ಅವಳ ಹೆಜ್ಜೆಯ ಹಾದಿಯನ್ನು ಬೆನ್ನು ಹತ್ತಿ....
ಸಮಕಾಲೀನ ಕರ್ನಾಟಕದ ದಲಿತ ಚಳವಳಿಯ ಮುಂಚೂಣಿಯ ನಾಯಕರಲ್ಲಿ ಇಂದಿರಾ ಕೃಷ್ಣಪ್ಪ ಮುಖ್ಯವಾಗಿದ್ದಾರೆ. ದಲಿತ ಚಳವಳಿ, ಮಹಿಳಾ ಚಳವಳಿ ಹೀಗೆ ಎರಡೂ ನೆಲೆಗಳಲ್ಲಿ ಕೆಲಸ ಮಾಡುತ್ತ ಕನ್ನಡ ನಾಡಿನ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ‘ಅವಳ ಹೆಜ್ಜೆಯ ಹಾದಿ ಹಿಡಿದು’ ಇಂದಿರಾ ಕೃಷ್ಣಪ್ಪ ಅವರ ಬರಹಗಳ ಸಂಕಲನ. ಸಾಧಕ ಮಹಿಳೆಯರ ಹೋರಾಟಗಳು, ಸಂಕಟಗಳು ಮತ್ತು ಬಿಕ್ಕಟ್ಟುಗಳ ಕುರಿತಂತೆ ಇಲ್ಲಿರುವ ಬರಹಗಳು ಮಾತನಾ ಡುತ್ತವೆ. ಅವರ ಬದುಕಿನ ಅನುಭವದ ಸಾರವೇ ಇಲ್ಲಿನ ಲೇಖನದ ಆತ್ಮವಾಗಿದೆ. ಅಕಾಡೆಮಿಕ್ ಆದ ಅಧ್ಯಯನಗಳಿಗಿಂತ ಜೀವನಾನುಭವವೇ ಇಲ್ಲಿನ ಬರಹಗಳನ್ನು ಬರೆಸಿದೆ. ಸ್ತ್ರೀ ಸಾಧನೆಯ ಹೆಜ್ಜೆ ಗುರುತುಗಳನ್ನು ಎಣಿಸುವ ‘ಸಾವಿರ ತೊರೆಗಳ ಸ್ವಾತಂತ್ರ ಸಾಗರ’, ಹೆಣ್ಣು ಭ್ರೂಣ ಹತ್ಯೆಯ ಕ್ರೌರ್ಯವನ್ನು ತೆರೆದಿಡುವ ‘ಮಾನವರ ಕಣ್ಣಾಗ ನಾವು ಉರಿದ್ಯಾವ’, ಮಾರಾಟದ ಸರಕಾಗುತ್ತಿರುವ ಹೆಣ್ಣಿನ ವಾಸ್ತವ ನೆಲೆಗಳನ್ನು ಶೋಧಿಸುವ ‘ಜಾಹಿರಾತು ಜಾಲ’, ಕಾನೂನುಗಳಿದ್ದರೂ ಅದರ ಪ್ರಯೋಜನ ಪಡೆಯಲು ಅಸಹಾಯಕಳಾಗಿರುವ ಹೆಣ್ಣಿನ ಬಗ್ಗೆ ತಿಳಿಸುವ ‘ಮಹಿಳೆಯರಿಗೆ ಕಾನೂನು ರಕ್ಷಣೆ’, ಕನ್ನಡ ಕಟ್ಟಿ ಬೆಳೆಸಿದವರ ಕಡೆಗೆ ಬೆಳಕು ಚೆಲ್ಲುವ ‘ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದವರು’ ಇಲ್ಲಿರುವ ಪ್ರಮುಖ ಬರಹಗಳಾಗಿವೆ.
ಸರಳ, ನೇರ ಭಾಷೆ ಈ ಬರಹಗಳ ಹೆಗ್ಗಳಿಕೆ. ದಲಿತ ಹಾಗೂ ಮಹಿಳಾ ಕಾಳಜಿಯಿರುವವರೆಲ್ಲಅಗತ್ಯವಾಗಿ ಓದಬಹುದಾದ ಕೃತಿ ಇದು. ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ ಹೊರತಂದಿರುವ ಕೃತಿಯ ಮುಖಬೆಲೆ 115 ರೂ. ಆಸಕ್ತರು 97390 32600ಯನ್ನು ಸಂಪರ್ಕಿಸಬಹುದು.