ಬಹುಭಾಷಾ ವಿಜ್ಞಾನಿ ಡಾ.ನೀರ್ಕಜೆಗೆ 75ರ ಅಭಿನಂದನೆ
ಉಡುಪಿ, ಫೆ.21: ಉಡುಪಿ ಎಂಜಿಎಂ ಕಾಲೇಜು ಮತ್ತು ಸಹಸಂಸ್ಥೆಗಳು, ಹಿರಿಯ ಹಳೆ ವಿದ್ಯಾರ್ಥಿ ಸಂಘ, ಉಡುಪಿ ಹವ್ಯಕ ಸಭಾ, ಅಭಿಮಾನಿ ಬಳಗದ ಸಹಯೋಗದಲ್ಲಿ 75ರ ಹರೆಯದ ಬಹುಭಾಷಾ ವಿಜ್ಞಾನಿ ಡಾ.ನೀರ್ಕಜೆ ತಿರುಮಲೇಶ್ವರ ಭಟ್ ಅವರನ್ನು ಅಭಿನಂದಿಸಲಾಯಿತು.
ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಡಾ.ಎನ್.ಟಿ.ಭಟ್ ಹಾಗೂ ಅವರ ಪತ್ನಿ ನಳಿನಾಕ್ಷಿ ಅವರನ್ನು ಸನ್ಮಾನಿಸಲಾಯಿತು. ಅಭಿನಂದನೆ ಸ್ವೀಕರಿಸಿದ ಡಾ.ಎನ್.ಟಿ.ಭಟ್ ಮಾತನಾಡಿ, ಅಧ್ಯಾಪಕನಾಗಿ ದೀರ್ಘಕಾಲ ಸೇವೆ ಮಾಡಿದ್ದೇನೆ. ಆದರೆ ಇನ್ನು ಸಾಕಷ್ಟು ಕೆಲಸ ಮಾಡಲು ಬಾಕಿ ಇದೆ ಎಂದು ಹೇಳಿದರು.
ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಶ್ರೀಧರ್ ರಾವ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಹಣ ಗಳಿಸುವುದೇ ನಿಜವಾದ ಜೀವನ ಎಂಬುದನ್ನು ತಿಳಿದುಕೊಂಡಿದ್ದಾರೆ. ಅವರಿಗೆ ಸರಿಯಾದ ತಿಳುವಳಿಕೆ ನೀಡಬೇಕಾಗಿದೆ. ದೇಶವನ್ನು ಕಟ್ಟಲು ರಾಜಕಾರಣಿಗಳಿಂದ ಸಾಧ್ಯವಿಲ್ಲ. ಮಕ್ಕಳಲ್ಲಿ ಉತ್ತಮ ಅಂಶಗಳನ್ನು ಬಿತ್ತರಿಸುವ ಶಾಲೆಗಳಿಂದ ಮಾತ್ರ ದೇಶದ ಉದ್ಧಾರ ಸಾಧ್ಯ ಎಂದರು.
ಸಾಹಿತಿ ಡಾ.ನಿರಂಜನ ವಾನಳ್ಳಿ, ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಎಲ್. ಸಾಮಗ, ಮಣಿಪಾಲ ಅಕಾಡಮಿ ಆಫ್ ಜನರಲ್ ಎಜುಕೇಶನ್ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್, ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್, ಲೀಲಾ ಭಟ್, ಡಾ.ನರಸಿಂಹ ಭಟ್ ಉಪಸ್ಥಿತರಿದ್ದರು.
ಪ್ರೊ.ಅರುಣ್ ಕುಮಾರ್ ಸ್ವಾಗತಿಸಿದರು. ಎಚ್.ಎನ್.ವೆಂಕಟೇಶ್ ವಂದಿಸಿದರು. ಪುತ್ತಿ ವಸಂತ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.