ಕೃತಿಯಿಂದ ಚರ್ಚೆ ಹುಟ್ಟುವಂತಾಗಲಿ: ಕುನಾಲ್ ಬಸು
ಮಂಗಳೂರು,ಫೆ.24: ಕೃತಿಯಿಂದ ಸಾರ್ವಜನಿಕವಾಗಿ ಚರ್ಚೆ ಹುಟ್ಟಿದಾಗ ಅದು ಮಹತ್ವ ಪಡೆದುಕೊಳ್ಳುತ್ತದೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಲೇಖಕ ಡಾ.ಕುನಾಲ್ ಬಸು ಅಭಿಪ್ರಾಯಪಟ್ಟಿದ್ದಾರೆ.
ಇದೇ ಮೊದಲ ಬಾರಿಗೆ ಬುಧವಾರ ಮಂಗಳೂರಿಗೆ ಆಗಮಿಸಿರುವ ಅವರು ಸಂತ ಅಲೋಶಿಯಸ್ ಕಾಲೇಜಿನ ಆಂಗ್ಲ ವಿಭಾಗ ಹಮ್ಮಿಕೊಂಡ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಕೋಲ್ಕತ್ತ ನಗರದ ಮಾದಕ ದ್ರವ್ಯ ಮಾರಾಟ, ಭೂಗತಲೋಕದ ಪಾತ್ರಗಳನ್ನು ಹೊಂದಿರುವ ತನ್ನ ಹೊಚ್ಚ ಹೊಸ ಕೃತಿ ‘ಕಲ್ಕತ್ತ’ ಈ ರೀತಿಯ ಸಂವಾದಕ್ಕೆ ಅವಕಾಶ ನೀಡಿದೆ ಎಂದು ಇಂಗ್ಲೆಂಡಿನಲ್ಲಿ ನೆಲೆಸಿರುವ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಕೂಡ ಆಗಿರುವ ಬಸು ಹೇಳಿದರು.
ಈ ಕೃತಿಯು ತನ್ನ ಆರಾಮದಾಯಕ ಜೀವನ ಶೈಲಿಯನ್ನು ಬಿಟ್ಟು, ಪಾತ್ರಗಳನ್ನು ಹುಡುಕಿ ಬರೆದ ಕೃತಿಯಾಗಿದೆ. ಬಾಂಗ್ಲಾ ವಲಸಿಗರು ಸೇರಿದಂತೆ ಉತ್ತರ ಪ್ರದೇಶದ ಹಲವಾರು ರಾಜ್ಯಗಳ ವಲಸಿಗರಿಗೆ ಮನೆಯಾಗಿರುವ ಕೊಲ್ಕತ್ತಾದ ನಗರದೊಳಗಿನ ನಿಗೂಢ ಲೋಕವನ್ನು ಪಾನ್ ಮ್ಯಾಕ್ಮಿಲನ್ ಪ್ರಕಾಶನ ಮಾಡಿರುವ ಈ ಕೃತಿಯಲ್ಲಿ ತೆರೆದಿಡಲಾಗಿದೆ ಎಂದರು.
ದೇಶದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಹೆಮ್ಮೆಯ ದೇಶದಲ್ಲಿ ಸಹಿಷ್ಣುತೆಯೂ ಇದೆ, ಅಸಹಿಷ್ಣುತೆಯು ಇದೆ ಎಂದು ನುಡಿದರು. ದಿಲ್ಲಿಯ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ವಿರುದ್ಧ ರಾಜಕೀಯ ಪ್ರಹಾರ ನಡೆಸಿರುವುದು ಸರಿಯಲ್ಲ. ಇದು ಯುವಜನತೆಯ ಉತ್ಸಾಹವನ್ನು ಕುಗ್ಗಿಸುತ್ತದೆ ಎಂದರು.
ಸಂತ ಅಲೋಶಿಯಸ್ ಕಾಲೇಜಿನ ಪ್ರಾಚಾರ್ಯ ರೆ.ಫಾ.ಸ್ವೀಬರ್ಟ್ ಡಿಸಿಲ್ವ, ಆಂಗ್ಲ ವಿಭಾಗದ ಮುಖ್ಯಸ್ಥ ಡಾ.ಲೂರ್ಡ್ ಸ್ವಾಮಿ, ಪಾನ್ಮ್ಯಾಕ್ ಮಿಲನ್ ಪ್ರಕಾಶನ ಸಂಸ್ಥೆಯ ಭಾರತ ಪ್ರತಿನಿಧಿ ವಸಂತ್ ಕಾಮತ್ ಉಪಸ್ಥಿತರಿದ್ದರು.