ಸಂಯುಕ್ತ ಸಂಸ್ಕೃತಿಯ ಸ್ವರೂಪವನ್ನು ಸ್ಪಷ್ಟಗೊಳಿಸುವ ಪ್ರಯತ್ನ
ಈ ಹೊತ್ತಿನ ಹೊತ್ತಿಗೆ
ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿ ಹಾಗೂ ಸಮಾಜ ವಿಜ್ಞಾನ ವಿಭಾಗದ ಡೀನ್ ಆಗಿ ನಿವೃತ್ತರಾದವರು ಪ್ರೊ. ಕೆ. ಎನ್. ಪಣಿಕ್ಕರ್. ಕೇರಳದ ಶ್ರೀ ಶಂಕರಾಚಾರ್ಯ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದವರು. ಅವರ ಪ್ರಮುಖ ಆಸಕ್ತಿಯೇ ಭಾರತದ ಸಾಂಸ್ಕೃತಿಕ ಮತ್ತು ಬೌದ್ಧಿಕ ಇತಿಹಾಸದ ಕ್ಷೇತ್ರವನ್ನು ಕುರಿತದ್ದು. ‘ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆ’ ಕೃತಿ ಪ್ರೊ. ಕೆ. ಎನ್. ಪಣಿಕ್ಕರ್ ಅವರು ಬರೆದಿರುವ ಪ್ರಬಂಧಗಳ ಸಂಕಲನ. ಕೆ. ಎಸ್. ಪಾರ್ಥಸಾರಥಿ ಇದನ್ನು ಕನ್ನಡಕ್ಕೆ ತಂದಿದ್ದಾರೆ. ಇಲ್ಲಿ ಸಂಗ್ರಹಿಸಿರುವ ಬಹುತೇಕ ಪ್ರಬಂಧಗಳು ಹಿಂದೂ ಕೋಮುವಾದದ ಬೆಳವಣಿಗೆಯ ಇತ್ತೀಚಿನ ಸಂದರ್ಭದಲ್ಲಿ ರಚಿತವಾದುವು. ಈ ಕೋಮುವಾದ ಹೇಗೆ ತನ್ನದೇ ಬೆಳವಣಿಗೆಗೆ ಪರಿಕರವಾಗಿ ಇತಿಹಾಸ ಮತ್ತು ಸಂಸ್ಕೃತಿ ಕ್ಷೇತ್ರವನ್ನು ಬಳಸಿಕೊಳ್ಳುತ್ತದೆ ಎನ್ನುವುದನ್ನು ಈ ಲೇಖನಗಳು ಅವಲೋಕಿಸುತ್ತವೆ. ಭಾರತದ ಸಂಸ್ಕೃತಿ, ಇತಿಹಾಸ ಎಂದರೆ ಅದು ಹಿಂದೂ ಇತಿಹಾಸ ಎಂದು ಬಿಂಬಿಸುವ ಕೋಮುವಾದದ ಏಕತ್ವದ ಏರಿಕೆಗೆ ಬಹುತ್ವವನ್ನು ಮುಂದಿಟ್ಟು ಲೇಖನಗಳು ಪ್ರತಿರೋಧಿಸುತ್ತವೆ. ಪಣಿಕ್ಕರ್ ಅವರೇ ಹೇಳುವಂತೆ ‘‘ಈ ಪುಸ್ತಕದಲ್ಲಿನ ಪ್ರಬಂಧಗಳು ಸಾಂಸ್ಕೃತಿಕತೆ ಮತ್ತು ರಾಷ್ಟ್ರೀಯತೆಯ ನಡುವಿನ ನಂಟು ಎಂಥದು ಎಂದು ಸಂಶೋಧಿಸುತ್ತವೆ. ಆ ಚರ್ಚೆಯ ಮೂಲಕ ಭಾರತದ ಪ್ರಜಾಪ್ರಭುತ್ವಕ್ಕೆ ಪೋಷಣೆ ನೀಡುವ ಸಂಯುಕ್ತ ಸಂಸ್ಕೃತಿಯ ಸ್ವರೂಪವನ್ನು ಸ್ಪಷ್ಟಗೊಳಿಸುಲು ಯತ್ನಿಸುತ್ತವೆ’’
ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆ, ಸಂಪ್ರದಾಯ, ಒಂದು ರಾಷ್ಟ್ರದ ನಿರ್ಮಾಣದಲ್ಲಿ ಸಂಸ್ಕೃತಿಯ ಪಾತ್ರ, ಸಂಘರ್ಷದ ವೇದಿಕೆಯಾಗಿ ಸಂಸ್ಕೃತಿ, ಸಾಮಾಜಿಕ ಬದಲಾವಣೆಯ ಇತಿಹಾಸವಾಗಿ ಸಾಹಿತ್ಯ, ಮತ ಧರ್ಮಾತೀತತೆಯ ಆಚರಣೆಗಳ ಒಂದು ಮರು ವೌಲ್ಯ ಮಾಪನ, ಸಾಂಸ್ಕೃತಿಕ ಚಟುವಟಿಕೆಗೆ ಒಂದು ಕಾರ್ಯ ಸೂಚಿ, ವಿಶ್ವಮಾನವ ಕಲ್ಪನೆಯ ದೃಷ್ಟಾರ ಸ್ವಾಮಿ ವಿವೇಕಾನಂದ ಮೊದಲಾದ ವಿಷಯಗಳ ಕುರಿತಂತೆ ಈ ಕೃತಿ ಚರ್ಚಿಸುತ್ತದೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 90 ರೂ. ಆಸಕ್ತರು 080- 30578020 ದೂರವಾಣಿಯನ್ನು ಸಂಪರ್ಕಿಸಬಹುದು.