ಅರಸು ಅಂತಹ ವ್ಯಕ್ತಿಯನ್ನು ಕರ್ನಾಟಕ ಮತ್ತೆಂದೂ ಕಾಣಲು ಸಾಧ್ಯವಿಲ್ಲ
ಕೊಡಲಿ ಕಾವು, ಕತ್ತರಿಸ್ತಾರೆ ನಿನ್ನ...
ಅರಸು ಬ್ರೀಫ್ ಕೇಸ್ ತೆಗೆದು ನನ್ನ ಮುಂದಿಟ್ಟಾಗ... ನನಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ದೈವದ ಆಟವೋ ಏನೋ. ‘ಸಾರ್, ಈ ಬ್ರೀಫ್ ಕೇಸ್ ತಗೊಂಡ್ರೆ ನನ್ನ ಶರೀರನ ಒತ್ತೆ ಇಟ್ಟಂಗೆ, ಆಗಲ್ಲ ಸಾರ್’ ಅಂದೆ. ಅವರೂ ಅಷ್ಟೇ ಸೀರಿಯಸ್ಸಾಗಿ, ‘ನಿನ್ನ ಕೊಡಲಿ ಕಾವು ಮಾಡಿಕೊಂಡಿದ್ದಾರೆ, ಕತ್ತರಿಸ್ತಾರೆ ನಿನ್ನ, ನಿನಗೆ ಏನೂ ಸಿಗಲ್ಲ, ನೀನು ಸಿಎಂ ಆಗಲ್ಲ’ ಅಂದರು. ನಾನು, ‘ನನ್ನ ತಂದೆಗೆ ಏನು ಗೊತ್ತಿಲ್ಲ, ಈಶ್ವರನ ಭಕ್ತ, ಆ ಬ್ಯಾಕ್‌ಗ್ರೌಂಡಿಂದ ಬಂದೋನು, ನನ್ನ ಮನಸ್ಸು ಒಪ್ಪಲ್ಲ’ ಅಂದೆ. ಮಾತಾಡಲಿಲ್ಲ. ಸ್ವಲ್ಪ ಹೊತ್ತು ಬಿಟ್ಟು, ‘ನನಗೆ ಗೊತ್ತಾಗದ ಹಾಗೆ ಮಾಡ್ಕೊಳಿ ಸಾರ್’ ಅಂದೆ. ಅದಕ್ಕೆ ಅರಸು, ‘ನೋಡಪ್ಪ, ಈ ಅಧಿಕಾರಿಗಳು ನನ್ನ ವಿರುದ್ಧವಿದ್ದಾರೆ. ಹೋಗಲಿ, ಒಂದು ಮಾತು ಕೇಳಿಕೊಳ್ಳಲೇನಯ್ಯ, ಬೆಳಗ್ಗೆ ಒಂದು ಫೋನ್ ಮಾಡ್ತೀನಿ, ಇಂಥ ವಿಷಯ ಎತ್ತುತ್ತೇನೆ ಎಂದು ತಿಳಿಸು. ನಾನು ಅದಕ್ಕೆ ಬೇಕಾದಂತೆ ರೆಡಿಯಾಗ್ತೇನೆ’ ಅಂದರು. ನಾನೆಂಥ ಮೂರ್ಖ ಅಂದರೆ, ‘ನನ್ನ ಮನಸ್ಸು ಒಪ್ಪಲ್ಲ ಸಾರ್, ಆಗಲ್ಲ’ ಎಂದು ಎದ್ದು ಬಂದೆ. ಅಂತ ಮನುಷ್ಯ ಸಿಕ್ತನೇನ್ರಿ ಕರ್ನಾಟಕದಲ್ಲಿ.... ಸಿಕ್ತನೇನ್ರಿ... ನೆವರ್.
ಅಳಿಯನ ಅವಾಂತರ
ಅರಸು ಅವರ ಅಳಿಯ ಡಾ. ನಟರಾಜ್ ಆಗ ಪೋಲಿ ಪಠಾಲಂ ಕಟ್ಟಿಕೊಂಡು ತಿರುಗುತ್ತಿದ್ದ. ಆ ಪಠಾಲಂನಲ್ಲಿ ರೌಡಿಗಳೂ ಇದ್ದರು. ಪೊಲೀಸ್ನೋರು ಅವರು ಹೇಳಿದಂಗೆ ಕೇಳುತ್ತಿದ್ದರು. ಇದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಚಾರ. ಆ ವಿಷಯದಲ್ಲಿ ಅರಸು ಸರಕಾರ ಹಳಿ ತಪ್ಪಿತ್ತು. ಇದೇ ಸಂದರ್ಭದಲ್ಲಿ, ಸ್ಯಾಂಕಿ ಕೆರೆ ರಸ್ತೆಯಲ್ಲಿ ಒಬ್ಬ ಆರ್ಮಿ ಆಫೀಸರ್ ತಮ್ಮ ಸಿಸ್ಟರ್ ಇನ್‌ಲಾ ಜೊತೆ ವಾಕ್ ಮಾಡ್ತಿದ್ದರು. ಡಾ. ನಟರಾಜ್ ಮತ್ತವರ ಹುಡುಗರು, ‘ಏನೋ ಹುಡುಗಿ ಹೊಡ್ಕೊಂಡು ಹೋಗ್ತಿದೀಯ’ ಎಂದು ಕಿಚಾಯಿಸಿದ್ದಾರೆ. ಆತ ಮಿಲಿಟರಿ ಆಫೀಸರ್, ಹಿಡಕೊಂಡು ಎರಡು ಕೊಟ್ಟಿದ್ದಾನೆ. ಯಥಾಪ್ರಕಾರ ಪೊಲೀಸು, ಕೇಸು ಆಗಿದೆ. ಆದರೆ ಆರ್ಮಿ ಆಫೀಸರ್ ದೂರನ್ನು ದಾಖಲಿಸಿಕೊಂಡಿಲ್ಲ. ಅವರು ಗಲಾಟೆ ಮಾಡಿದ್ದಾರೆ, ರಂಪ ರಾಮಾಯ್ಣ ಆಗಿದೆ. ಕೊನೆಗೆ ಇಬ್ಬರ ಕಡೆಯಿಂದಲೂ ದೂರನ್ನು ದಾಖಲಿಸಿಕೊಂಡಿದ್ದಾರೆ. ಇದು ದೊಡ್ಡ ಸುದ್ದಿಯಾಯ್ತು. ಪೇಪರ್‌ನಲ್ಲೆಲ್ಲ ಬಂತು. ಹೌಸಿನಲ್ಲೂ ಕಾಗೋಡು, ಕೊಣಂದೂರು ಮತ್ತು ವಾಟಾಳ್ ನಾಗರಾಜ್ ಜೋರು ದನಿಯಲ್ಲಿ ಕೂಗಾಡಿದರು. ನಾನು, ವಿರೋಧ ಪಕ್ಷದ ನಾಯಕ, ಸುಮ್ನೆ ಕೂತಿದ್ದೆ. ನನ್ನ ಮನಸ್ಸಿನಲ್ಲೇನಿತ್ತು ಅಂದರೆ, ಎಂಥಾ ದೊಡ್ಡ ಮನುಷ್ಯ ಅರಸು, ಎಂಥಾ ನೋವುಣ್ತಾ ಇರಬಹುದು, ಇಂತಹ ವ್ಯಕ್ತಿಗೆ ಏನ್ ಗತಿ ಬಂತಪ್ಪ. ಅವರು ಇದನ್ನು ಹೇಗೆ ಸಹಿಸಿಕೊಂಡಿರಬಹುದು, ಮನೆಯೊಳಗೆ ಏನೇನಾಗಿರಬಹುದು ಅಂತೆಲ್ಲ ಯೋಚಿಸತೊಡಗಿದೆ. ಸ್ಪೀಕರ್ ನಾಗರತ್ನಮ್ಮನವರು, ‘ಏನ್ ಗೌಡ್ರೆ, ಸುಮ್ನೆ ಕೂತಿದ್ದೀರಲ್ಲ, ಮಾತಾಡಿ’ ಎಂದರು. ಅವರ ಧ್ವನಿ ಪ್ರಚೋದನಾತ್ಮಕವಾಗಿತ್ತು. ಇದನ್ಯಾಕೆ ಹೇಳ್ತಿದೀನಿ ಅಂದರೆ, ನಾಗರತ್ನಮ್ಮ ಆಡಳಿತ ಪಕ್ಷದವರು, ಅರಸು ಅವರಿಂದಾನೆ ಸ್ಪೀಕರ್ ಆದವರು. ಆದರೆ ಅವರಿಗೆ ಅರಸು ಕಂಡರೆ ಅಷ್ಟಕ್ಕಷ್ಟೆ. ಹಾಗಾಗಿ ಸಿಕ್ಕ ಅವಕಾಶವನ್ನು ಆಯಮ್ಮನೂ ದುರುಪಯೋಗಪಡಿಸಿಕೊಳ್ಳಲು, ಅರಸು ಅವರನ್ನು ಹಣಿಯಲು ಸ್ಪೀಕರ್ ಅಧಿಕಾರವನ್ನು ಬಳಸಿಕೊಳ್ಳುತ್ತಿದ್ದರು. ನಾನು ಎದ್ದು ನಿಂತು, ‘ಐದು ಕೋಟಿ ಜನರ ಸಿಎಂ ಅವರು, ಅವರಿಗೂ ಪ್ರತಿಯೊಬ್ಬ ಮಹಿಳೆ, ಮಕ್ಕಳ ಮೇಲೆ ಪ್ರೀತಿ ಇದೆ, ರಕ್ಷಣೆ ಮಾಡಬೇಕಾದ ಜವಾಬ್ದಾರಿಯೂ ಇದೆ. ಈ ನಾಡಿನ ಮಹಿಳೆಯರ ಮಾನ ಮರ್ಯಾದೆ ಉಳಿಸೋ ಶಕ್ತಿ ಅವರಿಗಿದೆ. ಈ ಘಟನೆಯಿಂದ ಅವರ ಮನಸ್ಸು ಬಹಳ ನೊಂದಿದೆ. ನಾನು ಅವರನ್ನು ಅರ್ಥ ಮಾಡಿಕೊಳ್ಳಬಲ್ಲೆ. ಅವರಲ್ಲಿ ವಿಶ್ವಾಸವಿಡಿ, ಇದನ್ನು ಇಲ್ಲಿಗೇ ನಿಲ್ಲಿಸಿಬಿಡಿ’ ಎಂದು ಮನವಿ ಮಾಡಿಕೊಂಡೆ. ವಿರೋಧ ಪಕ್ಷದ ನಾಯಕ ಕನ್‌ಕ್ಲೂಡ್ ಮಾಡಿದಾಗ, ಅಲ್ಲಿಗೆ ಅದು ಕ್ಲೋಸ್.
ಅರಸು ಹೇಳಿಕೊಟ್ಟ ಪಾಠ
ವಿಧಾನಸೌಧದ ಫಸ್ಟ್ ಫ್ಲೋರ್‌ನಲ್ಲಿ ಮುಖ್ಯಮಂತ್ರಿಗಳ ಕಚೇರಿ ಇತ್ತು ಆಗ. ಅರಸು ಅಲ್ಲಿಗೆ ಹೋಗಿ ಮಾತಾಡದೆ ಕೂತುಬಿಟ್ಟಿದ್ದರು. ನಾನು ಹೌಸ್ ಮುಗಿಸಿ ಕೆಳಗಿಳಿದು ಬರುತ್ತಿರುವಾಗ, ಮುಖ್ಯಮಂತ್ರಿಗಳ ಆಪ್ತ ಅಧಿಕಾರಿ ಜೆ.ಸಿ.ಲಿನ್ ಬಂದು ನನಗೊಂದು ಸ್ಲಿಪ್ ಕೊಟ್ಟರು. ಅದರಲ್ಲಿ ‘ಒಂದು ನಿಮಿಷ ನನ್ನ ಜೊತೆ ಕಾಲ ಕಳೆಯಬಹುದೆ’ ಎಂದು ಬರೆದಿತ್ತು. ಹೋದೆ, ನೋಡಿ ನಮಸ್ಕಾರ ಸಾರ್ ಅಂದೆ. ತಣ್ಣಗೆ ಕೂತಿದ್ದರು, ತುಂಬಾನೆ ನೊಂದಿದ್ದರು. ಲಿನ್‌ಗೆ ಕಾಫಿ ಕಳುಹಿಸಲು ಹೇಳಿ ಹೊರಗಿರಿ ಎಂದರು. ಅವರು ಹೊರಗೆ ಹೋಗುತ್ತಿದ್ದಂತೆ ನನ್ನನ್ನು ಬಾಚಿ ತಬ್ಬಿಕೊಂಡುಬಿಟ್ಟರು. ಕಣ್ಣಲ್ಲಿ ನೀರಾಡತೊಡಗಿತ್ತು. ಅವರನ್ನು ನೋಡಿ ನಾನೂ ಅತ್ತುಬಿಟ್ಟೆ. (ಇದನ್ನು ಹೇಳುವಾಗಲೂ ಗೌಡರ ಕಣ್ಣಲ್ಲಿ ನೀರಿತ್ತು). ‘ನೀನು ಎತ್ತರಕ್ಕೆ ಬೆಳೀತಿಯಪ್ಪ, ದೊಡ್ಡ ಮನಸ್ಸು ನಿನ್ನದು, ಅದನ್ನು ಹೌಸ್‌ನಲ್ಲಿ ಪ್ರೂವ್ ಮಾಡಿದೆ’ ಎಂದರು. ನಾನು ‘ನೀವು ಅದು ಹೇಗೆ ನಿಮ್ಮ ಅಳಿಯ ನಟರಾಜನ ಉಪಟಳ ಸಹಿಸಿಕೊಂಡಿದ್ದೀರಿ, ಮನೆಯೊಳಗಿನ ಸ್ಥಿತಿ ಎಂಥದ್ದಿರಬಹುದು, ಇದನ್ನೆಲ್ಲ ನೀವು ಹೇಗೆ ಮ್ಯಾನೇಜ್ ಮಾಡ್ತಿರಬಹುದು ಎಂದು ಚಿಂತಿಸಿ ಹೌಸ್‌ನಲ್ಲಿ ಮಾತನಾಡಿದೆ’ ಎಂದೆ. ಅವರು ‘ಇಲ್ಲಪ್ಪ, ನೀನು ಒಂದಿಲ್ಲೊಂದು ದಿನ ಬಹಳ ಎತ್ತರಕ್ಕೆ ಬೆಳೀತೀಯ’ ಎಂದು ಆಶೀರ್ವದಿಸಿದರು. ಈ ರೀತಿಯ ಸಂಬಂಧ ನಮ್ಮದು. ಅಲ್ಲಿ ಪಕ್ಷ ರಾಜಕಾರಣ, ದ್ವೇಷ ರಾಜಕಾರಣ, ಪ್ರತಿಷ್ಠೆಯ ಪ್ರಶ್ನೆ ಯಾವುದೂ ಇಲ್ಲ. ಆ ಮನುಷ್ಯನಲ್ಲಿ ಎಲ್ಲವೂ ನೇರಾನೇರ. ಅವರಂತಹ ವ್ಯಕ್ತಿಯನ್ನು ಕರ್ನಾಟಕ ಮತ್ತೊಂದು ಸಲ ಕಾಣುವುದು ಸಾಧ್ಯವಿಲ್ಲ.
ಅರಸು ಭ್ರಷ್ಟರಲ್ಲ
ಅರಸು ವೈಯಕ್ತಕವಾಗಿ ಭ್ರಷ್ಟರಲ್ಲ. ಆದರೆ ಅವರ ಸರಕಾರ ಭ್ರಷ್ಟ ಮಂತ್ರಿಗಳಿಂದ ತುಂಬಿತ್ತು. ಕೇಂದ್ರದಲ್ಲಿ ಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ‘ಕರ್ನಾಟಕವನ್ನು ಶುದ್ಧೀಕರಿಸುತ್ತೇನೆ’ ಎಂದು ರಾಜ್ಯಕ್ಕೆ ಬಂದರು. ಕೆಂಗಲ್ ಹನುಮಂತಯ್ಯನವರ ಹೇಳಿಕೆ, ನಿಜಲಿಂಗಪ್ಪನವರು ಸಿಎಂ ಆಗದಂತೆ ತಡೆದದ್ದು, ಪಕ್ಷದೊಳಗಿನ ಮೇಲ್ಜಾತಿ ನಾಯಕರ ಚಿತಾವಣೆಯನ್ನು ಬಹಳ ಹತ್ತಿರದಿಂದ ಕಂಡಿದ್ದ ಅರಸು ಅಲರ್ಟ್ ಆದರು. ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು, ಶಾಸಕರನ್ನು ಹಿಡಿದಿಟ್ಟುಕೊಳ್ಳುವ ತಂತ್ರಕ್ಕೆ ಕೈಹಾಕಿದರು. ಇಂಜಿನಿಯರ್‌ಗಳನ್ನು ಕರೆದು ಶಾಸಕರನ್ನು ನೋಡಿಕೊಳ್ಳಲು ಸೂಚಿಸಿದರು. ಭ್ರಷ್ಟಾಚಾರ ಕಣ್ಣಿಗೆ ರಾಚುವಷ್ಟು ಗೋಚರಿಸತೊಡಗಿತು. ಆಗ ನಿಜಲಿಂಗಪ್ಪನವರು, ‘ಇದನ್ನು ಕಂಡೂ ಕಾಣದಂತಿರುವ ವಿರೋಧ ಪಕ್ಷದ ನಾಯಕ, ಗೌಡರು ಖರೀದಿಯಾಗಿದ್ದಾರೆ’ ಎಂದು ನನ್ನನ್ನು ಬಹಿರಂಗವಾಗಿ ಮೂದಲಿಸಿದರು. ನಾನು ಪ್ರತಿಕ್ರಿಯಿಸಲಿಲ್ಲ. ಆದರೆ ನನ್ನ ಪರವಾಗಿ ಮುಖ್ಯಮಂತ್ರಿ ಅರಸು ಪ್ರತಿಕ್ರಿಯಿಸಿ, ಗೌಡರನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಉತ್ತರ ಕೊಟ್ಟರು. ಆಗ ಅರಸರ ಬಳಿ ಮೊಯ್ದೀನ್ ಎಂಬ ಪಿಎ ಇದ್ದರು. ಅವರ ಕೆಲಸವೆಂದರೆ ಬಂದೋರಿಗೆಲ್ಲ ಹಣ ಹಂಚುವುದು. ಅಧಿಕಾರದಲ್ಲಿದ್ದಾಗ ಹಣ ಎಲ್ಲಿಂದಲೋ ಬರುತ್ತೆ. ಅದನ್ನು ಅರಸು ಮುಟ್ಟಿ ಕೂಡ ನೋಡುತ್ತಿರಲಿಲ್ಲ. ಅವರು ಹೇಳಿದವರಿಗೆ ಮೊಯ್ದಿನ್ ಕೊಟ್ಟು ಕಳುಹಿಸುತ್ತಿದ್ದರು. ಆ ಹಣ ಹೆಚ್ಚಾಗಿ ಚುನಾವಣೆಗಳಿಗೆ, ಶಾಸಕರ ಮಕ್ಕಳ ಮದುವೆಗೆ, ಮುಂಜಿಗೆ, ಕಾಯಿಲೆ ಕಸಾಲೆಗೆ. ಅರಸು ಅವರಿಂದ ಹಣ ಪಡೆಯದವರೇ ಪಾಪಿಗಳು ಅನ್ನಿ...
ಇಲ್ಲಿಯೇ ಇನ್ನೊಂದು ವಿಷಯ ಹೇಳಬೇಕು. ಮಿಲ್ಟ್ರಿ ಸಿದ್ದಪ್ಪ ಅಂತ ನಮ್ಮ ಜಿಲ್ಲೆಯವನು. ಆತನಿಗೆ ಕ್ಯಾನ್ಸರ್ ಕಾಯಿಲೆ. ಬೋರಿಂಗ್ ಆಸ್ಪತ್ರೆಗೆ ದಾಖಲಾದ. ಆತನ ಕೈಯಲ್ಲಿ ಕಾಸಿಲ್ಲ. ನಾನು ನಮ್ಮ ಶಾಸಕರನ್ನೆಲ್ಲ ಕಾಡಿಬೇಡಿ 2,500 ಕೂಡಿಸಿದೆ. ಇದು ಹೇಗೋ ಅರಸು ಅವರಿಗೆ ಗೊತ್ತಾಯಿತು. ತಕ್ಷಣ ಅರಸು ಬೋರಿಂಗ್ ಆಸ್ಪತ್ರೆಗೆ ಧಾವಿಸಿ ಬಂದರು, ಸಿದ್ದಪ್ಪನ ಆರೋಗ್ಯ ವಿಚಾರಿಸಿದರು, ತಲೆದಿಂಬಿನ ಕೆಳಕ್ಕೆ 10,000 ರೂಪಾಯಿ ಇಟ್ಟರು, ಸಿದ್ದಪ್ಪನ ಪತ್ನಿಗೆ ಏನಾದರೂ ಕಷ್ಟ ಇದ್ದರೆ ಹೇಳಿಯಮ್ಮ ಎಂದರು. ಡಾಕ್ಟರನ್ನು ಕರೆದು ತುಂಬಾ ಚೆನ್ನಾಗಿ ನೋಡ್ಕೋಬೇಕು. ಔಷಧಿ ಮಾತ್ರೆಗೆ ಎಷ್ಟು ಖರ್ಚಾದರೂ ಪರವಾಗಿಲ್ಲ, ಫಾರಿನ್ನಿಂದ ತರಿಸಬೇಕೆಂದರೂ ಅಡ್ಡಿ ಇಲ್ಲ, ಅವರನ್ನು ಉಳಿಸಿಕೊಳ್ಳಬೇಕು ಎಂದರು. ಬೋರಿಂಗ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿದರು.
ಎಲ್ಲಿದಾರೆ ಇಂಥೋರು ಇವತ್ತು?
ಗ್ರೋವರ್ ಕಮಿಷನ್
ಇದನ್ನು ನಾನು ಹೇಳಲೇಬೇಕು. ನೀವು ಬರೀಬೇಕು. ಮುಖ್ಯಮಂತ್ರಿಯಾಗಿ ಅರಸು ಒಂದು ಟರ್ಮ್ ಮುಗಿಸಿದ್ದರು. ಭ್ರಷ್ಟಾಚಾರವನ್ನು ಸಾಂಸ್ಥೀಕರಿಸಿದ ವ್ಯಕ್ತಿ ಎಂದು ಮಾಧ್ಯಮಗಳಿಂದ ಬಿಂಬಿಸಲ್ಪಟ್ಟಿದ್ದರು. ಆಗ ತಾನೇ ತುರ್ತು ಪರಿಸ್ಥಿತಿ ಮುಗಿದು, ಕೇಂದ್ರದಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಿತ್ತು. ಮೊರಾರ್ಜಿ ದೇಸಾಯಿ ಪ್ರಧಾನಮಂತ್ರಿಯಾಗಿದ್ದರು. ಇಂದಿರಾ ಗಾಂಧಿಯೂ ಸೇರಿದಂತೆ ಅವರ ಪಕ್ಷ ವಾಷ್‌ಔಟ್ ಆಗಿತ್ತು. ಇದು ನಮ್ಮ ಪಕ್ಷದ ನಾಯಕರು- ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆಯವರ ಹೊಸ ಹುಮ್ಮಸ್ಸಿಗೆ ಕಾರಣವಾಗಿತ್ತು. ಕೇಂದ್ರದ ಅಧಿಕಾರವನ್ನು ಬಳಸಿಕೊಂಡು ಕರ್ನಾಟಕದಲ್ಲಿ ಜನತಾ ಪಕ್ಷವನ್ನು ಅಧಿಕಾರಕ್ಕೆ ತರಲು, ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಲು, ಅರಸು ಅವರನ್ನು ಬಗ್ಗುಬಡಿಯಲು ಅವರೆಲ್ಲ ಮುಂದಾದರು.
ನನಗೆ ಒಂದು ದಿನ ವೀರೇಂದ್ರ ಪಾಟೀಲರು ಫೋನ್ ಮಾಡಿ ಕರೆಸಿದರು. ಅರಸು ಅವರ ವಿರುದ್ಧ ಕೇಂದ್ರಕ್ಕೆ ದೂರು ಸಲ್ಲಿಸೋಣ, ಯಾವುದಾದರೂ ತನಿಖಾ ತಂಡಕ್ಕೆ ವಹಿಸುವಂತೆ ಒತ್ತಾಯಿಸೋಣ ಎಂದರು. ನನಗೆ ಇಷ್ಟವಿಲ್ಲ, ಇದಕ್ಕೆ ನಾನು ಒಪ್ಪುವುದಿಲ್ಲ ಎಂದೆ. ಆದರೆ ಅವರು ಬಿಡಲಿಲ್ಲ. ಅರಸು ಬಿಜಾಪುರದಲ್ಲಿ ‘ನಾನು ನನ್ನ ಆಡಳಿತದಲ್ಲಿ ಯಾವುದಾದರೂ ಭ್ರಷ್ಟಾಚಾರದಲ್ಲಿ, ಸ್ವಜನಪಕ್ಷಪಾತದಲ್ಲಿ, ಅಧಿಕಾರ ದುರುಪಯೋಗದಲ್ಲಿ ಭಾಗಿಯಾಗಿದ್ದರೆ ರಾಜೀನಾಮೆ ಕೊಡಲು ಸಿದ್ಧ’ ಎಂದಿದ್ದು ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಪೇಪರ್ ಕಟಿಂಗನ್ನು ನನ್ನ ಮುಂದೆ ಇಟ್ಟು ಓದಿದ್ದೀರ ಎಂದರು, ನಾನು ಓದಿದ್ದೆ, ನೋಡಿದ್ದೇನೆ ಎಂದೆ. ನಾನು ಕಳೆದ ಐದು ವರ್ಷ, ಪ್ರತಿದಿನ ಹಗರಣಗಳನ್ನು ಬಯಲಿಗೆಳೆದು ಅವರನ್ನು, ಅವರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದೇನೆ. ಮತ್ತೇನು ಮಾಡಬೇಕು, ಸಾಕಲ್ಲವೇ ಎಂದೆ. ನೀವು ವಿರೋಧ ಪಕ್ಷದ ನಾಯಕರು, ಹೌಸ್‌ನಲ್ಲಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕು, ಇಲ್ಲದಿದ್ದರೆ ಕರ್ತವ್ಯಲೋಪವಾಗುತ್ತದೆ ಎಂದರು. 24 ಜನ ಶಾಸಕರನ್ನು ಇಟ್ಟುಕೊಂಡು ಎಂಥ ಅವಿಶ್ವಾಸ ನಿರ್ಣಯ ಮೂವ್ ಮಾಡುವುದು? ನಮ್ಮ ಕೆಲಸ ಏನು, ದಿನಕ್ಕೊಂದು ಅನ್ಯಾಯವನ್ನು ಬಯಲಿಗೆಳೆದು ಸರಕಾರದ ಬಗ್ಗೆ ಜನರನ್ನು ಜಾಗೃತರನ್ನಾಗಿಸುವುದು. ಅದನ್ನು ನಾನು ಮಾಡಿಕೊಂಡೇ ಬಂದಿದ್ದೇನೆ. ಇದನ್ನು ರಾಮಕೃಷ್ಣ ಹೆಗಡೆ (ಆಗವರು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರು)ಯವರೇ ಮಾಡಬಹುದಲ್ಲವೇ ಎಂದೆ. ಅದಕ್ಕವರು ಕೌನ್ಸಿಲ್‌ನಲ್ಲಿ ಪವರ್ಸ್ ಇಲ್ಲ ಎಂದರು. ಮುಂದುವರಿದು ನಿಮ್ಮ ಹೋರಾಟ ತಾರ್ಕಿಕ ಅಂತ್ಯ ಕಾಣಬೇಕಾದರೆ ಅರಸು ಆಡಳಿತದ ಭ್ರಷ್ಟಾಚಾರವನ್ನು ತನಿಖೆಗೊಪ್ಪಿಸಲೇಬೇಕು ಎಂದರು. ನಾನು ಒಪ್ಪದಿದ್ದಾಗ ಅರಸು ಬಗ್ಗೆ ಸಿಂಪಥಿ ಇದೆ ಅಂತ ಅನುಮಾನಿಸಿದರು, ಆರೋಪ ಹೊರಿಸಿದರು. ನನಗೆ ತಲೆ ಕೆಟ್ಟುಹೋಯಿತು. ಕನ್ನಡಪ್ರಭದ ಮಿತ್ರ ರಾಂಪ್ರಸಾದ್ ಮೀಟ್ ಮಾಡಿ ಏನು ಮಾಡುವುದು ಇಕ್ಕಟ್ಟಿಗೆ ಸಿಕ್ಕಿಬಿಟ್ಟೆನಲ್ಲ ಎಂದೆ. ‘ನೀವು ಅರಸರಿಗೊಂದು ಕಾಗದ ಬರೆದು, ಬಿಜಾಪುರದಲ್ಲಿ ನೀವು ಹಾಗೆ ಮಾತನಾಡಿದ್ದು ನಿಜವೇ ಅಥವಾ ಮಾಧ್ಯಮಗಳು ತಪ್ಪಾಗಿ ಗ್ರಹಿಸಿ ಹಾಗೆ ವರದಿ ಮಾಡಿರಬಹುದೆ ಎಂದು ಕೇಳಿ’ ಎಂದರು. ನನಗೆ ಅದು ಸರಿ ಎನಿಸಿತು. ಪತ್ರವನ್ನು ಅವರೇ ಡ್ರಾಫ್ಟ್ ಮಾಡಿದರು. ಅರಸರಿಗೆ ಕಾಗದ ಕಳುಹಿಸಿದೆ. ಪುಣ್ಯಾತ್ಮ ಏನನ್ನಬೇಕು, ‘ಹೌದು ನಾನು ಹೇಳಿದ್ದು ನಿಜ’ ಅನ್ನುವುದೇ! ಅದಕ್ಕೇ ನಾನು ಹೇಳುವುದು, ರಾಜಕಾರಣದಲ್ಲಿ ಅರಸು ಅಂತೋರು ಹುಟ್ಟೋದು ಬಹಳ ವಿರಳ ಅಂತ. ಅವರು ಒಂದಾದರು, ನಾನು ಶಪಥ ಮಾಡಿದೆ
ಅರಸು ಭ್ರಷ್ಟಾಚಾರವನ್ನು ತನಿಖೆಗೊಳಪಡಿಸಲು ರಾಜ್ಯ ಸರಕಾರವೇ ಇಕ್ಬಾಲ್ ಕಮಿಷನ್ ಎಂಬ ಆಯೋಗವನ್ನು ನೇಮಿಸಿತ್ತು. ಹೀಗಿದ್ದಾಗ ಮತ್ತೊಂದು ಕಮಿಷನ್ ನೇಮಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಇಷ್ಟಾದರೂ ಕೆಲವೊಂದನ್ನು ಬಿಟ್ಟು, ಸೇರಿಸಿ ಒಂದಷ್ಟು ಚಾರ್ಜಸ್‌ಗಳನ್ನು ಫೈಲ್ ಮಾಡಿದರು. ಆಗ ವೀರೇಂದ್ರ ಪಾಟೀಲ್ ಅರಸು ಮಕ್ಕಳಿಗೆ ಬಿಡಿಎ ಸೈಟ್ ಕೊಟ್ಟಿದ್ದನ್ನು ಸೇರಿಸಿದರು. ನಾನು ವಿರೋಧಿಸಿದೆ. ಆ ಹೆಣ್ಮಕ್ಕಳನ್ನು ಯಾಕೆ ಅನಗತ್ಯವಾಗಿ ಎಳೆದು ತರುತ್ತೀರ ಎಂದೆ. ಅವರು ಇಲ್ಲ, ಇಲ್ಲ ಸೇರಿಸಲೇಬೇಕು ಎಂದು ಹಠಕ್ಕೆ ಬಿದ್ದು ಸೇರಿಸಿದರು. ಮೊರಾರ್ಜಿಗೆ ಅರಸು ಬಗ್ಗೆ ಗೌರವವಿತ್ತು. ಅವರು ಇದಕ್ಕೆ ಒಪ್ಪಲಿಲ್ಲ. ಚರಣ್‌ಸಿಂಗ್ ಕೂಡ ತಿರಸ್ಕರಿಸಿದರು. ಕೊನೆಗೆ ಯಾರ್ಯಾರನ್ನೋ ಹಿಡಿದು ಮೊರಾರ್ಜಿಯವರ ಮೇಲೆ ಒತ್ತಡ ತಂದು ಷಾ ಕಮಿಷನ್ ನೇಮಕ ಮಾಡಿಯೇಬಿಟ್ಟರು. ಇಂಟಿರಿಮ್ ರಿಪೋರ್ಟ್ ಬಂತು. ಒಂದೆರಡು ಚಾರ್ಜಸ್ ಪ್ರೂವ್ ಆಗಿತ್ತು. ಅಷ್ಟರಲ್ಲಿ ನಿಜಲಿಂಗಪ್ಪನವರು ರಾಜೀನಾಮೆ ಕೊಟ್ಟರು, ಕೇಂದ್ರದ ಜನತಾ ಸರಕಾರ ಬಿದ್ದುಹೋಯಿತು. ನಮ್ಮ ಹಣೆಬರಹ ಮುಗೀತು. ಅರಸು ಚಿತ್ರದುರ್ಗಕ್ಕೆ ಹೋದರು ನಿಜಲಿಂಗಪ್ಪ-ಅರಸು ಇಬ್ಬರೂ ಜೊತೆಯಾಗಿ ನಿಂತು ಟೋಪಿ-ನಿಲುವಂಗಿ ಹಾಕಿಕೊಂಡು ಫೋಟೋ ಹೊಡೆಸಿಕೊಂಡರು. ಒಂದಾದರು. ಇಲ್ಲಿ ಚುನಾವಣೆ ಎದುರಾಯಿತು. ದೇವರಾಜ ಅರಸು ಮತ್ತವರ ಪಕ್ಷ ಬಹುಮತ ಪಡೆದು ಆರಿಸಿ ಬಂತು. ನಮಗೆ 59 ಸೀಟು ಬಂದವು. ಆಗ ಅರಸು, ‘ಜನತಾ ನ್ಯಾಯಾಲಯದಲ್ಲಿ ನಮ್ಮ ಪರವಾದ ತೀರ್ಪು ಬಂದಿದೆ’ ಎಂದರು. ಅವತ್ತೇ ನಾನು, ಹೌಸ್‌ನಲ್ಲಿಯೇ, ‘ಇನ್ನುಮುಂದೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲ’ ಎಂದು ಶಪಥ ಮಾಡಿದೆ. ಇಂತಹ ಅರಸು ತಮ್ಮ ಕೊನೆಯ ದಿನಗಳಲ್ಲಿ ಒಬ್ಬಂಟಿಯಾದರು. 90 ಜನ ಶಾಸಕರು ಅವರನ್ನು ತೊರೆದು ಹೋಗಿದ್ದರು. ಆಗ ಅವರನ್ನು ನೋಡಲು ಹೋಗಿದ್ದೆ. ಒಬ್ಬರೆ ಕೂತು ಕಣ್ಣೀರು ಹಾಕುತ್ತಿದ್ದರು. ನನ್ನನ್ನು ನೋಡಿದವರೆ, ‘ನೀನು ಹೇಳಿದ್ದು ಸತ್ಯ ಕಣಪ್ಪ’ ಅಂದರು. ಅರಸು ಸಣ್ಣಪುಟ್ಟ ಜಾತಿ ಎನ್ನದೆ ಎಲ್ಲರಿಗೂ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡಾಗ ಹೇಳಿದ್ದೆ, ಇವರಿಂದ ನಿಮಗೆ ತೊಂದರೆ ಇದೆ ಎಂದು. ಆದರೆ ಆಗ ಅರಸು ಕೇಳಿರಲಿಲ್ಲ. ಈಗ ಅದೇ ಅರಸು, ನೀನು ಅವತ್ತು ಹೇಳಿದ್ದು ಸತ್ಯ ಕಣಪ್ಪ ಅಂದರು. ನಾನು, ‘ನೀವು ಮಾಡಿದಂತಹ ಕಾರ್ಯಕ್ರ ಮಗಳಿದ್ದವಲ್ಲ, ಚಿನ್ನದ ತಟ್ಟೆಯಲ್ಲಿಟ್ಟು ಇಂದಿರಾಗಾಂಧಿಗೆ ಬಳುವಳಿ ಯಾಗಿ ಕೊಟ್ಟಿದ್ದೀರಿ, ಈಗ ಅದರ ಫಲ ಉಣ್ಣುತ್ತಿದ್ದೀರಾ’ ಎಂದೆ. ಬಡವರನ್ನು ಕಂಡರೆ ತುಂಬಾ ಪ್ರೀತಿ, ಕಷ್ಟದಲ್ಲಿರುವವರಿಗೆ ಕರಗುವ ಉದಾರಿ, ಅರಸು ಅಂತಹ ವ್ಯಕ್ತಿಯನ್ನು ಕರ್ನಾಟಕ ಮತ್ತೆಂದೂ ಕಾಣಲು ಸಾಧ್ಯವಿಲ್ಲ. ಸತ್ಯ ಹೇಳಿದೀನಿ, ಉತ್ಪ್ರೇಕ್ಷೆ ಇಲ್ಲ. ಸಾಕೆನ್ನಿಸುತ್ತದೆ ಎಂದು ಎದ್ದರು.
ನನ್ನಿಂದ ತಪ್ಪಾಗಿದೆ ಎಂದ ಅರಸು
ತುರ್ತು ಪರಿಸ್ಥಿತಿ ಸಮಯದಲ್ಲಿ ನನ್ನನ್ನು ಜೈಲಿಗೆ ಹಾಕಿದರು. ನಮ್ಮಪ್ಪನಿಗೆ ಯಾರೋ ಹೋಗಿ ನಿಮ್ಮ ಮಗನನ್ನು ಜೈಲಿಗೆ ಹಾಕಿದ್ದಾರೆ, ಇನ್ನು ಅವನ ಕತೆ ಮುಗೀತು ಎಂದು ವಿಷಯ ಮುಟ್ಟಿಸಿದರು. ಅಷ್ಟೇ ನೋಡಿ... ನಮ್ಮಪ್ಪನಿಗೆ ಬ್ರೈನ್ ಕೆಲಸ ಮಾಡದಂತಾಯ್ತು. ನೋಡಿಕೊಳ್ಳೋರಿಲ್ಲ, ಆಸ್ಪತ್ರೆಗೆ ಸೇರಿಸೋರಿಲ್ಲ. ಇದು ಅರಸು ಅವರಿಗೆ ಗೊತ್ತಾಯಿತು. ಇನ್ ಫ್ಯಾಕ್ಟ್, ಅರಸು ಅವರಿಗೆ ನನ್ನನ್ನು ಜೈಲಿಗೆ ಹಾಕಿಸಲು ಮನಸ್ಸಿಲ್ಲ. ಆಗ ಅರಸು, ಸಚಿವರಾದ ಹುಚ್ಚಮಾಸ್ತಿಗೌಡರನ್ನು ಜೈಲಿಗೆ ಕಳಿಸಿ, ‘ಅನ್‌ಕಂಡೀಷನಲ್ ಆಗಿ ಬಿಡ್ತೀನಿ, ಮಂತ್ರಿಯಾಗಿ ಓಥ್ ತಗೋಬೇಕು, ತಂದೇನ ತಂದು ಮನೇಲಿ ಇಟ್ಕೋಬೇಕು, ನೀವು ಮಂತ್ರಿಯಾಗಿರೋದನ್ನು ನೋಡಿ ಅವರ ಆರೋಗ್ಯ ಸುಧಾರಿಸಬಹುದು, ನಿಮಗೂ ನಿಮ್ಮಪ್ಪನ ಆಸೆ ತೀರಿಸಿದಂತಾಗುತ್ತದೆ, ಅವರೂ ಉಳಿಯುತ್ತಾರೆ, ನೋಡಿ ಯೋಚ್ನೆ ಮಾಡಿ ಹೇಳಿ’ ಎಂದರು. ನನಗೆ ಮನಸ್ಸು ಬರಲಿಲ್ಲ. ನಾನು ನಮ್ಮಪ್ಪ ತೀರಿಹೋದ್ರೆ ಪೆರೋಲ್ ಮೇಲೆ ಕಳುಹಿಸಿಕೊಡಿ ಎಂದೆ. ಅದನ್ನೇ ಅವರು ಅರಸುಗೆ ಹೇಳಿದರು. ಅರಸು ಹಠಮಾರಿ ಎಂದು ಬಯ್ದರಂತೆ.
ಜೈಲಿನಲ್ಲಿದ್ದಾಗಲೇ ಇನ್ನೊಂದು ಪ್ರಸಂಗ ನಡೆಯಿತು. ನಾನು ಒಳಗಿರುವಾಗ ನನಗೆ ಪರಿಚಯವಿದ್ದ ನರಸಿಂಹಯ್ಯಎಂಬ ಅಧಿಕಾರಿಯನ್ನು ಯಾರದೋ ಚಿತಾವಣೆಗೊಳಗಾಗಿ ಅರಸು ವರ್ಗಾವಣೆ ಮಾಡಿದ್ದರು. ನನಗೆ ರೇಗಿಹೋಯಿತು. ಅರಸು ಅವರಿಗೆ ಜೈಲಿನಿಂದಲೇ ಪತ್ರ ಬರೆದೆ. ಆತ ಬಡ ಬಿಡಿಓ ಅಧಿಕಾರಿ, ಹಿಂದುಳಿದ ವರ್ಗಕ್ಕೆ ಸೇರಿದವರು. ಅರಸುಗಳು ಬೇಟೆಗೆ ಹೋದಾಗ ಜಿಂಕೆ ಮಲಗಿದ್ರೆ ಕಲ್ಲು ಹೊಡೆದು, ನಾನು ಬೇಟೆಗೆ ಬಂದಿದ್ದೇನೆ, ವಿನಾಕಾರಣ ನಿನ್ನನ್ನು ಕೊಲ್ಲಲು ನನಗೆ ಮನಸ್ಸಿಲ್ಲ, ತಪ್ಪಿಸಿಕೋ ಎಂದು ಹೇಳುವ ವಂಶಸ್ಥರು ನೀವು. ನನ್ನನ್ನು ಜೈಲಿನಲ್ಲಿಟ್ಟು, ನೀವು ಬಡ ಜಿಂಕೆಯಂತಹ ಅಧಿಕಾರಿಯ ಮೇಲೆ ಶಸ್ತ್ರಾಸ್ತ್ರ ಪ್ರಯೋಗಿಸುವುದು ಉಚಿತವೇ? ಎಂದು ಕಾಗದ ಬರೆದೆ. ಆ ಕಾಗದ ಓದಿದ ಅರಸು, ಆ ತಕ್ಷಣವೇ ಪೊಲೀಸ್ ಅಧಿಕಾರಿ ರಾಮಲಿಂಗಂ, ಇಂಟಲಿಜೆನ್ಸ್ ಡಿಐಜಿ, ಕಳಿಸಿ ನಿಜವಾದ ವರದಿ ತರಿಸಿಕೊಂಡು ನೋಡಿ, ವರ್ಗಾವಣೆ ರದ್ದು ಮಾಡಿದರು. ಅಲ್ಲದೇ ‘ನನ್ನಿಂದ ತಪ್ಪಾಗಿದೆ’ ಎಂದು ಪತ್ರ ಬರೆದರು. ಯಾರ್ರಿ ಇದಾರೆ ಇವತ್ತು?