‘ವಿದ್ಯಾ ದೇಗುಲಗಳಾದ ವಿಶ್ವವಿದ್ಯಾನಿಲಯಗಳನ್ನು ತಮ್ಮ ಸಂಘಟನೆಯ ಕೇಂದ್ರಗಳನ್ನಾಗಿ ಮಾಡಲು ಹೊರಟಿದ್ದಾರೆ’
ದೇಶ ದ್ರೋಹದ ಈ ದುರುಪಯೋಗ ಎಲ್ಲಿಯವರೆಗೆ? ದೇಶದ್ರೋಹವನ್ನು ಆರೋಪಿಸುತ್ತಿರುವವರು ಯಾರು? ಇವರ ಪಕ್ಷ ಮತ್ತು ಸಂಘಟನೆಯಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬಲಿದಾನ ಮಾಡಿದವರು ಯಾರಾದರೂ ಇದ್ದಾರೆಯೇ? ಇಂದಿಗೂ ನಾಥುರಾಮ್‌ಗೋಡ್ಸೆಯವರನ್ನು ಬಹಿರಂಗವಾಗಿ ಬೆಂಬಲಿಸುವ ಆರಾಧಿಸುವವರು ದೇಶಭಕ್ತರಾಗಲು ಸಾಧ್ಯವೇ? ದೇಶದ ಸಹಬಾಂಧವರೇ ಆದ ದಲಿತರು ಅಲ್ಪಸಂಖ್ಯಾತರರನ್ನು ವಿರೋಧಿಸುವ, ಅವರ ಸಾಮಾಜಿಕ ಆರ್ಥಿಕ ಪ್ರಗತಿಯನ್ನು ಬಯಸದ ಅವರನ್ನು ಇಂದಿಗೂ ಹೀನಾಯ ಮತ್ತು ಗುಲಾಮ ಸಂಸ್ಕೃತಿಯಲ್ಲಿ ಇಡಲು ಬಯಸುವ ಇವರು ಇಡೀ ಅಖಂಡ ಭಾರತದ ಪ್ರತಿನಿಧಿಗಳೇ?
ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿ ಈಗ ಎಬಿವಿಪಿ ಮತ್ತು ಬಿಜೆಪಿಯವರೇ ಇಡೀ ವಿಶ್ವವಿದ್ಯಾನಿಲಯ ದೇಶದ್ರೋಹಿ ಎಂದರೆ ಏನರ್ಥ ‘ಕಳ್ಳನೇ ಪೊಲೀಸನನ್ನು ಗದರಿಸಿದಂತೆ’. ಈ ದೇಶ ಯಾರದು, 125 ಕೋಟಿ ಭಾರತೀಯರದ್ದು. ದೇಶದ ಜನತೆಯ ಕಲ್ಯಾಣಕ್ಕಾಗಿ ಇವರಿಗೆ ಪ್ರಚಂಡ ಬಹುಮತ ನೀಡಿದರೆ ಮಾಡುತ್ತಿರುವುದಾದರೂ ಏನು? ಬಡಜನತೆಗೆ ಸೂರು (ಮನೆ) ಇಲ್ಲ, ಯುವಕರಿಗೆ ಉದ್ಯೋಗ ಇಲ್ಲ. ವಿದ್ಯಾರ್ಥಿಗಳಿಗೆ ವಿದ್ಯಾ ದೇಗುಲಗಳಾದ ವಿಶ್ವವಿದ್ಯಾನಿಲಯಗಳನ್ನು ತಮ್ಮ ಸಂಘಟನೆಯ ಕೇಂದ್ರಗಳನ್ನಾಗಿ ಮಾಡಲು ಹೊರಟಿದ್ದಾರೆ. ಪರೋಕ್ಷವಾಗಿ ಎಬಿವಿಪಿಯ ಕಾರ್ಯಾಲಯಗಳನ್ನು ಮಾಡಲು ಹೊರಟಿದ್ದಾರೆ.
ವಿದ್ಯಾರ್ಥಿಗಳ ಬವಣೆ ಕೇಳತೀರದು. ವಿಶ್ವವಿದ್ಯಾನಿಲಯಗಳು ಅವರ ಪಾಲಿಗೆ ಭೂಮಿಯ ಮೇಲಿನ ನರಕಗಳಾಗುತ್ತಿವೆ. ಇದರ ಬಲಿಪಶುವೇ ದಿವಂಗತ ಸಹೋದರ ರೋಹಿತ ವೇಮಲಾ.ಅವನ ಜೀವನದಲ್ಲಿ ವಿಶ್ವವಿದ್ಯಾನಿಲಯದಲ್ಲಿ ಅನುಭವಿಸಿದ ಕಹಿ ಸಂಗತಿಗಳ ದುಃಖದಾಯಕ ಸಾವಿನ ಪತ್ರದಲ್ಲೂ ಇವರಿಗೆ ಕಂಡದ್ದೇನು? ರೋಹಿತ ವೇಮಲಾನ ಜಾತಿ, ದಲಿತರ ಮೇಲಿನ ಆಕ್ರಮಣಗಳು, ದೌರ್ಜನ್ಯಗಳು ಎರಡು ವರ್ಷದಲ್ಲಿ ದುಪ್ಪಟ್ಟು ಆಗಿವೆ. ದಾದ್ರಿಯಂತಹ ಹೃದಯ ವಿದ್ರಾವಕ ಘಟನೆಗಳು ಲೆಕ್ಕಕ್ಕೆ ಇಲ್ಲ. ಇಡೀ ದೇಶ ನಮ್ಮೆಲ್ಲರಿಗಾಗಿ ಇದೆ ಅದರಲ್ಲೂ ದೇಶದ ಮೇಲೆ ಮೊದಲ ಹಕ್ಕು ಬಡವರದ್ದು ಮತ್ತು ನಿರುದ್ಯೋಗಿಗಳದ್ದು. ದೇಶದ ಮೊದಲ ಆದ್ಯತೆ ಇವರ ಸಮಸ್ಯೆಗಳ ನಿವಾರಣೆ. ಇದನ್ನು ಬಿಟ್ಟು ಕೇವಲ ಕೆಲವು ಸಂಘಟನೆಗಳು ಮತ್ತ್ತು ಕೆಲವೇ ಕೆಲವು ಉದ್ಯಮಪತಿಗಳ ದಾಸರಂತೆ ಇಡೀ ಸರಕಾರ ಕೆಲಸ ಮಾಡಹತ್ತಿದಾಗ ಆಗ ಸಹಜವಾಗಿ ವಿದ್ಯಾರ್ಥಿಗಳು ತಾರತಮ್ಯದ ವಿರುದ್ಧ ದೇಶದ ಆಡಳಿತವನ್ನು ಪ್ರಶ್ನಿಸತೊಡಗಿದರು. ಭಾರತೀಯರ ಬದುಕಿನ ಅವಿಭಾಜ್ಯ ಅಂಗವಾಗಿರುವ ಸಂವಿಧಾನವನ್ನು ತಿರುಚುವುದನ್ನು ವಿರೋಧಿಸಿದರು. ಸಂವಿಧಾನವೇ ನಮ್ಮ ದೇಶದ ಧರ್ಮಗ್ರಂಥ ಅದಕ್ಕಿಂತ ಪವಿತ್ರವಾದುದು ಯಾವುದೂ ಇಲ್ಲ ಎಂದು ಜಾತ್ಯತೀತತೆಯನ್ನು ಎತ್ತಿ ಹಿಡಿದರು. ಅಲ್ಲಿಂದಲೇ ಶುರುವಾಯಿತು ಎಬಿವಿಪಿಯೇತರ ವಿದ್ಯಾರ್ಥಿಗಳ ಮೇಲೆ ಕೇಂದ್ರದ ವಕ್ರದೃಷ್ಟಿ.
vs ಬಿಜೆಪಿಯೇತರ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಹೆಚ್ಚಾಗತೊಡಗಿತು. ಆಗ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿಗಳು ಡಾ.ಬಾಬಾ ಸಾಹೇಬ ಅಂಬೇಡ್ಕರ್‌ರವರ ತತ್ವ ಮತ್ತು ಆದರ್ಶಗಳಿಗೆ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಮಾರು ಹೋದರು. ಇನ್ನೇನು ಕೇಳಬೇಕು ಮೊದಲೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರ ತತ್ವಗಳನ್ನು ವಿರೋಧಿಸುವ ಸಂಘಟನೆಗಳು ಬಿಜೆಪಿಯೇತರ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಹೆಚ್ಚು ಮಾಡಿದವು. ಹೆಚ್ಚೂ ಕಡಿಮೆ ಬಿಜೆಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ತತ್ವಗಳ ನಡುವೆ ಸಂಘರ್ಷ ಶುರು ಆಯಿತು. ಮೊದಲು ಮೀಸಲಾತಿ ಕೊನೆಗೊಳಿಸುವ ಬೆದರಿಕೆ ಹಾಕಲಾಯಿತು. ಅದಕ್ಕೆ ಬಿಹಾರ ಚುನಾವಣೆಯಲ್ಲಿ ಹಾಗೂ ಇನ್ನಿತರ ಚುನಾವಣೆಗಳಲ್ಲಿ ಸ್ಪಷ್ಟ ಉತ್ತರ ಕೊಟ್ಟಾಗ ಹೆದರಿದ ಬಿಜೆಪಿ ತನ್ನ ರಾಗ ಬದಲಿಸಿತು.
ಜಾತ್ಯತೀತ ಮನೋಧರ್ಮದ ಪಕ್ಷ ಮತ್ತು ಸಂಘಟನೆಗಳು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನಮ್ಮ ಆದರ್ಶ ಹಾಗೂ ವಿಧಾನವೇ ನಮ್ಮ ದೇಶದ ಪವಿತ್ರ ಧರ್ಮಗ್ರಂಥ ಎಂದು ಹೋರಾಟದ ಮೂಲಕ ಎಚ್ಚರಿಸಿದವು. ಹೀಗಾಗಿ ಕೇಂದ್ರ ಸರಕಾರ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶ ಪಾಲಿಸುವವರನ್ನು ಯಾವುದಾದರೂ ಮಾರ್ಗದಿಂದ ಬಗ್ಗು ಬಡಿಯಲೇಬೇಕೆಂದು ಹಠ ತೊಟ್ಟಿದೆ. ದೇಶದಲ್ಲಿರುವ ಕಠೋರಕ್ಕಿಂತಲೂ ಕಠೋರವಾದ ಕಾನೂನುಗಳನ್ನು ವಿದ್ಯಾರ್ಥಿಗಳ ವಿರುದ್ಧ ಪ್ರಯೋಗಿಸುತ್ತಿದೆ. ನಕಲಿ ಎನ್‌ಕೌಂಟರಗಳ ಮಾದರಿಯಲ್ಲಿ ವಿಶ್ವವಿದ್ಯಾನಿಲಯದಲ್ಲಿ ದೇಶ ದ್ರೋಹದ ಸನ್ನಿವೇಶಗಳನ್ನು ಸೃಷ್ಟಿ ಮಾಡುತ್ತಿದೆ. ಇದಕ್ಕೆ ಕೆಲವು ಮಾಧ್ಯಮಗಳೂ ಸಾಥ್ ನೀಡುತ್ತಿವೆ. ಇನ್ನೇನು ಬೇಕು, ದೇಶ ಬೆಳಗಬೇಕಾದ ವಿದ್ಯಾರ್ಥಿಗಳ ಜೀವನ ನರಕವಾಗುತ್ತಿದೆ. ರಾಜಕೀಯ ವಿರೋಧಿಗಳು ಹಾಗೂ ಬಿಜೆಪಿಗೆ ಬೇಡವಾದವರೆಲ್ಲ ದೇಶದ್ರೋಹದ ಆರೋಪ ಹೊರಬೇಕಾಗಿದೆ.
ಸಾದ್ವಿ ಪ್ರಾಚ್ವಿ, ಸ್ವಾಮಿ ಯೋಗಿತ್ಯಾನಂದ ಮತ್ತು ಸಾಕ್ಷಿ ಮಹಾರಾಜ್..... ಇಂತಹ ಹಲವಾರು ನಾಯಕರು ಪದೇ ಪದೇ, ‘‘ಮಾಂಸ ತಿನ್ನುವುದಿದ್ದರೆ ಪಾಕಿಸ್ತಾನಕ್ಕೆ ಹೋಗಿ’’ ‘‘.....ಹೀಗಿದ್ದರೆ ಪಾಕಿಸ್ತಾನಕ್ಕೆ ಹೋಗಿ... ’’ ಎಂದು ತಮಗೆ ಅನುಕೂಲ ಇರದವರೆಲ್ಲವರನ್ನು ಪಾಕಿಸ್ತಾನಕ್ಕೆ ಹೋಗಲಿ ಎಂದು ತನ್ನ ಸಹೋದರರು ಹಾಗೂ ಸಹಬಾಂಧವರನ್ನು ವೈರಿ ರಾಷ್ಟ್ರಕ್ಕೆ ಹೋಗಿರಿ, ಕಳಿಸಿರಿ ಎಂದು ಪುಸಲಾಯಿಸುವುದು ದೇಶದ್ರೋಹ ಅಲ್ಲವೇ? ಭಾರತದ ಅಖಂಡತೆ ಹಾಗೂ ಸಮಗ್ರತೆ ಮತ್ತು ವೈವಿಧ್ಯತೆಯನ್ನು ಕಾಪಾಡುತ್ತೇನೆ ಎಂದು ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿದ ಇವರು ಸಹೋದರರು ಹಾಗೂ ಸಹಬಾಂಧವರನ್ನು ದೇಶದಿಂದ ಒಕ್ಕಲೆಬ್ಬಿಸುವ ವೈರಿರಾಷ್ಟ್ರಕ್ಕೆ ಹೋಗಿ ಎನ್ನುವ ಸಂವಿಧಾನ ವಿರೋಧಿ ಮಾತುಗಳನ್ನೇ ಆಡುವ ಇವರು ದೇಶದ್ರೋಹಿಗಳಲ್ಲವೇ? ಏಕೆ ಇಂಥವರ ಮೇಲೆ ರಾಷ್ಟ್ರದ್ರೋಹದ ಆಪಾದನೆ ದಾಖಲು ಮಾಡಬಾರದು? ಯಾಕೆ ಇಂಥವರ ಸದಸ್ಯತ್ವವನ್ನು ರದ್ದು ಮಾಡಬಾರದು?
ಇನ್ನು ಅಕ್ಬರುದ್ದೀನ್ ಉವೈಸಿ ಹಾಗೂ ಅಸಾಉದ್ದೀನ ಉವೈಸಿಯಂಥವರು ಅತ್ಯಂತ ಹೀನ ಮತ್ತು ದೇಶದ್ರೋಹದ ಮಾತುಗಳನ್ನಾಡಿದರೂ ಏಕೆ ಸರಕಾರಗಳು ಮೌನ ಇರುತ್ತವೆ, ಏಕೆ ಅಂಥವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸುವುದಿಲ್ಲ. ದೇಶದ್ರೋಹದ ಆಪಾದನೆಯನ್ನು ಒಂದು ಅಸ್ತ್ರದಂತೆ ಮಾಡಿಕೊಂಡು ಅದನ್ನು ತಮಗೆ ಬೇಡವಾದರ ಮೇಲೆ ಪ್ರಯೋಗಿಸುವುದು ಸರಿಯೇ?
ವಿದ್ಯಾರ್ಥಿ ಜೀವನ ಒಂದು ಪ್ರಯೋಗಾತ್ಮಕ ವಿಚಾರಧಾರೆಯ ಜೀವನ. ಪರಿಸರದಲ್ಲಿಯ ಪ್ರತಿ ವಸ್ತು ವಿಚಾರಗಳನ್ನು ಪ್ರಯೋಗಕ್ಕೆ ಒಳಪಡಿಸುವ ತುಡಿತ ಹೊಂದಿರುವ ವ್ಯಕ್ತಿಯೇ ವಿದ್ಯಾರ್ಥಿ. ಪ್ರತಿಯೊಂದನ್ನೂ ಆವಿಷ್ಕಾರ ಮಾಡಿ ಪ್ರಯೋಗ ಮಾಡಿ ಕಂಡುಕೊಳ್ಳುವ ಹುಮ್ಮಸ್ಸೇ ವಿದ್ಯಾರ್ಥಿ ಜೀವನ. ಅದಕ್ಕೆ ಹೇಳೋದು ‘STUDENTS LIFE IS GOLDEN LIFE’ ಹಾಗೂ ಇದೇ ವಿದ್ಯಾರ್ಥಿಗಳೇ ನಮ್ಮ ನಾಡಿನ ನಾಳಿನ ಭವಿಷ್ಯ ಮತ್ತು ಭವಿಷ್ಯದ ದೇಶದ ನಾಯಕರು. ಇಂಥವರು ತಮ್ಮ ಪ್ರಯೋಗಶೀಲತೆಯಲ್ಲಿ ಎಡವಿದಲ್ಲಿ ಅವರಿಗೆ ನಾವು ಕರುಣೆಯಿಂದ ತಿಳಿ ಹೇಳಿ ಅವರಿಗೆ ಮನನ ಮಾಡಿ ತಿದ್ದಬೇಕು. ಅದನ್ನು ಬಿಟ್ಟು ಏಕಾಏಕಿ ಅವರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದರೆ ಹೇಗೆ? ಈ ರೀತಿ ಸಹಜ ನ್ಯಾಯದಾನದ ತತ್ವಗಳನ್ನು ಗಾಳಿಗೆ ತೂರಿ ಹಿಂದೆ ಮುಂದೆ ಯೋಚಿಸದೆ ಅವರ ಮೇಲೆ ದೇಶದ್ರೋಹದ ಆಪಾದನೆ ಹೊರಿಸುವುದೇ ಒಂದು ದೇಶದ್ರೋಹ. ನಾವು ನಮ್ಮ ಭವಿಷ್ಯದ ಆಧಾರ ಸ್ತಂಭಗಳನ್ನೇ ಅಲುಗಾಡಿಸುತ್ತಿದ್ದೇವೆ ಎಂದರೆ ಅದಕ್ಕಿಂತ ದೇಶದ್ರೋಹದ ಕೆಲಸವುಂಟೇ? ವಿದ್ಯಾರ್ಥಿಗಳನ್ನು ಸರಕಾರ ನಾವು ಹೇಗೆ ನಮ್ಮ ಮಕ್ಕಳನ್ನು ನೋಡಿಕೊಳ್ಳುತ್ತೇವೆಯೋ ಹಾಗೆ ನೋಡಿಕೊಳ್ಳಬೇಕು.
ಹಿಂದೆ ನಮ್ಮ ಪ್ರಥಮ ಪ್ರದಾನಮಂತ್ರಿಯಾಗಿದ್ದ ಜವಾಹರಲಾಲ್ ನೆಹರೂರವರು ಏಕೆ ತಮ್ಮ ಜನ್ಮ ದಿನಾಚರಣೆಯನ್ನು ಮಕ್ಕಳ ದಿನಾಚರಣೆ ಅಂತಾ ಆಚರಿಸಲು ಹೇಳಿದರು. ಏಕೆ ರಾಷ್ಟ್ರಪಿತಗಳಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ತಮ್ಮ ಜನ್ಮದಿನಾಚರಣೆಯನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸಲು ಹೇಳಿದರು. ಏಕೆ ಡಾ.ಅಬ್ದುಲ್ ಕಲಾಂರವರು ಪದೇ ಪದೇ ವಿದ್ಯಾರ್ಥಿಗಳೊಂದಿಗೆ ಚರ್ಚೆ ಸಂವಾದ ಮಾಡುವುದೇ ಮುಖ್ಯ ಎಂದು ತಿಳಿದಿದ್ದರು. ಇವೆಲ್ಲವೂ ನಮ್ಮ ರಾಷ್ಟ್ರನಾಯಕರು ವಿದ್ಯಾರ್ಥಿಗಳ ಪಾಲಿಗೆ ಇಡೀ ತಮ್ಮ ಜೀವನ ಮುಡಿಪಾಗಿಟ್ಟಿದ್ದರು ಮತ್ತು ಅವರ ಅಭ್ಯುದಯವೇ ದೇಶದ ಭವಿಷ್ಯ ಅವರ ಜೀವನವೇ ನಮ್ಮ ನಾಳಿನ ದೇಶದ ದಿಕ್ಸೂಚಿ ಎಂದು ತೋರಿಸಿದವರು. ಅಂಥವರ ಪ್ರಯತ್ನಗಳಿಂದಲೇ ಇಂದು ಭಾರತದ ವಿದ್ಯಾರ್ಥಿಗಳು ವಿಜ್ಞಾನ ತಂತ್ರಜ್ಞಾನ ಇಂಜಿನಿಯರಿಂಗ್‌ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಸ್ವದೇಶದಲ್ಲಿ ಮಾತ್ರವಲ್ಲ ಇಂಗ್ಲೆಂಡ್, ಅಮೆರಿಕ ಹಾಗೂ ಕೆನಡಾ ಮತ್ತು ಜಗತ್ತಿನ ಎಲ್ಲಾ ದೇಶಗಳಲ್ಲಿ ಮಿಂಚುತ್ತಿದ್ದಾರೆ.
ಭಾರತ ಮಾತ್ರವಲ್ಲ ಜಗತ್ತಿನ ನಿರ್ಮಾಣದಲ್ಲೂ ಭಾರತೀಯ ವಿದ್ಯಾರ್ಥಿಗಳ ಕೊಡುಗೆ ವಿಶೇಷವಾಗಿದೆ. ಇಂತಹ ಶ್ರೇಷ್ಠ ಪರಂಪರೆಯನ್ನು ಮರೆತು ಹಾಗೂ ಪ್ರಕರಣವನ್ನು ಸರಿಯಾಗಿ ನಿಭಾಯಿಸದೇ ಸಂಪೂರ್ಣ ಪೂರ್ವಾಗ್ರಹ ಪೀಡಿತರಾಗಿ ವಿದ್ಯಾರ್ಥಿಗಳು ಆಲೋಚನೆ ಮಾಡಿದರೆ ಎಲ್ಲಿ ನಮ್ಮ ಸರಕಾರಕ್ಕೆ ವಿಪತ್ತು ಬರುತ್ತದೆಯೋ ಎಂದು ಭಾವಿಸಿ ಹಾಗೂ ಬಿಜೆಪಿಯ ದಿಲ್ಲಿ, ಬಿಹಾರ ಹಾಗೂ ಕೆಲವು ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಹೀನಾಯ ಸೋಲಿಗೆ ವಿದ್ಯಾರ್ಥಿಗಳ ವಿಚಾರಧಾರೆಗಳೇ ಕಾರಣವೆಂದು ತಪ್ಪಾಗಿ ಅರ್ಥೈಸಿದ ಭಾರತದ ಪ್ರಧಾನಮಂತ್ರಿಗಳು ಹಾಗೂ ಗೃಹಮಂತ್ರಿ ಮತ್ತೂ ಮಾನವ ಸಂಪನ್ಮೂಲ ಸಚಿವರು ಏಕಾಏಕಿ ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯಗಳ ಮೇಲೆ ಅಕ್ರಮ ಅಧಿಕಾರ ಸ್ಥಾಪಿಸಲು ಹಾಗೂ ವಿದ್ಯಾರ್ಥಿಗಳ ವಿಚಾರಶಕ್ತಿಯ ಮೇಲೆ ಆಕ್ರಮಣ ಮಾಡಹತ್ತಿದಾಗ ಅದೂ ಬಡ ಹಿಂದುಳಿದ ದಲಿತ ವರ್ಗಗಳ ವಿದ್ಯಾರ್ಥಿಗಳ ಮೇಲೆ ಅವರ ವಿಚಾರಧಾರೆಗಳ ಮೇಲೆ ದೌರ್ಜನ್ಯ ಕಳೆದ ಒಂದು ವರ್ಷದಿಂದ ಪ್ರಾರಂಭವಾಗಿದೆ.
ಅಂಬೇಡ್ಕರ್, ಪೆರಿಯಾರ ಹಾಗೂ ಹೆದರಾಬಾದ್ ಮತ್ತು ಜೆಎನ್‌ಯು ಸರದಿ. ಬಿಜೆಪಿ ತನ್ನ ದುರಾಡಳಿತದಿಂದ ಸೋತು ಹತಾಶವಾಗಿದೆ. ಆ ಸೋಲಿನ ಸೇಡನ್ನು ಈ ವಿದ್ಯಾರ್ಥಿಗಳ ಮೇಲೆ ಕಾನೂನಿನ ಕಠೋರ ಮತ್ತು ಅಮಾನವೀಯ ದುರ್ಬಳಕೆ ಮತ್ತು ದಬ್ಬಾಳಿಕೆ ಮುಖಾಂತರ ದೇಶ ದ್ರೋಹದ ಆಪಾದನೆಗಳನ್ನು ನಿರಪರಾದಿಗಳ ಮೇಲೆ ಹೇರಿಕೆ ಮಾಡುತ್ತಿರುವುದೇ ದೇಶಕ್ಕೆ ಮಾಡುತ್ತಿರುವ ಅಪಮಾನ ಮತ್ತು ದೇಶದ ಭವಿಷ್ಯಕ್ಕೆ ಸರಕಾರ ಎಸಗುತ್ತಿರುವ ದೇಶದ್ರೋಹ. ಮೊದಲು ಸರಕಾರಗಳು ದೇಶದ್ರೋಹ ಎಸಗುವುದು ಬಿಟ್ಟು ವಿದ್ಯಾರ್ಥಿಗಳೊಂದಿಗೆ ದೇಶ ಕಟ್ಟುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಇದು ಹಿಟ್ಲರ್ ಹಾಗೂ ತುಘಲಕ್‌ನ ಆಡಳಿತದಂತೆ ಭವಿಷ್ಯದಲ್ಲಿ ಸರಕಾರದ ನಿರ್ಧಾರ ಒಂದು ಕಪ್ಪುಚುಕ್ಕೆಯಾಗಿ ಉಳಿಯುತ್ತದೆ.
ಇದನ್ನು ಎಲ್ಲಿಯವರೆಗೆ ಸಹಿಸುವುದು? ದೇಶದ್ರೋಹದ ಕಾನೂನುಗಳ ದುರುಪಯೋಗ ಎಲ್ಲಿಯವರೆಗೆ? ಏಳಿ, ಎದ್ದೇಳಿ ನಮ್ಮ ವಿದ್ಯಾ ದೇಗುಲಗಳು ಅಪವಿತ್ರವಾಗುವುದನ್ನು ತಡೆಯೋಣ. ವಿದ್ಯಾರ್ಥಿಗಳು ಅಲ್ಲಿ ತಮ್ಮ ಸ್ವತಂತ್ರ ವಿಚಾರಧಾರೆಯಿಂದ ಬದುಕಿನ ದೇಶದ ಭವಿಷ್ಯದ ಪಾಠ ಕಲಿಯಬೇಕಿದೆ. ವಿಶ್ವವಿದ್ಯಾನಿಲಯಗಳಲ್ಲಿ ಒಂದು ಸಂಘಟನೆಯ ಗುಲಾಮರಾಗುವ ವಿಚಾರಧಾರೆ ಭೋದಿಸುವ ಕೇಂದ್ರಗಳಾಗಬಾರದು. ಸ್ವತಂತ್ರ ವಿಚಾರಧಾರೆ ಸದೃಢ ದೇಶಭಕ್ತಿಯ ಪವಿತ್ರ ದೇಶಭಕ್ತರನ್ನು ನಿರ್ಮಿಸುವ ಕೇಂದ್ರಗಳೇ ನಮ್ಮ ವಿಶ್ವವಿದ್ಯಾನಿಲಯಗಳು. ಅವುಗಳ ಪಾವಿತ್ರ್ಯತೆ ಕಾಪಾಡೋಣ, ಕುತಂತ್ರಗಳನ್ನು ಖಂಡಿಸೋಣ. ಬನ್ನಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸೋಣ.