ ಮತ್ತೊಮ್ಮೆ ಕಂಗೊಳಿಸಿ ಬಿಟ್ಟಿದ್ದಾರೆ.ಅದೇ ರೀತಿಯಲ್ಲಿ ಒಬ್ಬ ಜಪಾನಿ ಕಲಾವಿದ ದ್ರೋಣನ ಪಾತ್ರದಲ್ಲಿ ವ್ಯಾಸನನ್ನು ಪ್ರತಿನಿಧಿಸುವಷ್ಟು ಬೆಳೆದು ಬಿಟ್ಟಿದ್ದಾರೆ.ಹಾಗೆಯೇ ನೀಗ್ರೋ ಮೂಲದ ಎತ್ತರದ ವ್ಯಕ್ತಿಯಲ್ಲಿ ಕೃಷ್ಣನ ಪಾತ್ರವನ್ನು ಶ್ರೀಮಂತವಾಗಿ ಬೆಳೆಸಿ ಬಿಟ್ಟಿದ್ದಾರೆ.ಇಲ್ಲೆಲ್ಲ ಅಥವಾ ಇವರ ನಡುವೆ ದ್ರೌಪದಿಯ ಪಾತ್ರದಲ್ಲಿ ಮಲ್ಲಿಕಾ ಸಾರಾಭಾಯಿ ಅವರು ಕಾಣಿಸಿಕೊಳ್ಳುವ ಪರಿಯನ್ನು ಸಾರ್ಥಕಗೊಳಿಸಿಬಿಟ್ಟಿದ್ದಾರೆ.ಆಕೆಯ ವ್ಯಕ್ತಿತ್ವದ ಮತ್ತು ದೈಹಿಕ ನಡಿಗೆಯ ಹೆಚ್ಚುಗಾರಿಕೆಗೆ ಎಷ್ಟು ಮೋಹಕತೆಯನ್ನು ತುಂಬಿದ್ದಾರೆ ಅನ್ನಿಸಿಬಿಟ್ಟಿತ್ತು.ಆದ್ದರಿಂದಲೇ ಕೌರವರು ಹೊಟ್ಟೆ ಕಿಚ್ಚಿನಿಂದ ಕಡು ವ್ಯಾಮೋಹಿ ಗಳಾಗಿ ನೋಡುವುದು.ಕೊನೆಗೆ ನೀಚರಾಗಿ ಬಿಡುವುದು.ಕೌರವ ಅವರಿಗೆ ಎಲ್ಲವೂ ಇದೆ. ಆದರೆ ಅದನ್ನು ಪ್ರೀತಿಯಿಂದ ಅನುಭವಿಸುವುದನ್ನು ಕಲಿಯು ವುದಿಲ್ಲ.ಎಲ್ಲರೂ ದಾರಿ ತಪ್ಪಿದವರು.ಯಾರು ಯಾರ ಮಾತನ್ನು ಕೇಳಿಸಿಕೊಳ್ಳು ವುದಿಲ್ಲ.ಆದರೆ ಪಾಂಡವರ ಕಡೆ, ಧರ್ಮರಾಯ, ಕುಂತಿ, ದ್ರೌಪದಿ ಹಾಗೂ ಇವರೆಲ್ಲರೂ ಅಡ್ಡದಾರಿಗೆ ಹೋಗದಂತೆ ಮಾರ್ಗಸೂತ್ರವನ್ನು ಹಿಡಿದ ಕೃಷ್ಣ. ಇದೊಂದು ಯಾವುದೋ ಕಾಲದ ಕತೆಯಾಗದೆ, ಮನುಕುಲದ ಕತೆಯಂತೆ ಜೀವ ತುಂಬಿ ವಿಶ್ವ ವ್ಯಾಪಕತೆಯನ್ನು ಪೀಟರ್ ಬ್ರೂಕ್ ತುಂಬಿ ಬಿಡುತ್ತಾರೆ.

ಒಮ್ಮಮ್ಮೆ ಈ ಪೀಟರ್ ಬ್ರೂಕ್ ಇಂಥ ಅಮೂಲ್ಯ ನಟರನ್ನು ಹೇಗೆ ಹುಡುಕಿದ ಎಂಬುದು ಮತ್ತೆ ಮತ್ತೆ ಮನಸ್ಸಿನಲ್ಲಿ ಆವರಿಸಿಕೊಳ್ಳುತ್ತಲೆ ಇರುತ್ತದೆ. ಅದರಲ್ಲೂ ಕೃಷ್ಣನ ಪಾತ್ರದಲ್ಲಿ ಬ್ರೂಸ್ ಮೇಯರ್ಸ್ ಎಷ್ಟು ಅಮೋಘವಾಗಿ ಕಾಣಿಕೊಂಡು ಬಿಡುತ್ತಾನೆ. ಕೊನೆಗೆ ನಾಟಕ ಅಥವಾ ಒಟ್ಟು ಮಹಾಭಾರತ ಬರಿದಾಗುವಂತೆ ತವಕ, ತಲ್ಲಣಗಳು ನಮ್ಮನ್ನು ಗಾಬರಿಗೊಳಿಸಿ ಬಿಡುತ್ತಾನೆ ಕೃಷ್ಣ ತನ್ನ ನಿರ್ಗಮನದ ಹಂತದಲ್ಲಿ. ಆಗ ಕೃಷ್ಣನನ್ನು ಕುರಿತು ರಾಮ ಮನೋಹರ ಲೋಹಿಯ ಅವರು, ಎಂಥ ಸಾರ್ವಕಾಲಿಕ ನೋಟವನ್ನು ದಾಖಲಿಸುತ್ತಾರೆ: ‘‘ಹುಟ್ಟಿದ್ದು ಮೊದಲಾಗಿ ಸಾಯುವ ತನಕವೂ ಕೃಷ್ಣ ಅಸಾಮಾನ್ಯನಾಗಿಯೇ ಇದ್ದ, ಅಸಂಭವವೆನ್ನಿಸುವ ಹಾಗಿದ್ದ, ಏಕಮೇವನಾಗಿದ್ದ. ರಾಜನಾಗಿದ್ದ ಮಾವ, ಮಂತ್ರಿಯಾಗಿದ್ದ ತನ್ನ ತಂದೆಯನ್ನೂ, ತಾಯಿಯನ್ನೂ ಯಾವ ಸೆರೆಗೆ ದೂಡಿದ್ದನೋ ಆ ಸೆರೆಮನೆಯಲ್ಲೇ ಹುಟ್ಟಿದ್ದ.ಅವನಿಗಿಂತ ಮುಂಚೆ ಹುಟ್ಟಿದ್ದ ಹೆಣ್ಣು ಗಂಡುಗಳೆಲ್ಲ ಕೊಲೆಯಾಗುತ್ತಿದ್ದರು.ಇವನನ್ನು ಮಾತ್ರ ಬುಟ್ಟಿಯಲ್ಲಿಟ್ಟು ಮುಚ್ಚಿ ಸೆರೆಯಿಂದ ಹೊರತಂದರು, ಮುಂದೆ ನದಿಯನ್ನು ದಾಟಿ ಸುರಕ್ಷಿತ ಪ್ರದೇಶಕ್ಕೆ ಕೊಂಡೊಯ್ಯಬೇಕಾಗಿತ್ತು.ಯಮುನೆ ಉಕ್ಕೇರುತ್ತಿದ್ದಳು, ಆಳ ಆಳವನ್ನು ಆಹ್ವಾನಿಸ ಬಂದಿತೊ ಎನ್ನುವ ಹಾಗೆ.ವಸುದೇವ ಬುಟ್ಟಿ ಎತ್ತಿದಷ್ಟು ಯಮುನೆ ಮೇಲೇರಿ ಉಕ್ಕುತ್ತಿದ್ದಳು.

ಕೊನೆಗೆ ಕೃಷ್ಣ ತನ್ನ ಗುಲಾಬಿ ಪಾದಗಳನ್ನು ಕೆಳಗಿಳಿಸಿ ನೀರು ಮುಟ್ಟಿದಾಗ ಆಕೆ ಶಾಂತಳಾದಳು. ಹುಟ್ಟು ಹೀಗೆ ಸಾವು ಇನ್ನೊಂದು ಬಗೆ : ಅನೇಕ ವರ್ಷ ಕಳೆದಿದ್ದವು. ಅವನ ಕಾರ್ಯಭಾರಗಳೆಲ್ಲ ತೀರಿದ್ದವು. ಅವನ ಪರಿಚಯದವರೆಲ್ಲ ಚದುರಿದ್ದರು... ಕೃಷ್ಣ ದ್ವಾರಕೆಯುತ್ತ ತನ್ನ ಏಕಾಂತದ ದಾರಿ ಸವೆಸುತ್ತಿದ್ದ.ಒಂದು ಗಿಡದ ನೆರಳಲ್ಲಿ ವಿಶ್ರಮಿಸಲು ಕೂತ.ಒಬ್ಬ ಬೇಡರವಸಿಗೆ ಕೃಷ್ಣನ ತುದಿಗಾಲು ಜಿಂಕೆಯ ಕಾಲಿನಂತೆ ಕಂಡಿತು.ಬಿಲ್ಲು ನೇರ ಸೀಳಿ ಬಂತು.ಕೃಷ್ಣ ಮೃತ ಹೊಂದಿದ್ದ.‘‘ಹೀಗೆಯೇ ಮುಂದೆಯೂ ಲೋಹಿಯಾ’’ ಅವರ ದರ್ಶನವೂ ಕಾವ್ಯಮಯ ವಾಗಿ ಮುಂದುವರೆಯುತ್ತದೆ. ಆದರೆ ಪೀಟರ್ ಬ್ರೂಕ್‌ನ ಮಹಾ ಭಾರತದಲ್ಲಿ ಮೂಲಭಾರತಕ್ಕೆ ನ್ಯಾಯ ದೊರಕಿಸಿ ಕೊಡುವ ಕಾರಣಕ್ಕಾಗಿ; ಯಾವ ಗ್ಲಾಮರ್‌ಗಳಿಗೂ ಒಳಗಾಗದೆ ಅರ್ತವಂತಿಕೆಯನ್ನು ತುಂಬುವುದರಲ್ಲಿಯೇ ಶ್ರೀಮಂತ ಪಾತ್ರಗಳಾಗುತ್ತಾರೆ ಯಾಕೆಂದರೆ, ಅಲ್ಲೆಲ್ಲ ಸತ್ವ ಜೀವಂತಿಕೆ ಮತ್ತು ಹಿರಿಮೆ ಇದೆ.


ಇಂಥ ಹಿರಿಮೆಯ ಕಾರಣಕ್ಕಾಗಿಯೇ ಲೋಹಿಯಾ ಹೇಳುವ ಸಾವಿನ ಸಮಯದಲ್ಲಿ ‘‘ಅವನ ಮನಸ್ಸಿನಲ್ಲಿ ಏನು ಹಾದಿರಬಹುದು. ಹರ್ಷ ಕೊಡುವ ಹರವು ಕೊಡುವ ಬದುಕಿನ ಆಟವೆ, ಎಲ್ಲ ಲೀಲಾ ಮಾತ್ರವೇ ಆಗಿರುವ ಈ ಭ್ರಮೆ ಸತ್ಯಗಳೇ?’’ ಎಂಬ ನೋಟದಲ್ಲಿ ಕೃಷ್ಣನ ಪಾತ್ರದಲ್ಲಿ ‘ಬ್ರೂಸ್ ಮೇಯರ್ಸ್’ ನಿರ್ಗಮಿಸುವುದು ಇಡೀ ವಿಶಾಲವಾದ ರಂಗಭೂಮಿಗೆ ಕತ್ತಲು ಆವರಿಸಿದಂತೆ ಆಗಿ ಬಿಡುತ್ತದೆ. ಇದರಿಂದ ಲಂಕೇಶ ಅವರು ಎಷ್ಟೊಂದು ವೇದನೆಗೆ ಒಳಗಾಗಿ ದ್ದರು. ಒಂದು ರೀತಿಯ ವಿಷಾದದಿಮದಲೇ ನನ್ನನ್ನು ಒತ್ತಾಯ ಮಾಡಿ ‘ಶೂದ್ರ, ಮೂರು ದಿವಸ ಪೀಟರ್‌ಬ್ರೂಕ್ ಸಂಗಡಿಗರು ಇರುವ ವಿದ್ಯಾನಗರದ ಶಿಬಿರದಲ್ಲಿ ಇದ್ದು ಬಾ’ ಎಂದು ನನ್ನ ಜೇಬಿನಲ್ಲಿ ಐನೂರು ರೂಪಾಯಿ ಇಟ್ಟು ಕಳಿಸಿ ಕೊಟ್ಟಿದ್ದರು.ನನಗೆ ಅದೊಂದು ಸಂಭ್ರಮ ಅನ್ನಿಸಿತು.ಬೆಂಗಳೂರಿನ ಚಾಡಯ್ಯ ಹಾಲ್‌ನಲ್ಲಿ ನಾಟಕ ನೋಡಿದ ಮೇಲೆ, ಲಂಕೇಶ ಅವರಷ್ಟೇ ವ್ಯಾಕುಲತೆಗೆ ಒಳಗಾಗಿದ್ದರೂ, ಅವರನ್ನು ಮತ್ತಷ್ಷು ಅರಿಯುವ ‘ಪರಿಗೆ’ ಚಿನ್ನದಚೌಕಟ್ಟು ದೊರಕದಂತಾಯಿತು. ಯಾಕೆಂದರೆ: ನೆನಪು ಬಂದಾಗಲೆಲ್ಲ; ಆ ‘ಪರಿ’ ಪಳಪಳನೆ ಹೊಳೆಯುತ್ತಿರುತ್ತದೆ. ಹೀಗೆ ಹೊಳೆಯುವ ಭಾಗದಿಂದಲೇ ಮಲ್ಲಿಕಾ ಸಾರಾ ಭಾಯಿ ಅವರು ತಮ್ಮ ತಾಯಿಗೆ ಸಲ್ಲಿಸಿದ ಶ್ರದ್ಧಾಂಜಲಿಯ ಪರಿಯು, ಮತ್ತೆ ಹಿಂದಕ್ಕೆ ಕರೆದುಕೊಂಡು ಹೋಗಿದ್ದು ಮತ್ತು ಕೆಲವು ಅಮೂಲ್ಯಸಂಗತಿಗಳನ್ನು ಮೆಲುಕು ಹಾಕಲು ಅವಕಾಶ ದೊರೆತಿದ್ದು, ಜೊತೆಗೆ ಮಲ್ಲಿಕಾಸಾರಾಭಾಯ್ ಅವರು 3 ದಿನವು ತಮ್ಮ ಕಾಲಿಗೆ ಗೆಜ್ಜೆಕಟ್ಟಿಕೊಂಡೇ ನಡೆದಿದ್ದರು.ಮೊದಲೇ ಅವರ ಮೋಹಕ ನಡಿಗೆಗೆ ನೂರಾರು ಮಂದಿ ಆಕರ್ಷಕಗೊಂಡಿ ದ್ದರು.ಇನ್ನು ಗೆಜ್ಜೆಯ ನಾದಕ್ಕೆ ಇನ್ನೆಷ್ಟು ಮಂದಿ ವ್ಯಾಮೋಹಿತರಾಗಿರುವುದಿಲ್ಲ. ಅದೇರೀತಿಯಲ್ಲಿ ಬ್ರೂಸ್ ಮೇಯರ್ಸ್, ಮಿರಿಯಂ ಗೋಲ್ಡ್ ಸ್ಮಿತ್, ಜೆಫ್ರಿ ಕಿಸ್ಸೂನ್ ಹಾಗೂ ಮಮಡೋ ಡಿವೋಮೆಯವರು ಎಷ್ಟು ಆಕರ್ಷಕರಾಗಿ ಬಿಟ್ಟಿದ್ದರು.

 ಅಲ್ಲೊಂದು ಮರದ ಕೆಳಗೆ ಕಟ್ಟೆಯ ಮೇಲೆ ಪೀಟರ್‌ಬ್ರೂಕ್ ಕೂತಿರುತ್ತಿದ್ದರು. ಪಕ್ಕದಲ್ಲಿ ಕೃಷ್ಣನ ಪಾತ್ರ ಧಾರಿಯಾಗಿದ್ದ ಬ್ರೂಸ್ ಮೇಯರ್ಸ್ ತನ್ನ ಉದ್ದನೆಯ ಜುಟ್ಟನ್ನು ಹಿಂದಕ್ಕೆ ಗಂಟಾಕಿಕೊಂಡು ಮಂದಸ್ಮಿತರಾಗಿ ಕೂತಿರುತ್ತಿದ್ದರು.64 ವರ್ಷದ ಅಷ್ಟೇನು ಎತ್ತರವಿಲ್ಲದ ಪೀಟರ್‌ಬ್ರೂಕ್ ತಮ್ಮ ಸಾಮಾನ್ಯ ಶೂಟ್‌ನ ಮೇಲೆ ಕೋಟು ಧರಿಸಿಕೊಂಡು ಕೂತು ಬಿಡುತ್ತಿದ್ದರು.ಆದರೆ ನಾನಾ ರೀತಿಯ ಮನಸ್ಥಿತಿಯ ಮನಸ್ಸುಗಳು ಎಂತೆಂಥದೋ ಪ್ರಶ್ನೆಗಳನ್ನು ಕೇಳುತ್ತಿದ್ದರು.ಯಾವುದಕ್ಕೂ ಬೇಸರಗೊಳ್ಳದೆ ಉತ್ತರಿಸುತ್ತಿದ್ದರು.ಅವರ ಪ್ರತಿಯೊಂದು ಉಯತ್ತರದ ಸಾರಾಂಶವು ಕೊನೆಗೂ ತಲುಪುತ್ತಿದ್ದುದು ‘‘ಈ ಮಹಾಭಾರತದ ವ್ಯಾಸನ ದರ್ಶನವೂ ಬಹಳ ಹಿಂದೆಯೆ ಬಹು ದೊಡ್ಡ ಪ್ರಮಾಣದಲ್ಲಿ ಜಗತ್ತಿನ ಉದ್ದಗಲಕ್ಕೂ ತಲುಪಬೇಕಾಗಿತ್ತು.ಇದು ಜಗತ್ತಿನ ಮನುಕುಲದ ಮಹಾಭಾರತ.ಈಗಲೂ ಕೃಷ್ಣನ ಪಾತ್ರದ ದರ್ಶನವನ್ನು ನೆನಪು ಮಾಡಿಕೊಂಡರೆ ರೋಮಾಂಚಿತನಾಗುತ್ತೇನೆ. ಹಾಗೆಯೇ ದ್ರೌಪದಿ, ಕುಂತಿ, ಧರ್ಮರಾಯ, ಭೀಷ್ಮ, ವಿಧುರ, ಕರ್ಣ ಮುಂತಾದ ಪಾತ್ರಗಳನ್ನು ನಾನು ಸರಿಯಾಗಿ ಗ್ರಹಿಸಿಕೊಂಡಿ ಲ್ಲವೆಂದೇ ತಿಳಿದಿರುವೆ.ನನ್ನ ಒಟ್ಟು ಧ್ಯಾನ ಮಹಾಭಾರತವನ್ನು ನನಗೆ ನಾನೇ ಅರ್ಥೈಸಿಕೊಳ್ಳುವ ಕಡೆಗೆಯೇ ಇದೆ. ಆ ಓದು ಖುಷಿಯ ಮೂಲಕ ಅರಿವನ್ನು ವ್ಯಾಪಕಗೊಳಿಸಸುವಂಥದ್ದು, ಅಷ್ಟೇ ಅಲ್ಲ; ಕೃಷ್ಣನ ಬಗೆಗಿನ ಅರಿವು ಎಂದೂ ಕೊನೆಗೊಳ್ಳುವುದೇ ಇಲ್ಲ. ಆ ಪಾತ್ರವು ಎಂಥ ಗಾಢವಾದ ಆಯಾಮಗಳನ್ನು ಪಡೆದಿದೆ. ಅಂಥ ತೇಜಃ ಪುಂಜ ಪಾತ್ರವನ್ನು ನಮ್ಮ ಕೈಗೆ ಕೊಟ್ಟು ಹೋಗಿದ್ದಾನೆ. ಎಷ್ಟು ಬೇಕಾದರೂ ಆನಂದಿಸಿ ಎಂದು ಕೃಷ್ಣನ ಸ್ತ್ರೀ ಸಂವೇದನೆ ಎಂಥ ಅಪೂರ್ವ ವಾದದ್ದು, ಅವನ ಕೈಗೆ ಕೊಳಲು ಕೊಟ್ಟ, ತಲೆಗೆ ನಾಟ್ಯದ ನವಿಲುಗರಿಯನ್ನು ಹಿರಿಮೆಯಾಗಿ ಸಿಕ್ಕಿಸಿ ಆನಂದಪಟ್ಟ. ನಿಜವಾಗಿಯೂ ವ್ಯಾಸ ‘ಜಗತ್ತಿನ ಕವಿ’ ಎಂದು ಕೆಲವು ನಿಮಿಷ ಧ್ಯಾನಸ್ಥರಾಗಿ ಕಣ್ಣು ಮುಚ್ಚಿದ್ದರು.

 
 
ಇಂಥ ಸಮಯದಲ್ಲಿ ನನಗೆ ಇರಾವತಿ ಅಥವಾ ಐರಾವತಿ ಕರ್ವೆಯವರ ‘ಯುಗಾಂತ’ ಎಂಬ ಮಹೋನ್ನತ ಕೃತಿಯು ನೆನಪಿಗೆ ಬರುತ್ತಿದೆ. ಅಲ್ಲಿಯ ಕೆಲವು ಸಾಲುಗಳು ಹೀಗಿವೆ ‘ಮಹಾಭಾರತ ಯುದ್ಧವೂ ಕೂಡಾ ಒಂದು ವಾಸ್ತವವಾದ ಯುದ್ಧ.ಇದರಲ್ಲಿ ಜಯಿಸಿದವರು, ಪರಾಜಯವನ್ನನುಭವಿಸಿದವರು-ಎರಡು ಕಡೆಯವರಿಗೆ ಕೊನೆಗೆ ಲಭಿಸುವುದು ದುಃಖವೇ.ದ್ರೌಪದಿಯ ಪ್ರಾಯಕ್ಕೆ ಬಂದ ಮಕ್ಕಳು ಮಡಿದರು.ಬಹುತೇಕ ಅವಳ ತಂದೆಯ ಕಡೆಯ ಇಡೀ ಕುಟುಂಬವೇ ನಾಶವಾದಂತಾಯಿತು. ಸಾಯುತ್ತಿರುವ ವೇಳೆಯಲ್ಲಿ ದುರ್ಯೋ ಧನನು ಹೇಳಿದಂತೆ, ಅವಳು ಮತ್ತು ಧರ್ಮ ಮುಂದಕ್ಕೆ ವಿಧವೆಯರ ರಾಜ್ಯವನ್ನುಳುವಂತಾಯಿತು’ ಎಂಬ ಧ್ವನಿ ಪೂರ್ಣತೆಯು ನೋಟದ ನೆಲೆಯಲ್ಲಿ ಪೀಟರ್ ಬ್ರೂಕ್‌ನನ್ನು ಸಾಕಷ್ಟು ವಿಷಾದದೆಡೆಗೆ ಕರೆದೊಯ್ದಿರಲು ಸಾಧ್ಯ. ಮಲ್ಲಿಕಾಸಾರಾಭಾಯಿ ಅವರಂತೂ ‘ನಾನು ದ್ರೌಪದಿಯ ಪಾತ್ರವನ್ನು ನಿರ್ವಹಿಸಬೇಕು ಎಂದು ಪೀಟರ್‌ಬ್ರೂಕ್ ಅವರು ಅಮ್ಮನ ಬಳಿ ಬಂದು ಕೇಳುವಾಗ, ಒಂದು ದೀರ್ಘವಾದ ಚರ್ಚೆಯೇ ನಡೆದಿತ್ತು. ಇದರಿಂದ ದ್ರೌಪದಿಯ ವ್ಯಕ್ತಿತ್ವವನ್ನು ಬ್ರೂಕ್ ಅವರಿಂದ ಅರಿತಷ್ಟೇ ಅಮ್ಮನಿಂದಲೂ ಅರಿತೆ.ಜೊತೆಗೆ ದ್ರೌಪದಿಯ ಬಗ್ಗೆ ಬಂದಿರುವ ಕೆಲವು ಅರ್ಥಪುರ್ಣ ವ್ಯಾಖ್ಯಾನಗಳನ್ನು ಓದಿಕೊಂಡು ಒಂದು ರೀತಿಯಲ್ಲಿ ಎಂಥ ಬ್ಯೂಟಿಫುಲ್ ಕ್ಯಾರೆಕ್ಟರ್ ಎಂದೇ ಮನಸ್ಸಿನಲ್ಲಿ ತಂಬಿಕೊಂಡೆ. ಅಷ್ಟೇ ಅಲ್ಲ ಕೃಷ್ಣನ ಪಾತ್ರಧಾರಿಯಾದ ಬ್ರೂಸ್ ಮೇಯರ್ಸ್‌ನಿಂದ ಎಷ್ಟೋ ಕಲಿತೆ.ಜೊತೆಗೆ ನನ್ನ ಅತ್ತೆ ಪಾತ್ರಧಾರಿಯಾದ ಮಿರಿಯಂ ಗೋಲ್ಡ್ ಸ್ಮಿತ್ ಅವ ರಿಂದ ಸ್ವೀಕರಿಸಿದ ಪ್ರೀತಿಯೂ ಅಪೂರ್ವವಾದದ್ದು. ಅತ್ತೆಯಾಗಿ ಅವರು ಒಂದು ದಿನವೂ ನನಗೆ ಕಾಟ ಕೊಡಲಿಲ್ಲವೆಂದು, ಅವರ ಕಡೆ ತೋರಿಸಿ ಹೇಳಿದಾಗ: ಎಲ್ಲರೂ ಸಂತೋಷದಿಂದ ನಕ್ಕಿದ್ದರು.


 ಮಲ್ಲಿಕಾ ಸಾರಾಭಾಯಿ ಅವರು ಅಮ್ಮನಂತೆ ನಟಿಯಾಗಿ, ಸಮಾಜ ಸುಧಾರಕಿ ಯಾಗಿ, ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿ ವ್ಯಾಪಿಸಿಕೊಂಡವರು.ಎಂತೆಂಥದೋ ಮಹತ್ವಪೂರ್ಣ ಪ್ರಶಸ್ತಿಗಳನ್ನೆಲ್ಲ ಪಡೆದು ತಮ್ಮ ತಮ್ಮ ಮಕ್ಕಳಾದ ರೇವಂತ ಮತ್ತು ಅನಹಿತ ಅವರ ನಡುವೆ ಕಲೋಪಾಸಕಿಯಾಗಿಯೇ ಬದುಕುತ್ತಿ ರುವಂಥವರು. ಎಷ್ಟೇ ಆದರೂ ಬಹುದೊಡ್ಡ ವಿಜ್ಞಾನಿಗಳ, ಹಿರಿಯ ನಾಯಕರ ಮತ್ತು ಬಹುದೊಡ್ಡ ಕಲಾವಿದರ ಪ್ರೀತಿಯಿಂದ ಅರ್ಥಾತ್ ಅವರ ಒಡನಾಟ ದಿಂದ ಬೆಳೆದ ಮಲ್ಲಿಕಾ ಸಾರಾಭಾಯಿ ಅವರು ಭರತನಾಟ್ಯ ಮತ್ತು ಕೂಚು ಪಾಡಿಯಲ್ಲಿ ಅತ್ಯಂತ ಎತ್ತರಕ್ಕೆ ಬೆಳೆದಿದ್ದರೂ; ರಾಜಕೀಯವನ್ನು ಆತ್ಮೀಯವಾಗಿ ನೋಡುತ್ತಾ ಬಂದವರು. ಅವರಿಗೆ ಯಾವುದೂ ಪರಕೀಯವಲ್ಲ. ಯಾಕೆಂದರೆ : ಗಾಂಧೀಜಿ , ನೆಹರೂ ಮತ್ತು ರವೀಂದ್ರನಾಥ ಟ್ಯಾಗೂರು ಅವರ ಚಿಂತನೆಗಳಿಂದ ಪ್ರಣೀತಗೊಂಡ ಮೃಣಾಲಿನ ಸಾರಾಭಾಯಿ ಅವರ ಮಗಳಲ್ಲವೇ? ನಾಲ್ಕೈದು ವರ್ಷಗಳ ಹಿಂದೆ ಯಾವುದೋ ಕಾರ್ಯಕ್ರಮಕ್ಕೆ ವಿದ್ಯಾನಗರಕ್ಕೆ ಹೋಗಿದ್ದೆ. ಆಗ ಪೀಟರ್ ಬ್ರೂಕ್ ಕೂರುತ್ತಿದ್ದ ಮರದಡಿಗೆ ಹೋಗಿ, ಅದೊಂದು ವ್ಯಾಸಪೀಠ ಎಂದು ಪರಿಭಾವಿಸಿಕೊಂಡು ನಮಸ್ಕರಿಸಿದ್ದೆ, ಸಂಭ್ರಮ ಪಟ್ಟಿದ್ದೆ.

ಅದೇ ರೀತಿಯಲ್ಲಿ ಖ್ಯಾತ ವೈಲನ ಕಲಾವಿದರಾದ ಡಾ.ಎಲ್. ಸುಬ್ರಹ್ಮಣ್ಯಂ ಅವರು ಒಂದಷ್ಟು ಆಫ್ರಿಕಾದ ಕಲಾವಿದರನ್ನು ಕರೆತಂದಿದ್ದರು. ಒಂದು ಅಪೂರ್ವಕಾರ್ಯಕ್ರಮವನ್ನು ಷಹನಾಯ್ ವಾದನದ ಚಕ್ರವರ್ತಿ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಜೊತೆ ಏರ್ಪಡಿಸಿದ್ದರು.ಆಗ ಆ ಮಹಾಭಾರತದ ಕಲಾವಿದರನ್ನು ನೆನಪು ಮಾಡಿಕೊಂಡು ಕಣ್ತುಂಬಿಕೊಂಡಿದ್ದೆ.ಇದೇ ಸಮಯದಲ್ಲಿ ಹತ್ತು ನಿಮಿಷ ವಿರಾಮವಿತ್ತು. ವಿಶ್ರಾಂತಿ ಗೃಹದಲ್ಲಿ ಬಿಸ್ಮಿಲ್ಲಾ ಖಾನ್‌ರನ್ನು ಮಾತಾಡಿಸಲು ವಿದ್ವಾನ್ ದೊರೆಸ್ವಾಮಿ ಅಯ್ಯಂಗಾರ್ ಅವರ ಜೊತೆ ಹೋದೆ. ಸಿಗರೇಟು ಸೇದುತ್ತಿದ್ದರು. ಸೌಜನ್ಯದ ದೃಷ್ಟಿಯಿಂದ ಬಿಸ್ಮಿಲ್ಲಾ ಖಾನ್ ಅವರು ‘ನೀವು ಸಿಗರೇಟು ಸೇದುತ್ತೀರಾ?’ಎಂದು ಕೇಳಿದರು. ದೊರೆಸ್ವಾಮಿ ಅಯ್ಯಂಗಾರ್ ಅವರು ಅತ್ಯಂತ ನಾಚಿಕೆಯಿಂದ ‘ಇಲ್ಲ’ವೆಂದು ಹೇಳಿ ಕಾರ್ಯಕ್ರಮದ ಅಂಗಳಕ್ಕೆ ಬಂದೆವು.ಈ ಎಲ್ಲ ಮೇಲಿನ ಸಾಲುಗಳು ಮೃಣಾಲಿನಿ ಸಾರ್‌ಭಾಯಿ ಅವರ ಶ್ರದ್ಧಾಂಜಲಿಯ ನೆಪದಲ್ಲಿ ಬರೆದಿರುವಂಥವುಗಳು.ತುಂಬು ಜೀವನದ ಆಕೆಯ ಆತ್ಮಕ್ಕೆ ನೆಮ್ಮದಿ ಸಿಗಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)