ಅಯೋಧ್ಯೆಯಿಂದ ಜೆಎನ್ಯುವರೆಗೆ ಮರುಕಳಿಸುತ್ತಿರುವ ಇತಿಹಾಸ
ಎಲ್.ಕೆ ಅಡ್ವಾಣಿಯವರು ಭಾರತದ ಪ್ರಧಾನ ಮಂತ್ರಿಯಾಗುವ ಅವಕಾಶವನ್ನು ಕಳೆದುಕೊಂಡ ನಿಖರವಾದ ದಿನ ಯಾರಿಗಾದರೂ ನೆನಪಿದೆಯೇ? ನಿಮಗೆ ನೆನಪಿಲ್ಲದಿದ್ದರೆ, ಅದು 6 ಡಿಸೆಂಬರ್ 1992. ಅಂದು ಏನಾಗಿತ್ತೆಂದರೆ ಅಡ್ವಾಣಿಯವರು, ರಾಮನ ಜನ್ಮಸ್ಥಳದ ಮೇಲೆ ನಿಂತಿರುವ ಬಾಬರಿ ಮಸೀದಿಯು ಹಲವು ಶತಮಾನಗಳಿಂದ ಹಿಂದೂ ರಾಷ್ಟ್ರದ ಮೇಲೆ ನಡೆಸಲಾಗುತ್ತಿರುವ ಹಿಂಸಾಚಾರವನ್ನು ಯಾವ ರೀತಿ ಪ್ರತಿಬಿಂಬಿಸುತ್ತದೆ ಎಂಬುದನ್ನು ಅಯೋಧ್ಯೆಯಲ್ಲಿ ಕರಸೇವಕರಿಗೆ ನೆನಪಿಸಿದ್ದರು.
ಆದರೆ ಕರಸೇವಕರಿಗೆ ಕೇವಲ ಮಾತಿನಲ್ಲಿ ಆಸಕ್ತಿಯಿರಲಿಲ್ಲ. ಅವರು ಮಸೀದಿಯ ಸುತ್ತ ನಿಯೋಜಿಸಲಾಗಿದ್ದ ಪೊಲೀಸ್ ಭದ್ರತೆಯನ್ನು ಮುರಿದರು ಮತ್ತು ಪೊಲೀಸರು ಕೂಡಾ ಅವರಿಗೆ ಬೆಂಬಲ ಸೂಚಿಸುವಂತೆ ದಾರಿ ಮಾಡಿಕೊಟ್ಟರು. ನಂತರ ಆ ಗುಂಪು ಬಾಬರಿ ಮಸೀದಿಯ ಮೇಲೆ ದಾಳಿ ನಡೆಸಿ ಒಂದು ಕಲ್ಲು ಕೂಡಾ ನೆಟ್ಟಗೆ ನಿಲ್ಲದಂತೆ ಧ್ವಂಸ ಮಾಡಿದರು. ಈ ಅನಿರೀಕ್ಷಿತ ಘಟನೆಯಿಂದ ಅಡ್ವಾಣಿ ನಿಜವಾಗಿಯೂ ಅಸಮಾಧಾನಗೊಂಡವರಂತೆ ಕಂಡುಬಂದರು. ಕೆಲವರು ಹೇಳುವಂತೆ ಪ್ರಮೋದ್ ಮಹಾಜನ್, ಅಡ್ವಾಣಿಯವರನ್ನು ಗುಂಪಿನಿಂದ ದೂರಗೊಳಿಸಿ ಅವರು ತಂಗಿದ್ದ ಅತಿಥಿಗೃಹಕ್ಕೆ ಕರೆದೊಯ್ದೆಗ ಅಡ್ವಾಣಿಯವರು ಕಣ್ಣೀರಿಡುತ್ತಿದ್ದರು.
ಈ ಘಟನೆ ನಡೆದ ವಾರಗಳು ಮತ್ತು ತಿಂಗಳುಗಳ ಬಳಿಕವೂ ಜಗತ್ತಿನಾದ್ಯಂತ ಆಘಾತ ಮತ್ತು ಟೀಕೆಗಳು ವ್ಯಕ್ತವಾಗುತ್ತಿದ್ದವು. ಭಾರತಾದ್ಯಂತ ದಂಗೆಗಳು, ದೊಂಬಿ, ಹಿಂಸಾಚಾರ ಭುಗಿಲೆದ್ದು ನೂರಾರು ಜನರು ಸಾವಿಗೀಡಾದರು. ನಂತರ ವಿಧಾನಸಭೆ ಚುನಾವಣೆ ನಡೆದಾಗ ಬಿಜೆಪಿ ಆಡಳಿತವಿದ್ದ ರಾಜ್ಯಗಳಲ್ಲಿ ಅದು ಸೋಲುಂಡಿತ್ತು. ಬಾಬರಿ ಮಸೀದಿ ಧ್ವಂಸವು ಅಡ್ವಾಣಿಯ ಹಣೆಬರಹವನ್ನು ಪರಿಣಾಮಕಾರಿಯಾಗಿ ಬದಲಾಯಿಸಿತ್ತು. ಉತ್ತರ ಪ್ರದೇಶದ ಬಿಜೆಪಿ ಸರಕಾರ ವಿಧ್ವಂಸಕರ ಜೊತೆ ರಹಸ್ಯವಾಗಿ ಕೈಜೋಡಿಸಿತ್ತು ಎಂಬುದು ಸ್ಪಷ್ಟವಾಗಿತ್ತು. ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಲಾಗಿದ್ದ ಭರವಸೆ ಪತ್ರವನ್ನು (ಅಂಡರ್ ಟೇಕಿಂಗ್) ಸಂಪೂರ್ಣವಾಗಿ ಉಲ್ಲಂಘಿಸಿದ ಕರಸೇವಕರಿಗೆ ಒಂದು ಕಲ್ಲಿನಿಂದ ನಿರ್ಮಿಸಲ್ಪಟ್ಟ ಬೃಹತ್ ಕಟ್ಟಡವನ್ನು ಧ್ವಂಸಗೊಳಿಸಲು ಅಗತ್ಯವಿರುವ ಸಾಧನಗಳನ್ನು ಕೊಂಡೊಯ್ಯಲು ಬಿಡಲಾಗಿತ್ತು. ಈ ಧ್ವಂಸಗೊಳಿಸುವ ಪ್ರಕ್ರಿಯೆಯನ್ನು ಉತ್ತಮವಾದ ಪೂರ್ವಾಭ್ಯಾಸದೊಂದಿಗೆ ಕರಾರುವಕ್ಕಾಗಿ ನಡೆಸಲಾಗಿತ್ತು. ಅಡ್ವಾಣಿಯವರು ಕೂಡಾ ಮಸೀದಿಯನ್ನು ಧ್ವಂಸಗೊಳಿಸುವ ಪಿತೂರಿಯ ಭಾಗವೇ ಆಗಿದ್ದರು ಎಂದು ಸಿನಿಕರು ಹೇಳುತ್ತಾರೆ. ಅದರರ್ಥ ಅವರು ಪ್ರಧಾನ ಮಂತ್ರಿಯಾಗಲು ಸ್ಪಷ್ಟವಾಗಿ ಅನರ್ಹರಾಗಿದ್ದರು. ನನ್ನಂಥ ಇತರರು, ಅಡ್ವಾಣಿಗೆ ಏನು ಯೋಜನೆ ರೂಪಿಸಲಾಗಿದೆ ಎಂಬ ಕಲ್ಪನೆಯೇ ಇರಲಿಲ್ಲ ಎಂದು ನಂಬಿದ್ದೆವು. ಆದರೆ ಇದು ಒಂದು ಮಹತ್ವದ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಒಬ್ಬ ವ್ಯಕ್ತಿ ರಾಜಕೀಯ ಲಾಭಕ್ಕಾಗಿ ಭಾವನೆಯನ್ನು ಕೆದಕಿ (ಈ ಸಂದರ್ಭದಲ್ಲಿ ಅಡ್ವಾಣಿ) ನಂತರ ಯಾರನ್ನು ಅವರು ಉದ್ರೇಕಿಸಿದ್ದರೋ ಆ ಗುಂಪಿನ ಮೇಲೆಯೇ ನಿಯಂತ್ರಣ ಕಳೆದುಕೊಂಡರೆ ಅಂತಹ ವ್ಯಕ್ತಿಯನ್ನು ನಂಬಲು ಸಾಧ್ಯವೇ?
ಬಹುಶಃ ಎರಡನೆ ಪ್ರಶ್ನೆ ಅಡ್ವಾಣಿಯವರ ಹಣೆಬರಹವನ್ನು ಬದಲಿಸಿತು ಎಂದು ನಾನು ಭಾವಿಸುತ್ತೇನೆ. ಆ ಸಮಯದಲ್ಲಿ ಅವರು ಬಿಜೆಪಿಯ ಅಧಿನಾಯಕರಾಗಿದ್ದರು ಮತ್ತು ಎ.ಬಿ. ವಾಜಪೇಯಿಯವರು ಬದಿಗೆ ತಳ್ಳಲ್ಪಟ್ಟಿದ್ದರು. ಆದರೆ ಧ್ವಂಸ ಘಟನೆ ನಡೆದ ನಂತರದ ವರ್ಷಗಳಲ್ಲಿ ಅಡ್ವಾಣಿಯವರಿಗೆ ಪಕ್ಷದಲ್ಲಿ ಎರಡನೆ ಸ್ಥಾನಕ್ಕೆ ಹಿಂಭಡ್ತಿ ನೀಡಲಾಯಿತು ಮತ್ತು ವಾಜಪೇಯಿಯವರು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದರು-ಈ ಪದವಿಯನ್ನು ಅವರು ಅಂತಿಮವಾಗಿ ಭದ್ರಪಡಿಸಿಕೊಂಡರು. ಜೆಎನ್ಯುನಲ್ಲಿ ನಡೆದ ಘಟನೆಯ ನಂತರ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸುವಾಗ ಅಡ್ವಾಣಿಯವರ ನಾಯಕತ್ವದ ಬಗ್ಗೆ ಎದ್ದಿದ್ದ ಪ್ರಶ್ನೆಗಳು ನನಗೆ ನೆನಪಾದವು ಮತ್ತು ಇತಿಹಾಸ ಹೇಗೆ ತಾನಾಗಿ ಪುನರಾವರ್ತನೆಗೊಳ್ಳುತ್ತದೆ ಎಂಬುದನ್ನು ನಾನು ಗಮನಿಸಿದೆ. ಜೆಎನ್ಯು ಕತೆ ಹೇಗೆ ಸಾಗುತ್ತಿದೆ ಎಂಬುದನ್ನೊಮ್ಮೆ ಗಮನಿಸಿ. ಮೋದಿಯವರು ಬೆಂಬಲಿಸಿದ ಅತಿರೇಕದ ರಾಷ್ಟ್ರವಾದವನ್ನು ತಲೆಯಲ್ಲಿಟ್ಟು ಕನ್ಹಯ್ಯೆ ಕುಮಾರ್ನನ್ನು ಬಂಧಿಸಲಾಯಿತು. ಬಂಧನದ ನಂತರ ಪಕ್ಷವು ತನ್ನ ಪ್ರಮುಖ ನಾಯಕರನ್ನು ಜೆಎನ್ಯು ಪ್ರತಿಭಟನೆಯನ್ನು ಖಂಡಿಸಲು ಕಳುಹಿಸಿತು-ರಾಜ್ನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಮತ್ತು ಸ್ಮತಿ ಇರಾನಿ, ಇವರು ಈ ಚರ್ಚೆಯಲ್ಲಿ ಭಾರತ ಮಾತೆಯನ್ನು ತುರುಕಿಸಿದರು. ನಂತರ ಎಲ್ಲಾ ತಪ್ಪು ಬೆಳವಣಿಗೆಗಳು ನಡೆಯಲು ಆರಂಭಿಸಿದವು. ಮೊದಲನೆಯದಾಗಿ, ಆ ಘೋಷಣೆಗಳು, ಅವುಗಳು ಅಪರಾಧವಾಗಿದ್ದರೂ, ದೇಶದ್ರೋಹ ಎಂದು ಹೇಳುವಷ್ಟರ ಮಟ್ಟಿಗಿರಲಿಲ್ಲ ಅಥವಾ ದೇಶದ್ರೋಹ ಪದದ ಕಾನೂನಾತ್ಮಕ ವಿವರಣೆಗೆ ಸರಿ ಹೊಂದುತ್ತಿರಲಿಲ್ಲ ಮತ್ತು ಎರಡನೆಯದಾಗಿ, ಈ ಘೋಷಣೆಗಳನ್ನು ಕೂಗುವುದು ದೇಶದ್ರೋಹ ಎಂದು ಪರಿಗಣಿಸಿದರೂ ಪೊಲೀಸರು ಬಂಧಿಸಿದ್ದು ‘ತಪ್ಪಾದ’ ವ್ಯಕ್ತಿಯನ್ನು. ಈ ಸಂಶಯಗಳನ್ನು ಪರಿಹರಿಸಲು ನಾವು ಪ್ರಯತ್ನಿಸುತ್ತಿರುವಾಗಲೇ ರಾಜ್ನಾಥ್ ಸಿಂಗ್ ಅವರು ಈ ಪ್ರತಿಭಟನೆಗೆ ಹಫೀಜ್ ಸಯೀದ್ ಸಂಪರ್ಕವಿದೆ ಎಂದು ಘೋಷಿಸಿಬಿಟ್ಟರು. ನಂತರ ಅದು ಹಫೀಜ್ ಸಯೀದ್ನ ಹೆಸರಲ್ಲಿ ಸೃಷ್ಟಿಸಲಾಗಿದ್ದ ನಕಲಿ ಟ್ವಿಟರ್ ಖಾತೆಯಲ್ಲಿ ಹಾಕಲಾಗಿದ್ದ ಬರಹವನ್ನು ಆಧರಿಸಿ ನೀಡಿದ್ದ ಹೇಳಿಕೆ ಎಂದು ತಿಳಿದುಬಂತು. ಗೃಹ ಮಂತ್ರಿಗಳಿಗೆ ನಿಜವಾದ ಭಯೋತ್ಪಾದಕ ಮತ್ತು ಓರ್ವ ಜೋಕರ್ ಮಧ್ಯೆಯಿರುವ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಕನ್ಹಯ್ಯಾ ಬಂಧನದ ಮೂರನೆ ದಿನ ಪಟಿಯಾಲಾ ನ್ಯಾಯಾಲಯದ ಆವರಣದಲ್ಲಿ ಬಿಜೆಪಿ ಅಭಿಮಾನಿ ವಕೀಲರ ಗುಂಪೊಂದು, ಪತ್ರಕರ್ತರು, ಜೆಎನ್ಯು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಮೇಲೆ ಹಲ್ಲೆ ನಡೆಸುವ ಮೂಲಕ ಪರಿಸ್ಥಿತಿ ಗಣನೀಯವಾಗಿ ಕೆಟ್ಟು ಹೋಯಿತು. ದಿಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಲು ನಿರಾಕರಿಸಿದರು. ಬಹುತೇಕ ಇದೇ ಸಮಯಕ್ಕೆ ಬಿಜೆಪಿಯ ಶಾಸಕನೊಬ್ಬ ನ್ಯಾಯಾಲಯದ ಕೋಣೆಯ ಹೊರಗೆ ಪ್ರತಿಭಟನಾಕಾರನೊಬ್ಬನಿಗೆ ಥಳಿಸುತ್ತಿರುವ ದೃಶ್ಯವನ್ನು ಕ್ಯಾಮರಾ ಸೆರೆಹಿಡಿದಿತ್ತು. ನಂತರ ಆತ ತನ್ನ ತಪ್ಪನ್ನು ಮರೆಮಾಚಲು, ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗುವ ಯಾರೇ ಆದರೂ ಅವರನ್ನು ಗುಂಡಿಕ್ಕಿ ಹತ್ಯೆ ಮಾಡುವುದಾಗಿ ಹೇಳಿಕೆಯನ್ನು ನೀಡಿದ. ಬಿಜೆಪಿ ಇದನ್ನು ನಾಚಿಕೆಯಿಲ್ಲದೆ ಒಪ್ಪಿಕೊಂಡಿತು. ನಾನು ಕೂಡಾ ಭಾಗವಾಗಿದ್ದ ಒಂದು ಟಿವಿ ಕಾರ್ಯಕ್ರಮದಲ್ಲಿ ಬಿಜೆಪಿಯ ವಕ್ತಾರ ಆ ಶಾಸಕನ ಹೇಳಿಕೆಯನ್ನು ಸಮರ್ಥಿಸುತ್ತಾ ಅದು ಬಿಜೆಪಿಯ ತೀರ್ಮಾನ ಕೂಡಾ ಹೌದು ಎಂದು ಹೇಳಿದ.
ಎರಡು ದಿನಗಳ ನಂತರ, ವಕೀಲರು ಮತ್ತಷ್ಟು ಹಿಂಸಾಚಾರ ನಡೆಸುವ ಬೆದರಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಒಡ್ಡಿದ್ದರೂ ದಿಲ್ಲಿ ಪೊಲೀಸರು ಮಾತ್ರ ವಕೀಲರು ಕನ್ಹಯ್ಯಿನ ಮೇಲೆ ನ್ಯಾಯಾಲಯದಲ್ಲಿ ಹಲ್ಲೆ ನಡೆಸುವುದನ್ನು ತಡೆಯಲು ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ಸರ್ವೋಚ್ಚ ನ್ಯಾಯಾಲಯವು ಪಟಿಯಾಲಾ ನ್ಯಾಯಾಲಯಕ್ಕೆ ಒಂದು ನಿಯೋಗವನ್ನು ಕಳುಹಿಸಿತು ಮತ್ತು ಪೊಲೀಸರು ವಕೀಲರ ಜೊತೆ ರಹಸ್ಯವಾಗಿ ಕೈಜೋಡಿಸಿದ್ದಾರೆ ಎಂದು ಆ ನಿಯೋಗ ವರದಿ ನೀಡಿತು. ಇದಕ್ಕಿಂತ ಕೆಟ್ಟದಾಗಲು ಸಾಧ್ಯವಿಲ್ಲ ಎಂದು ನಾವು ಯೋಚಿಸುತ್ತಿರುವಾಗಲೇ, ಬಿಜೆಪಿಯ ವಕ್ತಾರರು ಒಂದು ಚಾನೆಲ್ ನಿಂದ ಮತ್ತೊಂದು ಚಾನೆಲ್ಗೆ ಹೋಗುತ್ತಾ ಕನ್ಹಯ್ಯಾ ದೇಶ ವಿರೋಧಿ ಘೋಷಣೆಗಳನ್ನು ಕೂಗುವ ದೃಶ್ಯಗಳುಳ್ಳ ವೀಡಿಯೊ ತುಣುಕನ್ನು ಪ್ರದರ್ಶಿಸುತ್ತಾ ಹೋದರು. ಬಿಜೆಪಿಯ ಮಾಧ್ಯಮ/ಮಾಹಿತಿ ತಂತ್ರಜ್ಞಾನ ವಿಭಾಗ ಕೂಡಾ ಇದೇ ವೀಡಿಯೊವನ್ನು ಪ್ರದರ್ಶಿಸಿತು. ಆದರೆ ಆ ವೀಡಿಯೊ ಸುಳ್ಳು ಎಂಬುದು ನಮಗೀಗ ತಿಳಿದಿದೆ. ಈ ವೀಡಿಯೊವನ್ನು ಎರಡು ಭಿನ್ನ ವೀಡಿಯೊ ತುಣುಕುಗಳನ್ನು ಜೋಡಿಸಿ ರಚಿಸಲಾಗಿದೆ ಎಂದು ವಿಧಿವಿಜ್ಞಾನ ತಜ್ಞರು ಸಾಬೀತುಪಡಿಸಿದ್ದಾರೆ. ಈ ವೀಡಿಯೊವನ್ನು ಜೋಡಿಸಿದವರು ಯಾರು ಎಂಬುದು ನಮಗೆ ತಿಳಿದಿಲ್ಲ, ಆದರೆ ಅದನ್ನು ಯಾರು ಪ್ರಸಾರ ಮಾಡಿದ್ದಾರೆ ಎಂಬುದು ತಿಳಿದಿದೆ. ಇವೆಲ್ಲದರ ಮಧ್ಯೆ ಪ್ರಧಾನ ಮಂತ್ರಿಯವರು ವೌನವಾಗುಳಿದಿದ್ದರು. ದೇಶದ ಟ್ವಿಟರ್ನ ಮುಖ್ಯಸ್ಥ ಮೋದಿ ತಮ್ಮ ಸ್ಮಾರ್ಟ್ ಪೋನ್ದೂರವಿಟ್ಟಿದ್ದರು ಮತ್ತು ಯಾವುದೇ ಹೇಳಿಕೆ ನೀಡುವ ಗೋಜಿಗೆ ಹೋಗಲಿಲ್ಲ. ದಿಲ್ಲಿ ಪೊಲೀಸ್ ಮುಖ್ಯಸ್ಥ ತನ್ನ ಪಡೆಯ ಭ್ರಷ್ಟತೆಯನ್ನು ಕಂಡು ಒಂದಿನಿತೂ ವಿಚಲಿತಗೊಳ್ಳಲಿಲ್ಲ. ಹಾಗಾಗಿ ಅಯೋಧ್ಯೆ ಪ್ರಕರಣ ನಡೆದು 25 ವರ್ಷಗಳ ನಂತರ ಜನರು ಅಂದು ಅಡ್ವಾಣಿಯವರಲ್ಲಿ ಕೇಳಿದ್ದ ಅದೇ ಪ್ರಶ್ನೆಯನ್ನು ಮೋದಿಯವರಲ್ಲಿ ಕೇಳುತ್ತಿದ್ದಾರೆ. ಈ ಹೊಲಸು ಕಥೆಯಲ್ಲಿ ನೀವು ಯಾವ ರೀತಿ ಭಾಗಿಯಾಗಿದ್ದೀರಿ? ಕನ್ಹಯ್ಯಾನನ್ನು ಈ ಪ್ರಕರಣದಲ್ಲಿ ಸಿಲುಕಿಸುವ, ಮುಗ್ಧರ ಮೇಲೆ ಹಲ್ಲೆ ನಡೆಸುವ ಮತ್ತು ಕತ್ತರಿಪ್ರಯೋಗ ಮಾಡಲ್ಪಟ್ಟ ವೀಡಿಯೊದ ಬಗ್ಗೆ ನಿಮಗೆ ತಿಳಿದಿತ್ತೇ? ನನ್ನ ಅನಿಸಿಕೆಯ ಪ್ರಕಾರ ಮೋದಿಗೆ ಈ ಬಗ್ಗೆ ತಿಳಿದಿರಲಿಲ್ಲ. ಇದೆಲ್ಲವೂ ನಡೆದಿದ್ದು ಅವರ ಅತ್ಯಮೂಲ್ಯ ಮೇಕ್ ಇನ್ ಇಂಡಿಯಾ ಆಚರಣೆಯ ಸಮಯದಲ್ಲಿ ಮತ್ತು ಈ ಘಟನೆ ಆ ಆಚರಣೆಯನ್ನು ಸಂಪೂರ್ಣವಾಗಿ ಮರೆಮಾಡಿತು.
ಜಾಗತಿಕ ಮಾಧ್ಯಮಗಳು ಭಾರತದ ಸ್ಥಿರತೆ, ನ್ಯಾಯ ಮತ್ತು ಕಾನೂನನ್ನು ಉಲ್ಲೇಖಿಸುವ ಬದಲು ನಮ್ಮ ಪೊಲೀಸರನ್ನು ಬಳಸಿಕೊಂಡ ರೀತಿ ಮತ್ತು ನ್ಯಾಯಾಲಯದ ಹೊರಗೆ ನಡೆದ ಘರ್ಷಣೆಯ ಸಿನಿಕತನದ ಮೇಲೆ ಹೆಚ್ಚು ಬೆಳಕು ಚೆಲ್ಲಿದವು. ಅಡ್ವಾಣಿಯವರಂತೆ ಓರ್ವ ಮುತ್ಸದ್ದಿಯಾಗಲು ಬಯಸುವ ಮೋದಿಗೆ ಇದರಿಂದ ಲಾಭವಾಗುವುದೇನೂ ಇಲ್ಲ ಬದಲಿಗೆ ಅವರು ಕಳೆದುಕೊಳ್ಳುವುದೇ ಹೆಚ್ಚು. ಜನರು ಎರಡನೆ ಪ್ರಶ್ನೆಯನ್ನೂ ಕೇಳುತ್ತಿದ್ದಾರೆ: ಈ ರೀತಿಯ ಭಾವತೀವ್ರತೆಯನ್ನು ಉಂಟುಮಾಡಿದವರು ನೀವೇ ಆದ ಕಾರಣ, ಈಗ ನೀವೇ ಸೃಷ್ಟಿಸಿದ ಗುಂಪಿನ ಮೇಲಿನ ನಿಯಂತ್ರಣವನ್ನು ನೀವು ಕಳೆದುಕೊಂಡಿದ್ದೀರಾ? ದಾಂಧಲೆ ನಡೆಸಿದ, ಭಾರತ ಮಾತೆ ಎಂದು ಪಠಿಸುವ ವಕೀಲರನ್ನು ನಿಯಂತ್ರಿಸಲು ನಿಮ್ಮಿಂದ ಸಾಧ್ಯವಾಗಲಿಲ್ಲವೇ? ನಿಮ್ಮ ಪ್ರೀತಿಯ ಟ್ವಿಟರ್ ರಾಕ್ಷಸರು ನಿಮ್ಮ ಮಾತನ್ನು ಕೇಳುವುದನ್ನು ನಿಲ್ಲಿಸಿದರೇ? ನಿಮ್ಮ ಐಟಿ ಮಂದಿ ನಿಮ್ಮಲ್ಲಿ ಒಂದು ಮಾತನ್ನೂ ಕೇಳದೆ ನಕಲಿ ವೀಡಿಯೊಗಳನ್ನು ಸೃಷ್ಟಿಸಲು ಆರಂಭಿಸಿದರೇ? ನೀವು ಏನನ್ನು ಹೇಳಲು ಬಯಸುತ್ತೀರಿ ಎಂಬ ಬಗ್ಗೆ ಸ್ವಲ್ಪ ಕೂಡಾ ತಲೆಕೆಡಿಸಿಕೊಳ್ಳದೆ ನಿಮ್ಮ ವಕ್ತಾರರು ಸುದ್ದಿ ಮಾಧ್ಯಮಗಳಲ್ಲಿ ಲಜ್ಜೆಗೆಟ್ಟ ಹಲ್ಲೆಗಳನ್ನು ಸಮರ್ಥಿಸುತ್ತಾ ಹೋಗುತ್ತಿದ್ದಾರೆಯೇ? ಒಂದು ಹಂತದಲ್ಲಿ ಮೋದಿಯವರು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಅವರು 2002ರ ಹಿಂಸೆಯ ನೆನಪನ್ನು ಅಳಿಸಲು ಉತ್ಸಾಹಿತರಾಗಿದ್ದಾರೆ. ಆದರೆ ಹಾಗೆ ಮಾಡಲು ಮತ್ತು ತಾನೊಬ್ಬ ಮುತ್ಸದ್ದಿ ಎಂದು ಕರೆಸಿಕೊಳ್ಳಲು ಅವರು ತಾನೇ ಸೃಷ್ಟಿಸಿರುವ ಭಾವೋದ್ರೇಕತೆಯನ್ನು ಮತ್ತು ತನಗೆ ಪ್ರಾಮಾಣಿಕತೆಯನ್ನು ಮುಡಿಪಾಗಿಟ್ಟಿರುವ ಗುಂಪನ್ನು ನಿಯಂತ್ರಿಸಬಲ್ಲೆ ಎಂಬುದನ್ನು ತೋರಿಸಬೇಕು. ಅವರು ಹಾಗೆ ಮಾಡಲು ವಿಫಲವಾದರೆ ಇದು ನರೇಂದ್ರ ಮೋದಿಯವರ ರಾಜಕೀಯ ಜೀವನಕ್ಕೆ ಮುಳುವಾಗುವುದರಲ್ಲಿ ಸಂಶಯವಿಲ್ಲ.