ಮನಕೆ ತಂಪು ಕೊಡುವ ‘ಹೊರವಲಯದ ಗಾಳಿ’
ಕನ್ನಡದ ಮಾನವ್ಯ ಕವಿಯೆಂದೇ ಹೆಸರಾಗಿರುವ ನವೋದಯದ ದಟ್ಟ ಪ್ರಭಾವದ ಜೊತೆ ಜೊತೆಗೇ ಬರೆಯುತ್ತಿರುವ ಬಿ. ಎ. ಸನದಿಯವರ ಅನುವಾದಿತ ಕವನ ಸಂಕಲನ ‘ಹೊರವಲಯದ ಗಾಳಿ’. ಇದು ಸಂಪೂರ್ಣ ಅನುವಾದಿತ ಕವನಗಳಾಗಿದ್ದರೂ, ಈಗಾಗಲೇ ಅವರ ಬೇರೆ ಬೇರೆ ಕವನ ಸಂಕಲನಗಳಲ್ಲಿ ಪ್ರಕಟವಾಗಿವೆ. ಕೆಲವು ಅಪ್ರಕಟಿತ ಕವನಗಳೂ ಇಲ್ಲಿವೆ. ಇಲ್ಲಿ ಸುಮಾರು 55 ಅನುವಾದಿತ ಕವಿತೆಗಳಿವೆ. ಇಂಗ್ಲಿಷ್, ಉರ್ದು, ಅರೇಬಿಕ್, ಚೀನಿ, ಮರಾಠಿ ಹೀಗೆ ಹಲವು ಭಾಷೆಗಳು, ಹಲವು ಭಾವಗಳನ್ನು ಕನ್ನಡ ಭಾಷೆಯ ಲಯಕ್ಕೆ ಪೂರಕವಾಗಿ ಇಳಿಸಿಕೊಟ್ಟಿದ್ದಾರೆ ಕವಿ ಸನದಿ. ಅಮೆರಿಕನ್ ಕವಿ ಹೆನ್ರಿಯ ಬಾಣ ಮತ್ತು ಹಾಡು ಹೇಗೆ ಈ ಭೂಮಿಯ ಮೇಲೆ ಹಾಡು ಗಾಳಿಯ ರೂಪದಲ್ಲಿ ಹರಡುತ್ತಾ ಮನಮನದಲ್ಲಿ ಬೀಡು ಕಟ್ಟಿಕೊಳ್ಳುತ್ತವೆ ಎನ್ನುವುದನ್ನು ಹೇಳುತ್ತದೆ. ಥೋಮಸ್ ಹುಡ್ ಅವರ ‘ರುತ್’ ಸನದಿಯವರ ಲೇಖನಿಯಲ್ಲಿ ‘ಒಂದು ತೆನೆ’ಯಾಗಿ ಹೊಸದಾಗಿ ಹುಟ್ಟಿದೆ. ಖಲೀಲ್ ಗಿಬ್ರಾನ್‌ರ ‘ಲೀವ್ ಮಿ ಮೈ ಬ್ಲೇಮರ್’ ‘ನನ್ನ ಪಾಡಿಗೆನ್ನ ಬಿಡು’ ಎಂದು ನಿಂದಕರಿಗೆ ಮನವಿ ಮಾಡಿಕೊಡುತ್ತದೆ. ‘ಮಮತೆಯ ಮೆರವಣಿಗೆಯ...’ ಕಡೆಗೆ ಕವಿ ಕೈ ತೋರಿಸಿ, ನಿಂದಕನನ್ನು ದೂರ ನಿಲ್ಲು ಎಂದು ಹೇಳುತ್ತಾನೆ. ಗಿಬ್ರಾನ್‌ನನ್ನು ತನ್ನದೇ ಲಯಕ್ಕೆ ಜೋಡಿಸುವ ಪ್ರಯತ್ನವನ್ನು ಮಾಡಿದ್ದಾರೆ ಸನದಿ. ಶೆಲ್ಲಿಯ ‘ಲವ್ಸ್ ಫಿಲೋಸಫಿ’ ಸನದಿಯ ಕೈಯಲ್ಲಿ ‘ಪ್ರೇಮ ಪ್ರಣಾಲಿ’ಯಾಗಿದೆ. ರವೀಂದ್ರನಾಥ ಟಾಗೋರರ ಗೀತಾಂಜಲಿಯನ್ನು ಕನ್ನಡಕ್ಕಿಳಿಸುತ್ತಾ ‘‘ತನ್ನೆಲ್ಲ ಬಲದಿಂದ ಬಿರುಗಾಳಿ, ಶಾಂತಿ/ ಭೇದಿಸುತ ಹುಟ್ಟು, ಕೊನೆಗಪ್ಪುವೊಲು ಶಾಂತಿ/ ನಿನ್ನ ಪ್ರೀತಿಗೆ ನನ್ನ ಸ್ಮತಿ ಅಸಹಕೃತಿಯಾಗಿ/ ನಿಂದರೂನು ಮಿಡಿವುದೆದೆ ಮಧುರ ಶ್ರುತಿಯಾಗಿ/ ನೀನೆನಗೆ ಬೇಕೆಂದು-ನೀನು- ಮಾತ್ರ!/ ನನ್ನೆದೆಗೆ ಈ ಮಂತ್ರ ಅನಂತ ಸೂತ್ರ!!’’ ಎಂದು ತನ್ಮಯಗೊಳ್ಳುತ್ತಾರೆ. ಹಾಗೆಯೇ ಅಬ್ರಹಾಂ ಲಿಂಕನ್ ಅವರ ಮೂರು ಕವಿತೆಗಳು ಸರಳ ಕನ್ನಡದಲ್ಲಿ ಮನ ಮುಟ್ಟುತ್ತದೆ. ಯೆಮೆನ್ ಕವಿ ಮುಹಮ್ಮದ್ ನೌಮಾನ್ ಅವರ ‘ಸೆರೆಮನೆಯಲ್ಲಿ’ ಕವಿತೆ ವರ್ತಮಾನದ ಈ ಸಂದರ್ಭದಲ್ಲಿ ಹೆಚ್ಚು ಆಪ್ತವಾಗಿ ನಮ್ಮನ್ನು ಕಾಡುತ್ತದೆ.
ಸುಂದರ ಪುಸ್ತಕ ಪ್ರಕಾಶನ , ಧಾರವಾಡ ಹೊರತಂದಿರುವ ಈ ಕೃತಿಯ ಮುಖಬೆಲೆ 70 ರೂ. ಆಸಕ್ತರು 9449125172 ದೂರವಾಣಿಯನ್ನು ಸಂಪರ್ಕಿಸಬಹುದು.