varthabharthi


ಫೋಕಸ್

ಈ ಬಾರಿ ಹೂ ಬಿಟ್ಟಿಲ್ಲ ಗೇರು ಮರ, ಗೇರು ಫಸಲಿನಲ್ಲಿ ಬಾರೀ ಕುಸಿತ

ವಾರ್ತಾ ಭಾರತಿ : 24 Feb, 2016

ಜನವರಿ ಕೊನೆಯ ವಾರದಲ್ಲಿ ಹೂ ಬಿಟ್ಟಿರುವ ಗೇರು ಮರ

ಪುತ್ತೂರು: ಗೇರು ಫಸಲಿನಲ್ಲಿ ಈ ಬಾರಿ ಬಾರೀ ಕುಸಿತ ಕಂಡು ಬಂದಿದ್ದು, ಹವಾಮಾನದ ವೈಪರೀತ್ಯ ಹಾಗೂ ಕೀಟ ಭಾದೆ ಇಳುವರಿ ಕೊರತೆ ಕಾರಣ ಎನ್ನಲಾಗುತ್ತಿದೆ. ಆದರೂ ಕೆಲವು ಕಡೆಗಳಲ್ಲಿ ಗೇರು ಮರದ ತುಂಬ ಹೂವು ಕಾಣಿಸಿಕೊಂಡಿದ್ದು, ಗೇರು ಕೃಷಿಕರು ಅಲ್ಪ ತೃಪ್ತಿಯನ್ನು ಕಂಡು ಕೊಂಡಿದ್ದಾರೆ. ಒಟ್ಟಿನಲ್ಲಿ ಗೇರು ಬೆಳೆ ಕುಸಿತಗೊಳ್ಳುವ ಸೂಚನೆ ದಟ್ಟವಾಗಿದೆ. ಸಾಮಾನ್ಯವಾಗಿ ದ.ಕ. ಜಿಲ್ಲೆಯಲ್ಲಿ ನವಂಬರ್ ತಿಂಗಳಲ್ಲಿ ಹೂ ಬಿಡುತ್ತಿದ್ದ ಗೇರು ಮರಗಳು ಈ ಬಾರಿ ಬಹಳ ತಡವಾಗಿ ಹೂ ಬಿಡುತ್ತಿದೆ. ಅದೂ ಕೆಲವು ಕಡೆಗಳಲ್ಲಿ ಮಾತ್ರ ಮರಗಳಲ್ಲಿ ಹೂ ಬಿಟ್ಟಿಲ್ಲ. ನವಂಬರ್, ದಶಂಬರ್ ತಿಂಗಳಲ್ಲಿ ವಿಪರೀತ ಮಳೆ ಬಂದ ಕಾರಣ ಒಂದು ತಿಂಗಳು ತಡವಾಗಿ ಜನವರಿಯಲ್ಲಿ ಅಲ್ಪ ಪ್ರಮಾಣದಲ್ಲಿ ಮರಗಳು ಹೂ ಬಿಡಲಾರಂಬಿಸಿದೆ. ಈಗಾಗಲೇ ಕೊಯ್ಲು ಆರಂಭವಾಗಬೇಕಿದ್ದ ಸಮಯದಲ್ಲಿ ಮರಗಳು ಹೂ ಬಿಡುತ್ತಿರುವುದು ಕೃಷಿಕರಲ್ಲಿ ಆತಂಕವನ್ನು ಸೃಷ್ಟಿಸಿದೆ. ಹವಾಮಾನ ವೈಪರೀತ್ಯ ಹಾಗೂ ಇನ್ನೂ ಹಲವು ಕಾರಣಗಳಿಂದಾಗಿ ಕರ್ನಾಟಕ ರಾಜ್ಯದಾದ್ಯಂತ ಗೇರು ಬೀಜ ಫಸಲಿನಲ್ಲಿ ಭಾರೀ ಕುಸಿತವಾಗುವ ಸಂಭವವಿದ್ದು . ಉತ್ಪಾದನೆಯ ಕೊರತೆಯ ಕಾರಣದಿಂದ ಗೇರು ಬೀಜದ ಮಾರುಕಟ್ಟೆಯ ದರದಲ್ಲಿ ಏರಿಕೆ ಕಂಡಿದೆ.

ರಾಜ್ಯದಲ್ಲಿ ಅತೀ ಹೆಚ್ಚು ಗೇರು ಬೆಳೆಯುವ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಈ ಸಮಸ್ಯೆ ಗಣನೀಯವಾಗಿ ಭಾದಿಸಿದೆ.

ಕಾರಣ ಏನು?

*ಗಿಡಗಳಲ್ಲಿನ ಪೋಷಕಾಂಶದ ಕೊರತೆ. *ತಳಿಗಳ ಗುಣಮಟ್ಟ ತಿಳಿಯದೆ ನಾಟ ಮಾಡಿರುವುದು, *ಹವಾಮಾನದಲ್ಲಿ ಆಗಿರುವ ಬದಲಾವಣೆ, *ಕೀಟ ಬಾದೆ

ಸಾಧಾರಣವಾಗಿ ಹೆಚ್ಚು ತೇವಾಂಶವಿದ್ದರೆ ಅಂಥಹ ಸ್ಥಳದಲ್ಲಿ ನಾಟಿ ಮಾಡಿರುವ ಗಿಡಗಳು ಹೂ ಬಿಡುವ ಬದಲು ಗಿಡಗಳಲ್ಲಿ ಚಿಗುರು ಬಂದು ಗಿಡಗಳು ಸೊಂಪಾಗಿ ಬೆಳಯುತ್ತದೆ. ಈ ಬಾರಿ ಡಿಸೆಂಬರ್ ತಿಂಗಳಿನಲ್ಲಿ ಮಳೆ ಬಂದಿರುವ ಕಾರಣ ಮಣ್ಣಿನಲ್ಲಿ ತೇವಾಂಶ ಅಧಿಕವಾಗಿರುವ ಕಾರಣ ಬಹುತೇಕ ಕಡೆಗಳಲ್ಲಿ ಒಂದು ತಿಂಗಳು ತಡವಾಗಿ ಗಿಡಗಳು ಹೂ ಬಿಡಲು ಆರಂಭಿಸಿದೆ. ಗಿಡಗಳಿಗೆ ಬಲವಾದ ಬಿಸಿಲು ಮತ್ತು ಚಳಿಯ ಅವಶ್ಯಕತೆಯೂ ಇರುವುದರಿಂದ ಈ ಬಾರಿ ಗಿಡಗಳಿಗೆ ಪೃಕೃತಿದತ್ತವಾಗಿ ಸಿಗಬೇಕಾದ ಪೋಷಣೆಗಳು ಲಭ್ಯವಾಗಿಲ್ಲ.
ಸರಕಾರಿ ಗೇರು ಬೀಜ ತೋಪಿನಲ್ಲಿರುವ ಬಹುತೇಕ ಗಿಡಗಳು ಇನ್ನೂ ಹೂ ಬಿಟ್ಟಿಲ್ಲ. ಇಲಾಖೆಯ ವತಿಯಿಂದ ನಾಟಿ ಮಾಡಿರುವ ತಳಿಗಳು ಯಾವುದು. ಗಿಡಗಳ ಗುಣಮಟ್ಟ, ಬೀಜದಿಂದ ಉತ್ಪತ್ತಿ ಮಾಡಿರುವ ಗಿಡಗಳೇ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲದ ಕಾರಣ ಸಕಾಲಕ್ಕೆ ಅವುಗಳಿಗೆ ಬೇಕಾದ ಪೋಷಕಾಂಶ ಮತ್ತು ಔಷಯನ್ನು ಸಿಂಪಡಿಸಲು ಸಾಧ್ಯವಾಗದೇ ಇರುವುದೇ ಸರಕಾರಿ ಗೇರು ತೋಪಿನಲ್ಲಿರುವ ಶೇ. 90 ಗಿಡಗಳ ಪಲಿತಾಂಶ ಏನು ಎಂಬುದನ್ನು ನಿರ್ಧರಿಸಲು ಕಷ್ಟ ಸಾಧ್ಯವಾಗಲಿದೆ.


ಹೂ ಬಿಟ್ಟರೂ ಬೀಜೋತ್ಪಾಧನೆ ಇಲ್ಲ: ಕೆಲವು ಮರಗಳಲ್ಲಿ ಚೆನ್ನಾಗಿ ಹೂ ಬಿಟ್ಟಿದ್ದರೂ ಅವುಗಳಲ್ಲಿ ಬೀಜ ಉತ್ಪಾದನೆಯಾಗುವುದಿಲ್ಲ ಇದಕ್ಕೆ ಮಣ್ಣಿನಲ್ಲಿರುವ ಪೋಷಕಾಂಶದ ಕೊರತೆಯ ಕಾರಣವಾಗಿದೆ. ಕಾಡುಗಳ ನಾಶ ಮತ್ತು ಬೇಕಾ ಬಿಟ್ಟಿ ಗಿಡಗಳನ್ನು ನಾಟಿ ಮಾಡುವುದರಿಂದ ಈ ರೀತಿ ಸಮಸ್ಯೆ ಉಂಟಾಗುತ್ತದೆ ಎಂಬುದು ವಿಜ್ಞಾನಿಗಳ ಅಭಿಮತ. ಹಿಂದಿನ ಕಾಲದಲ್ಲಿ ಎಲ್ಲಿಯಾದರೂ ಗುಡ್ಡದಲ್ಲಿ ಗಿಡ ನಾಟಿ ಮಾಡಿದರೆ ಅದರಲ್ಲಿಯೇ ಬೀಜಗಳು ಸೃಷ್ಟಿಯಾಗುತ್ತಿದ್ದವು. ಆದರೆ ಈಗ ಪೃಕೃತಿಯ ಗುಣಮಟ್ಟವೇ ಬದಲಾಗಿರುವುದರಿಂದ ಮಣ್ಣಿನಲ್ಲಿ ಕೊರತೆಯಿರುವ ಪೋಷಕಾಂಶವನ್ನು ನೀಡಲೇ ಬೇಕಾಗಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ


ಎಲ್ಲೆಲ್ಲಿ ಬೆಳೆಯುತ್ತಾರೆ.
ದ.ಕ, ಉತ್ತರ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಅತ್ಯಕ ಬೀಜ ಉತ್ಪಾದಿಸಲಾಗುತ್ತಿದೆ. ಉಳಿದಂತೆ ರಾಜ್ಯದ ಕೋಲಾರ, ಶಿವಮೊಗ್ಗ, ಬೆಳಗಾಂ, ತುಮಕೂರು, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಕೊಡಗು, ಹೊನ್ನಾಳಿ ಮುಂತಾದ ಕಡೆಗಳಲ್ಲಿಯೂ ಗೇರು ಬೀಜ ಬೆಳೆಯಲಾಗುತ್ತಿದೆ.

ಎಲ್ಲೆಲ್ಲಿ ಎಷ್ಟು?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 35, 000 ಹೆಕ್ಟೇರ್ ಪ್ರದೇಶ
 ಒಟ್ಟು ಉತ್ಪನ್ನ: 38, 300 ಟನ್ ( ವಾರ್ಷಿಕ)(2014-15 ಮಾಹಿತಿ)

ಕರ್ನಾಟಕದಲ್ಲಿ ಒಟ್ಟು: 1,25,000 ಹೆಕ್ಟೆರ್ ಪ್ರದೇಶ

ಒಂದು ಹೆಕ್ಟೇರ್‌ನಲ್ಲಿ ಎಷ್ಟು ಟನ್ ನಾಟಿ:
ಉತ್ತಮ ತಳಿಯ ಗಿಡವನ್ನು ನಾಟಿ ಮಾಡಿದರೆ ಗಿಡ ನಾಟಿ ಮಾಡಿದ 3 ನೇ ವರ್ಷದಲ್ಲಿ ಒಂದು ಹಕ್ಟೇರ್‌ಗೆ 3 ರಿಂದ 4 ಟನ್ ಗೇರು ಬೀಜವನ್ನು ಪಡೆಯಬಹುದಾಗಿದೆ. ಇದು ಗಿಡವನ್ನು ಆಧರಿಸಿ ಮೌಲ್ಯ ಮಾಡಲಾಗಿದೆ.

ಭಾರತಕ್ಕೆ ಎಲ್ಲಿಂದ ಆಮದು ಮಾಡುತ್ತಾರೆ
ನಮ್ಮ ದೇಶಕ್ಕೆ ಹೊರ ದೇಶಗಳಿಂದಲೂ ಬೀಜ ಆಮದು ಮಾಡಿಕೊಳ್ಳಲಾಗುತ್ತಿದೆ. ಆಫ್ರಿಕನ್ ದೇಶಗಳು, ಇಂಡೋನೇಷಿಯಾ, ಡೆನಿನ್, ತಾಂಜೇನಿಯಾ, ನೈಜೀರಿಯಾ, ದೇಶಗಳಿಂದ ಗೇರು ಬೀಜಗಳು ಆಮದಾಗುತ್ತಿದೆ.

 ಎಲ್ಲಿ ಗೇರು ಕೃಷಿ ಮಾಡುವುದಾದರೂ ಅದಕ್ಕೆ ಮುನ್ನ ಅಲ್ಲಿನ ಮಣ್ಣು ಪರಿಕ್ಷೆ ಮಾಡುವ ಮೂಲಕ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುವ ಗಿಡಗಳನ್ನೇ ನಾಟಿ ಮಾಡಬೇಕು. ಬೀಜದಿಂದ ತಯಾರಿಸಲಾದ ಗಿಡಗಳನ್ನು ನಾಟಿ ಮಾಡುವುದು ಸಮಂಜಸವಲ್ಲ. ಬೇರೆ ಬೇರೆ ತಳಿಯ ಗಿಡಗಳು ಈಗ ಲಭ್ಯವಿರುವುದರಿಂದ ಕೃಷಿಕರು ಮೊದಲು ಗೇರು ಬೀಜದ ಕುರಿತು ತಿಳುವಳಿಕೆ ಪಡೆದುಕೊಳ್ಳಬೇಕು. ಈ ಬಾರಿ ಒಂದು ತಿಂಗಳು ತಡವಾಗಿ ಗೇರು ಮರ ಹೂ ಬಿಟ್ಟಿದ್ದು ಇದಕ್ಕೆ ಪೃಕೃತಿಯ ವೈಪರೀತ್ಯ ಒಂದೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಉತ್ತಮ ತಳಿಯ ಗಿಡಗಳು ತಡವಾಗಿಯಾದರೂ ಚೆನ್ನಾಗಿಯೇ ಹೂ ಬಿಡುತ್ತಿದ್ದು ಎನ್‌ಆರ್‌ಸಿಸಿ ಯಲ್ಲಿ ಬಹುತೇಕ ಗಿಡಗಳು ಹೂಬಿಟ್ಟಿದೆ. ಮಣ್ಣಿನ ಗುಣ, ಗಿಡಗಳ ಆರೈಕೆ, ಗೊಬ್ಬರಗಳ ಬಳಕೆ ಇವೆಲ್ಲವನ್ನೂ ಆದರಿಸಿಕೊಂಡೇ ಗಿಡಗಳು ಬೆಳೆಯುವುದರಿಂದ ಕಾಲ ಕಾಲಕ್ಕೆ ಅವುಗಳಿಗೆ ತಕ್ಕ ಪೋಷಣೆಯನ್ನು ಮಾಡಬೇಕಾಗಿದೆ.
ಗಂಗಾಧರ್ ನಾಯಕ್, ಪ್ರಧಾನ ವಿಜ್ಞಾನಿ ಡಿಸಿಆರ್( ಎನ್‌ಆರ್‌ಸಿಸಿ) ಪುತ್ತೂರು


ಈ ಬಾರಿ ಜಿಲ್ಲೆಯಲ್ಲಿ ಮಳೆ ವಿಪರೀತವಾಗಿರುವ ಕಾರಣ ಗೇರು ಬೀಜ ಉತ್ಪಾದನೆಯಲ್ಲಿ ಇಳುವರಿ ಕಡಿಮೆಯಾಗಿದೆ. ದಕ , ಉಡುಪಿ , ಕಾಸರಗೋಡು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನೂ ಗೇರುಮರಗಳು ಹೂ ಬಿಟ್ಟಿಲ್ಲ. ಮುಂದಿನ ದಿನಗಳಲ್ಲಿ ಹೂ ಬಿಟ್ಟರೂ ಎಪ್ರಿಲ್ , ಕೊನೇ ಅಥವಾ ಮೇ ತಿಂಗಳಲ್ಲಿ ಕೊಯ್ಲು ಆಗುವ ಕಾರಣ ಆ ಸಮಯದಲ್ಲಿ ಮಳೆ ಪ್ರಾರಂಭವಾಗುವ ಕಾರಣ ಬೀಜಗಳು ಗುಣಮಟ್ಟದಿಂದ ಕೂಡಿರುವುದಿಲ್ಲ ಮತ್ತು ಅದಕ್ಕೆ ಸೂಕ್ತ ದರವೂ ಸಿಗುವುದಿಲ್ಲ.
ರವಿರಾಜ್, ಕೆಎಫ್‌ಡಿಸಿ ಅಧಿಕಾರಿ , ಪುತ್ತೂರು

                                                        ಎಳೆ ಗೇರು ಬೀಜಗಳನ್ನು ಬಿಟ್ಟಿರುವ ಗೇರು ಮರ

                                                                        ಇನ್ನೂ ಹೂ ಬಿಡದ ಗೇರು ಮರ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು