ದೈನಂದಿನ ಬದುಕಿಗೆ ನೆರವಾಗುವ ಕೈಪಿಡಿಗಳು...
ಟಿ. ಎಸ್. ಗೋಪಾಲ್ ಅವರು ಬರೆದ ‘ಲೇಖನ ಚಿಹ್ನೆಗಳು’, ಬಿ. ಆರ್. ರವೀಂದ್ರನಾಥ್ ಬರೆದ ‘ಗೃಹ ಸಾಲ-ಸಮಗ್ರ ಮಾಹಿತಿ ಕೈಪಿ ಡಿ’, ಡಾ. ಕೆ. ಎಸ್. ಪವಿತ್ರ ಬರೆದ ‘ನಿಮ್ಮ ಪಯಣ ಸುಗಮವಾಗಲಿ’ ಈ ಮೂರು ಪುಟ್ಟ ಕೃತಿಗಳನ್ನು ನವಕರ್ನಾಟಕ ಪ್ರಕಾಶನ ಹೊರತಂದಿದೆ. ಇದು ಅತ್ಯಗತ್ಯ ಮಾಹಿತಿಯುಳ್ಳ ಪುಟ್ಟ ಕೈ ಬಿಡಿ. ‘ಲೇಖನ ಚಿಹ್ನೆಗಳು’ ತಿಳಿ ವ್ಯಾಕರಣಕ್ಕೆ ಸಂಬಂಧಿಸಿದ ಪುಸ್ತಕ. ಅನೇಕ ಸಂದರ್ಭದಲ್ಲಿ, ಅತೀ ದೊಡ್ಡ ಬರಹಗಾರರೂ, ವ್ಯಾಕರಣದ ವಿಷಯಕ್ಕೆ ಬಂದಾಗ ಸಣ್ಣ ಸಣ್ಣ ವಾಕ್ಯಗಳಲ್ಲಿ ಎಡವಿ ಬೀಳುತ್ತಾರೆ. ನಾವು ದಿನ ನಿತ್ಯ ಬಳಸುವ ವಾಕ್ಯಗಳಿಗೆ, ಇಂತಹ ಚಿಹ್ನೆ ಎಲ್ಲಿ ಬಳಸಬೇಕು ಎನ್ನುವುದು ಕೆಲವೊಮ್ಮೆ ಗೊಂದಲಗಳಿಗೆ ಕಾರಣವಾಗಬಹುದು. ಬರೆಯುವವರು ತಮ್ಮ ಪಕ್ಕದಲ್ಲೇ ಇಟ್ಟುಕೊಳ್ಳಬೇಕಾದ ಪುಟ್ಟ ಪುಸ್ತಕ ಲೇಖನ ಚಿಹ್ನೆಗಳು. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಎಲ್ಲರಿಗೂ ಉಪಯೋಗವಾಗಬಹುದಾದ ಕಿರು ಪುಸ್ತಕ ಇದು. ಇದರ ಮುಖಬೆಲೆ 25 ರೂಪಾಯಿ. ಬ್ಯಾಂಕ್‌ಗಳೆಂದರೆ ಕೆಲವರಿಗೆ ಅನಗತ್ಯ ಭಯ. ಕೆಲವರು ಅದರೊಂದಿಗೆ ವ್ಯವಹರಿಸಿ ಕೈ ಸುಟ್ಟುಕೊಂಡಿರುತ್ತಾರೆ. ಕೆಲವರಿಗೆ ಅದರೊಂದಿಗೆ ವ್ಯವಹರಿಸಲು ಆಸಕ್ತಿಯಿರುತ್ತದೆ. ಆದರೆ ಹೇಗೆ ಮುಂದೆ ಹೆಜ್ಜೆಯಿಡಬೇಕು ಎಂಬ ಕುರಿತು ಅನುಮಾನಗಳಿರುತ್ತವೆ. ಇಂಥವರಿಗಾಗಿ ಮಾಡಿರುವ ಪುಟ್ಟ ಕೈ ಬಿಡಿ ‘ಗೃಹಸಾಲ-ಸಮಗ್ರ ಮಾಹಿತಿ ಕೈಪಿಡಿ’. ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಅತ್ಯಮೂಲ್ಯ ಸಲಹೆಗಳು, ಮಾಹಿತಿಗಳು ಇದರಲ್ಲಿವೆ. ನಾವು ಎಂತಹ ಬ್ಯಾಂಕುಗಳನ್ನು ಆರಿಸಿಕೊಳ್ಳಬೇಕು ಎನ್ನುವುದರಿಂದ ಹಿಡಿದು, ಸಾಲ ತೆಗೆದುಕೊಳ್ಳಬೇಕಾದ ಅನುಸರಿಸಬೇಕಾದ ವಿಧಾನ, ಬಡ್ಡಿದರ, ನಿಯಮ ನಿಬಂಧನೆ ಇವುಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ಬಗ್ಗೆ ಈ ಕೃತಿಯಲ್ಲಿ ವಿವರಗಳಿವೆ. ಹೊಸದಾಗಿ ಮನೆಕಟ್ಟುವ ಕನಸುಗಳುಳ್ಳವರು, ಅಥವಾ ಅದಕ್ಕಾಗಿ ಒಂದು ಯೋಜನೆಯನ್ನು ರೂಪಿಸಲು ಹೊರಟವರು ಈ ಕೈಪಿಡಿಯ ಸಹಾಯವನ್ನು ಪಡೆಯಬಹುದು.
‘ನಿಮ್ಮ ಪಯಣ ಸುಗಮವಾಗಲಿ’ ಕೃತಿ ಪ್ರವಾಸಾನುಭವಕ್ಕೆ ಸಂಬಂಧ ಪಟ್ಟಿರುವುದು. ಹಲವರು ಪ್ರವಾಸ ಅನುಭವಗಳ ಬಗ್ಗೆ ಬರೆದಿದ್ದಾರೆ. ಆದರೆ ಇಲ್ಲಿ, ಪ್ರವಾಸಕ್ಕೆ ಬೇಕಾದ ತಯಾರಿಯ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲಾಗಿದೆ. ಒಂದು ಒಳ್ಳೆಯ ಪ್ರವಾಸ ಅನುಭವವನ್ನು ಹೇಗೆ ನಮ್ಮದಾಗಿಸಿಕೊಳ್ಳಬಹುದು ಎನ್ನುವುದಕ್ಕೆ ಈ ಕೈಪಿಡಿಯಲ್ಲಿ ಹಲವು ಮಾರ್ಗದರ್ಶನವಿದೆ. ಪ್ರವಾಸದಿಂದ ನಾವು ಹೇಗೆ ನಮ್ಮ ವ್ಯಕ್ತಿತ್ವವನ್ನು ವಿಸ್ತಾರಗೊಳಿಸಬಹುದು, ಮಕ್ಕಳ ಜೊತೆಗಿನ ಪ್ರವಾಸವನ್ನು ಹೇಗೆ ಖುಷಿಖುಷಿಯಾಗಿ ಪರಿವರ್ತಿಸಿಕೊಳ್ಳಬಹುದು, ಟೂರ್ ಏಜೆಂಟ್‌ಗಳ ಮೂಲಕ ಪ್ರವಾಸ, ಸ್ವತಂತ್ರ ಪ್ರವಾಸ ಇವುಗಳ ವ್ಯತ್ಯಾಸ, ಪ್ರವಾಸಿ ಜಗಳ, ಪ್ರವಾಸ ಮತ್ತು ಆರೋಗ್ಯ ಇತ್ಯಾದಿಗಳ ಬಗ್ಗೆ ಈ ಪುಟ್ಟ ಕೈ ಪಿಡಿಯಲ್ಲಿ ಮಾಹಿತಿಗಳಿವೆ.
ಇದರ ಮುಖಬೆಲೆ 65 ರೂಪಾಯಿ. ಆಸಕ್ತರು 080- 30578020 ದೂರವಾಣಿಯನ್ನು ಸಂಪರ್ಕಿಸಬಹುದು.